ಹೂವನ್ನು ನೀಡುವ ಕೈಗೂ ಒಂದಿಷ್ಟು.

ಲೇಖನ – ಜಯಶ್ರೀ.ಜೆ. ಅಬ್ಬಿಗೇರಿ
ಬೆಳಗಾವಿ
ಇಂಗ್ಲೀಷ್ ಉಪನ್ಯಾಸಕರು
ಮೊ: ೯೪೪೯೨೩೪೧೪೨

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ.
ಎಲ್ಲರೊಳಗೆ ಒಂದಾಗುವ ಬದುಕಿನ ಸ್ವಾರಸ್ಯಕರ ಗುಟ್ಟನ್ನು ಡಿವಿಜಿಯವರು ಈ ಕಗ್ಗದಲ್ಲಿ ಬಹು ಚೆನ್ನಾಗಿ ಹೇಳಿದ್ದಾರೆ. ಬೆಟ್ಟದ ಅಡಿಯಲ್ಲಿರುವ ಹುಲ್ಲಿನಂತಿರು. ಆ ಹುಲ್ಲನ್ನು ಹಸು ಕರುಗಳು ತಿಂದು ತೃಪ್ತಿ ಪಡುವಂತಿರಲಿ. ಮನೆಗೆ ಸುಗಂಧ ಸೂಸುವ ಮಲ್ಲಿಗೆಯಂತಿರು. ಎಲ್ಲರೂ ನಿನ್ನನ್ನು ಎದುರು ನೋಡುವಂತಿರು. ವಿಧಿ ನಿನ್ನ ಮೇಲೆ ಕಷ್ಟಗಳ ಮಳೆ ಸುರಿಸಿದಾಗ್ಯೂ ಕುಗ್ಗದೆ, ಬಗ್ಗದೆ, ಕುಸಿಯದೆ, ಕಂಗಾಲಾಗದೇ ದೃಢವಾಗಿರು. ಕಷ್ಟಗಳು ನಿನ್ನನ್ನು ಏನೂ ಮಾಡಲಾರವು. ದೀನ ದುರ್ಬಲರಿಗೆ ಆಸರೆಯನ್ನು ಕೊಡು. ಬೆಲ್ಲ ಸಕ್ಕರೆಯಂತೆ ಸಿಹಿಯಾಗಿರು. ಯಾವುದೇ ಸಂದರ್ಭವಿರಲಿ, ಸನ್ನಿವೇಶವಿರಲಿ, ಎಲ್ಲರೊಳಗೆ ಒಂದಾಗಿ ಬಾಳು. ಪರೋಪಕಾರಿಯಾಗಿ ಜೀವನ ಸಾರ್ಥಕಗೊಳಿಸಿಕೊ ಎಂಬ ದಿವ್ಯ ಸಂದೇಶವನ್ನು ನೀಡಿದ್ದಾರೆ.

1001070578

ಮಹಾನ್ ಬದುಕು

ಮಾನವ ಜನ್ಮ ಸಿಗುವುದು ದುರ್ಲಭ. ನಮಗೆ ಮಾನವ ಜನ್ಮ ಸಿಕ್ಕಿದ್ದು ಹಿಂದಿನ ಜನ್ಮದ ಪುಣ್ಯದ ಫಲ. ‘ಮಾನವ ಜನ್ಮ ದೊಡ್ಡದು ಇದು ಹಾಳು ಮಾಡಕೊಳ್ಳದಿರಿ ಹುಚ್ಚಪ್ಪಗಳಿರಾ.’ ಎಂದು ದಾಸರು ಎಚ್ಚರಿಸಿದ್ದಾರೆ.’ ಜಗತ್ತಿಗೆ ಏನು ನೀಡುತ್ತೇವೆಯೋ ಅದನ್ನೇ ಪಡೆಯುತ್ತೇವೆ.’ ಎನ್ನುವ ಮಾತಿದೆ. ಮನುಷ್ಯ ಜೀವನದ ಸಾರ್ಥಕತೆ ಸಹಾಯ ಮಾಡುವುದರಲ್ಲಿದೆ. ಅಂದರೆ ಅದು ಪ್ರೀತಿ ದಯೆ ಕರುಣೆ ಅನುಕಂಪ ಸಹಾಯಹಸ್ತ ಏನೇ ಆಗಿರಬಹುದು. ಅನೇಕ ಸಾಧಕ ಮಹನೀಯರು ತಮ್ಮ ಬದುಕನ್ನು ಮಾತ್ರ ಸಾರ್ಥಕಗೊಳಿಸಿಕೊಳ್ಳದೇ ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವ ಕರೆ ನೀಡಿದ್ದಾರೆ. ಪ್ರಯೋಜನಕಾರಿಯಾಗಿ ಬದುಕುವುದು ನಮ್ಮ ಸಂಸ್ಕೃತಿ ಅಷ್ಟೇ ಅಲ್ಲ ಮಹಾನ ಬದುಕಿನ ಆಶಯವೂ ಆಗಿದೆ.

