ಭವಿಷ್ಯದ ಸಮಾಜಕ್ಕಾಗಿ…….

ವಿಜಯ ದರ್ಪಣ ನ್ಯೂಸ್…

ಭವಿಷ್ಯದ ಸಮಾಜಕ್ಕಾಗಿ…….

ಮುಂದಿನ ಸುಮಾರು 15 ವರ್ಷಗಳಲ್ಲಿ ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿರಬೇಕಾದರೆ, ಈ ಸಮಾಜ ನಾವು ಈಗಿರುವ ಪರಿಸ್ಥಿತಿಗಿಂತ ಒಳ್ಳೆಯ ಗುಣಮಟ್ಟದ ಸಮಾಜವಾಗಬೇಕು ಎಂದು ಬಯಸುವಿರಾದರೆ ಪೋಷಕರು ಮಾಡಬಹುದಾದ ಕೆಲವು ಜವಾಬ್ದಾರಿ ಮತ್ತು ಕರ್ತವ್ಯಗಳು…….

ಮೊದಲನೆಯದಾಗಿ,
ಮೂರು ವರ್ಷ ಮೇಲ್ಪಟ್ಟ ತಮ್ಮ ಮಕ್ಕಳನ್ನು ಮೊದಲ ಆದ್ಯತೆಯಾಗಿ ಹೆಚ್ಚು ಹೆಚ್ಚು ಕ್ರೀಡಾಂಗಣ ಮತ್ತು ಗ್ರಂಥಾಲಯಗಳಿಗೆ ಉದ್ದೇಶಪೂರ್ವಕವಾಗಿಯೋ, ಬಲವಂತವಾಗಿಯೋ ಕರೆದುಕೊಂಡು ಹೋಗುತ್ತಿರಬೇಕು. ಆ ಜಾಗದಲ್ಲಿಯೇ ಹೆಚ್ಚು ಸಮಯ ಅವರು ಕಳೆಯುವಂತೆ ನೋಡಿಕೊಳ್ಳಬೇಕು. ಅವರು ಯಾವ ಕ್ರೀಡೆಯೋ ಅಥವಾ ಯಾವ ಪುಸ್ತಕವೋ ಏನಾದರಾಗಲಿ ಒಟ್ಟಿನಲ್ಲಿ ಅವರ ಆಯ್ಕೆಗಳು ಕ್ರೀಡೆ ಮತ್ತು ಓದಿನ ಸುತ್ತಮುತ್ತಲೇ ಇರುವಂತೆ, ಜೊತೆಗೆ ಆ ಚಟುವಟಿಕೆಗಳನ್ನೇ ಅವರು ಹೆಚ್ಚಾಗಿ ಕಾಣುವಂತೆ, ಆ ಬಗ್ಗೆ ಯೋಚಿಸುವಂತೆ ಮಾಡಬೇಕು. ಇದು ಬಹಳ ಮುಖ್ಯವಾದ ಜವಾಬ್ದಾರಿ.

ಎರಡನೆಯ ಆದ್ಯತೆಯಾಗಿ ಮಕ್ಕಳನ್ನು ಪ್ಲಾನಿಟೋರಿಯಂ ಅಂದರೆ ಖಗೋಳ ವೀಕ್ಷಣಾಲಯ, ಮ್ಯೂಸಿಯಂ, ಪ್ರಾಣಿ ಸಂಗ್ರಹಾಲಯ ಮುಂತಾದ ಸ್ಥಳಗಳಿಗೆ ಹೆಚ್ಚು ಹೆಚ್ಚು ಕರೆದುಕೊಂಡು ಹೋಗಬೇಕು. ಅಲ್ಲಿ ಆ ಮಕ್ಕಳು ಎಷ್ಟು ಸಾಧ್ಯವೋ ಅಷ್ಟು ಕುತೂಹಲದಿಂದ ಅದನ್ನು ವೀಕ್ಷಿಸುವಂತೆ ಮಾಡಬೇಕು. ಪೋಷಕರು ಅಪಾರ ತಾಳ್ಮೆಯಿಂದ ಅವರೊಂದಿಗೆ ಸಮಯ ಕಳೆಯಬೇಕು ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸಬೇಕು. ಅವರಲ್ಲಿ ಕುತೂಹಲ ಮೂಡುವಂತೆ ಮಾಡಬೇಕು. ಆಗ ಇದರ ಲಾಭ ಮುಂದಿನ ದಿನಗಳಲ್ಲಿ ಖಂಡಿತ ಸಿಗುತ್ತದೆ.

