ಭರವಸೆ ಬೇಕಿದೆ ಭವ್ಯ ಭವಿಷ್ಯತ್ತಿಗೆ

ನಾನಿಂದು ಇರುವ ಸ್ಥಿತಿಗೆ ಏನು ಕಾರಣ? ಎಂಬುದಕ್ಕೆ ಉತ್ತರ ಹುಡುಕಲು ಪ್ರಯತ್ನಿಸಿದರೆ ನನ್ನ ಬದುಕಿನಲ್ಲಿ ನಿನ್ನೆ ಮೊನ್ನೆ ಅಷ್ಟೇ ಅಲ್ಲ ಈ ಹಿಂದೆ ನಡೆದ ಘಟನೆಗಳು ಎನ್ನುವುದು ಮೊದಲ ಉತ್ತರವಾಗಿ ಸಿಗುತ್ತದೆ. ಜೀವನ ಹೀಗೆಯೇ ರೂಪುಗೊಳ್ಳುತ್ತದೆಯೋ ಇಲ್ಲವೋ ಅಂತ ಹೇಳುವುದು ಒಂದು ರೀತಿಯ ಕ್ಲೀಷೆ ಬದುಕಿನಲ್ಲಿ ಸಂಭವಿಸುವುದೆಲ್ಲ ಯಾವುದೇ ಕಾರಣದಿಂದ ಘಟಿಸಿರುತ್ತದೆ. ಈ ಮಾತನ್ನು ಪುಷ್ಟೀಕರಿಸುವಂತೆ ಅರಿಸ್ಟಾಟಲ್ ಹೀಗೆ ಹೇಳಿದ್ದಾನೆ. ‘ಗೊತ್ತು ಗುರಿಯಿಲ್ಲದೇ ಯಾವುದೇ ಘಟನೆ ನಡೆಯುವುದಿಲ್ಲ. ಏನೇ ನಡೆಯಲಿ ಕಾರಣ ಮತ್ತು ಪರಿಣಾಮ ಪ್ರಕ್ರಿಯೆಯಲ್ಲಿ ಒಂದಕ್ಕೊಂದು ಸಂಬಂಧ ಇದ್ದೇ ಇರುತ್ತದೆ. ನಮಗೆ ಕಾರಣಗಳು ತಿಳಿಯದಿದ್ದರೂ ಕೂಡ ಅದು ಅಸ್ತಿತ್ವದಲ್ಲಿ ಇದ್ದೇ ಇರುತ್ತದೆ.’ ಪರಿಣಾಮವನ್ನು ಬದಲಾಯಿಸಬೇಕೆಂದರೆ ಕಾರಣಗಳನ್ನು ಬದಲಾಯಿಸಬೇಕು.

