ವಿದ್ಯಾರ್ಥಿಗಳಲ್ಲಿ ಉದ್ಯಮ ಕೌಶಲ್ಯ ಅಭಿವೃದ್ಧಿ ಅಗತ್ಯ

ವಿಜಯ ದರ್ಪಣ ನ್ಯೂಸ್…..

ವಿದ್ಯಾರ್ಥಿಗಳಲ್ಲಿ ಉದ್ಯಮ ಕೌಶಲ್ಯ ಅಭಿವೃದ್ಧಿ ಅಗತ್ಯ

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ನಂತರ ನಿರುದ್ಯೋಗಿಗಳಾಗಿ ಕುಟುಂಬ ಮತ್ತು ಸಮಾಜಕ್ಕೆ ಹೊರೆಯಾಗುವ ಬದಲು ಉದ್ಯಮ ಶೀಲತಾಭಿವೃದ್ಧಿಯ ಕೌಶಲಗಳನ್ನು ವೃದ್ಧಿಸಿಕೊಂಡು ಸ್ವಾವಲಂಬಿಗಳಾಗಬೇಕೆಂದು ಉದ್ಯಮ ಶೀಲತಾಭಿವೃದ್ಧಿ ಕೇಂದ್ರದ (ಸಿಡಾಕ್) ಸಂಪನ್ಮೂಲ ವ್ಯಕ್ತಿ ಕೆ. ಶಶಿಕುಮಾರ್ ಹೇಳಿದರು.

ಅವರು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಧಾರವಾಡದ ಸಿಡಾಕ್ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮೂರು ದಿನಗಳ ಉದ್ಯಮಶೀಲತಾಭಿವೃದ್ಧಿ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಪದವಿ ವ್ಯಾಸಂಗದ ನಂತರ ವಿಫುಲ ಅವಕಾಶಗಳಿದ್ದು ಸರ್ಕಾರವೂ ಸಹ ಹಲವಾರು ಸೌಕರ್ಯ ಮತ್ತು ಸವಲತ್ತುಗಳನ್ನು ಪೂರೈಸುತ್ತಿರುವುದನ್ನು ಅರಿತು ವಿದ್ಯಾರ್ಥಿಗಳು ಸ್ವಾವಲಂಬನೆ ಸಾದಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಸದಾಶಿವ ರಾಮಚಂದ್ರ ಗೌಡ ಮಾತನಾಡಿ ಕಾಲೇಜು ಮಟ್ಟದ ಕಲಿಕಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಉದ್ಯಮಗಳ ಕುರಿತಾದ ಕೌಶಲ್ಯಾಭಿವೃದ್ಧಿಯ ಅರಿವು ಅಗತ್ಯವಿದ್ದು, ಇಂತಹ ಕಾರ್ಯಕ್ರಮಗಳ ಆಯೋಜನೆಯಿಂದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಐಕ್ಯೂಎಸಿ ಸಂಯೋಜಕರಾದ ಪ್ರೊ. ಗಂಗಾಧರಯ್ಯ ಬಿ.ಆರ್. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ

ಉದ್ಘಾಟಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಶ್ರೀನಿವಾಸ, ಸಿಡಾಕ್‌ನ ಯಶಸ್ವಿ ಉದ್ಯಮದಾರ ಅರವಿಂದಕುಮಾರ ದೀಪು, ಸಿಡಾಕ್ ತರಬೇತುದಾರ ಪವನ್‌ ಕುಮಾರ ಕೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಲಿಖಿತಾ ವರ್ಷಿಣಿ ನಿರೂಪಿಸಿದರು, ಪವನಕುಮಾರ ಸ್ವಾಗತಿಸಿದರು, ಪ್ರೊ. ಸತೀಶ ಜೋಗ್ ವಂದಿಸಿದರು. ಬೆಂಗಳೂರಿನ ಶಶಿಕುಮಾರ ಕೆ. ರಾಮನಗರದ ಚಂದ್ರ ಅರಸ್ ಹಾಗೂ ಹರೀಶ್ ಸಂಪನ್ಮೂಲ ವ್ಯಕ್ತಿಗಳಾಗಿ ಮೂರು

ದಿನಗಳವರೆಗೆ ಒಟ್ಟು 12 ಗೋಷ್ಠಿಗಳನ್ನು ನಿರ್ವಹಿಸಿದರು.