“ಈ ಕ್ಷಣ” ಸಂಭ್ರಮಿಸಿ

ವಿಜಯ ದರ್ಪಣ ನ್ಯೂಸ್…..

“ಈ ಕ್ಷಣ” ಸಂಭ್ರಮಿಸಿ

ಈ ವೇಗದ ಮತ್ತು ಕಾರ್ಯನಿರತ ಜೀವನದಲ್ಲಿ ಸಾವಧಾನತೆಯು ಇಲ್ಲವೇ ಇಲ್ಲ ಎನಿಸುತ್ತಿದೆ. ಹೆಚ್ಚಿನವರು ಹೆಚ್ಚಿನ ಸಮಯವನ್ನು ಈ ಕ್ಷಣದಲ್ಲಿ ವಾಸಿಸುವುದರಿಂದ ಕಳೆಯುವುದಿಲ್ಲ. ಮನಸ್ಸು ದೂರ ಎಳೆಯುವ ಚಿಂತೆಗಳಿಂದ ತುಂಬಿಹೋಗಿರುತ್ತದೆ. ಹೀಗಿರುವಾಗ ಅದರಲ್ಲಿ ಏನು ತುಂಬಿದೆ ಎಂಬುದರ ಬಗ್ಗೆ ಗಮನ ಹರಿಸದೇ ಇದ್ದಾಗ ನಾವು ಒತ್ತಡ ಆತಂಕಕ್ಕೆ ಒಳಗಾಗಬಹುದು. ಅದೃಷ್ಟವಶಾತ್ ಕಾರ್ಯನಿರತ ಮನಸ್ಸನ್ನು ಸಾವಧಾನದಿಂದ ತುಂಬಿದರೆ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆಂದು ವಿಜ್ಞಾನ ತೋರಿಸುತ್ತದೆ. ನಾವು ಆಲೋಚನೆಗಳಲ್ಲಿ ಮುಳುಗಿದಾಗ ಸಾವಧಾನತೆಯು ಆಲೋಚನೆಯ ಮಾದರಿಗಳ ಬಗ್ಗೆ ಅರಿವು ಮೂಡಿಸುತ್ತದೆ. ವೇಗದ ಚಿಂತನೆಯ ಸ್ಟ್ರೀಮ್‌ನಿಂದ ಹೊರಬರಲು ಹೊರಗಿನ ವೀಕ್ಷಕನಾಗಿ ಹರಿವನ್ನು ವೀಕ್ಷಿಸಲು ಸಹಾಯ ಮಾಡುತ್ತದೆ. ಒತ್ತಡಕ್ಕೆ ಬೇಸರಿಸಿ ಕನಸುಗಳು ಒಣಗಿದರೆ ಬದುಕು ಮರುಭೂಮಿ ಆಗುತ್ತದೆ. ಆದ್ದರಿಂದ ‘ಮೈಂಡ್‌ಫುಲ್‌ನೆಸ್’ ಮುಖ್ಯವಾಗುತ್ತದೆ.

 

