ಡೊನಾಲ್ಡ್ ಟ್ರಂಪ್ ಅಹಂಕಾರ ಮತ್ತು ತಿಕ್ಕಲುತನಕ್ಕೆ ಅಮೆರಿಕದ ಮತದಾರರೇ ಹೊಣೆ……..

ವಿಜಯ ದರ್ಪಣ ನ್ಯೂಸ್….

ಡೊನಾಲ್ಡ್ ಟ್ರಂಪ್ ಅಹಂಕಾರ ಮತ್ತು ತಿಕ್ಕಲುತನಕ್ಕೆ ಅಮೆರಿಕದ ಮತದಾರರೇ ಹೊಣೆ……..

ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ಆ ದೇಶದ ಜನಪ್ರತಿನಿಧಿಗಳಾಗಿ ಅಥವಾ ಆ ದೇಶದ ಮುಖ್ಯಸ್ಥರಾಗಿ ಪ್ರಧಾನಿ ಅಥವಾ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡುವಾಗ ಮತದಾರರು ಸಮಗ್ರವಾಗಿ ಪಕ್ಷ ಮತ್ತು ಅಭ್ಯರ್ಥಿಗಳ ಬಗ್ಗೆ ಚಿಂತಿಸಿ ಮತ ಚಲಾಯಿಸಬೇಕಾಗುತ್ತದೆ. ಯಾವುದೋ ಧರ್ಮ, ಜಾತಿ, ರಾಷ್ಟ್ರೀಯತೆ, ಅಭಿವೃದ್ಧಿಯ ಭರವಸೆ ಮುಂತಾದ ಭ್ರಮಾತ್ಮಕ ವಿಷಯಗಳಿಗೆ ಮರುಳಾಗಿ ವಿವೇಚನೆ ಇಲ್ಲದೆ ನೈತಿಕತೆ ಇಲ್ಲದ ವ್ಯಕ್ತಿಯನ್ನು ಅಧ್ಯಕ್ಷನನ್ನಾಗಿ ಮಾಡಿದರೆ ಅದರ ಪರಿಣಾಮ ಇಡೀ ದೇಶ ಅನುಭವಿಸಬೇಕಾಗುತ್ತದೆ.

ಆ ರೀತಿಯ ಅಚಾತುರ್ಯವೊಂದು ವಿಶ್ವದ ಮಹತ್ವದ ಪ್ರಜಾಪ್ರಭುತ್ವ ದೇಶ ಅಮೆರಿಕಾದ ಮತದಾರರಿಂದ ನಡೆದು ಹೋಗಿದೆ. ನಿಜಕ್ಕೂ ಮೊದಲನೆಯ ಬಾರಿಯಾಗಿರಲಿ ಅಥವಾ ಈಗ ಆಯ್ಕೆ ಆಗಿರುವ ಎರಡನೆಯ ಬಾರಿ ಆಗಿರಲಿ ಅಮೆರಿಕಾದಂತಹ ದೇಶಕ್ಕೆ ಅಧ್ಯಕ್ಷರಾಗುವ ವ್ಯಕ್ತಿತ್ವ ಮತ್ತು ನೈತಿಕತೆ ಖಂಡಿತ ಡೊನಾಲ್ಡ್ ಟ್ರಂಪ್ ಎಂಬ ವ್ಯಕ್ತಿ ಹೊಂದಿಲ್ಲ ಎಂಬುದು ವಿಶ್ವದ ಬಹುತೇಕ ಸಂವೇದನಾಶೀಲ ಮನಸ್ಸುಗಳ ಅನಿಸಿಕೆ.

