ನಂಬಿಕೆಯೊಂದೇ ಸಾಕು

ವಿಜಯ ದರ್ಪಣ ನ್ಯೂಸ್….

ನಂಬಿಕೆಯೊಂದೇ ಸಾಕು

ಶ್ರೀಕೃಷ್ಣನ ಪರಮಭಕ್ತನಾಗಿದ್ದ ಋಷಿಯೊಬ್ಬ ನದಿಯ ತೀರದಲ್ಲಿ ವಾಸವಾಗಿದ್ದನು. ಸುಮಾರು ವರ್ಷಗಳಿಂದ ನೀರಿನ ಮೇಲೆ ನಡೆಯುವ ಸಾಧನೆಯಲ್ಲಿ ತೊಡಗಿದ್ದನು. ಬಾಲಕಿ ತಂದುಕೊಡುತ್ತಿದ್ದ ಹಸುವಿನ ಹಾಲನ್ನು ಮಾತ್ರ ಸೇವಿಸುತ್ತಿದ್ದನು. ಒಂದು ದಿನ ಹುಡುಗಿಯ ತಾಯಿ ಮೋಡಗಳು ದಟ್ಟವಾಗಿವೆ. ಮಳೆಯಾಗಿ ನದಿ ತುಂಬಿ ಹರಿಯುವ ಸಾಧ್ಯತೆಯಿದೆ. ಹೀಗಾಗಿ ಹಾಲು ತರಲಾಗುವುದಿಲ್ಲವೆಂದು ಋಷಿಗಳಿಗೆ ತಿಳಿಸಲು ಹೇಳಿದಳು.

ಬಾಲಕಿಗೆ ಋಷಿ ‘ಪ್ರವಾಹದ ಬಗ್ಗೆ ಯೊಚಿಸಬೇಡ. ನೀರಿನ ಮೇಲೆ ನಡೆಯುವ ಮಂತ್ರವನ್ನು ಕಲಿಸುತ್ತೇನೆ. ಕಣ್ಮುಚ್ಚಿ ‘ಕೃಷ್ಣ ಕೃಷ್ಣ’ ಅನ್ನು ಆಗ ನೀನು ಆರಾಮವಾಗಿ ನೀರಿನ ಮೇಲೆ ನಡೆಯಬಹುದೆಂದನು. ನಿರೀಕ್ಷಿಸಿದಂತೆ ಮಳೆ ಧಾರಾಕಾರವಾಗಿ ಸುರಿಯಿತು. ನದಿ ತುಂಬಿ ಹರಿಯತೊಡಗಿತು. ಬಾಲಕಿ ಋಷಿಗೆ ಹಾಲನ್ನು ನೀಡಲು ಹೊರಟಳು. ತಾಯಿ ಒಪ್ಪಲಿಲ್ಲ. ಋಷಿಗಳು ತನಗೆ ನೀರಿನ ಮೇಲೆ ನಡೆಯುವ ಮಂತ್ರವನ್ನು ಕಲಿಸಿದ್ದಾರೆಂದು ಒತ್ತಾಯಿಸಿದ ಮೇಲೆ ತಾಯಿ ಒಪ್ಪಿದಳು.

ಬಾಲಕಿ ಕೃಷ್ಣ ಕೃಷ್ಣ ಎನ್ನುತ್ತ ನೀರಿನ ಮೇಲೆ ಆರಾಮವಾಗಿ ಬಂದದ್ದನ್ನು ಕಂಡ ಋಷಿ ಆಶ್ಚರ್ಯಗೊಂಡನು. ಅದೇ ಮಂತ್ರ ಹೇಳುತ್ತ ಮನೆಗೆ ವಾಪಸ್ಸಾದಳು. ಎಷ್ಟು ಅದ್ಭುತ ಬಾಲಕಿಯನ್ನು ನೀರಿನ ಮೇಲೆ ನಡೆಯುವಂತೆ ಮಾಡಿದೆ. ಹಾಗಾದರೆ ನಾನೂ ಪ್ರಯತ್ನಿಸುವೆನೆಂದು ನೀರಿಗಿಳಿದ. ಆದರೆ ಮುಳುಗಿಹೋದ. ಋಷಿ ಹೇಳಿದ ಮಂತ್ರದಲ್ಲಿ ಬಾಲಕಿಗೆ ಅಪಾರ ನಂಬಿಕೆಯಿತ್ತು. ಆದರೆ ಋಷಿಗಳಿಗೆ ಇರಲಿಲ್ಲ. ಯಾವುದೋ ಒಂದು ತತ್ವದಲ್ಲಿ ಚೈತನ್ಯದಲ್ಲಿ ಅಚಲವಾದ ನಂಬಿಕೆಯಿಟ್ಟಾಗ ಅದು ನಿಶ್ಚಿತವಾಗಿ ಸಹಾಯ ಮಾಡುತ್ತದೆ. ನೀರಿನಲ್ಲಿ ಸಂಚರಿಸಲು ಭಯಪಟ್ಟ ಬಾಲಕಿಗೆ ಸಹಾಯ ಮಾಡಿದ್ದು ಕೃಷ್ಣನೆಂಬ ನಂಬಿಕೆಯ ಫಲ ತಾನೆ? ಗಮನ ಬೇರೆಡೆ ಹೋದರೆ ನಂಬಿಕೆ ಕಳೆದುಕೊಳ್ಳುತ್ತೇವೆ ಎಂಬುದಕ್ಕೆ ಕನ್ನಡಿ ಹಿಡಿದಂತಿದೆ ಈ ದೃಷ್ಟಾಂತ.
ನಂಬಿ ಕೆಟ್ಟವರಿಲ್ಲವೋ ಎಂದು ದಾಸರು ಹಾಡಿದರು. ಇದಕ್ಕೆ ಸಂವಾದಿಯಾಗಿ ‘ನಂಬರು ನೆಚ್ಚರು ಬರಿದೆ ಕರೆವರು, ನಂಬಿ ಕರೆದರೆ ಓ ಎನ್ನನೇ ಶಿವನು.’ ಎಂದು ಬಸವಣ್ಣನವರು ಹೇಳಿದರು.