ಮೈಂಡ್‌ ಫುಲ್‌ನೆಸ್ ಎಂದರೇನು? ಮೈಂಡ್‌ಫುಲ್‌ನೆಸ್ ಎನ್ನುವುದು ಒಂದು ಅರಿವಿನ ಕೌಶಲ್ಯವಾಗಿದೆ. ನಮ್ಮ ಆಲೋಚನೆಗಳು, ಭಾವನೆಗಳು, ದೈಹಿಕ ಸಂವೇದನೆಗಳು ಮತ್ತು ಸುತ್ತಮುತ್ತಲಿನ ಪರಿಸರದ ಕ್ಷಣದಿಂದ ಕ್ಷಣದ ಅರಿವನ್ನು ಸೌಮ್ಯವಾಗಿ ಪೋಷಿಸಿ ನಿರ್ವಹಿಸು ವುದೇ ಸಾವಧಾನತೆ. ನಾವು ದೇಹದಿಂದ ಮಾಡುವ ಕೆಲಸದಲ್ಲಿ ನಮ್ಮ ಮನಸ್ಸನ್ನು ಸಹ ಒಳಗೊಳ್ಳುವಂತೆ ಮಾಡುವುದು. ದೇಹವೊಂದು ಕೆಲಸ ಮಾಡುತ್ತಿದ್ದರೆ ಮನಸ್ಸು ಇನ್ನೆಲ್ಲೋ ಇರುತ್ತದೆ. ಉದಾಹರಣೆಗೆ ಹೇಳಬೇಕೆಂದರೆ ಊಟ ಮಾಡುವಾಗ ಮನಸ್ಸು ಎಲ್ಲೆಲ್ಲೋ ವಿಹರಿಸುತ್ತಾ ಇರುತ್ತದೆ. ಬೇರೆ ಬೇರೆ ಏನೇನೋ ವಿಚಾರಗಳನ್ನು ಯೋಜನೆಗಳನ್ನು ಹಾಕುತ್ತಿರುತ್ತದೆ.

ಅಗತ್ಯವಿದೆಯೇ?: ಪ್ರಸ್ತುತ ಕ್ಷಣದಲ್ಲಿ ನಮ್ಮ ಗಮನವನ್ನು ಪುನಃ ಲಂಗರು ಹಾಕಲು ಸಾವಧಾನತೆ ಸಹಾಯ ಮಾಡುತ್ತದೆ. ಇದು ಹಿಂದಿನ ಮತ್ತು ಭವಿಷ್ಯದ ಬಗ್ಗೆ ಚಿಂತಿಸುವುದನ್ನು ಪರಿಹರಿಸುತ್ತದೆ. ಮೈಂಡ್‌ಫುಲ್‌ನೆಸ್ ಕಾಪಾಡಿಕೊಳ್ಳಬೇಕು ಎಂಬ ಹೇಳಿಕೆ ಯನ್ನು ಸಹಜವಾಗಿ ಎಲ್ಲರೂ ಒಪ್ಪಿಕೊಳ್ಳುತ್ತೇವೆ. ಆದರೆ, ಇಲ್ಲಿ ಸಮಸ್ಯೆ ಏನೆಂದರೆ ಸಾವಧಾನತೆ ಬೇರೆಯವರಿಗೆ ಮಾತ್ರ ಸಂಬಂಧಿಸಿದ್ದು ನಮಗಲ್ಲ ಎಂದು ಭಾವಿ ಸುವುದು. ನಾವು ಗಮನಹರಿಸುವು ದಾಗಲಿ ಸಾವಧಾನತೆಯಿಂದ ಇರುವುದು ಅಗತ್ಯವಿಲ್ಲ ಎಂದು ತಪ್ಪಾಗಿ ತಿಳಿಯುತ್ತೇವೆ. ಖಂಡಿತ ವಾಗಿಯೂ ನಾವೆಲ್ಲರೂ ಮೈಂಡ್ ಫುಲ್‌ನೆಸ್‌ನಿಂದ ಇರುವುದು ಅವಶ್ಯವಿದೆ. ನಮ್ಮ ಗಮನಹರಿಸುವಿಕೆ ಯನ್ನು, ಆಲೋಚನಾ ವಿಧಾನವನ್ನು ಮತ್ತು ಮನೋಭಾವಗಳನ್ನು ಕಾಲಕ್ಕೆ ತಕ್ಕಂತೆ ಬದಲಿಸಿಕೊಳ್ಳಬೇಕಾದ ಅಗತ್ಯತೆ ಇದ್ದೇ ಇದೆ. ಬದುಕು ಒಂದು ಗಾಜಿನ ಗೋಲವಿದ್ದಂತೆ. ಅದು ಕೆಳಗೆ ಬಿದ್ದರೆ ಚೂರು ಚೂರಾಗಿ ಒಡೆದು ಹೋಗುತ್ತದೆ. ಆದ್ದರಿಂದ ಅದನ್ನು ಸಾವಧಾನತೆಯಿಂದ ಕಾಪಾಡಿಕೊಳ್ಳಬೇಕು.

ಯಾಕೆ ಬೇಕು? : ದಿನದ ಎಷ್ಟೋ ಕೆಲಸಗಳಲ್ಲಿ ದೇಹ
ಮನಸ್ಸು ಒಂದೆಡೆ ಇರುವುದು ತುಂಬಾ ಕಡಿಮೆ. ಹೀಗೆ ದೇಹ ಮತ್ತು ಮನಸ್ಸು ಒಂದೆಡೆ ಇರದೇ ಇರುವುದಕ್ಕೆ ನಮಗೆ ಒತ್ತಡ ಉಂಟಾಗುತ್ತದೆ. ದೇಹ ಮತ್ತು ಮನಸ್ಸು ಎರಡು ಒಂದೆಡೆ ಸೇರದಿದ್ದರೆ ಮನಸ್ಸು ನಿನ್ನೆ ಇಲ್ಲವೇ ನಾಳೆಗಳಲ್ಲಿ ಮುಳುಗಿ ಬಿಡುತ್ತದೆ. ಈ ಕ್ಷಣವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮೈಂಡ್ ಫುಲ್‌ನೆಸ್ ಸಾಧಿಸುವುದು ಅತಿ ಮುಖ್ಯ

ಮಾರ್ಗಗಳಿವೆಯೇ? : ಗಮನ ಹರಿಸುವುದು ಒಂದು ಉತ್ತಮ ಉಪಾಯದಂತೆ ಕಾಣಬಹುದು. ಆದರೆ ಬಿಡುವಿಲ್ಲದ ಕೆಲಸದ ಸಂದರ್ಭದಲ್ಲಿ ನೀವು ಹೇಗೆ ಹೆಚ್ಚು ಗಮನಹರಿಸ ಬಹುದು? ಇದೆಲ್ಲ ಕ್ಲಿಷ್ಟಕರ ವೆನಿಸುವುದು. ವೈಯಕ್ತಿಕ ಬದುಕು ಫೋನ್ ಕರೆಗಳು ಸಭೆಗಳು ಹೀಗೆ ಇತ್ಯಾದಿ ಎಲ್ಲದರ ಮಧ್ಯೆ ಹೆಚ್ಚು ಲವವಿಕೆಯಿಂದ ಪ್ರಸ್ತುತವಾಗಿ ಉತ್ಪಾದಕರಾಗಿರುವಂತೆ ಸಾವಧಾ ನತೆಯ ತತ್ವಗಳನ್ನು ಹೇಗೆ ಅನ್ವಯಿಸಬಹುದು? ಕೆಲಸದಲ್ಲಿ ಜಾಗರೂಕರಾಗಿರಲು ಕೆಲ ಉಪಯುಕ್ತ ಮಾರ್ಗಗಳು ಇವೆ.

