ಜಲ ಮೂಲ ರಕ್ಷಣೆ ಎಲ್ಲರ ಜವಾಬ್ದಾರಿ: ಜಿಲ್ಲಾಧಿಕಾರಿ ಎ. ಬಿ. ಬಸವರಾಜು

ವಿಜಯ ದರ್ಪಣ ನ್ಯೂಸ್…..

ಜಲ ಮೂಲ ರಕ್ಷಣೆ ಎಲ್ಲರ ಜವಾಬ್ದಾರಿ: ಜಿಲ್ಲಾಧಿಕಾರಿ ಎ. ಬಿ. ಬಸವರಾಜು

ದೊಡ್ಡಬಳ್ಳಾಪುರ ಮಾರ್ಚ್ 22: ವಿಶ್ವ ಜಲ ದಿನಾಚರಣೆ ಅಂಗವಾಗಿ ದೊಡ್ಡಬಳ್ಳಾಪುರ ನಗರಸಭೆ ನೇತೃತ್ವದಲ್ಲಿ ಇಲ್ಲಿನ ಡಿ ಕ್ರಾಸ್ ರಸ್ತೆ ಸಮೀಪದ ಗಗನಾರ್ಯ ಮಠದ ಅಯ್ಯಪಂತರ ಬಾವಿ ಕಲ್ಯಾಣಿ ಸ್ವಚ್ಛತೆ ಶನಿವಾರ ನಡೆಯಿತು.

ಬೆಳಿಗ್ಗೆ ಆರರಿಂದ ಎಂಟು ಗಂಟೆಯವರೆಗೆ ನಡೆದ ಸ್ವಚ್ಛತಾ ಕೆಲಸದಲ್ಲಿ ಪೌರಕಾರ್ಮಿಕರೊಂದಿಗೆ ಜಿಲ್ಲಾಧಿಕಾರಿ ಎ ಬಿ ಬಸವರಾಜು, ಶಾಸಕ ಧೀರಜ್ ಮುನಿರಾಜು, ತಹಶೀಲ್ದಾರ್ ವಿಭಾ ವಿದ್ಯಾರಾಥೋಡ್, ಪೌರಾಯುಕ್ತ ಕಾರ್ತಿಕೇಶ್ವರ, ನಗರಸಭೆ ಸದಸ್ಯರಾದಿಯಾಗಿ ವಿವಿಧ ಸಂಘಟನೆಗಳ ಕಾರ್ಯಕರ್ತರು. ಪರಿಸರಾಕ್ತರು ಭಾಗವಹಿಸಿ ಕಲ್ಯಾಣಿ ಸ್ವಚ್ಛತೆಗೆ ಕೈಜೋಡಿಸಿದರು.

ಸ್ವಚ್ಛತಾ ಕೆಲಸದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎ ಬಿ ಬಸವರಾಜು ಹಿಮನದಿ ಸಂರಕ್ಷಣೆ ಈ ವರ್ಷದ ವಿಶ್ವ ಜಲ ದಿನಾಚರಣೆ ಘೋಷ ವಾಕ್ಯವಾಗಿದೆ. ಜಿಲ್ಲಾ ಪಂಚಾಯಿತಿ ಸಣ್ಣ ನೀರಾವರಿ ವ್ಯಾಪ್ತಿ ಕೆರೆಗಳನ್ನು ಸಂರಕ್ಷಣೆ ಮಾಡುವಲ್ಲಿ ಜನರ ಸಹಕಾರ ಕೋರಲಾಗಿದೆ. ಕುಡಿಯುವ ನೀರಿಗೆ ಯಾವುದೇ ನದಿ ಮೂಲ ಇಲ್ಲದೆ ಇರುವ ಬಯಲುಸೀಮೆ ಪ್ರದೇಶಗಳಲ್ಲಿ ಕೆರೆ,ಕುಂಟೆ ಸೇರಿದಂತೆ ಸಾಂಪ್ರದಾಯಿಕ ನೀರಿನ ಮೂಲ ಕಾಪಾಡಿಕೊಳ್ಳಬೇಕಿರುವುದು ಎಲ್ಲರ ಹೊಣೆಯಾಗಿದೆ ಎಂದರು.

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ 98 ಕೆರೆಗಳು ,ಜಿಲ್ಲಾ ಪಂಚಾಯಿತಿ ಅಡಿ 612 ಕೆರೆಗಳು ಸೇರಿ ಒಟ್ಟು 70 ಕೆರೆಗಳು ಇವೆ. 87 ಕಲ್ಯಾಣಿ 146, ಕುಂಟೆ 82 ,ಗೋಕಟ್ಟೆ 36 ಕಟ್ಟೆಗಳು ಸೇರಿ ಒಟ್ಟು 356 ಸಾಂಪ್ರದಾಯಿಕ ನೀರು ಸಂಗ್ರಹಣ ಮೂಲಗಳಿವೆ. ಜಿಲ್ಲೆಯಲ್ಲಿ ಹೆಚ್ಚಿನ ಕೆರೆಗಳು ಮತ್ತು ಸಾಂಪ್ರದಾಯಿಕ ನೀರು ಸಂಗ್ರಹಣ ವ್ಯವಸ್ಥೆಗಳು ಇರುವುದರಿಂದ ಸಾಮಾನ್ಯವಾಗಿ ತಂಪು ವಾತಾವರಣ ಇರಬೇಕಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನೀರಿನ ಸಂಗ್ರಹಣ ವ್ಯವಸ್ಥೆಗಳು ವಿವಿಧ ಕಾರಣಗಳಿಂದಾಗಿ ಕ್ಷೀಣಿಸುತ್ತಿರುವುದರಿಂದ ಜಿಲ್ಲೆಯಲ್ಲಿ ತಾಪಮಾನ ಹೆಚ್ಚುತ್ತಿರುವುದು  ಗಮನಿಸಬಹುದಾಗಿದೆ .

ಈ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ನಗರಾಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪ್ರತಿ ತಿಂಗಳು ನಾಲ್ಕನೇ ಶನಿವಾರ ಜಿಲ್ಲೆಯಲ್ಲಿರುವ ಕೆರೆ, ಕಲ್ಯಾಣಿ, ಕುಂಟೆಗಳನ್ನು ಪುನಶ್ಚೇತನ  ಗೊಳಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದರು