ಪ್ರೌಢಶಾಲೆಗಳಲ್ಲಿ ಲೈಂಗಿಕ ಶಿಕ್ಷಣ……..
ವಿಜಯ ದರ್ಪಣ ನ್ಯೂಸ್…..
ಪ್ರೌಢಶಾಲೆಗಳಲ್ಲಿ ಲೈಂಗಿಕ ಶಿಕ್ಷಣ……..
ಕರ್ನಾಟಕದಲ್ಲಿ ಎಂಟರಿಂದ ಹನ್ನೆರಡನೆಯ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆಯೇ ? ಅದು ಅನಿವಾರ್ಯವೇ ? ಅಥವಾ ಅದನ್ನು ನಿರ್ಲಕ್ಷಿಸಬಹುದೇ ? ಸಂಪ್ರದಾಯವಾದಿಗಳಿಗೆ ಬೇಸರವಾಗಬಹುದೇ ?…..
ಇತ್ತೀಚೆಗೆ ಮಾನವೀಯ ಮೌಲ್ಯಗಳ ನೈತಿಕ ಶಿಕ್ಷಣ ಮತ್ತು ಲೈಂಗಿಕ ಶಿಕ್ಷಣ ಪಠ್ಯದಲ್ಲಿ ಕಡ್ಡಾಯಗೊಳಿಸುವ ಬಗ್ಗೆ ಚರ್ಚೆ, ಸಂವಾದಗಳು, ಪ್ರಕ್ರಿಯೆಗಳು ಪ್ರಾರಂಭವಾಗಿದೆ. ಮಾನವೀಯ ಮೌಲ್ಯಗಳ ಕಡ್ಡಾಯಗೊಳಿಸುವ ಬಗ್ಗೆ ಯಾರಿಗೂ ತಕರಾರಿಲ್ಲ. ಆದರೆ ಕೆಲವು ಸಂಪ್ರದಾಯವಾದಿಗಳಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಒಂದಷ್ಟು ಅಸಮಾಧಾನವಿದೆ….
ಭಾರತ ದೇಶದಲ್ಲಿ ಮೂಲಭೂತವಾಗಿ ಭಕ್ತಿ, ನಂಬಿಕೆ, ಮೌಢ್ಯ, ಭಯ, ಮಡಿವಂತಿಕೆಯ ಆಧಾರದ ಮೇಲೆಯೇ ಇಲ್ಲಿನ ಕೌಟುಂಬಿಕ ವ್ಯವಸ್ಥೆ ಮತ್ತು ಸಮಾಜ ರೂಪಗೊಂಡಿದೆ. ಜನರ ಮಾನಸಿಕ ಸ್ಥಿತಿಯೂ ಬಹುತೇಕ ಅದಕ್ಕೆ ಅನುಗುಣವಾಗಿಯೇ ಕೆಲಸ ಮಾಡುತ್ತದೆ…
ಆದರೆ 90 ರ ದಶಕದ ನಂತರ ಮುಕ್ತ ಮಾರುಕಟ್ಟೆಗೆ ಭಾರತ ಸಹಿ ಹಾಕಿದ ಮೇಲೆ ಇಡೀ ಜಗತ್ತು ಮತ್ತು ಅಲ್ಲಿನ ಎಲ್ಲಾ ವಸ್ತುಗಳು ವಿಚಾರಗಳು ಭಾರತವನ್ನು ಪ್ರವೇಶಿಸಿಯಾಗಿದೆ. ಅದಕ್ಕೆ ಪೂರಕವಾಗಿ ಸಮೂಹ ಸಂಪರ್ಕ ಕ್ರಾಂತಿಯು ಇಡೀ ಜಗತ್ತನ್ನೇ ಕಿರಿದಾಗಿಸಿದೆ. ಯಾವುದೇ ಇತಿಮಿತಿ ಇಲ್ಲದೆ ಎಲ್ಲಾ ಮಾಹಿತಿಯು ಎಲ್ಲರಿಗೂ ಲಿಂಗ ಭೇದವಿಲ್ಲದೆ, ವಯೋಮಾನದ ಭೇದವಿಲ್ಲದೆ ಸಿಗುತ್ತಿದೆ. ಇಂತಹ ಸಂದರ್ಭದಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಚರ್ಚೆ ಆರಂಭವಾಗಿದೆ…
ಪಾಶ್ಚಾತ್ಯ ಜಗತ್ತು ಲೈಂಗಿಕ ಶಿಕ್ಷಣವನ್ನು ಅಥವಾ ಲೈಂಗಿಕತೆಯನ್ನು ನೋಡುವ ರೀತಿ ನಮಗಿಂತ ಭಿನ್ನವಾಗಿದೆ. ಭಾರತದಲ್ಲಿ ಲೈಂಗಿಕತೆಯ ಬಗ್ಗೆ ಸಾಕಷ್ಟು ಮಡಿವಂತಿಕೆ ಇದೆ. ಅದು ಇತಿಹಾಸದಲ್ಲಿ ವಾತ್ಸಾಯನನ ” ಕಾಮಸೂತ್ರ ” ಲೈಂಗಿಕತೆಯ ವಿವಿಧ ಆಯಾಮಗಳನ್ನು, ಅದರ ಆರೋಗ್ಯಕರ ಮತ್ತು ತೃಪ್ತಿಕರ ವಿಧಾನವನ್ನು ವಿವರಿಸಿದೆ….