ವಿಚಾರಿಸಿ: ಮೈಂಡ್ ಫುಲ್‌ನೆಸ್ ಎಂಬುದು ಎಲ್ಲಕ್ಕಿಂತ
ಹೆಚ್ಚಾಗಿ, ಆರಿವಿಲ್ಲದೆ ಕಾರ್ಯನಿರ್ವಹಿಸುವ ಬದಲು ಜಾಗೃತ ಮತ್ತು ಎಚ್ಚರವಾಗಿರುವುದು. ನೀವು ಕೆಲಸದಲ್ಲಿ ಪ್ರಜ್ಞಾ ಪೂರ್ವಕವಾಗಿ ಇರುವಾಗ, ನಮ್ಮ ಸುತ್ತಲೂ ಏನು ನಡೆಯುತ್ತಿದೆ ಮತ್ತು ನಮ್ಮೊಳಗೆ ಏನು ನಡೆಯುತ್ತಿದೆಂಬ ಕ್ಷಣದಿಂದ ಕ್ಷಣದ ಅನುಭವ ನಮಗೆ ತಿಳಿದಿರುತ್ತದೆ. ಜಾಗರೂಕವಾಗಿ ಕೆಲಸ ಮಾಡುವುದೆಂದರೆ ನಾನು ಏನು ಮಾಡುತ್ತಿದ್ದೇನೋ ಅದರ ಲ್ಲಿಯೇ ಇರುವುದು. ಹಾಗೆಯೇ ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಯನ್ನು ನಿರ್ವಹಿಸುವುದು. ಕೆಲಸದಲ್ಲಿ ಬುದ್ಧಿಹೀನತೆ ತಪ್ಪಿಸಲು ದಿನದ ಆರಂಭದಲ್ಲಿ ಮಾಡುವ ಕೆಲಸದಲ್ಲಿ ಮೈಂಡ್‌ಫುಲ್ ಆಗಿರಲು ಕೆಲ ಕ್ಷಣ ವಿಚಾರಿಸಿ ನಂತರ ಮುಂದೆ ಹೆಜ್ಜೆ ಇಡಿ. ಇದರಿಂದ ದೇಹ ಮತ್ತು ಮನಸ್ಸು ಈ ಕ್ಷಣದಲ್ಲಿ ಇರಲು ಸಾಧ್ಯವಾಗುವುದು.

ಮೈಂಡ್ ಫುಲ್ ವ್ಯಾಯಾಮ: ಮೈಂಡ್ ಫುಲ್ನೆಸ್
ಎನ್ನುವುದು ಪ್ರತ್ಯೇಕವಾಗಿ ಪ್ರಾಕ್ಟಿಸ್ ಮಾಡುವಂಥದ್ದಲ್ಲ. ದೇಹ ಮತ್ತು ಮನಸ್ಸನ್ನು ಒಂದೆಡೆ ಕೂಡಿಸು ವುದನ್ನು ಯೋಗ ಎಂದು ಕರೆಯುವರು. ವ್ಯಾಯಾಮಗಳು ನಮ್ಮ ಮೆದುಳಿಗೆ ಹೆಚ್ಚು ಜಾಗರೂಕರಾಗಿರಲು ತರಬೇತಿ ನೀಡುತ್ತವೆ. ಹೆಚ್ಚು ಎಚ್ಚರಿಕೆಯ ವ್ಯಾಯಾಮಗಳನ್ನು ಮಾಡಿದರೆ, ನಮ್ಮ ಮೆದುಳು ಅದನ್ನು ಸಾವಧಾನಿಕ ಸ್ಥಿತಿಗೆ ಇಳಿಸಲು ಸುಲಭವಾಗಿ ಕಂಡು ಕೊಳ್ಳುತ್ತದೆ. ಮೆದುಳಿನ ಕಾರ್ಯವನ್ನು ಉತ್ತಮಗೊಳಿಸುತ್ತದೆ. ಬಿಡುವಿಲ್ಲದ ಕೆಲಸದ ಸ್ಥಳದಲ್ಲಿ 30 ನಿಮಿಷಗಳ ಎಚ್ಚರಿಕೆಯ ವ್ಯಾಯಾಮಕ್ಕೆ ಸಮಯವನ್ನು ಹೊಂದಿಸುವುದು ಕಷ್ಟವಾಗುತ್ತದೆ.
ಹಾಗಾದರೆ ಕೆಲಸದಲ್ಲಿ ಜಾಗರೂಕ ರಾಗಿರಲು ಸಾಧ್ಯವಿಲ್ಲ ಎಂದರ್ಥವೇ? ಇಲ್ಲ ಮನಸ್ಸಿನ ವ್ಯಾಯಾಮಗಳು ನಾವು ಬಯಸಿದಷ್ಟು ಚಿಕ್ಕದಾಗಿರಬಹುದು. ವ್ಯಾಯಾಮವು ನರಮಂಡಲವನ್ನು ಮರುಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಮೆದು ಳಿನ ಬುದ್ದಿವಂತ ಭಾಗವನ್ನು ತೊಡಗಿಸಿಕೊಳ್ಳುತ್ತದೆ. ಇದರಿಂದಾಗಿ ಸನ್ನಿವೇಶಗಳಿಗೆ ಸ್ವಯಂಚಾಲಿತವಾಗಿ ಪ್ರತಿಕ್ರಿಯಿಸುವ ಬದಲು ತಾರ್ಕಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ.

