ಜಾತಿ ಎಂಬ ಹುಚ್ಚು ಪರಿಕಲ್ಪನೆ ಮತ್ತು ಶ್ರೇಷ್ಠತೆಯ ವ್ಯಸನ…..

ವಿಜಯ ದರ್ಪಣ ನ್ಯೂಸ್….

ಜಾತಿ ಎಂಬ ಹುಚ್ಚು ಪರಿಕಲ್ಪನೆ ಮತ್ತು ಶ್ರೇಷ್ಠತೆಯ ವ್ಯಸನ…..

ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಕನಕದಾಸರು,

ಮಾನವ ಕುಲ ತಾನೊಂದು ವಲಂ
ಮಹಾಕವಿ ಪಂಪ,

ಸಕಲ ಜೀವಾತ್ಮಗಳಿಗೆ ಲೇಸನೇ ಬಯಸು
ಬಸವಣ್ಣ,

ವಿಶ್ವ ಮಾನವ ಪ್ರಜ್ಞೆ
ಕುವೆಂಪು,

ವಸುದೈವ ಕುಟುಂಬ ಭಗವದ್ಗೀತೆ,

ಸರ್ವೋದಯ
ಮಹಾತ್ಮ ಗಾಂಧಿ,

“ಭಾರತೀಯರಾದ ನಾವು ”
ಸಂವಿಧಾನದ ಪೀಠಿಕೆ
ಬಾಬಾ ಸಾಹೇಬ್ ಅಂಬೇಡ್ಕರ್,

ಹೀಗೆ ಈ ನೆಲದ ದಾರ್ಶನಿಕರು, ಚಿಂತಕರು, ಹೋರಾಟಗಾರರು, ಮಹಾತ್ಮರು ಹೇಳಿದ್ದಾರೆ. ಆದರೆ ಈಗ ಕರ್ನಾಟಕದಲ್ಲಿ ಜಾತಿ ಜನಗಣತಿಯ ವಿವಾದ ಭುಗಿಲೆದ್ದಿರುವಾಗ ನನಗೆ ಅನಿಸುತ್ತಿದೆ ” ಹುಚ್ಚರ ಸಂತೆ ಕಣಣ್ಣ ಇದು ಹುಚ್ಚರ ಸಂತೆ, ಹೇಳುವುದು ಒಂದು ಮಾಡುವುದು ಇನ್ನೊಂದು, ಬಾಯಲ್ಲಿ ಬೆಣ್ಣೆ ಕೈಯಲ್ಲಿ ದೊಣ್ಣೆ ”

ಬಹುತೇಕ ಎಲ್ಲಾ ಜಾತಿವಾದಿಗಳ ಮುಖವಾಡಗಳು ಕಳಚಿ ಬೀಳುತ್ತಿದೆ. ಎಷ್ಟೊಂದು ಅಸಹ್ಯ ಹುಟ್ಟಿಸುತ್ತಿದೆ.

ಬ್ರಾಹ್ಮಣನೊಬ್ಬನೆಂದ,
ನಾವೇ ಶ್ರೇಷ್ಠರು, ದೇವರಿಗೆ ನಾವೇ ಹತ್ತಿರ, ನಾವು ದೇವರ ಪ್ರತಿನಿಧಿಗಳು,

ವೈಶ್ಯನೊಬ್ಬನೆಂದ,
ನಾವೇ ಶ್ರೇಷ್ಠರು, ನಾವು ವ್ಯಾಪಾರ ಮಾಡದಿದ್ದರೆ ಸಮಾಜ ಅಸ್ತಿತ್ವದಲ್ಲೇ ಇರುವುದಿಲ್ಲ, ದೇವರಿಗೆ ನಾವೇ ಅತಿಮುಖ್ಯ,

ಕ್ಷತ್ರಿಯನೊಬ್ಬನೆಂದ,
ನಾವೇ ಶ್ರೇಷ್ಠರು, ಸಮಾಜವನ್ನು ರಕ್ಷಿಸುವವರು ನಾವೇ, ನಾವಿಲ್ಲದಿದ್ದರೆ ಅರಾಜಕತೆ ಸೃಷ್ಟಿಯಾಗುತ್ತದೆ, ದೇವರಿಗೆ ನಾವೇ ಹತ್ತಿರ,

