ಪಹಣಿಯಲ್ಲಿ “ಕೆಐಎಡಿಬಿ ಗೆ ಭೂಸ್ವಾಧೀನ” ಎಂಬುದನ್ನು ತೆಗೆದು ಹಾಕಲು ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ-2 ಆದೇಶ

ವಿಜಯ ದರ್ಪಣ ನ್ಯೂಸ್….

ಪಹಣಿಯಲ್ಲಿ “ಕೆಐಎಡಿಬಿ ಗೆ ಭೂಸ್ವಾಧೀನ” ಎಂಬುದನ್ನು ತೆಗೆದು ಹಾಕಲು ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ-2 ಆದೇಶ

ಶಿಡ್ಲಘಟ್ಟ : ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ವ್ಯಾಪ್ತಿಯ 2,823 ಎಕರೆ ಪ್ರದೇಶವನ್ನು ಕೆಐಎಡಿಬಿ ಗೆ ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿ ಸೂಚನೆ ಹೊರಡಿಸಿದ್ದು ಕೆಲವು ಪಹಣಿಗಳ ಕಲಂ 11ರಲ್ಲಿ “ಕೆಐಎಡಿಬಿ ಗೆ ಭೂಸ್ವಾಧೀನ” ಎಂಬುದನ್ನು ತೆಗೆದುಹಾಕಿ ಮೂಲ ಖಾತೆದಾರರ ಹೆಸರು ನಮೂದಿಸುವಂತೆ ತಹಶೀಲ್ದಾರ್‌ ಗೆ ಆದೇಶಿಸಿದ್ದಾರೆ.

ಹಾಗೆಯೇ, ಭೂಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟ ಜಮೀನುಗಳ ಖಾತೆದಾರರು ಮೃತಪಟ್ಟಿದ್ದಲ್ಲಿ ಪವತಿ ವಾರಸು ಖಾತೆ ಮಾಡಲು ಸೂಚಿಸಿದ್ದಾರೆ ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆ ಹೊರಡಿಸುವವರೆಗೂ ಇದು ಅನ್ವಯವಾಗುತ್ತದೆ ಎಂದು ಆದೇಶ ಪತ್ರದಲ್ಲಿ ಅವರು ತಿಳಿಸಿದ್ದಾರೆ.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಿರುವ ಜಂಗಮಕೋಟೆ ಹೋಬಳಿಯ ಜಮೀನುಗಳ ಪೈಕಿ ಕೆಲ ಜಮೀನುಗಳ ಪಹಣಿಗಳಲ್ಲಿ ನಮೂದಾಗಿದ್ದ “ಕೆಐಎಡಿಬಿ ಗೆ ಭೂಸ್ವಾಧೀನ” ತೆಗೆದು ಹಾಕುವಂತೆ ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ-2 ಆದೇಶಿಸಿದ್ದಾರೆ.

ಜಂಗಮಕೋಟೆ ಹೋಬಳಿಯ ಸಂಜೀವಪುರ, ತೊಟ್ಲಗಾನಹಳ್ಳಿ, ಅರಿಕೆರೆ, ಬಸವಾಪಟ್ಟಣ, ಹೊಸಪೇಟೆ, ಚೊಕ್ಕಂಡನಹಳ್ಳಿ, ಎದ್ದಲತಿಪ್ಪೇನಹಳ್ಳಿ, ಕೊಲಿಮಿ ಹೊಸೂರು, ನಡಿಪಿನಾಯಕನಹಳ್ಳಿ, ತಾದೂರು, ಯಣ್ಣಂಗೂರು, ದೇವಗಾನಹಳ್ಳಿ, ಗೊಲ್ಲಹಳ್ಳಿ ವ್ಯಾಪ್ತಿಯಲ್ಲಿ 2823 ಎಕರೆ ಭೂಮಿಯನ್ನು ಕೆಐಎಡಿಬಿಗೆ ಸ್ವಾಧಿ ನಪಡಿಸಿಕೊಳ್ಳಲು ಸರಕಾರ ಆದೇಶಿಸಿತ್ತು.