ಇಲ್ಲಿ ಮತ್ತು ಈಗ : ‘ಇಲ್ಲಿ ಮತ್ತು ಈಗ’ ಎಂಬ ಕಲೆಯಲ್ಲಿ
ಉತ್ತಮವಾಗಲು ಸರಳವಾದ ಸಾವಧಾನತೆಯನ್ನು ಅಭ್ಯಾಸ ಮಾಡಬೇಕು. ಉಪಸ್ಥಿತಿಯನ್ನು ಬಲಪಡಿಸಲು ಇಲ್ಲಿ ಮತ್ತು ಈಗ ಕಲೆ ಬಹಳ ಸಹಕಾರಿ. ಪ್ರಸ್ತುತ ಕ್ಷಣದಲ್ಲಿ ಜೀವಿಸಬೇಕೆಂದರೆ ನಾವು ಹೊಂದಿರುವ ಪ್ರತಿಯೊಂದಕ್ಕೂ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ಕೃತಜ್ಞತೆಯನ್ನು ದಿನನಿತ್ಯದ ಅಭ್ಯಾಸ ಮಾಡಿಕೊಳ್ಳಬೇಕು.

ಪ್ರಸ್ತುತ ಕ್ಷಣ : ಈಗ ಇರುವುದನ್ನು ಅರ್ಥ
ಮಾಡಿಕೊಳ್ಳುವುದು ಮತ್ತು ತಕ್ಷಣದ ಅನುಭವಕ್ಕೆ ಎಚ್ಚರವಾಗಿ ರುವುದು. ಒಂದು ನಿರ್ಧಿಷ್ಟ ಕ್ಷಣದಲ್ಲಿ ಯೋಚಿಸಲು ಆಥವಾ ಅನುಭವಿಸಲು ಸರಿ ಅಥವಾ ತಪ್ಪು ಮಾರ್ಗವಿದೆ ಎಂದು ನಂಬದೇ ನಾವು ಸಾವಧಾನತೆಯನ್ನು ಅಭ್ಯಾಸ ಮಾಡಿದಾಗ, ನಮ್ಮ ಆಲೋಚನೆಗಳು ಭೂತ ಕಾಲವನ್ನು ಮರುಹೊಂದಿಸುವ ಅಥವಾ ಭವಿಷ್ಯವನ್ನು ಕಲ್ಪಿಸುವ ಬದಲು ಪ್ರಸ್ತುತ ಕ್ಷಣದಲ್ಲಿ ನಾವು ಏನನ್ನು ಗ್ರಹಿಸುತ್ತಿದ್ದೇವೆ ಎಂಬುದರ ಮೇಲೆ ಟ್ಯೂನ್ ಆಗುತ್ತದೆ.