ಒಕ್ಕಲಿಗನೊಬ್ಬನೆಂದ,
ನಾವೇ ಶ್ರೇಷ್ಠರು, ನಾವು ವ್ಯವಸಾಯ ಮಾಡದಿದ್ದರೆ ತಿನ್ನಲು ಆಹಾರವೇ ಇರುವುದಿಲ್ಲ, ನಾವು ದೇವರ ಮಕ್ಕಳು,

ಅಗಸನೊಬ್ಬನೆಂದ,
ನಾವೇ ಶ್ರೇಷ್ಠರು, ನಾವು ಜನರ ಕೊಳೆ ಬಟ್ಟೆ ಶುಭ್ರ ಮಾಡಿಕೊಡುತ್ತೇವೆ. ನಾವಿಲ್ಲದಿದ್ದರೆ ಜನ ಕೊಳಕರಾಗುತ್ತಾರೆ,
ದೇವರಿಗೆ ನಾವೇ ಹತ್ತಿರ,

ಕ್ಷೌರಿಕನೊಬ್ಬನೆಂದ,
ನಾವೇ ಶ್ರೇಷ್ಠರು, ಜನರು ಚೆಂದ ಕಾಣಲು, ಮಂಗಳ ಕಾರ್ಯ ಮಾಡಲು ನಾವೇ ಬೇಕು, ದೇವರಿಗೆ ವಾಧ್ಯ ನುಡಿಸಿ ಖುಷಿಪಡಿಸುವವರೇ ನಾವು,

ಕುಂಬಾರನೊಬ್ಬನೆಂದ,
ನಾವೇ ಶ್ರೇಷ್ಠರು, ಜನ ಅಡುಗೆ ಮಾಡಿ ಊಟ ಮಾಡಲು ನಾವು ಮಾಡುವ ಮಡಿಕೆಗಳೇ ಬೇಕು, ನಾವಿಲ್ಲದೆ ಊಟವಿಲ್ಲ, ದೇವರಿಗೆ ನಾವೇ ಹತ್ತಿರ,

ಕುರುಬನೊಬ್ಬನೆಂದ,
ನಾವೇ ಶ್ರೇಷ್ಠರು, ಹಸು ಆಡು ಕುರಿಗಳನ್ನು ಸಾಕಿ ಬೆಳೆಸಿ ಜನರಿಗೂ, ದೇವರಿಗೂ ಹಾಲು ತುಪ್ಪ ಎಲ್ಲಾ ನಮ್ಮಿಂದಲೇ, ನಾವೇ ದೇವರಿಗೆ ಹತ್ತಿರ,

ಚಮ್ಮಾರನೊಬ್ಬನೆಂದ,
ನಾವೂ ಶ್ರೇಷ್ಠರೇ, ನೀವು ಕಾಲಿನ ರಕ್ಷಣೆಗೆ ಹಾಕುವ ಚಪ್ಪಲಿ, ವ್ಯವಸಾಯಕ್ಕೆ ಬಳಸುವ ಸಲಕರಣೆಗಳು, ದೇವರ ರಕ್ಷಣೆಗೆ ಕಟ್ಟುವ ಕಟ್ಟಡ, ಯುಧ್ಧಕ್ಕೆ ಉಪಯೋಗಿಸುವ ಆಯುಧ, ಎಲ್ಲಾ ನಾವೇ ತಯಾರಿಸುವುದು,
ನಾವೇ ದೇವರ ನಿಜವಾದ ಮಕ್ಕಳು……