ಏನೂ ಇಲ್ಲ
ಬದುಕನ್ನು ಬದಲಿಸಬೇಕೆಂದರೆ ಎಲ್ಲವೂ ನಮ್ಮ ನಿಯಂತ್ರಣದಲ್ಲಿಲ್ಲ ಅನ್ನೋದು ನಿರಾಶಾವಾದಿಗಳ ಅಂಬೋಣ. ಹೌದು, ನಾವು ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ. ಹಲವಾರು ಸಂಗತಿಗಳು ನಮ್ಮ ನಿಯಂತ್ರಣದ ಮೇರೆ ಮೀರಿವೆ. ಆದರೆ ನಮ್ಮ ಕೈಯಲ್ಲಿರುವ ಕೆಲವನ್ನಾದರೂ ನಿಯಂತ್ರಿಸಬಹುದು. ನಿಜ. ಆದರೆ ನಿಯಂತ್ರಿಸಬಲ್ಲೆ ಎಂಬುದು ನಮ್ಮ ಭರವಸೆಯ ಮೇಲೆ ಅವಲಂಬಿತವಾಗಿದೆ. ಬದುಕಿನಲ್ಲಿ ಭರವಸೆ ಇಲ್ಲದೇ ಇದ್ದರೆ ಚಿಕ್ಕ ಕೆಲಸವು ಸಾಧ್ಯವಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಭರವಸೆಯಿಲ್ಲದೇ ಏನೂ ಇಲ್ಲ.
ಭರವಸೆ ಎಂದರೆ? ಭರವಸೆ ಒಂದು ಭಾವನೆ ಮತ್ತು ಆಲೋಚನಾ ವಿಧಾನ ಎರಡೂ ಆಗಿದೆ. ಅಗತ್ಯವಿದ್ದಾಗ ಅದನ್ನು ಗುರುತಿಸುತ್ತೆವೆ. ಆದರೆ ಅದನ್ನು ವ್ಯಾಖ್ಯಾನಿಸುವುದು ಮತ್ತು ವಿವರಿಸುವುದು ಕಷ್ಟ. ಭರವಸೆಯು ಒಂದು ಆಶಾವಾದಿ ಮಾನಸಿಕ ಸ್ಥಿತಿ. ಅದರಿಂದ ನಾವು ಬಯಸುವ ನಿರ್ಧಿಷ್ಟ ಫಲಿತಾಂಶವನ್ನು ಸಾಧಿಸಲಾಗುತ್ತದೆ ಎಂಬ ನಿರೀಕ್ಷೆ ಎಂದರ್ಥವಲ್ಲ. ಅದೊಂದು ಸ್ಪೂರ್ತಿಯ ಕಿಡಿ, ಒಂದು ದೊಡ್ಡ ಶಕ್ತಿ. ಕಷ್ಟವೆನಿಸಿದಾಗ ಅಭ್ಯಾಸ ಮಾಡಬಹುದಾದ ಮತ್ತು ಕ್ರಮೇಣವಾಗಿ ಬೆಳೆಸಬಹುದಾದ ವಿಷಯ. ಭರವಸೆ ಎಂದರೆ ಎಲ್ಲರಿಗೂ ಬೇರೆ ಬೇರೆ ಅರ್ಥಗಳಿರಬಹುದು. ಆಶಾವಾದ ಎಂದರೆ ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸುವುದು. ಗಮನಹರಿಸಲು ಏನನ್ನಾದರೂ ನೀಡುವುದು. ಅಥವಾ ಭವಿಷ್ಯದಲ್ಲಿ ಎದುರು ನೋಡುವಂತಹದ್ದು ಆಗಿರಬಹುದು. ಎಲ್ಲವೂ ಈಗಿನಿಂದಲೇ ಅದ್ಭುತವಾಗುತ್ತದೆ ಎಂದು ನೀವು ಭಾವಿಸುತ್ತೀರಿ ಎಂಬುದು ಇದರರ್ಥವಲ್ಲ. ಆದರೆ ವಿಷಯಗಳು ಉತ್ತಮಗೊಳ್ಳಬಹುದು ಎಂಬ ನಂಬಿಕೆಯನ್ನು ನಿಮ್ಮಲ್ಲಿ ಬೆಳೆಸಿಕೊಳ್ಳುವುದು. ಭರವಸೆಯೆಂದರೆ ಎಲ್ಲವೂ ಸರಿಯಾಗುತ್ತದೆ ಎಂಬ ನಂಬಿಕೆಯಲ್ಲ. ಭರವಸೆಯೆಂದರೆ ಹೆಚ್ಚು ಸಕ್ರಿಯ.

ಇಲ್ಲದಿರುವಾಗ
ಯಾವುದೇ ಭರವಸೆ ಇಲ್ಲದಿರುವಾಗ ಏನ್ನಾದರೂ ಮಾಡುವುದನ್ನು ಮುಂದುವರಿಸುವುದು ಸತ್ತ ಕುದುರೆಯನ್ನು ಹೊಡೆದಂತೆ ಸರಿ. ಭರವಸೆ ಎಂದರೆ ಯಶಸ್ಸಿನ ಅವಕಾಶದಲ್ಲಿ ನಂಬಿಕೆ. ನೀವು ಯಾವುದಾದರೂ ಕಾಯಿಲೆಗೆ ಚಿಕಿತ್ಸೆ ಸಿಗುತ್ತದೆ ಎಂಬ ಭರವಸೆಯನ್ನು ತ್ಯಜಿಸಿ ಬದಲಾಗಿ ನೋವನ್ನು ಸ್ವೀಕರಿಸಿದ್ದರೆ ನೀವು ಜೀವನವನ್ನು ತ್ಯಜಿಸಿಲ್ಲ ಬದಲಿಗೆ ಚಿಕಿತ್ಸೆಗಾಗಿ ಹುಡುಕುವುದನ್ನು ಬಿಟ್ಟುಬಿಟ್ಟಿದ್ದೀರಿ. ಸಂತೋಷದ ಭರವಸೆ ಇಲ್ಲದೆ ಭಯ ಹುಟ್ಟಿಸುವಂತೆ ಕಾಣಿಸಿಕೊಂಡಾಗ ಸಂತೋಷ ನೀಡುವ ಸ್ಥಳಕ್ಕೆ ಹೋಗಲು ಪ್ರಯತ್ನಿಸಬೇಕು. ಮುಂಜಾನೆ ಅಥವಾ ಸಂಜೆ ವಿಹಾರ ಹೋಗುವುದು ಸಹ ಸಹಾಯ ಮಾಡುತ್ತದೆ. ನೀವು ಅತಿಯಾದ ಭಯವನ್ನು ಪ್ರಾರಂಭಿಸುವುದರೊಳಗೆ ಹೊರಗೆ ಹೋಗುವುದು ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ
ಕಷ್ಟಗಳು, ಸಮಸ್ಯೆಗಳು, ಸವಾಲುಗಳು ಇನ್ನಿಲ್ಲದಂತೆ ಮುತ್ತಿಗೆ ಹಾಕಿದಾಗ ಬದುಕು ರೂಪಿಸುವ ಭರವಸೆಯನ್ನು ಹೇಗೆ ಕಾಪಿಟ್ಟುಕೊಳ್ಳುವುದು ಎನ್ನುವುದಕ್ಕೆ ಇಲ್ಲವೆ ಕೆಲ ಸಲಹೆಗಳು.

1001009772

ಬಲವಾದ ಹಂಬಲ
ಭರವಸೆಯೆಂಬುದು ಪಡೆದುಕೊಳ್ಳುವ ಇಚ್ಛೆ. ಈಗ ಅಸ್ತಿತ್ವದಲ್ಲಿಲ್ಲದ ಆದರೆ ಭವಿಷ್ಯದಲ್ಲಿ ಅಸ್ತಿತ್ವದಲ್ಲಿರಬಹುದಾದ ಯಾವುದನ್ನಾದರೂ ಹುಡುಕುವ ಹಂಬಲ. ನೀವು ಅದನ್ನು ಸಂಪೂರ್ಣವಾಗಿ ಕಳೆದುಕೊಂಡರೆ ತೊಂದರೆಗೆ ಸಿಲುಕಬಹುದು. ಯಾವುದೇ ದೊಡ್ಡ ಭರವಸೆಗಳಿಲ್ಲದೆ ಅನೇಕ ವಿಷಯಗಳಲ್ಲಿ ಸಂತೋಷವನ್ನು ಕಾಣಬಹುದು. ಆದರೆ ಅದು ಸಾಕಷ್ಟು ದುರ್ಬಲವಾಗಿದೆ. ಕಷ್ಟದ ಸಮಯವನ್ನು ದಾಟಲು ಭರಸೆಯು ಬಲವಾದ ಪ್ರೇರಕವಾಗಿದೆ. ಬಲವಾದ ಹಂಬಲ ಹೋಂದಿದ್ದರೆ ವಿಪತ್ತಿನ ಮುಖದಲ್ಲಿ ಅಪಾಯ ಅರಿತಿದ್ದರೂ ಅಚಲ ಭರವಸೆಯು ಕಲ್ಪನೆಯನ್ನು ಬಿಂಬಿಸುವ ಆಸಕ್ತಿದಾಯಕ ಮಾರ್ಗವಾಗುತ್ತದೆ. ಭರವಸೆಯು ದುಃಖಕ್ಕೆ ಕಾರಣವಾಗಬಹುದು. ಆದಾಗ್ಯೂ ಕಠಿಣ ಪರಿಸ್ಥಿತಿಯಲ್ಲಿ ಭರವಸೆಯನ್ನು ಕಾಪಾಡಿಕೊಳ್ಳುವುದು ಅಂತಿಮವಾಗಿ ಯಶಸ್ಸಿನ ಕಡೆಗೆ ಕೊಂಡೊಯ್ಯುವ ಪ್ರೇರಕ ಶಕ್ತಿಯಾಗಿದೆ. ಭರವಸೆಯು ಬುದ್ಧಿವಂತಿಕೆಯೊಂದಿಗೆ ಸೇರಿಕೊಂಡರೆ ಶಕ್ತಿಯ ಪ್ರಬಲ ಮೂಲವಾಗುತ್ತದೆ. ಹಂಬಲಿಸಿದ್ದು ಹತ್ತಿರಕ್ಕೆ ಬರುತ್ತದೆ.

