ಒಳ ಮೀಸಲಾತಿ ಒಡೆದ ಮೀಸಲಾತಿ ಆಗುವ ಮುನ್ನ ಎಚ್ಚರವಹಿಸಿ……..
ವಿಜಯ ದರ್ಪಣ ನ್ಯೂಸ್….
ಒಳ ಮೀಸಲಾತಿ ಒಡೆದ ಮೀಸಲಾತಿ ಆಗುವ ಮುನ್ನ ಎಚ್ಚರವಹಿಸಿ……..
ಈ ಕ್ಷಣದ ಎಲ್ಲಾ ಶೋಷಿತ ಸಮುದಾಯಗಳ ನಾಯಕರು ದಯವಿಟ್ಟು ಗಂಭೀರವಾಗಿ ಯೋಚಿಸಿ. ಒಳ ಮೀಸಲಾತಿ ಖಂಡಿತವಾಗಲೂ ನ್ಯಾಯಯುತವಾದ ಬೇಡಿಕೆ. ಇಂದಲ್ಲ ನಾಳೆ ಬಹುಶಃ ಇನ್ನೇನು ಕೆಲವೇ ತಿಂಗಳುಗಳಲ್ಲಿ ಅದು ಜಾರಿಯಾಗಬಹುದು. ಅದಕ್ಕಾಗಿ ಹೋರಾಟ ನಿರಂತರವಾಗಿರಲಿ…..
ಅದರಿಂದ ಅಂತಹ ಬಹುದೊಡ್ಡ ಕ್ರಾಂತಿಕಾರಕ ಬದಲಾವಣೆ ಏನು ಸಾಧ್ಯವಾಗುವುದಿಲ್ಲ. ಒಂದಷ್ಟು ಜನರಿಗೆ ಅದರಲ್ಲೂ ಇಲ್ಲಿಯವರೆಗೂ ಮೀಸಲಾತಿ ಮುಟ್ಟಲಾಗದ ಅರ್ಹರಿಗೆ ಸ್ವಲ್ಪಮಟ್ಟಿಗೆ ತಲುಪಬಹುದು. ಈಗಾಗಲೇ ಖಾಸಗಿಕರಣ ಮತ್ತು ಕಾರ್ಪೊರೇಟ್ ಸಂಸ್ಕೃತಿ ಮೀಸಲಾತಿಯ ನಿಜವಾದ ಪ್ರಯೋಜನವನ್ನೇ ಇಲ್ಲವಾಗಿಸಿದೆ. ಅದೊಂದು ಭಾವನಾತ್ಮಕ ವಿಷಯವಾಗಿ, ತೇಪೆ ಹಾಕುವ ಕೆಲಸವಾಗಿ ಮಾತ್ರ ಉಳಿದಿದೆ. ಸ್ಪರ್ಧೆ, ವೇಗ, ಹಣ, ದುಷ್ಟತನ, ವಂಚನೆಗಳ ಮಧ್ಯೆ ನಿಜವಾಗಲೂ ಮೀಸಲಾತಿ ಎಂಬ ಅತ್ಯಂತ ಮಾನವೀಯ, ಕ್ರಮಬದ್ಧವಾದ, ಪಾವಿತ್ರ್ಯದ ಪರಿಕಲ್ಪನೆ ಶಿಥಿಲಗೊಂಡಿದೆ. ಅದು ಬೇರೆ ವಿಷಯ….
ಆದರೆ ಯಾವುದೇ ವ್ಯಕ್ತಿಗಳು ಮತ್ತು ಸಂಘಟನೆಗಳು ದೂರ ದೃಷ್ಟಿಯ ಕೊರತೆಯಿಂದ, ಈ ಕ್ಷಣದ ಅನಿವಾರ್ಯತೆಗಾಗಿಯೋ, ಸಮುದಾಯದ ನಾಯಕರಾಗುವ ಹಂಬಲದಿಂದಲೋ, ಇದೊಂದು ನಾಯಕತ್ವದ ಗುರುತು ಮೂಡಿಸಲು ಅತ್ಯಂತ ಅವಶ್ಯಕವಾದ ವೇದಿಕೆ ಮತ್ತು ಹೋರಾಟವೆಂದೋ ಒಟ್ಟಿನಲ್ಲಿ ಯಾವುದೋ ಕಾರಣದಿಂದ ಇದರ ಮುಂಚೂಣಿಯಲ್ಲಿ ನಿಲ್ಲುತ್ತಿರುವ ನಾಯಕರು ತಮ್ಮ ಬೇಡಿಕೆಗಳಿಗಿಂತ ಸಹಪಾಠಿಗಳ ವೈಯಕ್ತಿಕ ನಿಂದನೆಗೆ ಇಳಿದು, ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳು, ಪತ್ರಿಕೆಗಳ ಮೂಲಕ ಏಕವಚನದಲ್ಲಿ ಬಡಿದಾಡಿಕೊಂಡರೆ ಖಂಡಿತವಾಗಲೂ ಮುಂದೆ ನೀವೆಂದಾದರೂ ಒಂದೆಡೆ ಸೇರಿದರು ಸಹ ಈ ಕಹಿ ನೆನಪುಗಳನ್ನು ಅಳಿಸಲು ಸಾಧ್ಯವಿಲ್ಲ. ಒಡೆದ ಮನಸ್ಸುಗಳನ್ನು ಮೇಲ್ನೋಟಕ್ಕೆ ಬೆಸೆಯಬಹುದೇ ಹೊರತು ಒಡೆದ ಕನ್ನಡಿಯಂತೆ ಆ ಊನ ಶಾಶ್ವತವಾಗಿ ಉಳಿದುಬಿಡುತ್ತದೆ…
ಏಕವಚನದ ಪದ ಪ್ರಯೋಗ ಮತ್ತು ಕಠಿಣ ನಿಂದನೆ ಆ ಕ್ಷಣದಲ್ಲಿ ಚಪ್ಪಾಳೆ ಗಿಟ್ಟಿಸಬಹುದು. ಆದರೆ ದೀರ್ಘಾವಧಿಯಲ್ಲಿ ಅದು ಪ್ರಯೋಗಿಸಿದವರ ಮೇಲೆಯೇ ಅಸಹ್ಯ ಹುಟ್ಟಿಸುತ್ತದೆ…..
ಈಗಾಗಲೇ ಮೀಸಲಾತಿ ವಿರೋಧಿಗಳು ಈ ಒಳ ಮೀಸಲಾತಿಯ ಹೋರಾಟದಲ್ಲಿ ದಲಿತ ನಾಯಕರು ಮತ್ತು ಸಂಘಟನೆಗಳು ಇಬ್ಭಾಗವಾಗುವುದನ್ನು ನೋಡಿ ಒಳಗೊಳಗೆ ಮುಸಿಮುಸಿ ನಗುತ್ತಿರಲೂ ಬಹುದು. ಒಂದು ಪ್ರಬುದ್ಧ ಸಮಾಜ ನಿರ್ಮಾಣವಾಗಬೇಕಾದರೆ ಪ್ರಬುದ್ಧ ಮನಸ್ಸುಗಳು ತುಂಬಾ ಅವಶ್ಯಕ. ಕಳೆದ ಕೆಲವು ವರ್ಷಗಳಿಂದ ಈ ಒಳ ಮೀಸಲಾತಿಯ ಹೋರಾಟದಿಂದಾಗಿ ಎಷ್ಟೋ ದಲಿತ ನಾಯಕರುಗಳು ತಮ್ಮ ಭಾಷೆಯ ಬಳಕೆ, ಅಸೂಯೆಯ ಮಾನಸಿಕತೆಯನ್ನು ತೋರ್ಪಡಿಸಿಕೊಂಡು ತಾವೇ ಸಾಮಾಜಿಕ ದೃಷ್ಟಿಕೋನದಲ್ಲಿ ಕೆಳಮಟ್ಟಕ್ಕೆ ಇಳಿಯುತ್ತಿದ್ದಾರೆ. ಇವತ್ತು ಯಾರನ್ನು ಬೇಕಾದರೂ ಹೇಗೆ ಬೇಕಾದರೂ ಟೀಕಿಸಬಹುದು. ಅದು ನಿಂದಿಸುವವರ ಯೋಗ್ಯತೆಯನ್ನು ತೋರಿಸುತ್ತದೆಯೇ ಹೊರತು ನಿಂದಿಸಿಕೊಂಡವರ ಯೋಗ್ಯತೆಯನ್ನಲ್ಲ. ಆ ಪ್ರಜ್ಞೆ ಸದಾ ಜಾಗೃತವಾಗಿರಲಿ….
ನನ್ನ ಪ್ರಕಾರ ಒಂದು ಸಣ್ಣ ಒಳ ಮೀಸಲಾತಿಯ ಕಾರಣದಿಂದ ಎಂತೆಂತಹ ದಲಿತ ನಾಯಕರು ಈ ಮಟ್ಟಕ್ಕೆ ತಮ್ಮ ಮುಖವಾಡಗಳನ್ನು ಕಳಚಿಕೊಳ್ಳುವುದಾದರೆ ಮುಂದಿನ ದಿನಗಳು ಕಷ್ಟವಾಗಬಹುದು. ಕೆಲವರಂತೂ ಹದ್ದು ಮೀರಿ ನಮ್ಮ ಹಿರಿಯರ ಹೋರಾಟಗಳನ್ನು ಅಥವಾ ಇನ್ಯಾವುದೋ ಸಂದರ್ಭದ ಚಳವಳಿಗಳನ್ನು ಬಾಯಿಗೆ ಬಂದಂತೆ ಮಾತನಾಡುತ್ತಾ, ಹಗುರವಾಗಿ ಅವರನ್ನು ಅವಮಾನಿಸುತ್ತಾ ಟೀಕಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ…..
ಕೇವಲ ಒಂದಷ್ಟು ಜನ ಹಿಂಬಾಲಕರು ನಮ್ಮ ಹಿಂದೆ ಇದ್ದಾರೆ ಎಂಬ ಕಾರಣಕ್ಕಾಗಿ ಅಥವಾ ತಮಗೆ ದೊಡ್ಡ ದೊಡ್ಡ ನಾಯಕರ ಪರಿಚಯವಿದೆ ಎಂಬ ಕಾರಣಕ್ಕಾಗಿ ಇಂದು ವಿವೇಚನೆ ಇಲ್ಲದೆ, ಸಂವೇದನೆ ಇಲ್ಲದೆ ನಾಲಿಗೆ ಹರಿ ಬಿಟ್ಟರೆ ಅದರ ಪರಿಣಾಮ ಇಡೀ ಶೋಷಿತ ಸಮುದಾಯಗಳ ಮೇಲಾಗುತ್ತದೆ. ತಾಳ್ಮೆ ಖಂಡಿತ ಈ ಕ್ಷಣದಲ್ಲಿ ಅವಶ್ಯಕವಾಗಿ ಬೇಕಾಗಿದೆ….
ಬಾಬಾ ಸಾಹೇಬರು ತಮ್ಮ ಇಡೀ ಬದುಕಿನ ಹೋರಾಟದಲ್ಲಿ, ಬರಹಗಳಲ್ಲಿ, ಭಾಷಣಗಳಲ್ಲಿ ಜ್ಞಾನ, ಚಿಂತನೆ, ಅಧ್ಯಯನವನ್ನು ಮೀರಿ ತುಂಬಾ ತುಂಬಾ ಪ್ರಬುದ್ಧತೆಯನ್ನು ಪ್ರದರ್ಶಿಸಿದ್ದಾರೆ. ಆ ಪ್ರಬುದ್ಧತೆಯ ಕಾರಣದಿಂದಲೇ ಅವರಿಗೆ ಗಾಂಧಿಯಂತ ಮಹಾತ್ಮನನ್ನು ಎದುರಿಸಲು ಸಾಧ್ಯವಾಗಿದ್ದು. ಆಗಿನ ಕಾಲದಲ್ಲಿ ಗಾಂಧಿಯವರ ವ್ಯಕ್ತಿತ್ವ, ಜನಪ್ರಿಯತೆ ಅಗಾಧವಾಗಿತ್ತು. ಅದನ್ನು ತಮ್ಮ ಪ್ರಬುದ್ಧತೆಯ ಕಾರಣದಿಂದ ನೇರವಾಗಿ ಎದುರಿಸಲು ಸಾಧ್ಯವಾಗಿದ್ದು ಅಂಬೇಡ್ಕರ್ ಅವರ ದೂರ ದೃಷ್ಟಿಯೂ ಅಮೂಲ್ಯ ಕಾರಣವಾಗಿತ್ತು….
ಅದನ್ನು ಮರೆತ ಈಗಿನ ಕೆಲವು ಹೋರಾಟಗಾರರು ತಾವೇನೂ ಮಹಾನ್ ಸಾಧಕರಂತೆ, ಇನ್ನೂ 50 ವಯಸ್ಸನ್ನು ತಲುಪದೇ ಇರುವಾಗಲೂ ತೀರ ಅಕ್ರೋಶ ಭರಿತವಾಗಿ, ಆಕ್ರಮಣಕಾರಿಯಾಗಿ ತಮ್ಮದೇ ಜನರನ್ನು ನಿಂದಿಸುತ್ತಿರುವುದು ಕಂಡು ಬರುತ್ತಿದೆ. ದಯವಿಟ್ಟು ಬೇಡ, ಆ ತಪ್ಪನ್ನು ಮಾಡಬೇಡಿ. ಇದು ಅತ್ಯಂತ ದುರಿತಕಾಲ. ಇಂಥ ಸಂದರ್ಭದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಒಗ್ಗಟ್ಟು ಮುಖ್ಯ. ಮತ್ತೆ ಹೇಳುತ್ತೇನೆ ಒಳ ಮೀಸಲಾತಿ ಒಂದು ಸಣ್ಣ ಹೋರಾಟ ಮಾತ್ರ, ಅದಕ್ಕಾಗಿ ಇಭ್ಭಾಗವಾಗಬೇಡಿ. ಮೀಸಲಾತಿ ಇಲ್ಲಿಯವರೆಗೂ ಪಡೆದವರು ನಮ್ಮವರೇ, ಮುಂದೆ ಪಡೆಯುವವರು ನಮ್ಮವರೇ. ಈ ಸಾಮಾಜಿಕ ವ್ಯವಸ್ಥೆಯಲ್ಲಿ ಎಷ್ಟೋ ಶತಮಾನಗಳಿಂದ ಅನ್ಯಾಯ ಶೋಷಣೆ ನಿರಂತರವಾಗಿ ಆಗುತ್ತಿದೆ. ಕನಿಷ್ಠ ಈಗ ಒಂದಷ್ಟು ಬದಲಾವಣೆಗಳಾದರೂ ಸಾಧ್ಯವಾಗುತ್ತಿದೆ. ನಾವುಗಳು ಅದಕ್ಕೆ ಅಡ್ಡಿಯಾಗುವುದು ಬೇಡ…
ಬಾಬಾ ಸಾಹೇಬರೇ ಹೇಳಿರುವಂತೆ
” ಹೋರಾಟದ ರಥವನ್ನು ಇಲ್ಲಿಯವರೆಗೂ ಎಳೆದು ತಂದಿದ್ದೇನೆ. ಸಾಧ್ಯವಾದರೆ ಮುಂದುವರಿಸಿ. ಹಿಂದಕ್ಕೆ ಎಳೆಯಬೇಡಿ ” ಈಗ ಈ ಹೋರಾಟಗಾರರು ಮತ್ತು ಅದನ್ನು ವಿರೋಧಿಸುತ್ತಿರುವವರು ಇಬ್ಬರ ನಡುವೆ ಸಮನ್ವಯದ ಕೊರತೆಯಿಂದ ಬಾಬಾ ಸಾಹೇಬರ ಹೋರಾಟದ ರಥ ಹಿಂದೆ ಸರಿಯುತ್ತಿದೆ. ಬೇಡ ಸ್ವಲ್ಪ ತಾಳ್ಮೆ ಇರಲಿ, ದೂರ ದೃಷ್ಟಿ ಇರಲಿ. ಒಮ್ಮೆ ಒಡೆದ ಮನಸ್ಸುಗಳು ಯಾವೊತ್ತಿದ್ದರು ಆ ಕಹಿಯನ್ನು ಉಳಿಸಿ ಹೋಗುತ್ತದೆ. ಉದಾಹರಣೆಗೆ ಮುಂದೆಂದಾದರು ಡಿ ಕೆ ಶಿವಕುಮಾರ್ ಮತ್ತು ಹೆಚ್ ಡಿ ಕುಮಾರಸ್ವಾಮಿ ಒಂದಾದರೆ ಅವರಲ್ಲಿ ಆತ್ಮೀಯತೆ ಉಳಿದಿರುತ್ತದೆ ಎಂದು ಭಾವಿಸುವಿರೇ, ಮುಂದೆಂದಾದರು ವಿಜಯೇಂದ್ರ ಮತ್ತು ಯತ್ನಾಳರು ಒಂದಾದರೆ ನಿಜವಾದ ಆತ್ಮೀಯತೆ ಉಳಿದಿರುತ್ತದೆಯೇ, ಖಂಡಿತ ಇಲ್ಲ, ಅದು ಅನುಕೂಲ ಸಿಂಧು ಮಾತ್ರವಾಗುತ್ತದೆ. ಆ ರೀತಿಯ ಮನಸ್ಸುಗಳು ಒಡೆಯಲು ಅವಕಾಶ ಮಾಡಿಕೊಡಬೇಡಿ…
ವ್ಯಕ್ತಿಗತವಾಗಿ ಯಾರ ಹೆಸರನ್ನು ಹೇಳಲು ಇಚ್ಚಿಸುವುದಿಲ್ಲ. ಆದರೆ ಈಗಿನ ಯುವ ದಲಿತ ಹೋರಾಟಗಾರರು ಹಾದಿ ತಪ್ಪುತ್ತಿರುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ಸಂಘಟನೆಗಳು ಬಲವಾಗಬೇಕಾಗಿರುವುದು ಶೋಷಿತರಲ್ಲಿಯೇ. ಪ್ರಬಲ ಸಂಘಟನೆಗಳನ್ನು ಸೃಷ್ಟಿಸಿಕೊಂಡು ಇತರ ಬಲಿಷ್ಠ ಸಮುದಾಯಗಳು ಒಗ್ಗಟ್ಟಾಗುತ್ತಿರುವಾಗ ತೀರಾ ಅನಿವಾರ್ಯವಾದ ಶೋಷಿತರು ಹೀಗೆ ಸಣ್ಣ ವಿಷಯಕ್ಕೆ, ಬೀದಿ ರಂಪಾಟ ಮಾಡುತ್ತಿರುವುದು ಶೋಚನೀಯ…
ಈ ದೇಶದ ಸಾಮಾನ್ಯ ಜನರಂತು ಈಗಾಗಲೇ ಕುಂಭಮೇಳದಲ್ಲಿ ಮುಳುಗಿಯಾಗಿದೆ. ಎಲ್ಲೋ ಒಂದಷ್ಟು ಅಳಿದುಳಿದ ಪ್ರಜ್ಞಾವಂತರು ಉಳಿದಿದ್ದಾರೆ. ಅವರೇ ಎಲ್ಲಾ ರೀತಿಯ ಹೋರಾಟ ಮಾಡುತ್ತಿದ್ದಾರೆ. ಅವರೂ ಸಹ ಹೀಗೆ ಕಚ್ಚಾಡಿದರೆ ಮುಂದಿನ ದಿನಗಳು ಗಂಭೀರವಾಗಬಹುದು ಯೋಚಿಸಿ ನೋಡಿ….
ಏಕೆಂದರೆ, ಹೀಗೆ ಒಂದು ವಿಷಯವನ್ನು ತಮ್ಮೊಳಗೆ ಪರಿಹರಿಸಿಕೊಳ್ಳಲು ಸಾಧ್ಯವಾಗದೆ ದ್ವೇಷ ಅಸೂಯೆ ಕಾಡಿದರೆ ಈ ನಾಯಕರುಗಳಿಗೆ ಜಗತ್ತಿನ ಶಾಂತತೆಯ ಪ್ರತಿರೂಪ, ಸ್ಥಿತಪ್ರಜ್ಞತೆಯ ಪ್ರತಿರೂಪ, ಅಹಿಂಸೆಯ ಪ್ರತಿರೂಪ, ಪರಿವರ್ತನೆಯ ಪ್ರತಿರೂಪ ಬುದ್ಧರ ಹೆಸರನ್ನು ಹೇಳುವ ಯೋಗ್ಯತೆಯನ್ನು ಕಳೆದುಕೊಳ್ಳಬಹುದು, ಸಮಾನತೆ ಹರಿಕಾರ ಬಸವಣ್ಣ ಅಥವಾ ವಿಶ್ವ ಮಾನವತಾವಾದಿ ಅಂಬೇಡ್ಕರ್ ಅವರ ಹೆಸರನ್ನು ಉಲ್ಲೇಖಿಸುವ ನೈತಿಕತೆಯನ್ನು ಕಳೆದುಕೊಳ್ಳಬಹುದು. ಏಕೆಂದರೆ ಅವರ ಯಾವ ಚಿಂತನೆಗಳೂ ಈ ರೀತಿಯ ದ್ವೇಷ, ಅಸೂಯೆಯನ್ನು ಹೇಳುವುದಿಲ್ಲ. ಇದು ನಿಮ್ಮ ಗಮನದಲ್ಲಿರಲಿ…
ಹೌದು, ಒಳ ಮೀಸಲಾತಿ ಒಂದು ಸಣ್ಣ ಸುಧಾರಣಾ ಕ್ರಮವೇ ಹೊರತು ತುಂಬಾ ಕ್ರಾಂತಿಕಾರಿಯಾದ ಬದಲಾವಣೆ ಏನು ಅಲ್ಲ. ಒಂದು ಮಾರ್ಪಾಡು ಅಥವಾ ಪರಿಷ್ಕರಣೆ ಅಥವಾ ವಂಚಿತರಿಗೆ ಒಂದಷ್ಟು ಅವಕಾಶ ಕಲ್ಪಿಸುವ ಯೋಜನೆ ಮಾತ್ರ. ಅದಕ್ಕಾಗಿ ಇಷ್ಟೊಂದು ಗಂಭೀರವಾಗುವ ಅವಶ್ಯಕತೆಯೂ ಇಲ್ಲ ತಾಳ್ಮೆಯಿಂದ ಯೋಚಿಸಿ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068…….