ಪ್ರಯೋಜನೆಗಳು : ಈ ಕ್ಷಣವನ್ನು ಸಂಭ್ರಮಿಸುವುದು
ಭಾವನಾತ್ಮಕ ಪ್ರತಿಕ್ರಿಯಾತ್ಮಕತೆಯನ್ನು ಕಡಿಮೆ ಮಾಡುತ್ತದೆ. ತನ್ಮೂಲಕ ಸಡಿಲಗೊಳ್ಳುತ್ತಿರುವ ಸಂಬಂಧಗಳನ್ನು ಬಲಪಡಿಸುತ್ತದೆ. ಕಷ್ಟಕರವಾದ ಭಾವನೆಗಳ ಬಗ್ಗೆ ಅರಿವನ್ನು ಹೆಚ್ಚಿಸಿ ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಕಷ್ಟಗಳು ಎದುರಾದಾಗ ಪುಟಿದೇಳುವುದು ಸುಲಭವಾಗುತ್ತದೆ. ಕಲಹದಲ್ಲೂ ಮೌನ, ಕೋಪದಲ್ಲೂ ಧ್ಯಾನ, ಸಂಕಟದಲ್ಲೂ ಧೈರ್ಯ, ಸಂಕಷ್ಟದಲ್ಲೂ ಧೈರ್ಯ, ಸೋಲಿನಲ್ಲೂ ಸಹನೆ, ವಿಜಯದಲ್ಲೂ ವಿನಮ್ರತೆ, ಅನ್ಯಾಯದಲ್ಲೂ ತಾಳ್ಮೆ, ಅವಮಾನದಲ್ಲೂ ಶಾಂತತೆ ಒಟ್ಟಿನಲ್ಲಿ ಬದುಕಿನಲ್ಲಿ ಸಮಚಿತ್ತತೆ ಉಂಟಾಗುತ್ತದೆ.

ಕೊನೆ ಹನಿ : ಭವಿಷ್ಯ ಸಹ ವರ್ತಮಾನದ ಒಂದು
ಗಳಿಗೆಯಾಗಿ ಬರುತ್ತದೆ. ಮುಂದಿನ ಕ್ಷಣಗಳ ಬಗ್ಗೆ ವಿಚಾರ ಮಾಡು ವುದನ್ನು ಬಿಟ್ಟು ಈ ಕ್ಷಣದಲ್ಲಿ ಬದುಕಬೇಕು. ಈ ಕ್ಷಣವೇ ಈ ಜೀವನ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಸಣ್ಣ ಪುಟ್ಟ ಕೆಲಸಗಳನ್ನು ಗಮನಹರಿಸಿ ಮಾಡುವುದನ್ನು ರೂಢಿ ಮಾಡಿಕೊಂಡರೆ ನಮ್ಮಲ್ಲಿ ಅತ್ಯದ್ಭುತ ಬದಲಾವಣೆ ಕಂಡು ಬರುತ್ತದೆ. ಆದ್ದರಿಂದ ಪ್ರತಿ ಕೆಲಸವನ್ನು ಚೈತನ್ಯಪೂರ್ವಕವಾಗಿ ಮಾಡುವುದನ್ನು ಕಲಿಯಬೇಕು. ನೂರಾರು ಆಲೋಚನೆಗಳಲ್ಲಿ ಮುಳುಗಿ ಆಮೂಲ್ಯ ಜೀವನ ಕಳೆದುಕೊಳ್ಳಬಾರದು. ಬದಲಾಗಿ ಈ ಕ್ಷಣವನ್ನು ಆಚರಿಸಬೇಕು ಅನಾಮಿಕ ಹೇಳಿದಂತೆ ‘ಒಳ್ಳೆಯ ಸಮಯಕ್ಕಾಗಿ ಕಾಯುತ್ತ ಕೂರುವುದು ಬುದ್ಧಿವಂತಿಕೆಯಲ್ಲ.
ಈಗಿನ ಕ್ಷಣವನ್ನೇ ಸುಸಂದರ್ಭವಾಗಿಸುವುದು ಜಾಣತನ.’ ಈ ಕ್ಷಣ’ ಸಂಭ್ರಮಿಸುವುದನ್ನು ಕಲಿತರೆ ಸಾಧನೆಯ ಬದುಕು ನಮ್ಮದಾಗುವುದು.

ಜಯಶ್ರೀ.ಜೆ. ಅಬ್ಬಿಗೇರಿ

ಇಂಗ್ಲಿಷ್ ಉಪನ್ಯಾಸಕರು,                                          # ಪ್ಲಾಟ್ ನಂ.124, ‘ಇಂಚರ’.                                   ಚಂದ್ರಮೌಳಿ ಕಾಲೋನಿ, ಕಣಬರ್ಗಿ ರಸ್ತೆ, ಬೆಳಗಾವಿ-17,ಮೊ. 9449234142