ಮೂರನೆಯದಾಗಿ,
ಮಕ್ಕಳನ್ನು ಪರಿಸರದೊಂದಿಗೆ ಬೆಸೆಯುವ ಕ್ರಿಯೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಅಂದರೆ ಸಮಯ ಸಿಕ್ಕಾಗ ನಾವು ಹೋಗುವ ಪ್ರವಾಸ ಬೆಟ್ಟ ಗುಡ್ಡಗಳು, ಕಾಡುಗಳು, ಸಮುದ್ರ ತೀರಗಳು, ನದಿ ಹರಿಯುವ ಜಾಗಗಳು ಈ ರೀತಿಯ ಸ್ಥಳಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಂಡು ಮಕ್ಕಳಲ್ಲಿ ಅದರ ಭವ್ಯತೆ, ಅಗಾಧತೆ, ವಿಶಾಲತೆಯನ್ನು ಮನಸ್ಸಿನಲ್ಲಿ ಇಳಿಯುವಂತೆ ಒಂದಷ್ಟು ಸುತ್ತಾಡಿಸಬೇಕು. ಆಗ ಮಕ್ಕಳ ಮನೋಭಾವದಲ್ಲಿ ಸಾಕಷ್ಟು ಬದಲಾವಣೆಗಳಾಗುವುದು ನಿಶ್ಚಿತ.

ನಾಲ್ಕನೆಯದಾಗಿ,
ಮಕ್ಕಳನ್ನು ಸಾಧ್ಯವಾದಷ್ಟು ಹತ್ತಿರದ ಸಂಬಂಧಿಗಳು, ನೆಂಟರಿಷ್ಟರು, ಗ್ರಾಮೀಣ ಭಾಗದ ಪರಿಚಯಸ್ಥರು ಇತ್ಯಾದಿಗಳೊಂದಿಗೆ ಸಮಯ ಸಿಕ್ಕಾಗ ಬೆರೆಯುವಂತೆ ಮಾಡಬೇಕು. ಇದು ಅವರಿಗೆ ಬದುಕಿನ ಆಳ ಅಗಲಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಸಂಬಂಧಗಳ ಮಹತ್ವ ಮತ್ತು ಅದರ ಪ್ರಭಾವ ಅವರಿಗೆ ಅರಿವಾಗುತ್ತದೆ.

ಐದನೆಯದಾಗಿ,
ಮಕ್ಕಳನ್ನು ಸಾಧ್ಯವಾದರೆ ಅನಾಥಾಶ್ರಮ, ವೃದ್ಧಾಶ್ರಮ, ಮಾರಣಾಂತಿಕ ರೋಗಗಳ ಆಸ್ಪತ್ರೆ ಮುಂತಾದ ಕಡೆ ಒಂದಷ್ಟು ಸುತ್ತಾಡಿಸಿ ಅವುಗಳ ನಿಜವಾದ ನೋವು, ದು:ಖ, ಯಾತನೆಗಳ ಪರಿಚಯ ಮಾಡಿಸಬೇಕು. ಇದರಿಂದ ಖಂಡಿತವಾಗಲೂ ಅವರೊಳಗಡೆ ಮಾನವೀಯ ಮೌಲ್ಯಗಳು ಬೆಳೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಆರನೆಯದಾಗಿ,
ಧಾರ್ಮಿಕ ನಂಬಿಕೆ ಇರುವವರು ಈ ಎಲ್ಲಾ ಆದ್ಯತೆಗಳ ನಂತರ ಸಮಯವಿದ್ದರೆ ದೇವಸ್ಥಾನ, ಮಸೀದಿ, ಚರ್ಚು, ಗುರುದ್ವಾರ, ಜೈನ ಬಸದಿ, ಬೌದ್ಧ ವಿಹಾರ ಮುಂತಾದ ಸ್ಥಳಗಳಿಗೆ ಕರೆದುಕೊಂಡು ಹೋಗಬಹುದು. ಇದು ಅವರಲ್ಲಿ ಒಂದಷ್ಟು ಜಿಜ್ಞಾಸೆ ಉಂಟುಮಾಡಲು ಸಹಾಯ ಮಾಡುತ್ತದೆ.