ವಿರಾಮ
ನೀವು ಕಠಿಣ ಸಮಯವನ್ನು ಎದುರಿಸುತ್ತಿರುವಾಗ ಅತಿಯಾದ ಒತ್ತಡಕ್ಕೆ ಒಳಗಾಗಬಹುದು. ವಿರಾಮ ತೆಗೆದುಕೊಂಡು ಯೋಚಿಸುವುದು ಯೋಜಿಸುವುದು ಆಲೋಚಿಸುವುದು ಉತ್ತಮ. ಇದು ಸಕಾರಾತ್ಮಕ ಕ್ಷಣಗಳನ್ನು ಸ್ವೀಕರಿಸಲು ಸಹಾಯ ಮಾಡುತ್ತದೆ. ದಿನದಲ್ಲಿ ಒಳ್ಳೆಯದು ನಡೆದಾಗ ಆ ಕ್ಷಣಗಳನ್ನು ಅನುಭವಿಸಲು ಸಮಯ ನೀಡಿ. ಪ್ರಸ್ತುತ ಕ್ಷಣದಲ್ಲಿ ಉಳಿಯಲು ಮತ್ತು ಬಲವಾದ ನೆನಪುಗಳ ಬುತ್ತಿಯನ್ನು ಕಟ್ಟಲು ನಡು ನಡುವೆ ವಿರಾಮ ಸಹಕಾರಿ.

1001009782

ನಂಬಿಕೆ
ಹತಾಶೆಯು ವ್ಯಕ್ತಿಗೆ ಗುರಿಯತ್ತ ಸಾಗುವುದನ್ನು ಬಿಟ್ಟುಕೊಡಲು ಕಾರಣವಾಗಬಹುದು. ಒಂದೊಮ್ಮೆ ಸ್ವೀಕಾರಕ್ಕೂ ಕಾರಣವಾಗಬಹುದು. ಅನೇಕ ಜನರು ಭರವಸೆ ಕಳೆದುಕೊಳ್ಳುವುದನ್ನು ಬಿಟ್ಟುಕೊಡುವಿಕೆಯೊಂದಿಗೆ ಗೊಂದಲಗೊಳಿಸುತ್ತಾರೆ. ಆದ್ದರಿಂದ ‘ನೀವು ಎಂದಿಗೂ ಭರವಸೆ ಕಳೆದುಕೊಳ್ಳಬಾರದು.’ ಎಂದು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಡಿಕ್ಕಿ ಹೊಡೆಯುವ ಭರವಸೆಯು ಹತಾಶೆಯ ಮೂಲವಾಗಿದೆ. ಭವಿಷ್ಯದ ಬಗ್ಗೆ ಯಾವಾಗಲೂ ಅವಾಸ್ತವಿಕ ನಿರೀಕ್ಷೆಗಳನ್ನು ಹೊಂದಿರುವುದು ಆರೋಗ್ಯಕರವಲ್ಲ. ವಾಸ್ತವವಾಗಿ ಹತಾಶೆಯನ್ನು ಮಾನಸಿಕ ಅಸ್ವಸ್ಥತೆಯ ಲಕ್ಷಣವಾಗಿ ನೋಡಲಾಗುತ್ತದೆ. ಎಲ್ಲ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಹತಾಶೆಗೆ ಅಂಟಿಕೊಳ್ಳುವುದು ಖಂಡಿತವಾಗಿಯೂ ಹತಾಶೆಗೆ ಕಾರಣವಾಗುವುದು. ಭಾವನಾತ್ಮಕವಾಗಿ ಅನುಭವಿಸಿದರೆ ಅದು ನಂಬಿಕೆಯಾಗಿ ಅಸ್ತಿತ್ವಕ್ಕೆ ಬರುತ್ತದೆ. ಆದ್ದರಿಂದ ಹತಾಶೆ ದೂರ ತಳ್ಳಿ ನಂಬಿಕೆಯನ್ನು ಬೇರೂರಿಸುವುದು ಉಚಿತ.