ಪ್ರೀತಿಯ ಸಿರಿತನ

ಇದನ್ನೇ ಸಂಸ್ಕೃತ ನುಡಿಯಲ್ಲಿ ‘ಪರೋಪಕಾರಾರ್ಥಂ ಇದಂ ಶರೀರಂ.’ ಎಂದು ಹೇಳಿದ್ದಾರೆ. ‘ಪಡೆಯುವುದಕ್ಕಿಂತ ಕೊಡುವುದರಲ್ಲಿ ಹೆಚ್ಚು ಆನಂದವಿದೆ.’ ಎಂಬ ನುಡಿಯಂತೆ ಬದುಕಿ ಬಾಳಿದವರು ನಮ್ಮಲ್ಲಿ ಸಾಕಷ್ಟು ಜನ ಇದ್ದಾರೆ. ಸತ್ಪಾತ್ರರಿಗೆ ಕೊಡಬೇಕು. ಹಣ ಕೊಟ್ಟರೆ ಮಾತ್ರ ಕೊಟ್ಟಂತೇನೂ ಅಲ್ಲ. ಕಡುಬಡತನದಲ್ಲಿದ್ದರೂ ಪ್ರೀತಿಯ ಸಿರಿತನದಿಂದ ಇತರರ ಹೃದಯವನ್ನು ಗೆದ್ದವರು ಜನಮಾನಸದಲ್ಲಿ ಇತಿಹಾಸದ ಪುಟದಲ್ಲಿ ಸ್ಥಾನ ಪಡೆದಿದ್ದಾರೆ. ನೊಂದವರಿಗೆ ಸಾಂತ್ವನದ ನುಡಿಗಳು, ಅನುಕಂಪ, ಕಷ್ಟದಲ್ಲಿರುವವರಿಗೆ ಕಿವಿಯಾಗಲು ಸ್ಚಲ್ಪ ಸಮಯ ನೀಡಿದರೂ ಸಾಕು. ಇವು ಕೂಡ ಒಂದು ರೀತಿಯ ಸಹಾಯ ಮಾಡಿದಂತೆ ಸರಿ.

ಮಂದಹಾಸ

ಅನಾಥರಿಗೆ, ದೀನ ದಲಿತರಿಗೆ ಆಸರೆಯಾದಾಗ, ವಿಕಲಚೇತನರಿಗೆ, ವಯಸ್ಸಾದವರಿಗೆ ಕೈ ಹಿಡಿದು ನಡೆಸಿದಾಗ, ಜ್ಞಾನದ ಹಸಿವು ಇರುವವರಿಗೆ ಜ್ಞಾನವನ್ನು ಧಾರೆ ಎರೆದಾಗ ಅವರ ಮೊಗದಲ್ಲಿ ಮೂಡುವ ಮಂದಹಾಸ, ಅವರ ಮನದಲ್ಲಿ ಮೂಡುವ ಸಂತೋಷ, ಅವರು ಜೀವನ ಪೂರ್ತಿ ಕೃತಜ್ಞತೆಯಿಂದ ನೆನಪಿಸಿಕೊಳ್ಳುವುದು, ಮನಸಾರೆ ನೀಡುವ ಆಶೀರ್ವಾದ ಜೀವನದ ಸಾರ್ಥಕತೆಯನ್ನು ಹೆಚ್ಚಿಸುತ್ತದೆ. ಇವೆಲ್ಲವೂ ನಮ್ಮನ್ನು ಸದಾ ಆನಂದದಲ್ಲಿ ತೇಲುವಂತೆ ಮಾಡುತ್ತವೆ. ನಾವು ನೀಡಿದ ನೆರವು ನಮಗೆ ಕಷ್ಟಕಾಲದಲ್ಲಿ ಯಾವುದೋ ರೂಪದಲ್ಲಿ ದೊರಕುತ್ತದೆ.

