ಚರ ಜಂಗಮವಾಗಿ….

ವಿಜಯ ದರ್ಪಣ ನ್ಯೂಸ್….

ಚರ ಜಂಗಮವಾಗಿ….

ಗುಡಿಯನೆಂದು ಕಟ್ಟದಿರು,
ನೆಲೆಯನೆಂದು ನಿಲ್ಲದಿರು…….

ಒಮ್ಮೆ ಬೆಳಕಾದೆ ನಾನು,
ದೇಹ ಗಾಳಿಯಾಯಿತು,
ಮನಸ್ಸು ವಿಶಾಲವಾಯಿತು,
ವಿಶ್ವ ಪರ್ಯಟನೆ ಯಾತ್ರೆ ಹೊರಟಿತು…….

ಅಗೋ ಅಲ್ಲಿ ಮಿನುಗುತ್ತಿವೆ ನಕ್ಷತ್ರಗಳು, ಉರಿಯುತ್ತಿವೆ ಧೂಮಕೇತುಗಳು,
ಕೆಂಪಡರಿದ ಸೂರ್ಯ,
ತಂಪಡರಿದ ಚಂದ್ರ,

ಓ ಮೇಲೆ ನೋಡು ನೀಲಾಕಾಶ ,
ಕೆಳಗೆ ನೋಡು ಭೂಲೋಕ,
ಕಣ್ಣಿನ ನೋಟಕ್ಕೂ ಸಿಗದಷ್ಟು ನೀರು,
ಕಣ್ಣಂಚಿನಲ್ಲಿ ಕಾಣುವಷ್ಟು ಕಾಡು,
ಅಲ್ಲಲ್ಲಿ ಪ್ರಾಣಿ ಪಕ್ಷಿಗಳು,
ಎಲ್ಲೆಲ್ಲೂ ನರಮಾನವರು,

ಒಂದು ಕಡೆ ಹಚ್ಚ ಹಸಿರು,
ಇನ್ನೊಂದು ಕಡೆ ಮರುಭೂಮಿ,
ಅಗೋ ಅಲ್ಲಿ ಅಗ್ನಿ ಪರ್ವತ,
ಇಗೋ ಇಲ್ಲಿ ಹಿಮಪರ್ವತ,
ಎಲ್ಲೆಲ್ಲೂ ಸುಂಟರಗಾಳಿ,
ಮತ್ತೆಲ್ಲೊ ಪ್ರಶಾಂತ ಗಾಳಿ,

ಅಲ್ಲಿ ನಡೆಯುತ್ತಿದೆ ನೋಡು ರಕ್ತಪಾತ,
ಇಲ್ಲಿ ಕೇಳುತ್ತಿದೆ ನೋಡು ಶಾಂತಿ ಮಂತ್ರ,
ಅಲ್ಲೆಲ್ಲೋ ಗುಂಡಿನ ಸದ್ದು,
ಇನ್ನೆಲ್ಲೂ ನೀರವ ಮೌನ,

ಸ್ವಲ್ಪ ಹೊತ್ತು ಬೆಳಕೋ ಬೆಳಕು,
ಮತ್ತಷ್ಟು ಹೊತ್ತು ಕಾರ್ಗತ್ತಲು,
ಒಮ್ಮೆ ಮೈ ಕೊರೆಯುವ ಚಳಿ,
ಮತ್ತೊಮ್ಮೆ ಬೆವರು ಸುರಿಸುವ ಬಿಸಿಲು,
ಭೋರ್ಗರೆಯುವ ಮಳೆ ,
ರೊಪ್ಪನೆ ಬೀಸುವ ಗಾಳಿ,

ನಭೋಮಂಡಲದ ಹಗಲು ರಾತ್ರಿಗಳ ನೀರವ ಮೌನ………..

ಆಫ್ರಿಕಾದ ದಟ್ಟ ಕಾಡುಗಳ ಹಸಿರ ವನಸಿರಿ………….

ಪ್ರಾಣಿ ಪಕ್ಷಿಗಳ ಮಿಲನ ಮಹೋತ್ಸವ………..

ಜಿಂಬಾಬೆ – ನೈಜೀರಿಯಾ – ನಮೀಬಿಯಾ – ಇಥೋಪಿಯಾ – ಉಗಾಂಡ – ದಕ್ಷಿಣ ಆಫ್ರಿಕಾ ಮುಂತಾದ ದೇಶಗಳ ಜನರ ಜಾನಪದೀಯ ಜೀವನ ಶೈಲಿ………..

ನ್ಯೂಜಿಲ್ಯಾಂಡ್ ನ ಹಿಮಶಿಖರಗಳ ರಾಶಿ, ಆಸ್ಟ್ರೇಲಿಯಾದ ವೈಭವೋಪೇತ ಬೆಳಕಿನ ಕಾರಂಜಿ, ಸಣ್ಣ ಸಣ್ಣ ದ್ವೀಪಗಳ ಜನರ ಬದುಕು………

ಆಲ್ಫ್ಸ್ ಪರ್ವತಗಳ ಮೇಲೆ ತೇಲುವ ಯುರೋಪಿನ ಪ್ರಾಕೃತಿಕ ಸೌಂದರ್ಯ……….

ಸ್ವಿಟ್ಜರ್ಲೆಂಡ್‌‌ನ ಆ ಅದ್ಬುತ ನೋಟ, ಆಸ್ಟ್ರಿಯಾದ ಆ ನಯನ ಮನೋಹರ ತೋಟಗಳು…………….

ಬೆಲ್ಜಿಯಂನ ಅತ್ಯಾಕರ್ಷಕ ಹೂದೋಟಗಳು,
ಜರ್ಮನಿಯ ಭವ್ಯ ಕಟ್ಟಡಗಳು, ಫ್ರಾನ್ಸಿನ ಯುವ ಪ್ರೇಮಿಗಳ ಮುಕ್ತ ಸರಸ ಸಲ್ಲಾಪಗಳು…………

ಇಟಲಿಯ ಪಾರಂಪರಿಕ ಐತಿಹಾಸಿಕ ಸ್ಥಳಗಳು……….

ಇಂಗ್ಲೇಂಡಿನ ಥೇಮ್ಸ್‌ ನದಿಯ ದಡದಲ್ಲಿರುವ ಲಂಡನ್ ನಗರದ ಸೌಂದರ್ಯ………..

ಫಿನ್ಲೆಂಡ್, ನಾರ್ವೆಯ ಶಾಂತಿ ನೆಮ್ಮದಿಯನ್ನು ಸಾರುವ ಜನರ ಮುಖಾರವಿಂದಗಳು……

ಪರ್ಶಿಯನ್ ಭವ್ಯತೆಯನ್ನು ಸಾರುವ ಈಜಿಪ್ಟಿನ ಪಿರಮಿಡ್ ಗಳು……..

ಟರ್ಕಿಯ ಸ್ಮಾರಕಗಳು,
ಇರಾನ್ ಇರಾಕಿನ ಕಟ್ಟುಮಸ್ತು ದೇಹದ ಸುಂದರ ಯುವಕ ಯುವತಿಯರು……….

ರಷ್ಯಾದ ಬ್ಯಾಲೆ,
ಇಸ್ರೇಲ್, ಪ್ಯಾಲಿಸ್ಟೈನ್ ನ ಅಗಾಧ ಸಾಮರ್ಥ್ಯ………….

ಅಮೆರಿಕಾದ ಆ ಶ್ರೀಮಂತಿಕೆ, ಹಾಲಿವುಡ್ ನ ಆ ರೋಚಕತೆ, ನಯಾಗರ ಜಲಪಾತದ ರೋಮಾಂಚನ……….

ನ್ಯೂಯಾರ್ಕ್ ನ ಸ್ವಾತಂತ್ರ್ಯ ದೇವತೆಯ ಸಾರ್ಥಕತೆ,
ವೆಸ್ಟ್ಇಂಡೀಸ್ ದ್ವೀಪಗಳ ಜನರ ನಡವಳಿಕೆ,
ಕ್ಯೂಬಾದ ಬದ್ದತೆ………

ಬ್ರೆಜಿಲ್, ಅರ್ಜೆಂಟೈನಾ, ಕೊಲಂಬಿಯಾ ದೇಶಗಳ ಪುಟ್ಬಾಲ್ ಅಭ್ಯಾಸ ಮಾಡುವ ಯುವಕರ ಚಾಕಚಕ್ಯತೆ…………

ಅಮೆಜಾನ್ ನದಿಯ ಆ ವಿಶಾಲತೆ…………

ಅಂಟಾರ್ಟಿಕಾದ ಆ ಮೈಕೊರೆಯುವ ಚಳಿಯಲ್ಲಿ ಹಿಮಕರಡಿಗಳ ಸಾಲುಗಟ್ಟಿದ ರಾಶಿ, ಶೀತವಲಯದ ಪ್ರಾಣಿಗಳ ದರ್ಶನ………..

