ಮುಂಬರುವ ಜಿ ಪಂ, ತಾ ಪಂ ಚುನಾವಣೆಯಲ್ಲಿ ಜೆಡಿಎಸ್ ಎಲ್ಲಾ ಸ್ಥಾನಗಳನ್ನು ಗೆಲ್ಲುತ್ತೇವೆ : ಯುವ ನಾಯಕ ಎಚ್.ಆರ್.ಸಂದೀಪ್ ರೆಡ್ಡಿ
ವಿಜಯ ದರ್ಪಣ ನ್ಯೂಸ್….
ಮುಂಬರುವ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದಿಂದ ಒಂದು ಸೀಟ್ ಗೆಲ್ಲಲು ಬಿಡಲ್ಲ : ಯುವ ನಾಯಕ ಎಚ್.ಆರ್.ಸಂದೀಪ್ ರೆಡ್ಡಿ ..
ಶಿಡ್ಲಘಟ್ಟ : ನಮ್ಮ ತಾತನವರಾದ ದಿವಂಗತ ಮಾಜಿ ಶಾಸಕ ಎಸ್. ಮುನಿಶಾಮಪ್ಪ ಅವರು ಕಟ್ಟಿ ಬೆಳೆಸಿರುವ ಜೆಡಿಎಸ್ ಪಕ್ಷಕ್ಕೆ ನಾನು ಬೆಂಬಲ ನೀಡುತ್ತೇನೆ, ಶಿಡ್ಲಘಟ್ಟ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಶಾಸಕ ರವಿ ಅಣ್ಣ ಅವರ ಪರವಾಗಿ ನಿಂತು ಕೆಲಸ ಮಾಡುವ ಮೂಲಕ ಜೆಡಿಎಸ್ ಪಕ್ಷವನ್ನು ಬಲಪಡಿಸಲು ಶ್ರಮಿಸುವೆ ಎಂದು ಯುವ ರಾಜಕಾರಣಿ ಹಾಗೂ ಉದ್ಯಮಿ ಎಚ್.ಆರ್.ಸಂದೀಪ್ ರೆಡ್ಡಿ ಘೋಷಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಂಬರುವ ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಜೆಡಿಸ್ ಪಕ್ಷದಿಂದ ಬಿ.ಎನ್. ರವಿಕುಮಾರ್ ಅಣ್ಣ ಅವರು ಯಾವ ಅಭ್ಯರ್ಥಿಯನ್ನು ನಿಲ್ಲಿಸುತ್ತಾರೋ ಅವರನ್ನು ಗೆಲ್ಲಿಸಿಕೊಂಡು ಬರುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ. ನಮ್ಮ ಕ್ಷೇತ್ರದಲ್ಲಿ ಒಂದೇ ಒಂದು ಸೀಟ್ ಕಾಂಗ್ರೇಸ್ ಗೆಲ್ಲೋದಕ್ಕೆ ಬಿಡುವುದಿಲ್ಲವೆಂದು ಸವಾಲ್ ಹಾಕಿದರು.
ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಗ್ಯಾರಂಟಿಗಳಿಂದ ಅಧಿಕಾರಕ್ಕೆ ಬಂದಿದೆ ರೈತರ ಪರ ಸರ್ಕಾರ ನಮ್ಮದು ಅಂತಾರೆ ಹಾಲಿನ ದರ ಏರಿಕೆ ಮಾಡ್ತಾರೆ, ಆದರೆ ಆ ಬೆಲೆ ರೈತರಿಗೆ ಸಿಗುತ್ತಿದೆಯೋ ಇಲ್ಲವೋ ಇದಕ್ಕೆ ಸರ್ಕಾರ ಸ್ಪಷ್ಟನೆ ನೀಡಬೇಕಾಗುತ್ತದೆ ಎಂದರು.
