ರಂಜಾನ್, ಶಾಂತಿ, ಭಾವೈಕ್ಯತೆ, ಹಿಂಸೆ ಇತ್ಯಾದಿ ಆರೋಪಗಳ ಸುತ್ತಾ…….


ವಿಜಯ ದರ್ಪಣ ನ್ಯೂಸ್…..

ರಂಜಾನ್, ಶಾಂತಿ, ಭಾವೈಕ್ಯತೆ, ಹಿಂಸೆ ಇತ್ಯಾದಿ ಆರೋಪಗಳ ಸುತ್ತಾ…….

ಜಗತ್ತಿನ ಎರಡನೆಯ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಸಮುದಾಯ ಮುಸ್ಲಿಮರದು. ಸ್ವಲ್ಪ ಯುರೋಪ್ ಮತ್ತು ಹೆಚ್ಚಾಗಿ ಏಷ್ಯಾದ ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಮೂಲ ನಿವಾಸಿಗಳು, ಸೌದಿ ಅರೇಬಿಯಾದ ಮೆಕ್ಕಾವನ್ನು ಧಾರ್ಮಿಕ ಕೇಂದ್ರವಾಗಿ ಇಡೀ ಜಗತ್ತಿನಾದ್ಯಂತ ಪ್ರಸರಿಸಿದ್ದಾರೆ.

ಕ್ರಿಶ್ಚಿಯನ್, ಮುಸ್ಲಿಂ, ಬೌದ್ಧ, ಹಿಂದೂಗಳು ಜನಸಂಖ್ಯೆಯ ಆಧಾರದ ಮೇಲೆ ಅತಿ ಹೆಚ್ಚು ಸಂಖ್ಯೆಯಲ್ಲಿ ಈ ಭೂಮಿಯ ಮೇಲೆ ವಾಸಿಸುತ್ತಿದ್ದಾರೆ. ಮುಸ್ಲಿಂ ಸಮುದಾಯದ ಅತ್ಯಂತ ಮಹತ್ವದ ಹಬ್ಬ ರಂಜಾನ್. ಸುಮಾರು ಒಂದು ತಿಂಗಳ ಕಠಿಣ ಉಪವಾಸದ ನಂತರ ಈ ಹಬ್ಬವನ್ನು ಜಗತ್ತಿನೆಲ್ಲೆಡೆ ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ…..

ಅತ್ಯಂತ ತೀವ್ರ ಪ್ರೀತಿಯ ಮತ್ತು ಅಷ್ಟೇ ತೀವ್ರ ದ್ವೇಷ ಹಾಗೂ ಸೇಡಿನ, ಅತ್ಯಂತ ಮಾನವಿಯ ಸಂಬಂಧಗಳ ಗಾಢತೆ, ಹಾಗೆಯೇ ಅಮಾಯಕರನ್ನು ಕೊಲ್ಲುವ ಭಯೋತ್ಪಾದನೆಯ ಮನೋಭಾವ, ಪ್ರೇಮ ಪ್ರಣಯದ ಉತ್ಕರ್ಷ ಹಂತವನ್ನು ತಲುಪುವ, ಅದೇ ಸಮಯದಲ್ಲಿ ಹೆಣ್ಣನ್ನು ಸಾರ್ವತ್ರಿಕ ನೆಲೆಯಲ್ಲಿ ಭೋಗದ ವಸ್ತುವೆಂದು ಪರಿಗಣಿಸುವ, ಸಾಹಿತ್ಯಿಕವಾಗಿ ಅತ್ಯಂತ ಆಳವಾದ ಪ್ರೇಮ, ವಿರಹ ಮತ್ತು ನೈತಿಕ ಮೌಲ್ಯಗಳನ್ನು ಪ್ರತಿಪಾದಿಸುವ, ಜೊತೆಗೆ ಅರೇಬಿಯನ್ ನೈಟ್ಸ್ ರೀತಿಯ ಜಾನಪದೀಯ ಮತ್ತು ನೀತಿ ಬೋಧಕ ಕಥೆಗಳನ್ನು ಹೇಳುವ, ಧರ್ಮ, ದೇವರ ವಿಷಯದಲ್ಲಿ ಅತ್ಯಂತ ಗಾಢ, ತೀವ್ರ ನಂಬಿಕೆಯ, ಅದೇ ಸಂದರ್ಭದಲ್ಲಿ ಅದರ ರಕ್ಷಣೆಗಾಗಿ ಜೀವ ತ್ಯಾಗವಲ್ಲದೆ ಯಾವುದೇ ರೀತಿಯ ಹಿಂಸಾತ್ಮಕ ಹಂತಕ್ಕೂ ತಲುಪುವ, ಒಂದು ರೀತಿ ವೈರುಧ್ಯಗಳ ನಡವಳಿಕೆಯನ್ನು ಆ ಸಮುದಾಯದ ಜನರಲ್ಲಿ ಕಾಣಬಹುದು…

ಇದು ಇಸ್ಲಾಂ ಧರ್ಮದ ಆಧಾರವಾದ ಖುರಾನಿನ ವಿಶ್ಲೇಷಣೆಯಲ್ಲ. ಅದರ ಆಧಾರದ ಮೇಲೆ ಈಗ ಬದುಕುತ್ತಿರುವ ಮಧ್ಯಪ್ರಾಚ್ಯದ ಮುಸ್ಲಿಂ ಸಮುದಾಯದ ಜನರ ನಡುವಳಿಕೆಗಳ ಮೇಲೆ ಆಧರಿಸಿದ್ದು…..

ಈಗಿನ ಸಾಮಾಜಿಕ, ಧಾರ್ಮಿಕ, ರಾಜಕೀಯ ವ್ಯವಸ್ಥೆಯಲ್ಲಿ ಇಸ್ಲಾಂ ಧರ್ಮವನ್ನು, ಆ ಜನರ ನಡವಳಿಕೆಗಳನ್ನು ವಿಮರ್ಶಿಸುವುದು ಅಷ್ಟು ಸುಲಭವಲ್ಲ. ಅದೊಂದು ಅತ್ಯಂತ ಸೂಕ್ಷ್ಮ, ಭಾವನಾತ್ಮಕ ವಿಷಯವಾಗಿರುತ್ತದೆ. ನಾವೆಲ್ಲ ಗಮನಿಸಿದಂತೆ ಸಾಮಾಜಿಕ ಜಾಲತಾಣದ ಯಾವುದೋ ದ್ವೇಷದ ಕಿಡಿ ನುಡಿಗಳು ಸಾಕಷ್ಟು ಗಲಭೆಗಳನ್ನು ಉಂಟುಮಾಡುತ್ತಿದೆ. ಆದ್ದರಿಂದ ನಾಗರಿಕರಾದ ನಾವು ಹೆಚ್ಚು ಜವಾಬ್ದಾರಿಯಿಂದ ವ್ಯಾಖ್ಯಾನಗಳನ್ನು ನೀಡಬೇಕಾಗುತ್ತದೆ..

ಜಗತ್ತಿನಲ್ಲಿ ಅತಿ ಹೆಚ್ಚು ಹಿಂಸೆ ನಡೆದಿರುವುದು ಯುರೋಪಿನಲ್ಲಿ. ಕೇವಲ ಎರಡು ಮಹಾಯುದ್ಧಗಳು, ಫ್ರೆಂಚ್ ಕ್ರಾಂತಿ, ರಷ್ಯನ್ ಕ್ರಾಂತಿ ಮಾತ್ರವಲ್ಲ, ಅದಕ್ಕೆ ಮೊದಲೂ ಸಹ ಸಾಕಷ್ಟು ಹಿಂಸೆಗಳು ಯುರೋಪಿಯನ್ ದೇಶಗಳಲ್ಲಿ ನಡೆದಿದೆ. ಆದರೆ ಇತ್ತೀಚಿನ 70/80 ವರ್ಷಗಳಲ್ಲಿ ಯುರೋಪಿನ ದೇಶಗಳಲ್ಲಿ ಸಾಕಷ್ಟು ಶಾಂತಿ ನೆಲೆಸಿದೆ. ನಾಗರಿಕ ಸಂಸ್ಕೃತಿ ಹೆಚ್ಚು ಜೀವ ಪರವಾಗಿದೆ…

ಎರಡನೆಯ ಅತಿ ಹೆಚ್ಚು ಹಿಂಸೆ ನಡೆಯುತ್ತಿರುವುದು
ಮಧ್ಯಪ್ರಾಚ್ಯದ ದೇಶಗಳಲ್ಲಿ. ಇವು ಬಹುತೇಕ ಇಸ್ಲಾಮಿಕ್ ಆಡಳಿತ ದೇಶಗಳು. ಮೂರನೆಯದಾಗಿ ಆಫ್ರಿಕಾ ದೇಶದಲ್ಲಿ ಈಗಲೂ ಹಿಂಸೆ ಬೇರೆ ಬೇರೆ ಕಾರಣಗಳಿಂದ ತಾಂಡವವಾಡುತ್ತಿದೆ. ಅಮೆರಿಕಾ, ಚೀನಾ, ಜಪಾನ್, ಕೊರಿಯಾ, ಭಾರತ ಮುಂತಾದ ದೇಶಗಳ ಇತಿಹಾಸದಲ್ಲಿ ಸಾಕಷ್ಟು ಹಿಂಸೆ ಇದ್ದರೂ ಆಧುನಿಕ ಕಾಲದಲ್ಲಿ ಹಿಂಸೆ ಒಂದಷ್ಟು ನಿಯಂತ್ರಣದಲ್ಲಿದೆ. ಜಾತಿ ಸಂಘರ್ಷ, ವರ್ಣ ಸಂಘರ್ಷ, ವರ್ಗ ಸಂಘರ್ಷ ಈಗಲೂ ಇದೆ. ಆದರೆ ಅಷ್ಟೇ ಪ್ರಮಾಣದ ಪ್ರತಿಭಟನೆಗೂ ಅವಕಾಶಗಳಿವೆ….

ಮಧ್ಯಪ್ರಾಚ್ಯದ ದೇಶಗಳಾದ ಸಿರಿಯಾ, ಯಮನ್, ಇರಾನ್, ಇರಾಕ್, ಪ್ಯಾಲಿಸ್ಟೈನ್, ಲೇಬನಾನ್ ಮುಂತಾದ ದೇಶಗಳಲ್ಲಿ ಈ ಕ್ಷಣಕ್ಕೂ ಉಗ್ರ ರೀತಿಯ ಹಿಂಸೆ ತಾಂಡವಾಡುತ್ತಿದೆ. ಪಾಕಿಸ್ತಾನ, ಆಫ್ಘಾನಿಸ್ತಾನ ಸಹ ಈ ಹಿಂಸೆಯಿಂದ ಹೊರತಾಗಿಲ್ಲ. ಶಾಂತಿ ಸಹ ಬಾಳ್ವೆಯನ್ನು ಒತ್ತಿ ಹೇಳುವ ಕುರಾನ್ ಆಧಾರಿತ ಇಸ್ಲಾಂ ಧರ್ಮ ಅನುಯಾಯಿಗಳಲ್ಲಿ ಏಕೆ ಇಷ್ಟೊಂದು ಹಿಂಸೆ ಎಂಬ ಪ್ರಶ್ನೆ ಸಾರ್ವತ್ರಿಕವಾಗಿ ಏಳುತ್ತದೆ…

ಧರ್ಮದ ಗಾಢ ನಂಬಿಕೆ, ದೇವರ ಮೇಲಿನ ಅಪಾರ ಭಕ್ತಿ ಸಹಜವಾಗಿಯೇ ಒಂದು ಹಂತದ ನಂತರ ಹಿಂಸಾತ್ಮಕ ರೂಪ ಪಡೆಯುತ್ತದೆ. ತನ್ನ ಧರ್ಮವೇ ಶ್ರೇಷ್ಠ ಎಂಬ ಮೂಲಭೂತವಾದ ಹಿಂದುಗಳಲ್ಲೂ, ಕ್ರಿಶ್ಚಿಯನ್ನರಲ್ಲೂ, ಬೌದ್ಧರಲ್ಲೂ ನೆಲೆ ನಿಂತರೆ ಅದೂ ಸಹ ಮುಂದಿನ ಹಂತವಾಗಿ ಹಿಂಸೆಗೇ ದಾರಿ ಮಾಡಿಕೊಡುತ್ತದೆ. ಈಗಾಗಲೇ ಈ ಧರ್ಮಗಳಲ್ಲೂ ಸಹ ಆಗಿದೆ….

ಹಿಂಸೆ, ಕ್ರೌರ್ಯ, ದಬ್ಬಾಳಿಕೆ, ಹೆಣ್ಣಿನ ಮೇಲಿನ ಶೋಷಣೆ ಎಲ್ಲಾ ದೇಶ, ಧರ್ಮಗಳಲ್ಲೂ ಇದ್ದರೂ ಸಹ ಇತ್ತೀಚಿನ ವರ್ಷಗಳಲ್ಲಿ ಈ ಕ್ಷಣಕ್ಕೂ ಆಂತರಿಕ ಮತ್ತು ಬಾಹ್ಯ ಸಂಘರ್ಷಗಳು ಹೆಚ್ಚಾಗಿ ಕೇಳಿ ಬರುತ್ತಿರುವುದು ಈ ಇಸ್ಲಾಮಿಕ್ ದೇಶಗಳಲ್ಲಿ. ಅದು ಜಗತ್ತಿನ ಗಮನ ಸೆಳೆದಿದೆ. ಅದರಲ್ಲೂ ಆಫ್ಘಾನಿಸ್ತಾನದ ತಾಲಿಬಾನ್, ಸಿರಿಯಾದ ಐಸಿಸ್, ಪ್ಯಾಲಿಸ್ತೇನಿನ ಹಮಾಸ್, ಲೆಬನಾನಿನ ಹೌತಿ ಬಂಡುಕೋರರು, ಪಾಕಿಸ್ತಾನದ ಲಷ್ಕರ್ ಈ ತೊಯ್ಬ, ಹಿಜಬುಲ್ ಮುಜಾಾಯಿದೀನ್, ಆಲ್ ಖೈದಾ, ಆಫ್ರಿಕಾದ ಭೋಕೋ ಹರಾಮ್ ಮುಂತಾದ ಉಗ್ರಗಾಮಿ ಸಂಘಟನೆಗಳು ತಮ್ಮ ದೇಶದ, ಸಮುದಾಯ ಸ್ವಾತಂತ್ರ್ಯದ ನೆಲೆಯಲ್ಲಿ ಅಥವಾ ಹೆಸರಿನಲ್ಲಿ ಹೆಚ್ಚಾಗಿ ಭಯೋತ್ಪಾದಕ ಕೃತ್ಯಗಳನ್ನು ಮಾಡುತ್ತಿರುವುದರಿಂದ ಅವರ ಮೇಲೆ ಈ ರೀತಿ ಆರೋಪಗಳು ನಿರಂತರವಾಗಿ ಕೇಳಿ ಬರುತ್ತಿದೆ. ಶ್ರೀಲಂಕಾದಾಳ ಎಲ್ ಟಿ ಟಿ ಈ, ಅಸ್ಸಾಂ ನ ಬೋಡೋ, ನಾಗಾಲ್ಯಾಂಡ್ ಲಿಬ್ರೇಶನ್ ಆರ್ಮಿ, ಬಲುಚಿ ಲಿಬ್ರೇಶನ್ ಬ್ರಿಗೇಡ್, ಸಿಖ್ಖರ ಖಾಲಿಸ್ತಾನ್ ಹೀಗೆ ಇನ್ನೂ ಹಲವಾರು ಇತರ ಧರ್ಮಗಳ ಭಯೋತ್ಪಾದಕ ಸಂಘಟನೆಗಳು ಇವೆ. ಆದರೆ ಪಾಶ್ಚಾತ್ಯ ಮತ್ತು ಪೌರಾತ್ಯ ಮಾಧ್ಯಮಗಳು ಬಹುತೇಕ ಮುಸ್ಲಿಂ ಭಯೋತ್ಪಾದನೆಯನ್ನೇ ಹೆಚ್ಚಾಗಿ ಕೇಂದ್ರೀಕರಿಸಿವೆ….

ಮುಸ್ಲಿಂ ಸಮುದಾಯದ ಕೌಟುಂಬಿಕ ವ್ಯವಸ್ಥೆ, ಕರುಳು ಬಳ್ಳಿಯ ಸಂಬಂಧಗಳು, ಅಸಹಾಯಕರಿಗೆ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಸಂಘಟಿತ ಮತ್ತು ಒಗ್ಗೂಡುವಿಕೆಯಿಂದ ಜೀವಿಸುವುದು, ಸಹ ಭೋಜನ, ಮನುಷ್ಯನ ಹುಟ್ಟಿನಿಂದ ತಾರತಮ್ಯವಿಲ್ಲದಿರುವುದು, ಅನಿಷ್ಟ ಅಸ್ಪೃಶ್ಯತೆ ಇಲ್ಲದಿರುವುದು, ಕೆಲವು ಪಂಗಡಗಳು ಇದ್ದರು ಮೇಲು ಕೀಳಿನ ಜಾತಿ ವ್ಯವಸ್ಥೆ ಇಲ್ಲದಿರುವುದು, ಪ್ರೀತಿಗಾಗಿ ಜೀವ ಕೊಡುವುದು, ತನ್ನವರನ್ನು ರಕ್ಷಿಸಲು ತ್ಯಾಗ ಮಾಡುವುದು, ಸಾಮಾಜಿಕ ಮೌಲ್ಯಗಳ ರಕ್ಷಣೆಯಲ್ಲಿ ಮುಂದಿರುವುದು, ಕಪಟವಲ್ಲದ ನಿಷ್ಕಲ್ಮಶ ಮನಸ್ಥಿತಿಯನ್ನು ಹೊಂದಿರುವುದು, ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ದೃಢವಾಗಿರುವುದು ಇವೆಲ್ಲವೂ ಮುಸ್ಲಿಂ ಸಮುದಾಯದ ಕೆಲವು ಆದರ್ಶ ಮಾದರಿಗಳು….

ಆದರೆ ಇಂದು ಅದನ್ನು ನಿರ್ಲಕ್ಷಿಸಲಾಗಿದೆ. ಕೇವಲ ಹಿಂಸೆಗೆ ಮಾತ್ರ ಅವರನ್ನು ಉದಾಹರಣೆಗೆ ತೆಗೆದುಕೊಳ್ಳಲಾಗುತ್ತಿದೆ. ವಿಶ್ವದ ಎರಡನೇ ಅತಿ ದೊಡ್ಡ ಜನಸಂಖ್ಯೆಯನ್ನು ಈ ಅರ್ಥದಲ್ಲಿ ದ್ವೇಷಿಸುವುದು ವಿಶ್ವ ಶಾಂತಿಯ ದೃಷ್ಟಿಯಿಂದ ಒಳ್ಳೆಯದಲ್ಲ. ಅವರಿಗೆ ಹಾಕುವ ಬೆದರಿಕೆಗಳು, ಅವರನ್ನು ಅಪಾಯಕಾರಿಗಳಂತೆ ನೋಡುವುದು, ಅವರನ್ನು ದ್ವೇಷಿಸುವುದು, ಅವರ ಬಗ್ಗೆ ಪೂರ್ವಾಗ್ರಹ ಪೀಡಿತರಾಗುವುದು, ಎರಡನೇ ದರ್ಜೆಯ ಪ್ರಜೆಗಳಂತೆ ಕಾಣುವುದು ಖಂಡಿತ ಒಳ್ಳೆಯ ಲಕ್ಷಣಗಳಲ್ಲ…

ಒಂದಷ್ಟು ಹಿಂಸೆ ಇದೆ ನಿಜ, ಆದರೆ ಅದನ್ನು ಸರಿಪಡಿಸಲು ಒಂದಷ್ಟು ವಿಶ್ವದರ್ಜೆಯ ಸಾಮೂಹಿಕ ಪ್ರಯತ್ನಗಳ ಅವಶ್ಯಕತೆ ಇದೆ. ಗಾಂಧಿವಾದ ಈ ನೆಲೆಯಲ್ಲಿ ಅತಿ ಹೆಚ್ಚು ಪರಿಣಾಮ ಬೀರಬಹುದು. ನಾವು ಯಾರಲ್ಲಾದರೂ ಬದಲಾವಣೆ ನೀರಿಕ್ಷಿಸಬೇಕಾದರೆ ಮೊದಲು ಅವರಲ್ಲಿ ಪ್ರೀತಿ ತೋರಿಸಬೇಕು, ಒಪ್ಪಿ ಕೊಳ್ಳಬೇಕು, ಅಪ್ಪಿಕೊಳ್ಳಬೇಕು, ನಮ್ಮವರನ್ನಾಗಿ ಸ್ವೀಕರಿಸಬೇಕು, ವಿಶ್ವಾಸವಿರಿಸಬೇಕು, ತದನಂತರ ಅವರಲ್ಲಿನ ಲೋಪಗಳನ್ನು ತಿದ್ದುವ ನೈತಿಕ ಹಕ್ಕು ನಮಗೆ ದೊರೆಯುತ್ತದೆ. ದ್ವೇಷ, ಅಸೂಯಗಳಿಂದ ಹಿಂಸೆ ಹೊರತುಪಡಿಸಿ ಏನನ್ನು ಸಾಧಿಸಲು ಸಾಧ್ಯವಿಲ್ಲ…

ರಂಜಾನ್ ಹಬ್ಬದ ಈ ಶುಭ ಸಂದರ್ಭದಲ್ಲಿ ಈ ರೀತಿಯ ಒಳ್ಳೆಯ ಸಂದೇಶಗಳು ಭಾರತದಿಂದಲೇ, ಬುದ್ಧರ ಅಹಿಂಸೆಯ ನೆಲದಿಂದಲೇ, ಬಸವಣ್ಣನ ಸಕಲ ಜೀವಾತ್ಮಗಳಿಗೂ ಲೇಸನ್ನು ಬಯಸುವ ಚಿಂತನೆಗಳಿಂದಲೇ, ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟದ ವಿಶ್ವಮಾನವ ಸಂದೇಶದಿಂದಲೇ, ಇಡೀ ವಿಶ್ವದಲ್ಲೇ ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಸಮಾನತೆಗೆ ಮಾದರಿಯಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯದ ನೆಲೆಯಲ್ಲಿಯೇ, ಸ್ವಾಮಿ ವಿವೇಕಾನಂದರ ಸಾಂಸ್ಕೃತಿಕ ರಾಯಭಾರಿತನದಿಂದಲೇ ವಿಶ್ವ ಶಾಂತಿಗೆ ಒಂದು ಸಂದೇಶ ಹೊರಡಲಿ ಎಂದು ಆಶಿಸುತ್ತಾ…

ಎಲ್ಲರಿಗೂ ರಂಜಾನ್ ಹಬ್ಬದ ಶುಭಾಶಯಗಳು……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ.
9844013068……