ಆಫ್ಘನಿಸ್ತಾನದ ಬೆಟ್ಟ ಗುಡ್ಡಗಳ ಸಾಲುಗಳು,
ಪಾಕಿಸ್ತಾನದ ಸುಂದರ ಮನಮೋಹಕ ಕಣಿವೆಗಳು…………..

ಚೀನಾದ ಆ ಆಗಾಧ ಕೋಟೆ ಕೊತ್ತಲುಗಳು,
ಜಪಾನಿನ ಜನರ ಶ್ರಮದಾಯಕ ಪ್ರಾಮಾಣಿಕ ದುಡಿಯುವ ಕೈಗಳು………..

ಕೊರಿಯಾದ ಉದ್ದಿಮೆಗಳು, ವಿಯೆಟ್ನಾಂ ನ ಯುದ್ಧ ಸ್ಮಾರಕಗಳು, ಭೂತಾನಿನ ಬೌದ್ದ ವಿಹಾರಗಳು,…….

ನೇಪಾಳದ ಗೂರ್ಖಾಗಳ ವೇಷಭೂಷಣಗಳು,
ಶ್ರೀಲಂಕಾದ ಪ್ರಾಕೃತಿಕ ಸೌಂದರ್ಯ………

ನನ್ನ ಭಾರತ ಮಾತೆಯ ಪ್ರಕೃತಿಯ ಮಡಿಲು,
ಕನ್ನಡ ನಾಡಿನ ನೆಲದ ಸ್ಪರ್ಶ…………

ಮತ್ತೆ ನಿಮ್ಮೊಂದಿಗೆ ಹೀಗೆ ಬದುಕು,…….
ನಿಮ್ಮ ಹೃದಯಗಳಲ್ಲಿ ಶಾಶ್ವತ ನೆಲೆಸು,……..

ಎಂದೆಂದಿಗೂ………

ಮುಷ್ಟಿಯಷ್ಟಿದೆ ಈ ಲೋಕ,
ಹಿಡಿಯ ಹೋದರೆ ಸಮಷ್ಟಿ,
ಮುಗಿಯಿತು ತ್ರಿಲೋಕ ಸಂಚಾರ,
ಆಯಿತು ಬದುಕು ಸಾಕ್ಷಾತ್ಕಾರ.

ಆದರೂ,…….

ಇನ್ನೊಂದಾಸೆ,
ಒಂದೇ ಒಂದಾಸೆ,
ನಿಮ್ಮ ಹೃದಯದಾಳದಲಿ ಅಣುವಾಗುವಾಸೆ,,
ನಿಮ್ಮ ಮನದಾಳದಲಿ ಕಣವಾಗುವಾಸೆ,
ನಿಮ್ಮ ನೆನಪಿನಾಳದಲಿ ಶಾಶ್ವತವಾಗಿ ನೆಲೆಯಾಗುವಾಸೆ,
ಒಪ್ಪಿಕೊಳ್ಳಿ, ಅಪ್ಪಿಕೊಳ್ಳಿ ದಾರಿ ತಪ್ಪಿದೀ ಜೀವಿಯನ್ನು……

ಬದುಕಿನೊಂದಿಗೆ ಸರಸವಾಡುತ್ತಾ,
ವಿಧಿಯೊಂದಿಗೆ ಚೆಲ್ಲಾಟವಾಡುತ್ತಾ,
ಬರುವುದನ್ನು ಸ್ವೀಕರಿಸುತ್ತಾ,
ಹೋಗುವುದನ್ನು ಬೀಳ್ಕೊಡುತ್ತಾ,
ನಗುತ್ತಾ, ಅಳುತ್ತಾ,….‌…‌‌‌

ಸಾಗುತ್ತಲೇ ಇರಲಿ ಜೀವನ…..

ಕೊನೆಯೇ ಇಲ್ಲವೇನೋ ಎಂಬ ಭಾವದೊಂದಿಗೆ..‌‌‌………….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ.
9844013068……