ಅದ್ಭುತ ಪಂಜು

‘ನನ್ನ ಪಾಲಿಗೆ ಜೀವನವೊಂದು ಚಿಕ್ಕ ಮೊಂಬತ್ತಿಯಲ್ಲ. ಅದೊಂದು ಅದ್ಭುತ ಪಂಜು. ನಾನು ಅದನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವವರೆಗೆ ಅದು ಉಜ್ವಲವಾಗಿ ಬೆಳಗುವಂತೆ ಮಾಡಬಯಸುತ್ತೇನೆ.’ ಇದು ಜಾರ್ಜ್ ಬರ್ನಾಡ್ ಶಾ ಅವರ ನುಡಿ. ಸೃಷ್ಟಿ ದೃಷ್ಟಿ ಸಮಷ್ಟಿ ನಮ್ಮಲ್ಲಡಗಿಹುದು ಅದ್ಭುತ ಶಕ್ತಿ ಎಂದರಿಯುವುದು ಬದುಕಿಗ ಬಹುಮುಖ್ಯ. ಬದುಕನ್ನು ನಾವು ಬದುಕಿದರೆ ಸಾಕಾಗದು. ಮುಂದಿನ ಪೀಳಿಗೆಗೂ ಉತ್ತಮ ರೀತಿಯಲ್ಲಿ ದಾಟಿಸಬೇಕೆಂಬ ಉದಾತ್ತ ವಿಚಾರ ಬರ್ನಾಡ್ ಶಾರವರ ನುಡಿಯಲ್ಲಿ ಅಡಗಿದೆ.

ಫಲಾಪೇಕ್ಷೆ

ಐಶಾರಾಮಿ ಬದುಕಿಗೆ ಬೇಕಾದ ಬಂಗಲೆ, ಉದ್ದನೆಯ ಕಾರುಗಳು, ಆಸ್ತಿ, ಅಂತಸ್ತು, ಅಧಿಕಾರ ಏನೇ ಇರಬಹುದು. ಆದರೆ, ‘ಜೀವನದ ಗುಣಮಟ್ಟವು ನಾವು ಸಮಾಜಕ್ಕೆ ಕೊಡುವ ಕೊಡುಗೆ ಮೇಲೆ ನಿರ್ಧಾರ ಆಗುತ್ತದೆ. ಗುಣಮಟ್ಟಕ್ಕೆ , ಮೌಲ್ಯಕ್ಕೆ ಸಿಗುವ ಗೌರವ ಪ್ರೀತ್ಯಾದರಗಳು ಯಾವುದೇ ಕಾಲ ದೇಶಕ್ಕೆ ಸೀಮಿತವಾಗದೆ ಎಲ್ಲೆಲ್ಲೂ ನಿರಂತರವಾಗಿವೆ. ಆ ಪ್ರೀತಿಯನ್ನು ಪಡೆಯುವತ್ತ ನಮ್ಮ ಸೇವೆ ಇರಬೇಕು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವಂತೆ ‘ಕರ್ಮಣ್ಯೆ ವಾಧಿಕಾರಸ್ಥೇ ಮಾ ಫಲೇಶು ಕದಾಚನ.’ ಎನ್ನುವಂತೆ ಯಾವುದೇ ಫಲಾಪೇಕ್ಷೆಯಿಲ್ಲದೇ ಪರೋಪಕಾರಕ್ಕಾಗಿ ಹುಟ್ಟಿದ ಜೀವವಿದು ಎಂಬುದನ್ನು ತಿಳಿದು ಮರಳಿ ಏನನ್ನೂ ನಿರೀಕ್ಷಿಸದೇ ಸಹಾಯ ಹಸ್ತ ಚಾಚಬೇಕು.