ಅಯ್ಯೋ ಹುಚ್ಚರ, ಇದು 2025, ನಿಮ್ಮ ಶ್ರೇಷ್ಠತೆ ನಾಶವಾಗಿ ಬಹಳ ಕಾಲವಾಗಿದೆ. ಇಂದು ನಿಮ್ಮ ಕೆಲಸಗಳು ಯಾರಿಗೂ ಅನಿವಾರ್ಯವಲ್ಲ. ಅವು ಜಾತಿ ಮೀರಿ ಹೊಟ್ಟೆ ಪಾಡಿನ ಕಾಯಕಗಳಾಗಿ ಯಾರು ಬೇಕಾದರೂ ಮಾಡಬಹುದಾದ ನಾನಾ ರೂಪ ಪಡೆದುಕೊಂಡಿದೆ.
ಬ್ರಾಹ್ಮಣನೊಬ್ಬ ಶೌಚಾಲಯಗಳ Cleaning Contract ಪಡೆದರೆ, ಗೌಡನೊಬ್ಬ ಚಪ್ಪಲಿ ಅಂಗಡಿ ಇಟ್ಟರೆ, ದಲಿತನೊಬ್ಬ ಹೋಟೆಲ್ ನಡೆಸಿದರೆ, ಲಿಂಗಾಯಿತನೊಬ್ಬ ಕ್ಷೌರದ ಅಂಗಡಿ ಇಟ್ಟರೆ, ತಿಗಳರವನೊಬ್ಬ ಪೂಜಾರಿಯಾದರೆ, ಉಪ್ಪಾರನೊಬ್ಬ ಜ್ಯೋತಿಷಿಯಾಗುತ್ತಾನೆ,

ಇನ್ನು ಸರ್ಕಾರಿ ಅಧಿಕಾರಿಗಳು, ನಗರದಲ್ಲಿ ವ್ಯಾಪಾರ ಮಾಡುವವರು, ಖಾಸಗಿ ಕಂಪನಿ ಅಧಿಕಾರಿಗಳು ಯಾರು ಯಾರೋ ತಿಳಿದವರಿಲ್ಲ, ಎಲ್ಲರೂ ಕೇವಲ ಹೊಟ್ಟೆ ಪಾಡಿನ ನರಮಾನವರು,

ಕಳ್ಳರು, ಖೈದಿಗಳು, ರೋಗಿಗಳು, ಭ್ರಷ್ಠರು, ಕೊಲೆಗಡುಕರು, ಅತ್ಯಾಚಾರಿಗಳು ಎಲ್ಲಾ ಜಾತಿಗಳಲ್ಲೂ ಇದ್ದಾರೆ,

ಹಾಗೆಯೇ ದಕ್ಷರು, ಪ್ರಾಮಾಣಿಕರು, ಪುಣ್ಯಾತ್ಮರು, ಜ್ಞಾನಿಗಳು ಎಲ್ಲಾ ಕಡೆ ಇದ್ದಾರೆ. ಇವರಿಗೆ ಜಾತಿಯ ಹಂಗಿಲ್ಲ,

ಇನ್ನೂ ನಿದ್ರಾವಸ್ಥೆಯಲ್ಲಿರುವ ಮೂರ್ಖರೆ, ಕಿತ್ತೊಗೆಯಿರಿ ನಿಮ್ಮ ಜಾತಿಗಳ ಟೈಟಲ್ ಗಳನ್ನು,
ಮದುವೆಯಾಗಿ ನಿಮಗಿಷ್ಟದ ಹುಡುಗ/ಹುಡುಗಿಯನ್ನು ,
ಹುಟ್ಟಿಸಿ ನಿಜವಾದ ಭಾರತೀಯರನ್ನು,
ಕಟ್ಟೋಣ ಸಮಾನತೆಯ ಸಮೃಧ್ಧ ಭಾರತವನ್ನು,

ಇದೇನು ದೊಡ್ಡ ಕಷ್ಟವಲ್ಲ ನಾವು ಮನಸ್ಸು ಮಾಡಿದರೆ ……..

