ಸಾಹಿತ್ಯ ಪರಂಪರೆಯನ್ನು ನೆಲಮೂಲ ಸಂಸ್ಕೃತಿಯ ವಕ್ತಾರ ತತ್ವಪದಕಾರರು ಪುನರ್‌ ನಿರ್ಮಿಸಿಕೊಟ್ಟರು: ಕಾ.ತ. ಚಿಕ್ಕಣ್ಣ.

ವಿಜಯ ದರ್ಪಣ ನ್ಯೂಸ್…..
ಸಾಹಿತ್ಯ ಪರಂಪರೆಯನ್ನು ನೆಲಮೂಲ ಸಂಸ್ಕೃತಿಯ ವಕ್ತಾರರಾದ ತತ್ವಪದಕಾರರು ಪುನರ್‌ನಿರ್ಮಿಸಿಕೊಟ್ಟರು: ಕಾ.ತ.ಚಿಕ್ಕಣ್ಣ.
ತತ್ವಪದ ಪರಂಪರೆ ಕನ್ನಡ ನಾಡಿನ ದಾರ್ಶನಿಕ ಪರಂಪರೆಯಲ್ಲಿ ಬಹುಮುಖ್ಯ ಧಾರೆಯಾಗಿದೆ. ಹದಿನೆಂಟು ಹತ್ತೊಂಬತ್ತನೇ ಶತಮಾನದಲ್ಲಿ ಶೂನ್ಯಾವಸ್ಥೆ ತಲುಪಿದ್ದ ಸಾಹಿತ್ಯ ಪರಂಪರೆಯನ್ನು ನೆಲಮೂಲ ಸಂಸ್ಕೃತಿಯ ವಕ್ತಾರರಾದ ತತ್ವಪದಕಾರರು ಪುನರ್‌ನಿರ್ಮಿಸಿಕೊಟ್ಟರು. ಅನಕ್ಷರಸ್ಥರಾಗಿದ್ದರೂ ಅವರ ಆಶಯ ಸಮಾಜ ಮುಖಿಯಾಗಿತ್ತು ಎಂದು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ನುಡಿದರು.
ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಕೃಷ್ಣಾಪುರದೊಡ್ಡಿಯ ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್-ಸಹಯೋಗದಲ್ಲಿ ಪ್ರಸ್ತುತ ಈ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡುತ್ತಿರುವ ಯುವ ಸಂಶೋಧನಾರ್ಥಿಗಳಿಗೆ ೨೦೨೫ರ ಮಾರ್ಚ್ ೮ ಮತ್ತು ೯ರಂದು ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದಲ್ಲಿ ಹಮ್ಮಿಕೊಂಡಿದ್ದ ಸಂಶೋಧನಾ ಕಮ್ಮಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಧರ್ಮ, ಜಾತಿ, ವರ್ಗ, ವರ್ಣ ಹಾಗೂ ಲಿಂಗಾತೀತವಾಗಿ ಗುರುಪರಂಪರೆಗೆ ಬದ್ಧವಾಗಿ ಸಾಮಾಜಿಕ ಒಳಿತಿಗಾಗಿ ಬದುಕಿಹೋದ ಅಪ್ಪಟ ಮನುಷ್ಯರು ತತ್ವಪದಕಾರರ ಅಧ್ಯಯನ ನಿರ್ಲಕ್ಷö್ಯಕ್ಕೆ ಒಳಗಾಗಿರುವ ಈ ಸಂದರ್ಭದಲ್ಲಿ ನಾವು ಮಾಡಬೇಕಾದ ಕೆಲಸವೆಂದರೆ ಅದರ ಪುನರ್ ನಿರ್ಮಾಣ ಮತ್ತು ಪ್ರಚಾರ. ಭಕ್ತಿ ಸಾಹಿತ್ಯ ಎಂದರೆ ದೇವರನ್ನು ಗುಡಿಯಲ್ಲೋ ಚರ್ಚಲ್ಲೋ ಮಸೀದಿಗಳಲ್ಲೋ ಕಾಣುವುದಲ್ಲ; ಅದರ ಬದಲಾಗಿ ತತ್ವಪದಕಾರರಲ್ಲಿ ನೆಲೆಯೂರಿದ್ದ ಮಾನವೀಯ ಮೌಲ್ಯಗಳ ಪುನರ್ ಮೌಲೀಕರಣ ಆಗಬೇಕಾಗಿದೆ ಎಂದರು.