ಕೈಗಾರಿಕೆಗಳ ಸ್ಥಾಪನೆಗಾಗಿ 2823 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ, ಪ್ರಾಥಮಿಕ ಅಧಿ ಸೂಚನೆ ಹೊರಡಿಸಿದ್ದ ಹಿನ್ನೆಲೆಯಲ್ಲಿ ಈ ಭಾಗದ
ಜಮೀನುಗಳ ಕೆಲವು ಪಹಣಿಗಳಲ್ಲಿ ‘ಕೆಐಎಡಿಬಿ ಭೂಸ್ವಾ ಧೀನ’ ಎಂದು ಕಲಂ 11ರಲ್ಲಿ ನಮೂದಿಸಲಾಗಿತ್ತು.
ಇದರಿಂದ ಈ ಜಮೀನುಗಳ ರೈತರಿಗೆ ಬೆಳೆ ಸಾಲ, ಪರಿಹಾರ ಹಣ ಸೇರಿದಂತೆ ಸರಕಾರದ ಯಾವುದೇ ಸೌಲಭ್ಯ ಸಿಗದಂತಾಗಿ ರೈತರು ಕಂಗಾಲಾಗಿದ್ದರು. ಜಮೀನು ಅಡಮಾನ ಇಟ್ಟು ಸಾಲ ಪಡೆಯಲು, ಮಾರಾಟ ಮಾಡಲು ಹೆಣಗಾಡುವಂತಾಗಿತ್ತು.

ಈ ಹಿನ್ನೆಲೆಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ, ಹಸಿರು ಸೇನೆ ರೈತ ಸಂಘದ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್, ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್, ಕೆಐಎಡಿಬಿ ಆಯುಕ್ತ ಮಹೇಶ್ ಅವರಿಗೆ ಪಹಣಿಯ ಕಲಂ 11ರಲ್ಲಿ ‘ಕೆಐಎಡಿಬಿ ಭೂಸ್ವಾಧೀನ’ ತೆಗೆದು ಹಾಕುವಂತೆ ಮನವಿ ಮಾಡಿದ್ದರು, ಶನಿವಾರ ರೈತರು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ-2 ಅವರು ಸೋಮವಾರ ಆದೇಶ ನೀಡಿರುವುದು ರೈತರಲ್ಲಿ ಸಂತಸಸ ವಾತಾವರಣ ನಿರ್ಮಾಣವಾಗಿದೆ.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ ‌ರೈತರ ಒಗ್ಗಟ್ಟು ಪ್ರದರ್ಶಿಸಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಪಹಣಿಗಳ ಕಲಂ 11ರಲ್ಲಿ ನಮೂದಾಗಿದ್ದ ‘ಜೆಐಎಡಿಬಿ ಭೂಸ್ವಾಧೀನ’ ಎಂಬುದನ್ನು ತೆಗೆದು ಹಾಕಿ ಮೊದಲಿನಂತೆ ಖಾತೆದಾರರ ಹೆಸರು ನಮೂದಿಸಲು ತಹಶಿಲ್ದಾರ್ ಅವರಿಗೆ ಕೆಐಎಡಿಬಿ ವಿಶೇಷ ಭೂ ಸ್ವಾಧೀನ ಅಧಿಕಾರಿ ಪತ್ರ ಬರೆದಿರುವುದು ನಮಗೆ ಸಿಕ್ಕ ಮೊದಲ ಜಯ ನಮ್ಮ ಹೋರಾಟ ಇಲ್ಲಿಗೆ ನಿಲ್ಲದು, ಭೂ ಸ್ವಾಧಿ ನ ಪ್ರಕ್ರಿಯೆ ನಿಲ್ಲುವವರೆಗೂ ನಮ್ಮ ಹೋರಾಟ ನಿಲ್ಲದು ಎಂದರು.