ಯಾವುದು ಮುಖ್ಯ

ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಆಂಗ್ಲ ಭಾಷಾ ಉಪನ್ಯಾಸಕರು
ಸ ಪ ಪೂ ಕಾಲೇಜು
ಹಿರೇಬಾಗೇವಾಡಿ – ೫೯೧೧೦೯
ತಾ:ಜಿ: ಬೆಳಗಾವಿ
ಮೊ: ೯೪೪೯೨೩೪೧೪೨

ನಮ್ಮಲ್ಲಿ ಎಷ್ಟೆಲ್ಲ ಸಂಪತ್ತಿದೆ ಸೌಲಭ್ಯಗಳಿವೆ ಎನ್ನುವದು ಮುಖ್ಯವಲ್ಲ. ಬದಲಾಗಿ ನಾವು ಅವುಗಳನ್ನು ಹೇಗೆ ಬಳಸಿಕೊಳ್ಳುತ್ತಿದ್ದೇವೆ ಎನ್ನುವದು ಮುಖ್ಯ. ಇರುವದೆಲ್ಲವನ್ನೂ ಸದ್ವಿನಿಯೊಗಪಡಿಸಿಕೊಳ್ಳುತ್ತಿದ್ದೇವೆಯೇ? ದುಡಿದ ಹಣ ಸತ್ಪಾತ್ರಕ್ಕೆ ಸಲ್ಲತ್ತಿದೆಯೇ? ಎಂಬ ಅಂಶ ಪ್ರಮುಖವಾದುದು. ಬಳಕೆಯ ವಿಧಾನ ಅತ್ಯುತ್ತಮ ರೀತಿಯಲ್ಲಿ ಇರುವದೆ? ಅಥವಾ ಬದಲಾಯಿಸಬೇಕೆ? ಎಂಬ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳಬೇಕಿದೆ. ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ಸಣ್ಣದೆನಿಸುವ ಸೂಜಿಯೂ ಅತ್ಯದ್ಭುತ ಉಪಯೋಗಕ್ಕೆ ಬರುತ್ತದೆ. ಕಸವೂ ರಸವಾಗಿ ನಮ್ಮ ಮನ ಅರಳಿಸುತ್ತದೆ.

1001007035

ಇತ್ತೀಚಿಗೆ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಬಿದ್ದು ವಸ್ತುಗಳ ಬೆನ್ನು ಹತ್ತಿ ಮನುಷ್ಯನ ಪ್ರೀತಿಯನ್ನು ಗೌಣವಾಗಿ ಕಾಣುವ ಅಧಃಪತನ ಸ್ಥಿತಿ ತಲುಪುತ್ತಿದ್ದೇವೆ. ಮನುಷ್ಯರನ್ನು ಪ್ರೀತಿಸಿ ವಸ್ತುಗಳನ್ನು ಉಪಯೋಗಿಸುವದು ಮುಖ್ಯವೇ ಹೊರತು ವಸ್ತುಗಳನ್ನು ಪ್ರೀತಿಸಿ ಮನುಷ್ಯರನ್ನು ಉಪಯೋಗಿಸುವದಲ್ಲ ಎಂಬ ವಿಷಯ ಅರಿತು ನಡೆಯುವದು ಇಂದಿನ ಅನಿವಾರ್ಯವಾಗಿದೆ.