ಕನಕ ಅಧ್ಯಯನ ಕೇಂದ್ರದ ಸದಸ್ಯ ಜಾನಪದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಗುರುವಿಲ್ಲದೆ ಗತಿಯಿಲ್ಲ ಎಂದು ನಂಬಿದ ತತ್ವಪದಕಾರರು ಭಾರತೀಯ ಸಂಸ್ಕೃತಿಯಲ್ಲಿ ಗುರುಪರಂಪರೆ, ಬಹುತ್ವದ ಭಾವನೆ, ಬಹುಸಂಸ್ಕೃತಿ ಪರಂಪರೆ, ಬಹುಗುರು ಪರಂಪರೆಗಳನ್ನು ಬಿತ್ತಿದರು. ಅಜೀವಿಕ, ಗೋಸಲ, ಸಿದ್ಧ, ಸೂಫಿ ಹೀಗೆ ಅವೈದಿಕ ಸಂಸ್ಕೃತಿಯ ನೆಲೆಗಳ ವಕ್ತಾರರಾಗಿ ದುಡಿದವರು ಎಂದು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡ ಡಾ. ಮಹೇಶ್ ಹರವೆ ಮಾತನಾಡಿ ೧೭,೧೮,೧೯ನೇ ಶತಮಾನದ ನಿಜಗುಣಶಿವಯೋಗಿ ಅವರನ್ನೂ ಸೇರಿದಂತೆ ಅವರ ವಿಚಾರಧಾರೆಗಳನ್ನು ಹಂಚಿದರು. ತತ್ವರಹಿತವಾದದ್ದೇ ತತ್ವ, ಮಾತಿಗೂ ಕೂಡ ಬಿಡುಗಡೆ ಬೇಕಾಗಿದೆ, ಇದು ಮಾತನಾಡುವುದಲ್ಲ; ಕಲಿಯುವಂತಹದ್ದಲ್ಲ; ಕಳೆಯುವಂತಹದ್ದು, ಅಂತಿಮವಾಗಿ ನಾವಾಗಿ ಉಳಿಯುವುದು. ಗುರು ಸತ್ಯ, ಅರಿವು, ಅಹಿಂಸೆ, ಅಸಂಗ್ರಹ ತತ್ವಗಳನ್ನು ಪ್ರತಿಪಾದಿಸುವ ಈ ಪರಂಪರೆಯ ಆಶಯಗಳನ್ನು ಅಳವಡಿಸಿಕೊಳ್ಳಬೇಕಾದ ಅವಶ್ಯಕತೆಯನ್ನು ವಿವರಿಸಿ ಹೇಳಿದರು.
ಕಮ್ಮಟದ ನಿರ್ದೇಶಕಿ ಮೀನಾಕ್ಷಿಬಾಳಿ ಎರಡು ದಿನಗಳಲ್ಲಿ ಕಲಿಯಬೇಕಾದ್ದು, ಚರ್ಚಿಸಬೇಕಾದ ವಿಚಾರಗಳನ್ನು ಕುರಿತು ವಿವರವಾಗಿಯೇ ತಿಳಿಸಿದರು.
ಕೆ.ಎಸ್.ಎಂ. ಟ್ರಸ್ಟ್ ಅಧ್ಯಕ್ಷ ಡಾ. ಎಂ. ಬೈರೇಗೌಡ ಮಾತನಾಡಿ, ಮುದ್ದುಶ್ರೀ ದಿಬ್ಬ ಕೇವಲ ಸಾಂಸ್ಕೃತಿಕ, ಸಾಹಿತ್ಯಕ, ರಂಗಚಟುವಟಿಕೆಗಳ ಅಧ್ಯಯನ ಕೇಂದ್ರವಾಗಿ ರೂಪುಗೊಂಡು ಸರ್ಕಾರಿ ಅಕಾಡೆಮಿ ಪ್ರಾಧಿಕಾರಗಳ ಸಹಯೋಗದಲ್ಲಿ ಹತ್ತಾರು ಕಮ್ಮಟಗಳು ನಡೆಯುವ ಮೂಲಕ ಟ್ರಸ್ಟ್ನ ಆಶಯಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಇದು ನಮ್ಮ ಟ್ರಸ್ಟ್ನ ಹೆಮ್ಮೆ, ಈ ಬಗೆಯ ಕಾರ್ಯಕ್ರಮಗಳಿಗೆ ಸದಾ ತೆರೆದ ಬಾಗಿಲಾಗಿದೆ ಎಂದರು.
ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಟಿ ನಾಗೇಶ್ ಉಪಸ್ಥಿತರಿದ್ದರು. ರಾಜ್ಯದ ಹಲವು ಜಿಲ್ಲೆಗಳಿಂದ ಅಗಮಿಸಿದ ನಲವತ್ತಕ್ಕೂ ಹೆಚ್ಚು ಕಮ್ಮಟಾರ್ಥಿಗಳು ಪಾಲ್ಗೊಂಡಿದ್ದಾರೆ.