ನಮಗೆ ಉಚಿತ ಬಸ್ ಬೇಕು ಎಂದು ಯಾವ ಹೆಣ್ಣು ಮಕ್ಕಳೂ ಕೇಳಿರಲಿಲ್ಲ ಅಧಿಕಾರಕ್ಕಾಗಿ ಉಚಿತ ಗ್ಯಾರಂಟಿಗಳು ಘೋಷಿಸಿ ಕಾಂಗ್ರೇಸ್ ಅಧಿಕಾರಕ್ಕೆ ಬಂದಿದ್ದು ಗ್ಯಾರಂಟಿಗಳಿಂದ ಸರ್ಕಾರಿ ವಿವಿಧ ಯೋಜನೆಗಳಿಗೆ ಅನುಧಾನವಿಲ್ಲ, ಅಭಿವೃದ್ಧಿಗೆ ಅನುಧಾನ ಸಿಗುತ್ತಿಲ್ಲ ಯಾವುದನ್ನೂ ಉಚಿತವಾಗಿ ಕೊಡುವುದಕ್ಕೆ ಸಾಧ್ಯವಿಲ್ಲ. ಗಂಡನ ಜೇಬಿನಿಂದ ತೆಗೆದು ಹೆಂಡತಿಗೆ ಕೊಡುವ ಕೆಲಸ ಮಾಡುತ್ತಿದ್ದಾರೆ ಅಷ್ಟೇ, ಜನ ಬುದ್ದಿವಂತರಿದ್ದಾರೆ ಸಮಯ ಬಂದಾಗ ಕಾಂಗ್ರೆಸ್ ಪಕ್ಷಕ್ಕೆ ಬದ್ದಿ ಕಲಿಸುತ್ತಾರೆ ಎಂದು ಹೇಳಿದರು.
ಜನರಿಗೆ ಕೆಲಸ ಇಲ್ಲ, ವಿದ್ಯಾವಂತ ಯುವಕ, ಯುವತಿಯರಿಗೆ ಉದ್ಯೋಗವಕಾಶಗಳು ಇಲ್ಲ, ಸರ್ಕಾರ ನೀಡುವ 2 ಸಾವಿರ ರೂ.ಗಳು ತೆಗೆದುಕೊಂಡು ಏನು ಮಾಡುವುದಕ್ಕೆ ಸಾಧ್ಯ ಉಚಿತ ಗ್ಯಾರಂಟಿಗಳು ನಿಲ್ಲಿಸಿ ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ನಿರ್ದಿಷ್ಟ ಸರ್ಕಾರದಿಂದ ಮಾತ್ರ ಅಭಿವೃದ್ದಿ ಮಾಡಲು ಸಾಧ್ಯ, ನಮ್ಮ ಕ್ಷೇತ್ರ ಅಭಿವೃದ್ದಿಯಾಗಬೇಕಾದರೆ ವಿದ್ಯಾವಂತರು ರಾಜಕೀಯಕ್ಕೆ ಬರಬೇಕು, ನಾವೆಲ್ಲಾ 2025 ನೇ ಸಾಲಿನಲ್ಲಿ ಇದ್ದೇವೆ ಜನರಿಗೆ ಇನ್ನು ಮೂಲಭೂತವಾಗಿ ಸಿಗಬೇಕಾದ ಸೌಲಭ್ಯಗಳು ಸಿಕ್ಕಿಲ್ಲ ,ಜನರಿಗೆ ಸೌಲಭ್ಯಗಳು ಕಲ್ಪಿಸಿಕೊಡಬೇಕು, ಸಹಾಯ ಹಸ್ತ ನೀಡಬೇಕು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ನಾನು ರಾಜಕೀಯಕ್ಕೆ ಬಂದಿದ್ದೇನೆ ಎಂದು ನುಡಿದರು.