ಟ್ರಂಪ್ ಶ್ರೀಮಂತನಿರಬಹುದು, ಧೈರ್ಯಸ್ತನಿರಬಹುದು, ತನ್ನ ದೇಶದ ಬಗ್ಗೆ ಅಪಾರ ಕಾಳಜಿ ಉಳ್ಳವನೇ ಇರಬಹುದು ಅಥವಾ ತಾನೊಬ್ಬ ಅತ್ಯಂತ ಬಲಿಷ್ಠ ವ್ಯಕ್ತಿಯಾಗಿರಬಹುದು, ಆದರೆ ಪ್ರಬುದ್ಧತೆ ಇಲ್ಲದಿದ್ದಲ್ಲಿ ಆ ಎಲ್ಲಾ ಗುಣಗಳು ಅಪಾಯಕಾರಿಯಾಗುವ ಸಾಧ್ಯತೆ ಹೆಚ್ಚು.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ನೀತಿಯೇ ಇರಬಹುದು, ವಿದೇಶಾಂಗ ನೀತಿಯೇ ಇರಬಹುದು, ತೆರಿಗೆ ನೀತಿಯೇ ಇರಬಹುದು, ಆಂತರಿಕ ನಿರುದ್ಯೋಗ ನಿವಾರಣೆಯ ನೀತಿಯೇ ಇರಬಹುದು, ಅದರಲ್ಲಿ ಖಂಡಿತವಾಗಲೂ ತಪ್ಪು ಮತ್ತು ಆಕ್ರಮಣಕಾರಿ ಹೆಜ್ಜೆಗಳನ್ನು ಇಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಅದಕ್ಕೆ ಅತ್ಯುತ್ತಮ ಉದಾಹರಣೆ ಈಗ ಪ್ರಕಟಿಸಿರುವ ಪರಿಷ್ಕೃತ ತೆರಿಗೆ ನೀತಿ. ಅವರ ಪ್ರಕಾರ ಇಡೀ ವಿಶ್ವದ ಬಹುತೇಕ ರಾಷ್ಟ್ರಗಳು ತೆರಿಗೆ ವಿಷಯದಲ್ಲಿ ದ್ವಂದ್ವ ನೀತಿಯನ್ನು ಅನುಸರಿಸುತ್ತಾ, ಅಮೆರಿಕಕ್ಕೆ ಮೋಸ ಮಾಡುತ್ತಿವೆ ಅಥವಾ ಅಮೆರಿಕವನ್ನು ವಂಚಿಸುತ್ತಿವೆ. ಆದ್ದರಿಂದ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಅಮೆರಿಕ ಮೊದಲು ಎನ್ನುವ ನೀತಿಯ ಅನ್ವಯ ಈ ಪರಿಷ್ಕೃತ ತೆರಿಗೆ ನೀತಿ ಸರಿ ಎಂದು ವಾದಿಸುತ್ತಿದ್ದಾರೆ.

ಮೇಲ್ನೋಟಕ್ಕೆ ಕೆಲವು ರಾಜಕೀಯ ಮತ್ತು ಆರ್ಥಿಕ ತಜ್ಞರು ಅದು ಸರಿ ಇರಬಹುದೇನೋ ಎನ್ನುವ ರೀತಿಯಲ್ಲಿ ಚರ್ಚೆಗಳಲ್ಲಿ ಹೇಳುತ್ತಿದ್ದಾರೆ. ಆದರೆ ಅಮೆರಿಕ ವಿಶ್ವದ ದೊಡ್ಡಣ್ಣ. ಅದಕ್ಕೆ ಅನಧಿಕೃತವಾಗಿ ದೊಡ್ಡ ಜವಾಬ್ದಾರಿಯೂ ಇದೆ. ವಿಶ್ವದಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಒಂದಷ್ಟು ಹೊಣೆಗಾರಿಕೆಯೂ ಇದೆ.

ಈ ನಿಟ್ಟಿನಲ್ಲಿ ನೋಡುವುದಾದರೆ ವಿಶ್ವದಲ್ಲಿ ಆರ್ಥಿಕವಾಗಿ ಮೂರು ರೀತಿಯ ದೇಶಗಳು ಅಸ್ತಿತ್ವದಲ್ಲಿದೆ. ಶ್ರೀಮಂತ ದೇಶಗಳು, ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಮತ್ತು ಹಿಂದುಳಿದ ಬಡತನದ ದೇಶಗಳು. ತೆರಿಗೆ ನೀತಿ ಇದಕ್ಕೆ ಅನುಗುಣವಾಗಿ ಇರಬೇಕೆ ಹೊರತು ಸಮಾನ ತೆರಿಗೆ ನೀತಿ ಖಂಡಿತವಾಗಲೂ ಅಸಮಾನತೆ ಮತ್ತು ಅನ್ಯಾಯಕ್ಕೆ ಕಾರಣವಾಗುತ್ತದೆ.