ವಿವೇಕ್ ಗೌಡ – ವಿವೇಕ್ ಆರಾಧ್ಯ,
ವಿವೇಕ್ ಶರ್ಮ – ವಿವೇಕ್ ವರ್ಮ,
ವಿವೇಕ್ ರಾವ್ – ವಿವೇಕ್ ರೈ,
ವಿವೇಕ್ ಹೆಗಡೆ – ವಿವೇಕ್ ಪಂಡಿತ್,
ವಿವೇಕ್ ಆಚಾರ್ಯ – ವಿವೇಕ್ ಸ್ವಾಮಿ,
ವಿವೇಕ್ ನಾಯಕ್ – ವಿವೇಕ್ ಬಂಜಾರ,.
ವಿವೇಕ್ ವಿಶ್ವಕರ್ಮ – ವಿವೇಕ್ ಕುಂಬಾರ,
ವಿವೇಕ್ ಭಜಂತ್ರಿ – ವಿವೇಕ್ ಹೊಲೆಯ,
ವಿವೇಕ್ ಮಾದಿಗ – ವಿವೇಕ್ ಪೂಜಾರಿ,
ವಿವೇಕ್ ಭಟ್ – ವಿವೇಕ್ ಕುರುಬ,
ವಿವೇಕ್ ಪೈ – ವಿವೇಕ್ ಠಾಕೂರ್,
ವಿವೇಕ್ ಮಡಿವಾಳ – ವಿವೇಕ್ ತಿಗಳ,
ವಿವೇಕ್ ಕಮ್ಮಾರ – ವಿವೇಕ್ ಚಮ್ಮಾರ,
ವಿವೇಕ್ ಶೆಟ್ಟಿ – ವಿವೇಕ್ ಸಿಂಗ್,
ವಿವೇಕ್ ರೆಡ್ಡಿ – ವಿವೇಕ್ ಹರಿಜನ,
ವಿವೇಕ್ ಶಾಸ್ತ್ರಿ, ವಿವೇಕ್ ಪಟೇಲ್
ಇನ್ನೂ…ಇನ್ನೂ…ಇನ್ನೂ……

ಅಯ್ಯೋ ರಾಮ, ಇದೆಲ್ಲಾ ಒಬ್ಬನೇ ಕಣ್ರೀ, ಒಂದು ಮನುಷ್ಯ ಪ್ರಾಣಿ. ಗುರುತಿಸಲಿಕ್ಕೆ ನಮ್ಮಪ್ಪ ಅಮ್ಮ ಒಂದು ಹೆಸರಿಟ್ಟರು,

ಆದರೆ ವಿವೇಕ್ ನಂತರ ಬರುತ್ತದೆ ನೋಡಿ, ಅದು ನನ್ನ ಇಡೀ ಸಾಮಾಜಿಕ ಬದುಕನ್ನು ಮತ್ತು ವ್ಯಕ್ತಿತ್ಬವನ್ನು ನಿರ್ಧರಿಸುತ್ತದೆ. ನನ್ನ ಸ್ನೇಹಿತರ ಬಳಗ – ಬಂಧುಗಳ ಬಳಗ – ಆತ್ಮೀಯರ ಬಳಗ – ದೇವರು ಮತ್ತು ಧಾರ್ಮಿಕ ಬಳಗ – ರಾಜಕೀಯ ಪಕ್ಷದ ಬಳಗ – ಕೊನೆಗೆ ನನ್ನ ಚಿಂತನಾ ವಿಧಾನವನ್ನೇ ನಿರ್ಧರಿಸುತ್ತದೆ ಈ ಹೆಸರಿನ ಜೊತೆಗಿರುವ ಅಕ್ಷರಗಳು,

ಅದು ಹಾಳಾಗಿ ಹೋಗಲಿ ನನಗೆ ಮಾತ್ರ ಅನ್ವಯಿಸುತ್ತದೆ ಎಂದು ಬಿಟ್ಟು ಬಿಡೋಣವೆಂದರೆ ಇಲ್ಲ, ಈ ಅಕ್ಷರಗಳು ಇಡೀ ಸಮಾಜದ ಸ್ವಾಸ್ಥ್ಯವನ್ನೇ ನಾಶಮಾಡಿ ನಮ್ಮ ದೇಶದ ಪ್ರಗತಿಗೇ ಅಡ್ಡಿಯಾಗಿದೆ,

ಇಂದಿನ ಆಧುನಿಕ ಯುಗದಲ್ಲಿ ಯಾವುದೇ ವೈಜ್ಞಾನಿಕ ಅಥವಾ ಅರ್ಥಗರ್ಭಿತವಾದ ಯಾವ ಆಧಾರವೂ ಇಲ್ಲದ ಈ ಅಕ್ಷರಗಳು ನಮ್ಮ ಬದುಕನ್ನೇ ನಿರ್ಧರಿಸುತ್ತದೆ ಎಂದರೆ ನಾವೆಷ್ಟು ಅನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆ ಊಹಿಸಿ,