ಏಳನೆಯದಾಗಿ,
ಯಾವುದೇ ರೀತಿಯ ಸಾಂಸ್ಕೃತಿಕ ಉತ್ಸವಗಳು, ಜಾತ್ರೆಗಳು, ಊರ ಹಬ್ಬಗಳು ಮುಂತಾದವುಗಳ ಕಡೆ ಕರೆದುಕೊಂಡು ಹೋಗಬೇಕು ಮತ್ತು ಅವುಗಳ ಮಹತ್ವವನ್ನು ವಿವರಿಸಬೇಕು. ಈ ನೆಲದ ನೈಜ ಚಿತ್ರಣವನ್ನು ಪರಿಚಯ ಮಾಡಿಕೊಡಬೇಕು. ಇದು ಸಹ ಪರಿಣಾಮಕಾರಿಯಾಗಿರುತ್ತದೆ.

ಎಂಟನೆಯದಾಗಿ,
ಈ ದೇಶದ ಇತಿಹಾಸ, ವರ್ತಮಾನ, ಭವಿಷ್ಯ, ವಿಶ್ವದ ಆಗುಹೋಗುಗಳು, ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಮುಂತಾದವುಗಳನ್ನು ಸಾಧ್ಯವಾದಷ್ಟು ಪೂರ್ವಾಗ್ರಹ ಪೀಡಿತರಾಗದೆ, ವಸ್ತುನಿಷ್ಠವಾಗಿ, ದ್ವೇಷ ಅಸೂಯೆಗಳಿಲ್ಲದೆ ತಿಳಿಸಿಕೊಡುವ ಪ್ರಯತ್ನ ಮಾಡಬೇಕು. ಒಂದು ವೇಳೆ ಇಲ್ಲಿ ನಾವು ನಮ್ಮ ಈಗಿನ ಅರಿವಿನ ದ್ವೇಷಗಳ ಮುಖಾಂತರ ಆ ಮಕ್ಕಳಿಗೆ ತಪ್ಪು ಇತಿಹಾಸವನ್ನು, ದ್ವೇಷದ ಇತಿಹಾಸವನ್ನು ಹೇಳಿಕೊಟ್ಟರೆ ಅದು ನಮಗೆ ತಿರುಗುಬಾಣವಾಗುತ್ತದೆ. ಮುಂದೆ ಮಕ್ಕಳೇ ಅರ್ಥ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು. ಕೆಲವು ಮೂಲಭೂತವಾದಿ ಧಾರ್ಮಿಕ ಮುಖಂಡರ ರೀತಿ ಇತಿಹಾಸವನ್ನು ದ್ವೇಷ, ಅಸೂಯೆ, ಶ್ರೇಷ್ಠತೆಯ ವ್ಯಸನದೊಂದಿಗೆ ಹೇಳಿಕೊಡಬಾರದು. ಆ ಎಚ್ಚರಿಕೆಯೂ ನಮಗೆ ಇರಬೇಕು.