ಮರ ಎಷ್ಟೇ ಎತ್ತರವಾಗಿ ಬೆಳದಿದ್ದರೂ ಅತೀ ಚಿಕ್ಕದಾದ ಕೊಡಲಿ ಅದರ ಕಾಂಡವನ್ನು ಕತ್ತರಿಸಬಲ್ಲುದು. ಎನ್ನುವದು ನೆನಪಿನಲ್ಲಿರಲಿ. ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಅಹಂಕಾರವೆಂಬುದು ನಮ್ಮನ್ನು ಸಂಪೂರ್ಣ ಕೆಳ ಮಟ್ಟಕ್ಕೆ ತಳ್ಳಿಬಿಡುತ್ತದೆ. ಮರವು ತನ್ನನ್ನು ಕಡಿಯುವವನಿಗೂ ನೆರಳು ನೀಡುತ್ತದೆ. ಹಾಗೆಯೇ ನಾವು ನಮ್ಮ ಶತ್ರುವಿನೊಂದಿಗೂ ಸೌಜನ್ಯತೆಯಿಂದ ನಡೆದುಕೊಳ್ಳೋಣ. ಅವನಲ್ಲಿಯ ಸದ್ಗುಣಗಳನ್ನು ಆದರಿಸಿ ಅಳವಡಿಸಿಕೊಳ್ಳೋಣ. ಗುಲಾಬಿ ಗಿಡದಲ್ಲಿ ಮುಳ್ಳುಗಳಿವೆ ಎಂದು ದೂರಬಹುದು. ಅಥವಾ ಮುಳ್ಳಿನ ಪೊದೆಯಲ್ಲಿ ಗುಲಾಬಿ ಅರಳಿದೆ ಎಂದು ಸಂತೋಷಿಸಬಹುದು. ಮನಸ್ಸು ಸಕಾರಾತ್ಮಕವಾಗಿ ಮತ್ತು ನಕಾರಾತ್ಮಕವಾಗಿ ಚಿಂತಿಸುತ್ತದೆ. ನೀವೇ ನಿಮ್ಮ ಅತ್ಯುತ್ತಮ ಸ್ನೇಹಿತರು ನೀವೇ ನಿಮ್ಮ ಅತೀ ಕೆಟ್ಟ ಶತ್ರು. ಸಕಾರಾತ್ಮಕ ಚಿಂತನೆಯು ಪರಿಣಾಮಕಾರಿ ಫಲಿತಾಂಶ ನೀಡುತ್ತದೆ.
ವಸ್ತುಗಳಿರುವದು ನಮ್ಮ ಅನುಕೂಲಕ್ಕೆ ಉಪಯೋಗಕ್ಕೆ ಮನರಂಜನೆಗೆ ಮಾತ್ರ. ನಮ್ಮ ಹೃದಯವಂತಿಕೆ ಮತ್ತು ನಡೆದುಕೊಳ್ಳುವ ರೀತಿ. ನಮ್ಮ ಒಡೆತನದ ಎಲ್ಲಕ್ಕಿಂತಲೂ ಮುಖ್ಯವಾದವರು ಅಮೂಲ್ಯವಾದವರು ಪ್ರಮುಖವಾದವರು ನಮ್ಮ ಸಹಜೀವಿಗಳು ಪಶು ಪಕ್ಷಿ ಪ್ರಾಣಿ ಕ್ರಿಮಿ ಕೀಟಗಳಿಗೂ ಈ ಭೂಮಿಯ ಮೇಲೆ ಬದುಕುವ ಹಕ್ಕಿದೆ ಎನ್ನುವದನ್ನು ತಿಳಿದುಕೊಂಡು ನಡೆದುಕೊಳ್ಳಬೇಕಿದೆ. ವಸ್ತುಗಳು ನಮಗೆಷ್ಟು ಐಷಾರಾಮಿ ಜೀವನ ನೀಡುತ್ತಿದ್ದರೂ ಅದಕ್ಕಿಂತಲೂ ಮಾನವೀಯ ಸಂಬಂಧಗಳೇ ಹೆಚ್ಚು ಮುಖ್ಯ ಆತ್ಮೀಯರು ಆಪ್ತರು ನಮ್ಮ ಕಂಬನಿಗೆ ಮಿಡಿಯುತ್ತಾರೆ. ಪನ್ನೀರಿಗೆ ಹರ್ಷಿಸುತ್ತಾರೆ. ವಸ್ತುಗಳ ವ್ಯಾಮೋಹ ತೊರೆದು ಬದುಕಿನಲ್ಲಿ ದೊರೆತಿರುವ ಎಲ್ಲದಕ್ಕಿಂತಲೂ ಸಹ ಮಾನವರು ಸಹ ಜೀವಿಗಳೇ ಮುಖ್ಯ ಎಂದು ಮುನ್ನಡೆಯುವದರಲ್ಲಿಯೇ ನಮ್ಮ ಶ್ರೇಯಸ್ಸು ಅಡಗಿದೆ..

ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ

ಆಂಗ್ಲ ಭಾಷಾ ಉಪನ್ಯಾಸಕರು
ಸ ಪ ಪೂ ಕಾಲೇಜು
ಹಿರೇಬಾಗೇವಾಡಿ – ೫೯೧೧೦೯
ತಾ:ಜಿ: ಬೆಳಗಾವಿ
ಮೊ: ೯೪೪೯೨೩೪೧೪೨