ನಂಬಿಕೆಯೆಂಬ ಅಡಿಪಾಯ ಗಟ್ಟಿಯಿದ್ದರೆ ನಂಬಲಾಗದ್ದನ್ನು ಸಾಧಿಸಬಹುದು. ನಂಬಿಕೆ ಪರ್ವತವನ್ನು ಕದಲಿಸಬಲ್ಲದು. ಪರ್ವತವನ್ನು ಕದಲಿಸುವ ಶಕ್ತಿಯುಳ್ಳದ್ದು ಬದುಕನ್ನು ಬದಲಿಸಲಾರದೆ? ಕಷ್ಟಗಳನ್ನು ಕಡಿಮೆ ಮಾಡದಿದ್ದರೂ ಅಸಾಧ್ಯವನ್ನು ಸಾಧ್ಯವಾಗಿಸಬಲ್ಲದೆಂಬುದು ಶತಸಿದ್ಧ. ಬದುಕು ಬದಲಾಗಬೇಕೆಂದರೆ ಚಿಂತನೆಗಳು ಭಾವನೆಗಳು ಬದಲಾಗಬೇಕು. ಅವು ಬದಲಾಗಬೇಕೆಂದರೆ ನಂಬಿಕೆಗಳು ಬದಲಾಗಬೇಕು. ನಂಬಿಕೆ ಬದಲಾದರೆ ಬದುಕು ಬದಲಾಗುತ್ತದೆ.

ಮಹಾಭಾರತದಲ್ಲಿ ಅರ್ಜುನ ಕೌರವ ಸಮೂಹವನ್ನು ಎದುರಿಸಿದ್ದು ತನ್ನ ತೋಳ್ಬಲದಿಂದಲ್ಲ, ಕೃಷ್ಣ ತನ್ನ ಜತೆಗಿದ್ದಾನೆಂಬ ನಂಬಿಕೆಯಿಂದ. ‘ರವಿ ಶಶಿ ತಾರಾಗಣಕ್ಕಿಲ್ಲದ ಭಯ ನಮಗೇಕೆ? ಅಣುವಿನಷ್ಟಾದರೂ ಶ್ರದ್ಧೆ ಇಡು ಎಂದಿದ್ದಾರೆ ಕುವೆಂಪು. ನಂಬಿಕೆಯಿಂದಲೆ ವಿಜ್ಞಾನಿಗಳು ಪ್ರಕೃತಿಯ ಅನೇಕ ರಹಸ್ಯಗಳನ್ನು ಬಯಲಿಗೆಳೆದಿದ್ದಾರೆ. ಜೀವನದ ಎಲ್ಲ ಕ್ಷೇತ್ರಗಳಲ್ಲಿ ನಂಬಿಕೆ ಕೆಲಸ ಮಾಡುತ್ತದೆ. ವೈದ್ಯ ರೋಗಿಯ ಸಂಬಂಧದಲ್ಲೂ. ಸಂಬಂಧಗಳಲ್ಲಿ ನಂಬಿಕೆ ಗೌರವಗಳಿದ್ದಾಗ ಮಾತ್ರ ಬದುಕು ಸುಗಮ. ನಂಬಿಕೆಗಳು ಕಾಯುತ್ತವೆ ಉಳಿಸುತ್ತವೆ ಮತ್ತು ಬೆಳೆಸುತ್ತವೆ. ಕಿತ್ತು ತಿನ್ನುವ ಬಡತನ, ಹೊರೆ ಹೊರಲು ಬೇಕಾದಷ್ಟು ಶಕ್ತಿಯಿಲ್ಲ, ಸಾಮರ್ಥ್ಯವಿಲ್ಲ, ಸೌಕರ್ಯವಿಲ್ಲ, ಸಮಯವಿಲ್ಲವೆಂಬ ನೆಪಗಳನ್ನು ಮುಂದೊಡ್ಡಿ ಸುಂದರ ಬದುಕಿನ ಸವಿಯನ್ನು ಕಳೆದುಕೊಳ್ಳದಿರೋಣ.

ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ:  9449234142