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು
ಅರಿವಿಲ್ಲದೇ ನಮ್ಮ ಕ್ಷೇತ್ರದ ರವಿಕುಮಾರ್ ಅಣ್ಣ ಅವರ ಬಗ್ಗೆ ಮಾತನಾಡಿದ್ದಾರೆ, ಮತ್ತೊಂದು ಕ್ಷೇತ್ರದ ಬಗ್ಗೆ ಮಾತನಾಡುವಾಗ ಸಮಯ ಪ್ರಜ್ಞೆ, ವಿಷಯಾಧಾರಿತವಾಗಿ ಇಟ್ಟುಕೊಂಡು ಅವರ ಬಗ್ಗೆ ಮಾತಾಡಬೇಕು. ಸರ್ಕಾರದ ಅನುದಾನಕ್ಕೆ ಕಾಯದೇ ಸ್ವಂತ ಖರ್ಚಿನಲ್ಲಿ ನಗರದಲ್ಲಿ ಪ್ರತಿ ವಾರ್ಡ್ ನಲ್ಲಿ ಎಲ್.ಇ.ಡಿ.ಬೀದಿ ದೀಪಗಳನ್ನು ಅಳವಡಿಸಿದ್ದಾರೆ, ನಗರದ ರೈಲ್ವೆ ಬ್ರಿಡ್ಜ್ ಕೆಳಗಡೆ ರಸ್ತೆಯ ಮೇಲೆ ಮಳೆಗಾಲದಲ್ಲಿ ನೀರು ನಿಂತು ಜನರು ಓಡಾಡಲು ಆಗದಷ್ಟು ಹದಗೆಟ್ಟಿತ್ತು ನೀರು ಸರಾಗವಾಗಿ ಹರಿದು ಹೋಗಲು ಅಕ್ಕ ಪಕ್ಕದ ಚರಂಡಿಯಲ್ಲಿ ಹೂಳು ತೆಗೆದು ಆ ರಸ್ತೆಗೆ ಸುಸಜ್ಜಿತ ಕಾಂಕ್ರೀಟ್ ರಸ್ತೆ ಹಾಕಿದ್ದು ಜನ ಮುಚ್ಚುವಂತಹ ಮಾದರಿ ಕೆಲಸ ಅವರು ಮಾಡಿದ್ದಾರೆ ಅವರ ಬಗ್ಗೆ ಒಂದು ಮಾತು ಮಾತನಾಡುವಾಗ ಪ್ರಜ್ಞೆಯಿಟ್ಟು ಮಾತನಾಡಿ ಎಂದರು.
ಪ್ರದೀಪ್ ಈಶ್ವರ್ ಅವರು ಮುಂದಿನ ಬಾರಿ ಶಾಸಕರೇ ಆಗುವುದಿಲ್ಲ ಸಿನಿಮಾಗಳಲ್ಲಿ ರೋಷದ ಡೈಲಾಗ್ ಹೊಡೆದ ಹಾಗೇ ಅಲ್ಲ ರಾಜಕೀಯ ಕಾಲೇಜ್ ಗಳಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ಮಾಡುವುದರಲ್ಲಿ ನೀವು ಗ್ರೇಟ್ ಅಷ್ಟೇ ಸಿ.ಎಂ.ಸಿದ್ದರಾಮಯ್ಯ ಅವರನ್ನು ಓಲೈಕೆ ಮಾಡಿ ಮೆಚ್ಚಿಸಲು ರಾಜಕೀಯ ಡೈಲಾಗ್ ಹೊಡೆಯುವುದು ಬಿಡಿ ಅವರಿವರ ಬಗ್ಗೆ ಮಾತಾಡುವುದನ್ನ ಬಿಡಿ, ನಿಮ್ಮ ಕ್ಷೇತ್ರದ ಕಡೆ ಗಮನ ಹರಿಸಿ ಮಾತು ಕಮ್ಮಿ ಮಾಡಿ ,ಕೆಲಸ ಜಾಸ್ತಿ ಮಾಡಿ ಎಂದು
ಕಿವಿಮಾತು ಹೇಳಿದರು.