ಪ್ರಕೃತಿ

ಯಾವ ಒಂದು ಜೀವಿಯೂ ತನಗಾಗಿ ತಾನೊಂದೇ ಜೀವಿಸುವುದಿಲ್ಲ.’ ವಿಲಿಯಂ ಬ್ಲೇಕ್ ಹೇಳಿದ ಅರ್ಥಗರ್ಭಿತ ನುಡಿಯಿದು. ಮರಗಳು ತನ್ನ ಹಣ್ಣುಗಳನ್ನು ತಾನೇ ತಿನ್ನುವುದಿಲ್ಲ. ಆಕಳು ತನ್ನ ಹಾಲು ತಾನೇ ಕುಡಿಯುವುದಿಲ್ಲ.ನದಿ ತನ್ನ ನೀರು ತಾನೇ ಕುಡಿಯುವುದಿಲ್ಲ. ಅವೆಲ್ಲವೂ ತಮಗಾಗಿ ಮಾತ್ರ ಜೀವಿಸುವುದಿಲ್ಲ. ಅವು ನಿಜಕ್ಕೂ ದೊಡ್ಡ ಪರೋಕಾರಿಗಳೇ. ಪ್ರಕೃತಿ ನಮಗೆ ಹೇಗೆ ಬದುಕಬೇಕೆಂಬುದನ್ನು ಕಲಿಸುತ್ತದೆ, ಇಡೀ ಸೃಷ್ಟಿಯಲ್ಲಿ ಅದ್ಭುತವಾದುದು ಮಾನವ ಸೃಷ್ಟಿ. ತಾನು ಇರುವುದಷ್ಟೇ ಅಲ್ಲ ತನ್ನೊಂದಿಗೆ ಇರುವ ಎಲ್ಲವನ್ನೂ ನೋಡಿ ಆನಂದಿಸುವ ಕಲೆ ಮನುಷ್ಯನಿಗೆ ಮಾತ್ರ ಗೊತ್ತು. ಹೀಗಿರುವಾಗ ನೆರವಿನ ಹಸ್ತ ಚಾಚಿ ಖುಷಿಯಲ್ಲಿರುವುದು ಒಳ್ಳೆಯದಲ್ಲವೇ?

ಖುಷಿ

ಜೀವನವೆಂದರೆ ಸಮಯ, ಸಮಯವೆಂದರೆ ಜೀವನ. ಸಮಯವು ನಮಗೆ ಲಭ್ಯವಾಗಿರುವ ಅತ್ಯಂತ ಅಮೂಲ್ಯವಾದುದು. ಕಳೆದು ಹೋದರೆ ಮತ್ತೆ ಬಾರದ ಸಂಪತ್ತು. ಜೀವನಕ್ಕೊಂದು ಮೌಲ್ಯ ಸಿಗುವುದು ಅಂದರೆ ಅದು ತಾನಾಗಿ ದೊರೆಯುವುದಿಲ್ಲ. ಅದು ನಾವು ಮಾಡುವ ಸತ್ಕಾರ್ಯಗಳಿಂದ ಲಭಿಸುವುದು. ಚೀನಾ ದೇಶದ ನಾಣ್ಣುಡಿಯು ಹೀಗೆ ಹೇಳುತ್ತದೆ. ‘ನಿಮಗೆ ಒಂದು ಗಂಟೆಯ ಖುಷಿ ಬೇಕಿದ್ದರೆ ಚಿಕ್ಕ ನಿದ್ದೆ ಮಾಡಿ. ಒಂದು ದಿನದ ಖುಷಿ ಬೇಕಿದ್ದರೆ ಫಿಶಿಂಗ್ ಕೈಗೊಳ್ಳಿ. ಹಾಗೆಯೇ ಜೀವನ ಪೂರ್ತಿ ಖುಷಿ ಬೇಕಿದ್ದರೆ ಇತರರಿಗೆ ಸಹಾಯ ಮಾಡಿ.’ ಎಂದು ನಿಜಕ್ಕೂ ಎಷ್ಟು ಅರ್ಥಪೂರ್ಣ ನುಡಿಯಲ್ಲವೇ?