ಒಂಬತ್ತನೆಯದಾಗಿ,
ಸಿನಿಮಾ ಥಿಯೇಟರ್ ಗಳು, ಮಾಲ್ಗಳು, ಬರ್ತ್ ಡೇ ಪಾರ್ಟಿಗಳು, ರಾತ್ರಿ ಪಾರ್ಟಿಗಳು, ಡಿಜೆಗಳು ಮುಂತಾದವುಗಳನ್ನು ತೀರಾ ಅಲ್ಪ ಪ್ರಮಾಣದಲ್ಲಿ ಅವರಿಗೆ ಪರಿಚಯ ಮಾಡಿಸಿಕೊಡಬೇಕೆ ಹೊರತು ಅದೇ ಎಂಜಾಯ್ ಎನ್ನುವ ಪರಿಕಲ್ಪನೆಯನ್ನು ತಪ್ಪಿಸಬೇಕು.

ಈ ರೀತಿ ಪೋಷಕರು ಒಂದಷ್ಟು ಜವಾಬ್ದಾರಿ ತೆಗೆದುಕೊಂಡರೆ ಖಂಡಿತವಾಗಲೂ ಮುಂದಿನ ಹದಿನೈದು ವರ್ಷಗಳಲ್ಲಿ ಈ ಸಮಾಜದಲ್ಲಿ ಸೃಷ್ಟಿಯಾಗುವ ಯುವಶಕ್ತಿ ಈ ದೇಶದ ಬಹುದೊಡ್ಡ ಸಂಪನ್ಮೂಲವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದಕ್ಕೆ ಪೂರಕವಾಗಿ ಶಾಲೆಗಳು ಮತ್ತು ಸಮಾಜದ ಇನ್ನಿತರ ಸ್ವಯಂ ಸೇವಾ ಸಂಸ್ಥೆಗಳು ಒಂದಷ್ಟು ಕೈಜೋಡಿಸಿದರೆ ಆ ಪ್ರಕ್ರಿಯೆ ಅದ್ಭುತ ಪರಿಣಾಮವನ್ನು ಬೀರುತ್ತದೆ.

ಈ ನಿಟ್ಟಿನಲ್ಲಿ ಯಾರ ಮೇಲೆಯೂ ಅವಲಂಬಿತರಾಗದೆ, ಯಾರನ್ನೂ ದೂರದೆ ತಾವೇ ತಮ್ಮ ತಮ್ಮ ಕೌಟುಂಬಿಕ ವ್ಯವಸ್ಥೆಯ ವ್ಯಾಪ್ತಿಯಲ್ಲಿ ಸಮಯ, ಹಣ, ಆಸಕ್ತಿಯನ್ನು ನೋಡಿಕೊಂಡು ಇದನ್ನು ನಿಧಾನವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುವುದಾದರೆ, ಖಂಡಿತವಾಗಲೂ ಮಕ್ಕಳ ಬಗ್ಗೆ ನಾವು ಈಗ ಏನು ಆತಂಕಪಡುತ್ತಿದ್ದೇವೆಯೋ ಅಂದರೆ ಮೊಬೈಲ್, ಆನ್ಲೈನ್ ಬೆಟ್ಟಿಂಗ್, ಮಧ್ಯ ಮತ್ತು ಮಾದಕ ವ್ಯಸನಗಳಿಂದ ದೂರ ಇಡುವ ಪ್ರಯತ್ನವನ್ನು ಮಾಡಬಹುದು. ಈ ಅಭಿಪ್ರಾಯ ಏಕೆ ಎಂದರೆ ನಾವೆಲ್ಲರೂ ಮೇಲೆ ಹೇಳಿದ ವಿಷಯಗಳಿಗೆ ವಿರುದ್ಧವಾಗಿ ಮಕ್ಕಳನ್ನು ಬೆಳೆಸಿದ ಕಾರಣ ಅದರ ದುಷ್ಪರಿಣಾಮಗಳನ್ನು ಬಹುತೇಕ ನಾವೆಲ್ಲ ಪೋಷಕರು ಅನುಭವಿಸುತ್ತಿದ್ದೇವೆ. ಕನಿಷ್ಠ ಮುಂದಿನ ಪೀಳಿಗೆಯಾದರೂ ಅದರಿಂದ ಮುಕ್ತವಾಗಲು ಪ್ರಯತ್ನಿಸಬೇಕಿದೆ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ. 9844013068……