ಆಗದಿರಲಿ ಪ್ರೀತಿಯ ಒರತೆಗೆ ಕೊರತೆ
ವಿಜಯ ದರ್ಪಣ ನ್ಯೂಸ್…
ಆಗದಿರಲಿ ಪ್ರೀತಿಯ ಒರತೆಗೆ ಕೊರತೆ
ಬದುಕು ಬದಲಾಗುತ್ತಲೇ ಇರುತ್ತದೆ ನಿನ್ನೆಯಂತೆ ಇಂದು ಇಲ್ಲ. ಇಂದಿನಂತೆ ನಾಳೆ ಇರುವುದಿಲ್ಲ. ನಮಗೆ ಇಷ್ಟವಿರಲಿ ಬಿಡಲಿ ಅದು ಬದಲಾಗುತ್ತಲೇ ಇರುತ್ತದೆ. ನಮ್ಮ ಭಾವ ಬಂಧ ಸಂಬಂಧಗಳು ಬದಲಾಗುತ್ತಲೇ ಇರುತ್ತವೆ. ಬದುಕಲು ಬೇಕಾಗಿರುವುದು ಉತ್ತಮ ಆರೋಗ್ಯ, ತಲೆ ಮೇಲೊಂದು ಸೂರು, ತುಂಬಿದ ಜೇಬು. ಇವೆಲ್ಲ ಇದ್ದರೂ ಒಂದಿಷ್ಟು ಪ್ರೀತಿ ತುಂಬುವ ಜೀವವೊಂದು ಜತೆಗೆ ಇರದಿದ್ದರೆ, ಇವೆಲ್ಲವು ಇದ್ದೂ ಉಪಯೋಗವಿಲ್ಲ. ಕೋಟಿ ಕೋಟಿ ರೂಪಾಯಿ, ಅಪರೂಪದ ರೂಪ ಕೊಡದ ಆನಂದ ಒಂದು ಹಿಡಿ ಪ್ರೀತಿ ನೀಡಬಲ್ಲದು. ಮನದೊಡಲಲ್ಲಿ ಸಂತಸ ಸಂತೃಪ್ತಿ ತುಂಬಬಲ್ಲದು. ಪ್ರೀತಿಸುವ ಜೀವಗಳು ಜತೆಗಿದ್ದರೆ ಜತೆಗೆ ಆನಂದದ ಸಾಗರವೇ ಇದ್ದಂತೆ. ಸೊಗಸಿಗೆ ನೆಲೆಯಿದ್ದಂತೆ. ಸಿಹಿಗೆ ಸವಿಯಿದ್ದಂತೆ ಚೆಂದದ ಚೆಲುವೆಗೆ ಚೆಲುವಿದ್ದಂತೆ.
ಜೀವನವೆಂಬುದು ನಿತ್ಯ ನೂತನ. ಕಣ್ಮನ ಸೆಳೆಯುವ ನಿಸರ್ಗ, ನದಿವನಗಳ ಸುಂದರ ವಿಹಂಗಮ ನೋಟ ಪ್ರಕೃತಿಯಲ್ಲಿಯ ಪ್ರತಿಯೊಂದನ್ನು ಖುಷಿಯಿಂದ ನೋಡಲು, ಆಸ್ವಾದಿಸಲು ಸಾಧ್ಯವಾಗುವುದು ಮನದಲ್ಲಿ ಪ್ರೀತಿಯ ಮಡಿಲು ಭರಪೂರ ತುಂಬಿದಾಗ ಮಾತ್ರ. ಪ್ರೀತಿಯ ಝರಿ ಮಾನವನ ಸೂಪರ್ ಪವರ್ ಆಗಿದೆ. ಹೃದಯವನ್ನು ತಂಪಾಗಿರುಸುವುದು ಅದಕ್ಕಷ್ಟೇ ಗೊತ್ತು. ಪ್ರೀತಿಯ ಸಸಿಗೆ ನಮ್ಮವರು ಬೇರೆಯವರು ಅಂತೇನು ಭೇದ ಭಾವವಿಲ್ಲ. ಅದನ್ನು ಯಾರು ಬೇಕಾದರೂ ನೆಡಬಹುದು. ನೆಡುವ ಪ್ರೀತಿಯ ಸಸಿ ಹೃದಯವೆಂಬ ಭೂಮಿಯಲ್ಲಿ ದಿನೇ ದಿನೇ ಚಿಗುರುತ್ತದೆ. ಎದೆಯ ಗೂಡಿನಲ್ಲಿ ಪ್ರೀತಿ ಹಕ್ಕಿ ಟುವ್ವಿ ಟುವ್ವಿ ಎಂದು ಹಾಡುತ್ತದೆ. ಕಷ್ಟದ ಮೋಡಗಳು ದಟ್ಟವಾಗಿ ಕವಿದಾಗಲೂ ಮನೆಯವರ ನೆರೆಹೊರೆಯವರ ಬೆಂಬಲದ ಪ್ರೀತಿ ನನ್ನೊಂದಿಗಿದೆ ಎಂದರೆ ಸಾಕು ಮಳೆಗಾಲದ ತಂಪನಿರಳು ಸಿಕ್ಕಂತಾಗುತ್ತದೆ.
ಪ್ರೀತಿಗೆ ಇಷ್ಟೆಲ್ಲ ಶಕ್ತಿ ಇರುವುದರಿಂದಲೇ ಎಲ್ಲರೂ ಹೇಳುವುದು ನೀನಿಲ್ಲದೇ ಸುಖವೆಲ್ಲಿದೆ? ನಿರ್ಮಲ ಮನಸ್ಸಿದ್ದರೆ, ಉದ್ದೇಶ ಸರಿಯಿದ್ದರೆ ಸಂಬಂಧಗಳಲ್ಲಿ ಯಾರನ್ನೂ ಕಳೆದುಕೊಳ್ಳುವ ಪ್ರಸಂಗ ಬರುವುದಿಲ್ಲ. ಹಾಗೆ ಒಂದೊಳ್ಳೆ ಪ್ರಸಂಗ ಬಂದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಪ್ರಾಮಾಣಿಕ ಪ್ರೀತಿಗೆ ಯಾವಾಗಲೂ ಜಯ ಇದ್ದೇ ಇರುತ್ತದೆ. ಪ್ರೀತಿಯಿಲ್ಲದಿದ್ದರೆ ಬೆಳವಣಿಗೆ ನಿಂತು ಹೋಗುತ್ತದೆ. ಭೇದಭಾವಗಳ ಮೋಡಗಳು ಇದ್ದೇ ಇರುತ್ತವೆ ಅವುಗಳ ನಡುವೆ ಪ್ರೀತಿಯ ಸುಂದರ ಎಳೆಯನ್ನು ನಾವೇ ಹುಡುಕಬೇಕು. ಹುಡುಕಿ ವಿವಿಧ ಬಂಧಗಳಿಗೆ ಕಟ್ಟಬೇಕು. ರಾಜ್ಯ ದೇಶ ಭಾಷೆಗಳ ನಡುವಿರುವ ಅಂತರಕ್ಕೆ ಸಿಗಲಿ ಬಿಡುಗಡೆ ಎದೆಯಲ್ಲಿ. ಎನ್ನುವ ಆಶಯ ಎಲ್ಲರದೂ ಇದೆ. ಆದರೆ ಪ್ರಾಯೋಗಿಕವಾಗಿ ಹಿಂದೆ ಬೀಳುತ್ತಿದ್ದೇವೆ!