ಭಾರತದ ಮೀಸಲಾತಿ ವ್ಯವಸ್ಥೆ ಇದಕ್ಕೆ ಒಂದು ಪೂರಕ ಉದಾಹರಣೆ. ಅಂದರೆ ಶೋಷಿತರಿಗೆ, ದುರ್ಬಲರಿಗೆ, ತುಳಿತಕ್ಕೆ ಒಳಗಾದವರಿಗೆ ಯಾವಾಗಲೂ ಒಂದಷ್ಟು ಮೀಸಲಾತಿಯ ಸಹಾನುಭೂತಿ ಸದಾ ಅವಶ್ಯಕತೆ ಇದೆ. ಅದು ಆರ್ಥಿಕ ದುರ್ಬಲರೇ ಆಗಿರಲಿ, ಲಿಂಗ ತಾರತಮ್ಯವೇ ಇರಲಿ, ಪ್ರಾದೇಶಿಕ ಅಸಮಾನತೆಯೇ ಇರಲಿ, ಜಾತಿಯ ಅಸಮಾನತೆಯೇ ಇರಲಿ ಅದನ್ನು ಮೀಸಲಾತಿ ಎಂಬ ಅಸ್ತ್ರದ ಮೂಲಕ ಹೋಗಲಾಡಿಸಲು ಪ್ರಯತ್ನಿಸಬೇಕಾಗಿದ್ದು ಆಡಳಿತಗಾರರ ಜವಾಬ್ದಾರಿ.

ಈಗ ಅಮೆರಿಕಾದ ತೆರಿಗೆ ನೀತಿಯಲ್ಲಿ ನೇರವಾದ ಅನ್ಯಾಯ ಎದ್ದು ಕಾಣುತ್ತಿದೆ. ಉದಾಹರಣೆಗೆ ಶ್ರೀಮಂತ ದೇಶ ಅಮೇರಿಕಾ ತಂತ್ರಜ್ಞಾನ, ಆಧುನಿಕತೆ ಮತ್ತು ಗುಣಮಟ್ಟದಲ್ಲಿ ವಿಶ್ವಮಟ್ಟದ ನೈಪುಣ್ಯತೆ ಹೊಂದಿದೆ. ಅಲ್ಲಿ ತಯಾರಾಗುವ ವಸ್ತುಗಳು ಭಾರತದಂತ ದೇಶಕ್ಕೆ ಬಂದಾಗ ಭಾರತ ಅದಕ್ಕೆ ಸರಿಸುಮಾರು ಶೇಕಡ ನೂರರಷ್ಟು ತೆರಿಗೆ ವಿಧಿಸುತ್ತದೆ. ಅದಕ್ಕೆ ಕಾರಣ ಅಮೆರಿಕಾದಿಂದ ಇಂಪೋರ್ಟ್ ಅಥವಾ ಅಮದಾಗುವ ವಸ್ತುಗಳು ಉತ್ತಮ ಗುಣಮಟ್ಟದ್ದು. ಅದನ್ನು ಬಹುತೇಕ ಶ್ರೀಮಂತರೇ ಉಪಯೋಗಿಸುವುದು ಎಂಬ ಅರಿವಿನಿಂದ ಅದಕ್ಕೆ ಹೆಚ್ಚು ತೆರಿಗೆಯನ್ನು ವಿಧಿಸಿ ಒಂದಷ್ಟು ಆರ್ಥಿಕ ಸುಧಾರಣೆ ಕಾಣುವ ಉದ್ದೇಶ ಇರುತ್ತದೆ. ಇದು ಎಲ್ಲ ವಸ್ತು ಮತ್ತು ದೇಶಗಳಿಗೂ ಅನ್ವಯಿಸುತ್ತದೆ.

ಹಾಗೆಯೇ ನಮ್ಮ ದೇಶದಿಂದ ಅಮೆರಿಕಾಗೆ ರಫ್ತಾಗುವಾ ವಸ್ತುಗಳ ಮೇಲೆ ಅಮೆರಿಕ ಕಡಿಮೆ ತೆರಿಗೆ ವಿಧಿಸುತ್ತದೆ. ಏಕೆಂದರೆ ಇಲ್ಲಿನ ವಸ್ತುಗಳು ಅಷ್ಟೊಂದು ಬೆಲೆ ಬಾಳುವುದಾಗಲಿ, ಗುಣಮಟ್ಟವಾಗಲಿ, ಆಕರ್ಷಕವಾಗಲಿ
” ಸಾಮಾನ್ಯವಾಗಿ ” ಇರುವುದಿಲ್ಲ. ( ಈಗ ಸಾಪ್ಟ್ವೇರ್ ಕ್ರಾಂತಿಯಿಂದ ಸ್ವಲ್ಪ ಬದಲಾವಣೆ ಆಗಿದೆ ) ಅಮೆರಿಕದಲ್ಲಿ ಅದರ ಮಾರಾಟ ಸ್ವಲ್ಪ ಸುಲಭವಾಗಲಿ ಎನ್ನುವ ಕಾರಣದಿಂದ ಕಡಿಮೆ ತೆರಿಗೆ ವಿಧಿಸುತ್ತಾರೆ. ಅವರು ಶ್ರೀಮಂತರು ಬೇರೆ. ಅವರಿಗೆ ಈ ಹಣವೇ ದೊಡ್ಡದಲ್ಲ. ಇದು ಸಹಜ ನ್ಯಾಯ.

ಈಗ ಅವರು ಭಾರತದ ವಸ್ತುಗಳಿಗೆ ಅಷ್ಟೊಂದು ಹೆಚ್ಚಿನ ತೆರಿಗೆ ವಿಧಿಸಿದರೆ ಅಲ್ಲಿ ಭಾರತದ ವಸ್ತುಗಳು ಮಾರಾಟವಾಗುವುದು ಕಡಿಮೆಯಾಗುತ್ತದೆ ಅಥವಾ ತೆರಿಗೆ ಹಣ ಹೆಚ್ಚು ಬರುತ್ತದೆ. ಅದಕ್ಕೆ ಪರ್ಯಾಯ ಅಮೆರಿಕಾದ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಸಿಗುತ್ತದೆ ಎಂಬುದು ಅವರ ಲೆಕ್ಕಾಚಾರ.

ಆದರೆ ಇದರೊಳಗಿನ ಸೂಕ್ಷ್ಮತೆ ಏನೆಂದರೆ ಅಮೆರಿಕ ಈಗಾಗಲೇ ಶ್ರೀಮಂತ ರಾಷ್ಟ್ರ. ಭಾರತ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಭಾರತಕ್ಕೆ ಒಂದು ರೀತಿಯ ಸಹಾನುಭೂತಿ ತೋರಬೇಕಾದದ್ದು ಅಮೆರಿಕಾದ ನೈತಿಕ ಜವಾಬ್ದಾರಿ. ಇದು ಕೇವಲ ತೆರಿಗೆ ದೃಷ್ಟಿಯಿಂದ ಮಾತ್ರವಲ್ಲ ವಿಶ್ವದ ಮುಂಚೂಣಿ ಸ್ಥಾನದಲ್ಲಿ ಅಮೆರಿಕ ನಿಲ್ಲಬೇಕಾದರೆ ಭಾರತದಂತ ದೇಶಗಳ ನೈತಿಕ ಬೆಂಬಲವೂ ಬೇಕಾಗುತ್ತದೆ. ಅದು ಸಿಗಬೇಕಾದರೆ ಭಾರತ ಅಥವಾ ಇತರ ದೇಶಗಳೊಂದಿಗೆ ಅಮೆರಿಕ ಒಂದಷ್ಟು ಸಹಕಾರ, ಸಮನ್ವಯ ಮತ್ತು ಸೌಹಾರ್ದತೆಯಿಂದ ನಡೆದುಕೊಳ್ಳಬೇಕು.

ಅದು ಬಿಟ್ಟು ತಾನು ಹಠವಾದಿಯಾದರೆ ಅದು ಪ್ರಬುದ್ಧ ನಡವಳಿಕೆಯಲ್ಲ. ಅಮೆರಿಕ ಮೊದಲು ಎಂಬ ತತ್ವವೇನೋ ಸರಿ, ಆದರೆ ಅದಕ್ಕಾಗಿ ಅವರು ಕಳೆದುಕೊಳ್ಳುತ್ತಿರುವುದು ತುಂಬಾ ಇದೆ. ಅಮೆರಿಕಾದ ಘನತೆಯನ್ನು ಉಳಿಸಿಕೊಳ್ಳುವಲ್ಲಿ ಡೊನಾಲ್ಡ್ ಟ್ರಂಪ್ ಎಡವುತ್ತಿದ್ದಾರೆ. ಜೊತೆಗೆ ದೊಡ್ಡಣ್ಣನಾಗುವ ಅವಕಾಶವನ್ನು ಅದರ ಪ್ರತಿಸ್ಪರ್ಧಿ ಚೀನಾ ಉಪಯೋಗಿಸಿಕೊಳ್ಳುವಂತೆ ವೇದಿಕೆ ಕಲ್ಪಿಸುತ್ತಿದ್ದಾರೆ. ಇದು ಒಳ್ಳೆಯ ಲಕ್ಷಣವಲ್ಲ.

ಅವರಿಗೆ ತೆರಿಗೆ ನೀತಿಯಲ್ಲಿ ಅನ್ಯಾಯವಾಗುತ್ತಿದ್ದರೆ ಅದನ್ನು ಸೂಕ್ಷ್ಮವಾಗಿ, ಸೂಕ್ತವಾಗಿ ದ್ವಿಪಕ್ಷೀಯ ಮಾತುಕತೆಯ ಮೂಲಕ ಸ್ವಲ್ಪ ಸ್ವಲ್ಪ ಹೆಚ್ಚಿಸಿಕೊಳ್ಳುವ, ನಿಯಂತ್ರಣಕ್ಕೆ ಪಡೆಯುವ ಕೆಲಸ ಮಾಡಬೇಕೆ ಹೊರತು ಈ ರೀತಿ ಹುಚ್ಚಾಪಟ್ಟೆ ಅಹಂಕಾರದಿಂದ ಮೆರೆಯುವುದು ಒಳ್ಳೆಯ ಲಕ್ಷಣವಲ್ಲ. ಅಮೆರಿಕಾದ ಅಧ್ಯಕ್ಷರ ಈ ಕ್ಷಣದ ಹೇಳಿಕೆಯನ್ನು ಗಮನಿಸಿ
” Some countries kissing my a…. ” (ಕೆಲವು ದೇಶಗಳು ನನ್ನ ……. ಮುತ್ತಿಡುತ್ತಿವೆ )

ಈ ಅಹಂಕಾರ ಅತಿಯಾಯಿತು. ಈಗಾಗಲೇ ಅಮೆರಿಕಾದ ಎಲ್ಲಾ 50 ರಾಜ್ಯಗಳಲ್ಲಿ ಇವರ ನೀತಿಗಳ ವಿರುದ್ಧ ಪ್ರತಿಭಟನೆಗಳಾಗಿದೆ. ಇದು ಹೀಗೆಯೇ ಮುಂದುವರೆಯಲಿ. ಈ ವ್ಯಕ್ತಿಯನ್ನು ಕನಿಷ್ಠ ಈಗಲಾದರೂ ಒಂದು ನಿಯಂತ್ರಣಕ್ಕೆ ಒಳಪಡಿಸುವುದು ಅಮೆರಿಕಾದ ಮತದಾರರ ಕರ್ತವ್ಯ. ಅದನ್ನು ಅವರು ನಿಭಾಯಿಸಲಿ. ಇಲ್ಲದಿದ್ದರೆ ಅಮೆರಿಕಾದ ಘನತೆ ಮಣ್ಣು ಪಾಲಾಗುವುದು ಖಚಿತ …….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ.
9844013068…….