ಮನಸ್ಥಿತಿ
‘ಡು ನಾಟ್ ಲೆಟ್ ಎನಿ ಸಿಚುವೆಶನ್ ಮೇಕ್ ಯೂ ಲೂಸ್ ಹೋಪ್ ಇನ್ ಲೈಫ್, ಸಿಚುವೇಶನ್ಸ್ ಆರ್ ಟೆಂಪರರಿ.’ ಕೆಟ್ಟದ್ದು ಸಂಭವಿಸುತ್ತದೆ ಮತ್ತು ದುರದೃಷ್ಟವಶಾತ್ ನನ್ನ ಜೀವನದಲ್ಲಿ ಕೆಟ್ಟದ್ದಾಗಿದೆ. ನೀವು ಕೆಲವೊಮ್ಮೆ ಬಿಟ್ಟು ಕೊಡಬೇಕಾಗುತ್ತದೆ. ನೀವು ದುಃಖಿತರಾಗಿರಬೇಕು, ಬೇಸರಗೊಂಡಿರಬೇಕು ಸ್ಪೂರ್ತಿಯಿಲ್ಲದವರಾಗಿರಬೇಕು. ನಾನು ನಿಷ್ಪçಯೋಜಕ ಎಂಬ ಭಾವ ಮೂಡಿರಬೇಕು. ನಿಜಕ್ಕೂ ಅಡೆತಡೆಗಳಂತೆ ಕಾಣಿಸುವ ಇವು ನಿಮ್ಮನ್ನು ಹಿಂದಕ್ಕೆ ಎಳೆಯುತ್ತವೆ ಅನಿಸುತ್ತದೆ. ಆದರೂ ವಾಸ್ತವದಲ್ಲಿ ಇವೆಲ್ಲ ನಿಮ್ಮನ್ನು ಮತ್ತೊಮ್ಮೆ ಮೇಲಕ್ಕೆ ಬರಲು ಸಹಾಯ ಮಾಡುವವು. ಕಣಿವೆ ಇಲ್ಲ ಗುಹೆ ಇಲ್ಲದಿದ್ದರೆ ಬೆಟ್ಟವನ್ನು ಕಂಡು ಹಿಡಿಯಲಾಗುವುದಿಲ್ಲ. ಕೆಲವೊಮ್ಮೆ ನಾವು ಕೆಟ್ಟ ಸ್ಥಳದ ಮೂಲಕ ಹೋಗಬೇಕಾಗುತ್ತದೆ. ಮನಸ್ಸು ಅಂತಿಮವಾಗಿ ಅದರ ಬಗ್ಗೆ ಏನಾದರೂ ಮಾಡಲು ಬಯಸುತ್ತದೆ. ಆ ಹಂತದಲ್ಲಿ ನೀವು ಬಿಟ್ಟು ಕೊಡಲು ಸಿದ್ಧರಿಲ್ಲ ಎನ್ನುವ ಮನಸ್ಥಿತಿ ಇದ್ದರೆ ಬದುಕಿನಲ್ಲಿ ಮತ್ತೆ ಭರವಸೆ ಮೂಡುತ್ತದೆ.