ಮುಂದೆ ನಿಮಗೆ ಕಾಂಗ್ರೇಸ್ ನಿಂದ ಟಿಕೇಟ್ ಸಿಗುವುದಿಲ್ಲ ಒಂದಷ್ಟು ಒಳ್ಳೆಯ ಕೆಲಸ ಮಾಡಿ ಕ್ಷೇತ್ರದ ಜನತೆಯ ಸೇವೆ ಮಾಡಿ ಅವರ ಋಣ ತೀರಿಸಿಕೊಳ್ಳಿ ಸಂಬಂಧ ಇಲ್ಲದವರ ಬಗ್ಗೆ ಮಾತನಾಡಿ ನಿಮ್ಮ ವರ್ಚಸ್ಸು ಕಳೆದುಕೊಳ್ಳಬೇಡಿ ಎಂದು ಟಾಂಗ್ ನೀಡಿದರು.
ಏಪ್ರಿಲ್-14 ರಂದು ನಾವೆಲ್ಲರೂ ಅಂಬೇಡ್ಕರ್ ಜಯಂತಿ ಆಚರಣೆ ಮಾಡುತ್ತಿದ್ದೇವೆ ಅಂತಹ ಮಹಾನ್ ವ್ಯಕ್ತಿಯ ಜಯಂತಿ ಕೇವಲ ಜಯಂತಿಗೆ ಸೀಮಿತವಾಗಬಾರದು, ನಮ್ಮ ಕ್ಷೇತ್ರದಲ್ಲಿರುವ ಕಾಲೋನಿಗಳು ಅಭಿವೃದ್ಧಿಯಾಗಬೇಕು ಸಮಾಜದ ಮುಖ್ಯವಾಹಿನಿಗೆ ಬರಬೇಕು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಸಮುದಾಯಗಳ ವಿದ್ಯಾರ್ಥಿಗಳಿಗೆ ಮನೆಗೆ ಹೋಗಿ ಅವರೊಂದಿಗೆ ಬೆರೆತು ಊಟ ಮಾಡಿ ಸಮನ್ವಯತೆ ಕಾಪಾಡಿ ಬರಬೇಕು, ಆ ಮೂಲಕ ಅಸ್ಪೃಶ್ಯತೆ ಜಾತಿ ಮನಸ್ಥಿತಿ ಬಿಟ್ಟು ಕಾಲೋನಿಗಳೊಂದಿಗೆ ಬೆರೆಯಬೇಕು ಆಗ ಮಾತ್ರ ನಮ್ಮ ಕ್ಷೇತ್ರ ಬದಲಾವಣೆಯಾಗಲಿದ್ದು ಜತೆಗೆ ನಾವು ಮುಖ್ಯವಾಹಿನಿಗೆ ಬರುತ್ತೇವೆ ಎಂದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರವಾದರೆ ಅತಿ ಹೆಚ್ಚು ಖುಷಿ ಪಡುವ ವ್ಯಕ್ತಿ ನಾನೇ ಯಾರೇ ಆ ಸಮುದಾಯದಿಂದ ಸ್ಪರ್ದೆ ಮಾಡಿದರೂ ನಾನು ಅವರೊಂದಿಗೆ ನಿಲ್ಲುತ್ತೇನೆ ಎಂದ ಅವರು ಈ ಬಾರಿಯ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳ ಜತೆ ನಾನು ನಿಲ್ಲುತ್ತೇನೆ ಅವರ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸುತ್ತೇನೆ ಎಂದು ಹೇಳಿದರು.
ಇದೇ ವೇಳೆ ಇತ್ತೀಚಿಗೆ ಯುಗಾದಿ ಹಬ್ಬದ ಅಂಗವಾಗಿ ಹಳೆಹಳ್ಳಿ ಗ್ರಾಮದಲ್ಲಿ ನಡೆದ ಕಬ್ಬಡಿ ಟೂರ್ನಮೆಂಟ್ ಅನ್ನು ಸಂದೀಪ್ ರೆಡ್ಡಿರವರು ಅಚ್ಚುಕಟ್ಟಾಗಿ ಮಾಡಿದ್ದು ಸಂದೀಪ್ ರೆಡ್ಡಿ ಅವರ ಅಭಿಮಾನಿ ಸತೀಶ್ ಟಾಗೋರ್ ಮತ್ತು ಸ್ನೇಹಿತರಿಂದ ಸಂದೀಪ್ ರೆಡ್ಡಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು