ನಡೆದಷ್ಟು ದಾರಿ ಪಡೆದಷ್ಟು ಅನುಭವ

ನಾವು ಸಂಪಾದಿಸಿದ ಆಸ್ತಿ, ಅಂತಸ್ತು, ಸಂಪತ್ತು, ಒಡವೆ, ವಸ್ತç, ಇವೆಲ್ಲಕ್ಕೂ ಮಿಗಿಲಾದುದು ನಾವು ಸಂಪಾದಿಸಿದ ಅನುಭವ. ಬದುಕಿನಲ್ಲಿ ಎಲ್ಲಕ್ಕಿಂತ ದೊಡ್ಡದು ಅನುಭವ. ಅನುಭವದಿಂದ ಪಾಠ ಕಲಿಯಬೇಕು. ಎಂಬೆಲ್ಲ ಮಾತುಗಳು ಮೇಲಿಂದ ಮೇಲೆ ಕಿವಿಗೆ ಬೀಳುತ್ತಲೇ ಇರುತ್ತವೆ. ಏನೇ ಹೇಳಿ ಯಾವ ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಕಲಿಸದ ಪಾಠವನ್ನು ಅನುಭವದ ಬದುಕು ಮನುಷ್ಯನಿಗೆ ಕಲಿಸುತ್ತದೆ. ಇನ್ನೊಂದು ವಿಶಿಷ್ಟ ವಿಷಯವೆಂದರೆ, ಯುವಜನರು ಹೇಳುವ ಮಾತು ‘ಅನುಭವವಿದ್ದವರಿಗೆ ಮಾತ್ರ ಕೆಲಸ ನೀಡಲಾಗುವುದು.’ ಯಾರೂ ಉದ್ಯೋಗ ನೀಡದಿದ್ದರೆ ಕೆಲಸದ ಅನುಭವ ಆಗುವುದಾದರೂ ಹೇಗೆ? ಎಂಬ ಪ್ರಶ್ನೆ ಹೌದು, ಅವರ ಮಾತು ಸಹ ನಿಜವಲ್ಲವೇ?

1001022871

ಕೆಲವು ಚಟುವಟಿಕೆಗಳಲ್ಲಿ ನೇರವಾಗಿ ಭಾಗವಹಿಸುವಿಕೆಯಿಂದ ಉಂಟಾಗುವ ಜ್ಞಾನ ಅಥವಾ ಕೌಶಲ್ಯದ ಸಂಗ್ರಹಣೆಯನ್ನು ಅನುಭವವೆಂದು ಕಲೆಯಲಾಗುತ್ತದೆ. ಅನುಭವವು ಬೇರೆ ಬೇರೆ ಪ್ರಕಾರಗಳಲ್ಲಿ ದೊರೆಯುತ್ತದೆ. ಓದು, ಬರಹ, ಇಲ್ಲವೇ ಒಂದು ಕಾರ್ಯದಲ್ಲಿ ಒಳಗೊಳ್ಳುವಿಕೆಯ ಮೂಲಕ ಗಳಿಸಿದ ವಿಷಯದ ಜ್ಞಾನ. ಕೆಲವೊಂದು ಕಾರ್ಯಗಳನ್ನು ನಾವೇ ಸ್ವತಃ ಮಾಡುವ ಮೂಲಕ ಪಡೆದುಕೊಳ್ಳುವ ಪ್ರಾಯೋಗಿಕ ಜ್ಞಾನ. ಒಂದೇ ಕೆಲಸವನ್ನು ನಿರಂತರವಾಗಿ ಮಾಡುವುದರಿಂದ ಅದರಲ್ಲಿ ಹೊಸ ಹೊಳಹುಗಳು ಕಂಡು ಬರುವ ಅನುಭವ. ಒಂದು ನಿರ್ಧಿಷ್ಟ ಕ್ಷೇತ್ರದಲ್ಲಿ ಗಣನೀಯವಾಗಿ ಕಾರ್ಯನಿರ್ವಹಿಸಿದಾಗ ಸಾಕಷ್ಟು ಅನುಭವವನ್ನು ಕಲೆ ಹಾಕುತ್ತೇವೆ. ಅದು ನುರಿತ, ಅನುಭವಿ, ತಜ್ಞ ಎಂದು ಕರೆಯುವಂತೆ ಮಾಡುತ್ತದೆ. ಅದು ಅನುಭವಾತ್ಮಕ ಜ್ಞಾನ ಎಂದು ಕರೆಸಿಕೊಳ್ಳುತ್ತದೆ.
ಮಸಾಲೆ, ಖಾರದ, ಸಿಹಿಯಾದ, ಸ್ವಾದಭರಿತ, ಖಾದ್ಯಗಳನ್ನು ಸವಿದಾಗ ಉಂಟಾಗುವ ರುಚಿಯ ಅನುಭವವು ಒಂದು ವಿಶಿಷ್ಟ ಅನುಭವವಲ್ಲವೇ? ಅನುಭವವನ್ನು ಸಾಮಾನ್ಯವಾಗಿ ಗ್ರಹಿಕೆಯೊಂದಿಗೆ ಗುರುತಿಸಲಾಗುತ್ತದೆ. ಅದರೊಂದಿಗೆ ಸಂವೇದನಾ ಪ್ರಜ್ಞೆಯನ್ನು ಮಾತ್ರ ಅನುಭವವೆಂದು ಪರಿಗಣಿಸಲಾಗುತ್ತದೆ. ಆಲೋಚನೆ, ಕಲ್ಪನೆಯಂತಹ ಇತರ ರೀತಿಯ ಪ್ರಜ್ಞಾಪೂರ್ವಕ ಘಟನೆಗಳೊಂದಿಗೆ ವ್ಯತಿರಿಕ್ತಗೊಳಿಸಲಾಗುತ್ತದೆ. ಸ್ವಲ್ಪ ವಿಭಿನ್ನ ಅರ್ಥದಲ್ಲಿ ಅನುಭವವು ಪ್ರಜ್ಞಾಪೂರ್ವಕ ಘಟನೆಗಳನ್ನು ಉಲ್ಲೇಖಿಸುವುದಿಲ್ಲ. ಆದರೆ ಅವು ಉತ್ಪಾದಿಸುವ ಪ್ರಾಯೋಗಿಕ ಜ್ಞಾನವನ್ನು ಸೂಚಿಸುತ್ತದೆ. ಅನುಭವವನ್ನು ನಾಲ್ಕಾರು ದಿನಗಳಲ್ಲಿ ಸಂಪಾದನೆ ಮಾಡಲಾಗುವುದಿಲ್ಲ. ಜೀವನದ ಪ್ರತಿ ಕ್ಷಣದಲ್ಲಿ, ಯಾವುದೇ ಸಮಯದ ಅವಧಿಯಲ್ಲಿ ಸಂಗ್ರಹವಾಗುತ್ತದೆ.
ಹಣ್ಣಿನಲ್ಲಿ ಸಿಹಿ ರಸ, ಮಣ್ಣಿನಲ್ಲಿ ಧಾನ್ಯ ಬೆಳೆಯುವ ಶಕ್ತಿ, ನೀರಿನಲ್ಲಿಯ ತಂಪು, ಹೂವಿನಲ್ಲಿಯ ಕಂಪು ಇವೆಲ್ಲ ಸುಂದರ ನೈಸರ್ಗಿಕ ಅನುಭವದ ಗಣಿಯಲ್ಲದೇ ಮತ್ತೇನು? ಇದರೊಂದಿಗೆ ಜನರ ನಡೆ, ನುಡಿ, ನೋಟ, ಪ್ರೀತಿ, ಕರುಣೆ, ದ್ವೇಷ, ಬೇರೆಯವರೊಂದಿಗೆ ಚಕಮಕಿಯ ಬೆಂಕಿ, ಇವೆಲ್ಲವೂ ಸಾಮಾಜಿಕ ಅನುಭವದ ಪಾಠಗಳನ್ನು ಕಲಿಸದೇ ಬಿಡುವುದಿಲ್ಲ. ಪತ್ರೆ, ಪುಷ್ಪ, ಧೂಪ, ದೀಪ ಗಂಧ , ಅಕ್ಷತೆ ಇವುಗಳು ನೀಡುವ ಭಕ್ತಿಪೂರ್ವಕ ಅನುಭವ. ಯಾವಾಗ ನಾವು ಬಂದುದೆಲ್ಲವನ್ನು ಬೇಸರಿಸದೆ, ಗೊಣಗದೆ, ಶುದ್ಧ ಮನಸ್ಸಿನಿಂದ ಸ್ವೀಕರಿಸುತ್ತೇವೆಯೋ ಆಗ ಖುಷಿ ನಮ್ಮ ತೆಕ್ಕೆಗೆ ಬೀಳುವ ಅನುಭವ ಖಂಡಿತ ಆಗುತ್ತದೆ.
ಹೊರಗಡೆ ಪ್ರೀತಿ, ಒಳಗಡೆ ದ್ವೇಷ, ಹೊರಗಡೆ ನಿಯತ್ತು, ಒಳಗಡೆ ನಂಬಿಕೆ ದ್ರೋಹ ಇದ್ದರೆ ಆ ಅನುಭವ ದೇವರಿಗೆ ಪ್ರೀತಿ. ಕಂಡವರ ಕಷ್ಟ ಕಂಡು ಕನಿಕರಗೊಳ್ಳುವವರಿಗೆ ಕಷ್ಟಗಳಿಲ್ಲವೆಂದಲ್ಲ. ಕಷ್ಟಗಳೊಂದಿಗೆ ಕದನಕ್ಕಿಳಿಯುವ ಅನುಭವ ಸಾಧಿಸಿದ್ದಾರೆ ಎಂದರ್ಥ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸವಾಲಾಗಿ ಸ್ಚೀಕರಿಸಬೇಕು. ಗೆದ್ದರೆ ಮುಂದೆ ಸಾಗಲು ಸಾಧ್ಯ. ಸೋತರೆ ಅನುಭವದ ಪಾಠ ಕಲಿಯಲು ಸಾಧ್ಯ. ಬೆಂಕಿಯನ್ನು ಬೆಂಕಿಯಿಂದ ನಂದಿಸಲು ಸಾಧ್ಯವಿಲ್ಲ. ನೀರು ಮಾತ್ರ ಅದನ್ನು ಆರಿಸಲು ಸಾಧ್ಯ ಎಂಬುದು ಅನುಭವ ವೇದ್ಯ. ಯೋಗ್ಯ ಗುರಿಯೊಂದರ ಹಿಂದೆ ಸತತವಾಗಿ ತೊಡಗಿಕೊಂಡರೆ ಸಿಗುವ ಅನುಭವ ಅಪ್ರತಿಮ. ಒಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಸೋಲಿನ ಅನುಭವದ ಗಣಿಯೇ ಇರುತ್ತದೆ.
ಇತಿಹಾಸ ಹೇಳುತ್ತದೆ ಕಳೆದು ಹೋದ ದಿನ ಸುಖವಾಗಿತ್ತು. ವಿಜ್ಞಾನ ಹೇಳುತ್ತದೆ ನಾಳೆ ಬರುವ ದಿನ ಸುಖವಾಗಿರುತ್ತದೆ. ಆದರೆ ಅನುಭವ ಹೇಳುತ್ತದೆ. ನಿರ್ಮಲ ಮನಸ್ಸು ಮತ್ತು ಸ್ವಚ್ಛ ಹೃದಯವಿದ್ದರೆ ಪ್ರತಿ ಕ್ಷಣವೂ ಆನಂದಮಯ. ಎಷ್ಟು ಅನುಭವ ಪಡೆದಿದ್ದೇವೆ ಎನ್ನುವುದಕ್ಕಿಂತ ಅದನ್ನು ನಮ್ಮ ಬೆಳವಣಿಗೆಗೆ ಎಷ್ಟು ಉಪಯೋಗಿಸುತ್ತಿದ್ದೇವೆ ಎಂಬುದು ಮುಖ್ಯವಾಗುತ್ತದೆ. ನಡೆದಷ್ಟು ದಾರಿ ಇದೆ. ಪಡೆದಷ್ಟು ಅನುಭವವಿದೆ. ನಗುವ, ನಾಲ್ಕು ಹನಿ ಕಣ್ಣೀರಿಡುವ, ಮನಸ್ಸು ಬುದ್ಧಿಯಲ್ಲಿ ಏಳುವ ಭಾವನೆಗಳ ಅಲೆಗಳನ್ನು ಅಲುಗಿಸದಂತೆ ಅನುಭವ ಗಟ್ಟಿಗೊಳ್ಳಲಿ. ಅನುಭವದ ಹೊಳೆಯು ನೆರೆಯಂತೆ ಹರಿಯಲಿ.ಅಂತರಂಗವನ್ನು ಕದಡದಂತೆ ದೃಢಗೊಳಿಸಲಿ. ಅನುಭವಗಳಿಗೆ ಕೊನೆಯೇ ಇಲ್ಲ. ಕೊನೆಯುಸಿರಿನವರೆಗೂ ಜೊತೆಗೆ ಸಾಗುವ ಅನುಭವಗಳನ್ನು ಸರಿಯಾಗಿ ಬಳಸಿದರೆ ಬೆಳೆಸಿದರೆ ಬದುಕು ಭವ್ಯ ದಿವ್ಯ.

ಲೇಖನ
ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