ಮೂಟೆ

ಆಂಡ್ರ್ಯೂ ಕಾರ್ನೆಗೀ ಅಮೇರಿಕದ ಅತ್ಯಂತ ಪ್ರಸಿದ್ಧ ಲೋಕೋಪಕಾರಿಗಳಲ್ಲಿ ಒಬ್ಬರು. ಅವರು ವಿಶ್ವಾದ್ಯಂತ ೨೫೦೦ ಕ್ಕೂ ಹೆಚ್ಚು ಗ್ರಂಥಾಲಯಗಳನ್ನು ನಿರ್ಮಿಸುವುದು ಸೇರಿದಂತೆ ದೊಡ್ಡ ಪ್ರಮಾಣದ ದತ್ತಿ ಕೊಡುಗೆಗೆಳಿಗೆ ಹೆಸರುವಾಸಿಯಾಗಿದ್ದಾರೆ. ನಾನು ಸಾಧಿಸಿನೆಂಬುದು ಅಹಂಕಾರ ಉಂಟು ಮಾಡುತ್ತದೆ. ಅಹಂಕಾರ ಕ್ಷಣಿಕ ಸುಖದಲ್ಲಿ ತೇಲಾಡಿಸುತ್ತದೆ. ನೈತಿಕ ಅಧೋಗತಿಗೆ ತಳ್ಳುತ್ತದೆ. ಬರಬರುತ್ತ ಅಹಂಕಾರಿ ಕಾಡಿನಲ್ಲಿ ಕಳೆದುಹೋಗುತ್ತಾನೆ ಎಂಬುದನ್ನು ಮಾತ್ರ ಮರೆಯುವಂತಿಲ್ಲ. ಪರೋಪಕಾರದ ಮೂಟೆಯನ್ನು ಹೊತ್ತು ನಡೆದರೆ ಜೀವನ ಸೊಗಸು. ಹೃದಯದಿ ಕರುಣೆ ಅನುಕಂಪ ದಯೆ ಮಮತೆಯ ರಸ ಹೊಳೆಯ ನೆರೆಯಂತೆ ಹರಿಯಬೇಕು.

ಮನಸ್ಥಿತಿ

‘ನಮ್ಮ ಜನರ ಸ್ಥಿತಿ ಉತ್ತವiವಾಗಬೇಕಾದರೆ ಮೊದಲು ಅವರ ಮನಸ್ಥಿತಿ ಭಾವನೆಗಳಲ್ಲಿ ಕೆಲವು ಬದಲಾವಣೆಗಳಾಗಬೇಕು. ಏಕೆಂದರೆ ಮನಸ್ಸೇ ಎಲ್ಲಕ್ಕೂ ಮೂಲ: ಅದನ್ನು ಸರಿಪಡಿಸುವ ಹೊರತು ಇನ್ನಾವುದೂ ಸರಿಯಾಗಲಾರದು.’ ಈ ಮಾತನ್ನು ಡಿವಿಜಿಯವರು ತಮ್ಮ ಬಾಳಿಗೊಂದು ನಂಬಿಕೆ ಎಂಬ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ವೇಗದ ಬದುಕಿನಲ್ಲಿ ನಮಗೆ ನಾವು ಸಹಾಯ ಮಾಡಿಕೊಳ್ಳಲು ಆಗುತ್ತಿಲ್ಲ ಎಂಬ ಮನೋಭಾವವನ್ನು ತೊರೆಯೋಣ. ‘ಹೂವನ್ನು ನೀಡುವ ಕೈಗೂ ಒಂದಿಷ್ಟು ಪರಿಮಳ ಅಂಟಿಕೊಂಡಿರುತ್ತದೆ.’ ಎಂಬ ಚೀನಿ ಗಾದೆಯಂತೆ ಸಹಾಯದ ಹೂವನ್ನು ನೀಡುವುದರ ಮೂಲಕ ನಮ್ಮ ಕೈಗೂ ಪರಿಮಳ ಅಂಟಿಸಿಕೊಳ್ಳೋಣ.

1001070587