ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಸಚಿವ ಮುನಿಯಪ್ಪ
ವಿಜಯ ದರ್ಪಣ ನ್ಯೂಸ್…
ಶಿಕ್ಷಣ ಮತ್ತು ಜ್ಞಾನದಿಂದ ಸಮಾನತೆ ಕಾಣಬಹುದು
ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಸಚಿವ ಮುನಿಯಪ್ಪ
ದೇವನಹಳ್ಳಿ ಬೆಂ.ಗ್ರಾ.ಜಿಲ್ಲೆ, ಏ.14: ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಂವಿಧಾನದ ಆಶಯದೊಂದಿಗೆ ನಾವೆಲ್ಲರೂ ಮುಂದೆ ಸಾಗೋಣ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.
ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ 134 ನೇ ಜಯಂತಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ 118 ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿ ಕೊಟ್ಟಿರುವುದು ಭಾರತದ ಸಂವಿಧಾನ, ಅಂತಹ ಸಂವಿಧಾನ ಕೊಟ್ಟಿರುವುದು ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರು, ಶೋಷಿತರಿಗೆ, ಹಿಂದುಳಿದವರಿಗೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಡಬೇಕು. ಸರ್ವರು ಸ್ವಂತಂತ್ರರರು, ಸರ್ವರು ಸಮಾನರು, ಸರ್ವರಿಗೂ ಸಮಾನ ನ್ಯಾಯ, ಎಲ್ಲರಿಗೂ ಸಮಾನ ಅವಕಾಶ ಸಿಗುವಂತಾಗಬೇಕು ಎಂಬ ತತ್ವದಡಿ ಸಂವಿಧಾನವನ್ನು ಡಾ.ಬಿ.ಆರ್ ಅಂಬೇಡ್ಕರ್ ಅವರು ರೂಪಿಸಿದರು.
ಸಂವಿಧಾನದಿಂದ ಕೇವಲ ಒಂದು ಜಾತಿ, ಸಮುದಾಯ, ವರ್ಗಕ್ಕೆ ಸೀಮಿತವಾಗಿಲ್ಲ, ಭಾರತದ ಕೊಟ್ಟು ಕಡೆಯ ಪ್ರಜೆಗೂ ಸಮಾನ ಅವಕಾಶ ನೀಡಲಾಗಿದೆ. ಗುಣಮಟ್ಟದ ಶಿಕ್ಷಣ ಹಾಗೂ ಜ್ಞಾನ ವೃದ್ಧಿಯಿಂದ ಎಲ್ಲರಿಗೂ ಸಮಾನ ಅವಕಾಶ ಸಿಗುತ್ತದೆ ಎಂಬುದು ನನ್ನ ಭಾವನೆ ರಾಜ್ಯಾದ್ಯಾಂತ ಹೋಬಳಿವಾರು ವಸತಿ ಶಾಲೆ ಸ್ಥಾಪಿಸಲು 2014 ರ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಅವಧಿಯಲ್ಲಿ ವರದಿ ನೀಡಲಾಗಿತ್ತು, ಈಗ ವಸತಿ ಶಾಲೆಗಳು ಬಂದು ಬಡವರ ಹಿಂದುಳಿದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಸಹಕಾರಿಯಾಗಿದೆ ಮುಂದೆ ಪಂಚಾಯಿತಿ ವಾರು ವಸತಿ ಶಾಲೆ ನಿರ್ಮಿಸಲಾಗುವುದು ಎಂದರು. ಡಾ.ಬಿ.ಆರ್ ಅಂಬೇಡ್ಕರ್ ಅವರು ಮತ್ತು ಡಾ. ಬಾಬು ಜಗಜೀವನ್ ರಾಮ್ ಅವರು ಇಬ್ಬರೂ ಕೂಡ ಸಾಕಷ್ಟು ಹೋರಾಟಗಳನ್ನು ನಡೆಸಿ, ಹಲವು ಸಮಸ್ಯೆಗಳನ್ನು ಎದುರಿಸಿ ದೇಶಕ್ಕೆ ಉತ್ತಮ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಗಳಾಗಿದ್ದಾರೆ ಎಂದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸಂಸದ ಡಾ.ಕೆ ಸುಧಾಕರ್ ಅವರು ಮಾತನಾಡಿ ಇಂದು ಪ್ರಪಂಚದಾದ್ಯಂತ ವಿಶ್ವದ ಜ್ಞಾನ ದಿನ ಎಂದು ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಗುತ್ತದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ, ಇವತ್ತು ಇಬ್ಬರು ಮಹಾನ್ ನಾಯಕರುಗಳ ಜನುಮದಿನ ಜೊತೆಗೆ ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ, ಜ್ಞಾನ ಇವುಗಳ ತತ್ವಗಳನ್ನು ಆಚರಣೆ ಮಾಡುವ ದಿನವಾಗಿದೆ. ಅಂಬೇಡ್ಕರ್ ಅವರ ಜೀವನವು ಬಹಳಷ್ಟು ಕಠಿಣವಾಗಿತ್ತು ಜಾತಿ ಪದ್ಧತಿ, ಶೋಷಣೆ, ನೋವು ಇವೆಲ್ಲವನ್ನೂ ಸಹಿಸಿಕೊಂಡು ದೇಶಕ್ಕೆ ಉತ್ತಮ ಸಂವಿಧಾನ ರಚಿಸಿದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, ಕೊಲಂಬಿಯಾ ಯೂನಿವರ್ಸಿಟಿ ಅಲ್ಲಿ ಪಿ.ಹೆಚ್.ಡಿ ಪಡೆದ ಮೊದಲ ಭಾರತೀಯ, ಮಹಾನ್ ನಾಯಕರುಗಳ ಸಾಲಿನಲ್ಲಿದ್ದಾರೆ. ಹಾಗೆಯೇ ದೇಶದ ಮಾಜಿ ಉಪ ಪ್ರಧಾನ ಮಂತ್ರಿ ಗಳಾದ ಬಾಬು ಜಗಜೀವನರಾಂ ಅವರು ಹಸಿರು ಕ್ರಾಂತಿಯ ಹರಿಕಾರ ಈ ದೇಶದ ಪ್ರಧಾನಿ ಆಗಲು ಅವಕಾಶ ಹಾಗೂ ಅರ್ಹತೆ ಇದ್ದರೂ ಸಹ ಅದೃಷ್ಟ ಇರಲಿಲ್ಲ. ಶೋಷಿತರಿಗೆ ಅಲ್ಲ ಮೇಲ್ಪಂಕ್ತಿಗಳಿಗೂ ಸಮಾನ ಅವಕಾಶ, ಸೌಲಭ್ಯ ಸಿಗುವಂತಾಗಬೇಕು ಎಂಬ ಆಲೋಚನೆ ಹೊಂದಿದ್ದರು. ಇವರಿಬ್ಬರ ಜೀವನಶೈಲಿ, ತತ್ವಾದರ್ಶಗಳನ್ನು ಜೀವನದಲ್ಲಿ ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು
.
ನಂತರ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ ನಾರಾಯಣಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ರಾಜಣ್ಣ , ಪುರಸಭೆ ಅಧ್ಯಕ್ಷ ಮುನಿಕೃಷ್ಣ, ತಹಶೀಲ್ದಾರ್ ಬಾಲಕೃಷ್ಣ ಇಒ ಶ್ರೀನಾಥ್ ಗೌಡ ಸೇರಿದಂತೆ ಸಂಘ ಸಂಸ್ಥೆಗಳ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.