ನಮ್ಮ ಜ್ಞಾನ – ನಮ್ಮ ನಡವಳಿಕೆ – ನಮ್ಮ ಪ್ರತಿಭೆ – ನಮ್ಮ ಪ್ರತಿಕ್ರಿಯೆಯ ಸಾಮರ್ಥ್ಯ ನಮ್ಮ ವ್ಯಕ್ತಿತ್ವ ಮತ್ತು ಜೀವನವನ್ನು ರೂಪಿಸಬೇಕಾಗಿದ್ದ ಸ್ಥಿತಿಯಲ್ಲಿ ಅಕ್ಷರವೋ, ನಾಮವೋ, ಕುಂಕುಮವೋ, ವಿಭೂತಿಯೋ, ಬಟ್ಟೆಯೋ, ಟೋಪಿಯೋ, ನಮ್ಮ ವ್ಯಕ್ತಿತ್ವವನ್ನು ನಿರ್ದೇಶಿಸಿದರೆ ಹೇಗೆ.?,

ಜಾತಿ ಬಿಡುವುದು ಕೆಲವರಿಗೆ ಕಷ್ಟವಾಗಬಹುದೇನೋ ?
ಆದರೆ ಮುಂದಿನ ದಿನಗಳಲ್ಲಿ ಮನುಷ್ಯತ್ವ ಇರುವ – ಬುದ್ದಿ ಇರುವ – ಜಾಗೃತರಾಗಿರುವ ಕೆಲವರಾದರೂ ಒಂದಷ್ಟು ನಾಗರಿಕವಾಗಿ ನಡೆದುಕೊಳ್ಳೋಣ ಎಂದು ಆಶಿಸುತ್ತಾ…

ಏಕೆಂದರೆ,
ಯಾರ ವಿರುದ್ಧ ಹೋರಾಟ, ಯಾರ ಪರ ಹೋರಾಟ,
ಶೋಷಿತರು ಯಾರು, ಶೋಷಕರು ಯಾರು.
ನ್ಯಾಯವಾಗಿರುವವರು ಯಾರು, ಅನ್ಯಾಯವಾಗಿರುವುದು ಯಾರಿಗೆ,
ಸಂಸದೀಯ ಪ್ರಜಾಪ್ರಭುತ್ವ, ಸಂವಿಧಾನ ಏನು ಮಾಡುತ್ತಿದೆ,

ಇಡೀ ದೇಶ ಈ ರೀತಿಯ ಅತೃಪ್ತ ಆತ್ಮವೇ ? ಅಥವಾ ಇದೇ ವಾಸ್ತವ ಇದನ್ನೇ ಒಪ್ಪಿಕೊಂಡು ಬದುಕುವುದು ಜಾಣತನವೇ ಅಥವಾ ಅನಿವಾರ್ಯವೇ,

ಭಾರತೀಯತೆ ಎಂಬುದು ಮರೀಚಿಕೆಯೇ ? ಯಾರಿಗೂ ತೃಪ್ತಿ ಇಲ್ಲ. ಒಬ್ಬರಿಗೊಬ್ಬರು ಅನುಮಾನದಿಂದ ನೋಡುವ ಈ Social structure ಸಂಪೂರ್ಣ ಪುನರ್ ಪರಿಶೀಲಿಸುವ ಅವಶ್ಯಕತೆ ಇದೆ‌.,

” ನಾನು ಈ ಮಣ್ಣಿನ, ಈ ಗಾಳಿಯ, ಈ ನೀರಿನ ವಾರಸುದಾರ. ನನ್ನ ಮೂಲ ಯಾವುದೇ ಇರಲಿ, ಈ ಕ್ಷಣದಿಂದ ನಾನೊಬ್ಬ ಭಾರತೀಯ, ನನ್ನ ನಿಷ್ಠೆ ಭಾರತೀಯತೆಗೆ. ”

ಭಾರತೀಯತೆ ಎಂದರೆ,…
” ಸರ್ವತಂತ್ರ, ಸ್ವತಂತ್ರ, ಸಾರ್ವಭೌಮ, ಸಮಾನತೆಯ, ಧರ್ಮಾತೀತ, ಜಾತ್ಯಾತೀತ, ಪ್ರಜ್ಞೆ, ಉಳಿದದ್ದೆಲ್ಲಾ ನಂತರ “.

ಆ ಕನಸಿನ ದಿನಗಳ ನಿರೀಕ್ಷೆಯಲ್ಲಿ ನಿಮ್ಮೊಂದಿಗೆ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ.
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ.
9844013068…….