ನೊಂದು ಬೆಂದವರಿಗೆ ಕಷ್ಟಗಳ ಕಡಲಲ್ಲಿ ಬಿದ್ದವರಿಗೆ ಪ್ರೀತಿಯೆಂಬ ಬಳ್ಳಿಯ ಬೆಚ್ಚನೆಯ ತಬ್ಬುವಿಕೆ ಸಿಗಬೇಕು. ಹಾಗೆ ಪ್ರೀತಿಯ ಪರಿಮಳ ನೆರೆಹೊರೆಯ ಸುತ್ತಲೂ ಮೆಲ್ಲನೆ ಹಬ್ಬಬೇಕು. ಇದಕ್ಕೆಲ್ಲ ನಮ್ಮ ಮನದಲ್ಲಿ ನಾವು ಪ್ರೀತಿಯ ಸಸಿ ನೆಟ್ಟು ಬೆಳಸುತ್ತಲಿರಬೇಕು. ‘ಪ್ರೀತಿಯಿಂದ ಬದಲಿಸಲಾಗದ್ದು ಯಾವುದೂ ಇಲ್ಲ’ ಎಂಬ ಮಾತಿದೆ. ಕಲ್ಲೆದೆಯವರನ್ನು ಪ್ರೀತಿ ಕರಗಿಸಬಲ್ಲದು. ಒಮ್ಮೆ ಮನಸ್ಸು ಮಾಡಿದರೆ ಸಿಟ್ಟು, ಆಕ್ರೋಶ, ದ್ವೇಷ, ಸೇಡಿನ ಜೋಡಿಗಳ ಕಣ್ಣಂಚಿನಲಿ ಪ್ರೀತಿ ಥಳ ಥಳ ಮಿಂಚುತ್ತದೆ. ಒರಟು ಮಾತಿನ, ಟೀಕಾ ಮನೋಭಾವದ, ವಾದ ಮಾಡುವ ಪ್ರವೃತ್ತಿಯುಳ್ಳ ವ್ಯಕ್ತಿಗಳಿಗೆ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಪ್ರೀತಿಯಿಂದ ವ್ಯವಹರಿಸದಾಗ ಅಷ್ಟು ಶಾಂತಿ ನೆಮ್ಮದಿಯಿಂದ ಇರಬಲ್ಲೆವು. ಆ ಕಡೆಯಿಂದ ಪ್ರೀತಿ ಘಮವೂ ಮನಸ್ಸಿಗೆ ತಾಕಬಲ್ಲದು. ಪ್ರೀತಿಯಿಂದ ನೋವಿನ ಗಾಯಗಳ ಮಾಯವಾಗಿಸುವ ಕಲೆ ಕಲಿತರೆ ಜೀವನ ನಂದನವನ. ಕಾಲೆಳೆಯುವವರ ಕರಬುವವರ, ದ್ವೇಷಿಸುವವರ ಅಂತರಂಗದಿ ಪ್ರೀತಿ ಬಳ್ಳಿ ಬೆಳೆಸಬೇಕು. ತುಳಿದವರ ನಡುವೆ ಬೆಳೆದು ನಿಂತು ತುಳಿಯುವವರೆ ಸ್ನೇಹ ಹಸ್ತ ಚಾಚಿ ಮೇಲಕ್ಕೆತ್ತಿ ಮತ್ತಷ್ಟು ಮೇಲಕ್ಕೆ ಬೆಳೆಸುವಷ್ಟು ಪ್ರೀತಿ ಧಾರೆ ಎರೆಯಬೇಕು. ಪ್ರೀತಿಯೆಂಬ ಆಲದ ಮರದ ಬೀಳಲುಗಳನು ಜಗದಗಲಕೆ ಹಬ್ಬಿಸುವ ಜವಾಬ್ದಾರಿಯ ಛಾತಿ ಮೆರೆಯಬೇಕಿದೆ. ತ್ಯಾಗ ಇಲ್ಲದ ಸ್ನೇಹ ಜವಾಬ್ದಾರಿ ಇಲ್ಲದ ಪ್ರೀತಿ ಹೆಸರಿಗಷ್ಟೇ. ಅದಕ್ಕೆ ನಾವು ಜವಾಬ್ದಾರಿ ಮೂಟೆಯನ್ನು ಜತೆಗಿರಿಸಿಕೊಂಡೇ ಪರಸ್ಪರ ಪ್ರೀತಿಸಬೇಕು. .
ನಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಅಂತ ನಮಗೆ ಗೊತ್ತು. ಆದರೆ ನಮ್ಮ ಬದುಕಿನ ಖಾತೆಯಲ್ಲಿ ಸಮಯ ಎಷ್ಟಿದೆಯೆಂದು ಗೊತ್ತಿರುವುದಿಲ್ಲ. ಆ ಸಮಯ ಮುಗಿಯುವುದರೊಳಗಾಗಿ ಪ್ರೀತಿ ಖಾತೆಯಲ್ಲಿರುವ ನಿಧಿಯನ್ನು ಹಂಚುತ್ತಲೇ ಇರಬೇಕು. ಯಾರೋ ಬಂದರೂ ಎದೆಯ ಪ್ರೀತಿಯ ಬಾಗಿಲು ತೆರೆದಿರಬೇಕು. ಹೃದಯದ ಮರೆಯಲಿ ಪ್ರೀತಿಯ ಕೋಗಿಲೆ ಹಾಡುತಲಿರಬೇಕು. ಯಾರಿಗೂ ಗೊತ್ತಿಲ್ಲದೇ ಪ್ರೀತಿ ಬೀದಿಗೆ ಇಳಿಯಬೇಕು. ಕೊನೆಯಿಲ್ಲದ ಪ್ರೀತಿಯ ಮಾರ್ಗದಲ್ಲಿ ಜೀವನ ಪಯಣ ಮುಗಿದರೂ ಲೋಕದ ಜನಮನದ ನೆನಪಿಗೆ ಉಸಿರಿಲ್ಲದ ಹೆಸರು ಸದಾ ಅಂಟಿಕೊಂಡಿರಬೇಕು.
ವಯಸ್ಸು ಚರ್ಮದಲ್ಲಿ ಸುಕ್ಕುಗಳನ್ನು ತರಬಹುದು. ಆದರೆ ಪ್ರೀತಿಯ ಬುಗ್ಗೆ ಚಿಮ್ಮುತ್ತಲೇ ಇರುತ್ತದೆ. ನೀರಿಲ್ಲದೇ ಬದುಕಬಹುದು. ಅನ್ನವಿಲ್ಲದೇ ಬದುಕಬಹುದು. ಆದರೆ ಪ್ರೀತಿಯಿಲ್ಲದೇ ಬದುಕಲಾರೆವು. ಪ್ರೀತಿಯ ಒರತೆಯ ಕೊರತೆ ಆಗಿದ್ದರಿಂದಲೇ ಜೀವನದ ತೇರು ಎಳೆಯಬೇಕಿದ್ದ ಎಷ್ಟೋ ಜೀವಗಳು ಮರಣಶಯ್ಯೆಯನ್ನು ಆರಿಸಿಕೊಳ್ಳುತ್ತಿರುವುದಕ್ಕೆ ದಿನನಿತ್ಯ ಸಾಕ್ಷಿಯಾಗುತ್ತಿದ್ದೇವೆ. ಆಮೂಲ್ಯ ಜೀವಗಳನ್ನು ಜೊತೆಗಿರಿಸಿಕೊಳ್ಳಲು ಸಾರ್ಥಕ ಜೀವನಕ್ಕೆ ಅದ್ಭುತ ಚೈತನ್ಯ ಭರಿತರಾಗಲು ಪ್ರೀತಿಯ ಜೀವಂತ ಚಿಲುಮೆಯಾಗೋಣ. ಪ್ರೀತಿಯ ಒರತೆ ಚಿಲುಮೆಯಂತೆ ಚಿಮ್ಮಿಸೋಣ.
ಪ್ರತಿಕ್ಷಣ ನಮಗಾಗಿ ಹಂಬಲಿಸುವವರಿಗೆ ಪ್ರತಿದಿನ ತುಸು ಸಮಯ ಮಿಸಲಿಟ್ಟರೆ ಮಧರ ಬಂಧದ ಬಳ್ಳಿ ಚೆಂದದಿ ಚಿಗುರುವುದು.

ಲೇಖನ
– ಜಯಶ್ರೀ .ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