ಸಕಾರಾತ್ಮಕತೆ
ಇನ್ನೇನೂ ಆಗಲು ಸಾಧ್ಯವಿಲ್ಲ ಎನ್ನುವ ಸವಾಲಿನ ಕಷ್ಟದ ಸಮಯದಲ್ಲಿ ನಿಮ್ಮ ಸಾಮರ್ಥ್ಯ ಮತ್ತು ನೀವು ಕೃತಜ್ಞರಾಗಿರುವ ವಿಷಯಗಳನ್ನು ನೆನಪಿಸಿಕೊಳ್ಳಬೇಕು. ಸಣ್ಣ ಸಣ್ಣ ಗೆಲುವುಗಳ ಮೇಲೆ ಕೇಂದ್ರೀಕರಿಸಬೇಕು. ಮತ್ತು ಸಾಧಿಸಬಹುದಾದ ಗುರಿಗಳನ್ನು ಹೊಂದಿಸಬೇಕು. ‘ಯುವರ್ ಬ್ರೇನ್ ಆಪರೇಟ್ಸ್ ಮೋರ್ ಎಫೆಕ್ಟಿವ್ಲಿ ಆ್ಯಂಡ್ ಯೂ ಫೀಲ್ ಬೆಟರ್, ಇಫ್ ಯೂ ಹ್ಯಾವ್ ಹೋಪ್ ವ್ಹೆನ್ ಫೆಸ್ಡ್ ವಿಥ್ ಅಡ್ವರಸಿಟಿ ಆ್ಯಂಡ್ ಅನ್ಸರ್ಟಿನಿಟಿ.’ ನಿಮ್ಮನ್ನು ಪ್ರೋತ್ಸಾಹಿಸುವ, ಬೆಂಬಲಿಸುವ ಜನರೊಂದಿಗೆ ಇರಿ. ನಿಮಗೆ ಸಂತೋಷವನ್ನು ತರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಸುಧಾರಣೆಗಾಗಿ ಶ್ರಮಿಸುವಾಗ ನೀವು ಹೊಂದಿರುವುದನ್ನು ಸ್ವೀಕರಿಸಲು ಪ್ರಯತ್ನಿಸಿ. ನಮ್ಮಲ್ಲಿರುವುದನ್ನು ಪ್ರಶಂಸಿಸುವದರಿಂದ ಸಕಾರಾತ್ಮಕತೆಯನ್ನು ಸೇರಿಸಬಹುದು. ಭವ್ಯ ಭವಿಷ್ಯತ್ತಿಗೆ ಭರವಸೆಯನ್ನು ಹೆಚ್ಚಿಸಬಹುದು.

ಕೊನೆ ಹನಿ
ಗುರಿಯ ದಾರಿಯಲ್ಲಿ ಎಷ್ಟೇ ದೊಡ್ಡ ಅಡೆತಡೆಗಳು ಎದುರಾದರೂ ಚೇತರಿಸಿಕೊಳ್ಳಲು ನೆರವಾಗುವ ಸಾಮರ್ಥ್ಯವೇ ಭರವಸೆ. ಒಂದರ ಹಿಂದೊಂದು ಸೋಲು, ನಿರಾಸೆ, ಮಣ್ಣು ಮುಕ್ಕಿಸುತ್ತಿದ್ದರೂ, ಆತ್ಮವಿಶ್ವಾಸ ಪಾತಾಳಕ್ಕೆ ಇಳದಿದ್ದರೂ ಮತ್ತೆ ಪುಟಿದೇಳುವೆ ಗೆಲ್ಲುವೆನೆಂಬುದೇ ಭರವಸೆ ಅಲ್ಲವೇ? ಭರವಸೆ ಬರೀ ಭಾವನೆಯಲ್ಲ ಅದು ಗೆಲುವು ತರಲು ಕಾದು ಕುಳಿತಿರುವ ಅಕ್ಷಯ ಬಲದ ಸಂಕೇತ. ಬದುಕಿನ ಹಲವು ಮಗ್ಗಲುಗಳಿಗೆ ತೆರೆದುಕೊಳ್ಳಲು ಸಹಕಾರಿಯಾದ ಸುಮಧುರ ಭಾವನೆಯಾದ ಭರವಸೆಯನ್ನು ಸದಾ ನಮ್ಮೊಂದಿಗೆ ಇರಿಸಿಕೊಳ್ಳೋಣವಲ್ಲವೇ..?

ಲೇಖನ – ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