ಕೆಲವು ಚಿತ್ರಕಲೆ ಮತ್ತು ಶಿಲ್ಪಕಲೆಗಳಲ್ಲಿ ಲೈಂಗಿಕ ಕ್ರಿಯೆಯ ದೃಶ್ಯಗಳನ್ನು ಬಿಡಿಸಲಾಗಿದೆ. ಮುಖ್ಯವಾಗಿ ಕರ್ನಾಟಕದ ಮೇಲುಕೋಟೆಯ
ಶಿಲ್ಪಕಲೆಯಲ್ಲಿ ಬಹುತೇಕ ನೀಲಿ ಚಿತ್ರದಷ್ಟೇ ಲೈಂಗಿಕ ದೃಶ್ಯಗಳನ್ನು ಬಹಿರಂಗವಾಗಿಯೇ ಕೆತ್ತಲಾಗಿದೆ…
ಇದೀಗ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳು, ಸಿನಿಮಾ ಧಾರವಾಹಿಗಳಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಲೈಂಗಿಕತೆಯ ದೃಶ್ಯಗಳು ಸರ್ವೆ ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಲೈಂಗಿಕ ಶಿಕ್ಷಣದ ಅನಿವಾರ್ಯತೆ ಖಂಡಿತ ಇದೆ. ಏಕೆಂದರೆ ಈ ಎಲ್ಲಾ ಮಾಧ್ಯಮಗಳು ಪ್ರೌಢಾವಸ್ಥೆಯ ಯುವಕ ಯುವತಿಯರನ್ನು ಗ್ರಾಹಕರೆಂದು ಪರಿಗಣಿಸಿ ಅವರ ಹಾದಿ ತಪ್ಪಿಸುವ ಸಾಧ್ಯತೆ ಹೆಚ್ಚು. ಸಾರ್ವಜನಿಕ ಶೌಚಾಲಯದಲ್ಲಿ ಅಂಟಿಸಿರುವ ಜಾಹೀರಾತಗಳೇ ಇದಕ್ಕೆ ಸಾಕ್ಷಿ….
ಈಗಾಗಲೇ ಅನೇಕ ಘಟನೆಗಳಲ್ಲಿ ಪ್ರೌಢಾವಸ್ಥೆಯ ಯುವಕ ಯುವತಿಯರು ಅಪಾರ ಮಾನಸಿಕ ಒತ್ತಡಕ್ಕೆ ಸಿಲುಕಿ ದಾರಿ ತಪ್ಪಿರುವ, ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳು ಇದೆ. ಶಾಲೆಯ ಶಿಕ್ಷಣದಲ್ಲಿ ಅದನ್ನು ಕಡ್ಡಾಯಗೊಳಿಸಿದರೆ ಕನಿಷ್ಠ ಆ ಬಗ್ಗೆ ಶಿಕ್ಷಕರೊಂದಿಗೆ ಮುಕ್ತವಾಗಿ ಮತ್ತು ಅಧಿಕೃತವಾಗಿ ಚರ್ಚಿಸುವ ಸಾಧ್ಯತೆ ಇದೆ. ಆಗ ಮಡಿವಂತಿಕೆ ಕಡಿಮೆಯಾಗಿ ಈಗಿನ ಈ ಆಧುನಿಕ ಯುವಕ ಯುವತಿಯರಲ್ಲಿ ಒಂದಷ್ಟು ಒಳ್ಳೆಯ ಪರಿಣಾಮ ಬೀರಬಹುದು…
ಮೂವತ್ತು ವರ್ಷಗಳಲ್ಲಿ ಹಿಂದೆ ಇದ್ದ ಹೆಣ್ಣು ಗಂಡಿನ ನಡುವಿನ ಅಂತರ ಈಗ ಗಣನೀಯವಾಗಿ ಕಡಿಮೆಯಾಗಿದೆ. ಈಗ ಇದು ಶಿಕ್ಷಣದಲ್ಲಿ ಪ್ರಸ್ತಾಪವಾದರೆ ಅವರ ಕೀಳರಿಮೆ ಕಡಿಮೆಯಾಗಿ ಆತ್ಮವಿಶ್ವಾಸ ಹೆಚ್ಚಾಗಬಹುದು. ಅಂದಿನ ಅವಿಭಕ್ತ ಕುಟುಂಬಗಳು ಮಾಯವಾಗಿ ಚಿಕ್ಕ ಕುಟುಂಬಗಳು ಅಸ್ತಿತ್ವದಲ್ಲಿರುವಾಗ ಯುವಕ ಯುವತಿಯರಿಗೆ ಲೈಂಗಿಕ ತಿಳುವಳಿಕೆ ಸರಿಯಾಗಿ ಸಿಗುತ್ತಿಲ್ಲ…
ಲೈಂಗಿಕತೆ ಎಂದರೆ ಹೆಣ್ಣನ್ನು ಭೋಗದ ವಸ್ತುವೆಂದು ತಿಳಿದು ವರ್ತಿಸುವ ರೀತಿಯಲ್ಲ. ಲೈಂಗಿಕ ಶಿಕ್ಷಣವೆಂದರೆ ಮಿಲನ ಮಹೋತ್ಸವವದ ವಿವರಣೆಯಲ್ಲ. ಲೈಂಗಿಕ ಶಿಕ್ಷಣದಲ್ಲಿ ಪ್ರೌಢಾವಸ್ಥೆಯಲ್ಲಿ ಹೆಣ್ಣು ಮತ್ತು ಗಂಡಿನ ದೇಹ ಮತ್ತು ಮನಸ್ಸಿನಲಾಗುವ ಬದಲಾವಣೆಗಳು, ಒತ್ತಡ, ಆತಂಕ, ಅದರಿಂದಾಗಿ ಅವರ ವರ್ತನೆಗಳಲ್ಲಿ ಆಗುವ ಬದಲಾವಣೆ, ಗುಪ್ತಾಂಗಗಳ ನಿರ್ವಹಣೆಯಲ್ಲಿ ಕಾಪಾಡಬೇಕಾಗಿರುವ ಸ್ವಚ್ಛತೆ, ಮನೋ ನಿಯಂತ್ರಣ ಒಳಗೊಂಡಿರುತ್ತದೆ…
ಇಲ್ಲಿ ಒಂದು ಅಪಾಯವೆಂದರೆ ಈ ಶಿಕ್ಷಣ ನೀಡುವಾಗ ಆ ಶಿಕ್ಷಣದ ಪಠ್ಯಕ್ರಮ, ಬೋಧನಾ ಕ್ರಮ, ಬೋಧಿಸುವ ವ್ಯಕ್ತಿಯ ವ್ಯಕ್ತಿತ್ವ ಎಲ್ಲವೂ ಮುಖ್ಯವಾಗುತ್ತದೆ. ಅದನ್ನು ಅತ್ಯುತ್ಕೃಷ್ಟ ಮಟ್ಟದಲ್ಲಿರುವಂತೆ ಮೇಲ್ವಿಚಾರಣೆ ಮಾಡಬೇಕು. ಯಾರೋ ವಿಕೃತ ಕಾಮಿಯೋ ಅಥವಾ ಇನ್ಯಾರೋ ಮೂಲಭೂತವಾದಿಯ ಕೈಯಲ್ಲಿ ಪಠ್ಯ ಬೋಧಿಸಿದರೆ ಒಂದಷ್ಟು ತೊಂದರೆ ಮತ್ತು ಅಪಹಾಸ್ಯವಾಗಬಹುದು…
ಆದ್ದರಿಂದ ಲೈಂಗಿಕ ಶಿಕ್ಷಣವನ್ನು ಕ್ರಮಬದ್ಧವಾಗಿ, ಅತ್ಯಂತ ಆತ್ಮೀಯವಾಗಿ, ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಳವಡಿಸಿಕೊಂಡರೆ ಖಂಡಿತ ಉತ್ತಮ ಪರಿಣಾಮ ಬೀರುತ್ತದೆ. ಇದೇನು ಪಾಶ್ಚಾತ್ಯೀಕರಣವಲ್ಲ. ಇದು ಅತ್ಯಂತ ಸಹಜವಾದ ಶಿಕ್ಷಣ ಕ್ರಮದ ಒಂದು ಭಾಗ ಮಾತ್ರ. ಗೌಪ್ಯತೆ ಇಂದ ಮುಕ್ತತೆಗೆ ಸಹಜವಾಗಿ ಮತ್ತು ಪ್ರಬುದ್ಧವಾಗಿ ಪರಿವರ್ತನಗೊಳ್ಳುವ ಪ್ರಕ್ರಿಯೆ…
ನೈತಿಕ ಮೌಲ್ಯಗಳ ಶಿಕ್ಷಣ ಮತ್ತು ಲೈಂಗಿಕ ಶಿಕ್ಷಣ ಇಂದಿನ ಆಧುನಿಕ ಯುಗದಲ್ಲಿ ಉತ್ತಮ ಗುಣಮಟ್ಟದಲ್ಲಿ ಕಡ್ಡಾಯಗೊಳಿಸಿದರೆ ಉತ್ತಮ. ಉಳಿದದ್ದು ನಿಮ್ಮ ವಿವೇಚನೆಗೆ ಬಿಡುತ್ತಾ……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068…….