ಸವಿತಾ ಮಹರ್ಷಿಗಳು ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಯುಗ ಪುರುಷರು: ಜಿಲ್ಲಾಧಿಕಾರಿ ಎ.ಬಿ ಬಸವರಾಜು
ವಿಜಯ ದರ್ಪಣ ನ್ಯೂಸ್…..
ಸವಿತಾ ಮಹರ್ಷಿಗಳು ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಯುಗ ಪುರುಷರು: ಜಿಲ್ಲಾಧಿಕಾರಿ ಎ.ಬಿ ಬಸವರಾಜು
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ, ಫೆ.25:-ಶ್ರೀ ಸವಿತಾ ಮಹರ್ಷಿಗಳು ಪ್ರಾಮಾಣಿಕತೆ, ಕಾಯಕ ನಿಷ್ಠೆ ಗೆ ಹೆಸರಾದವರು, ಸಮಾಜಕ್ಕೆ ಅವರ ಕೊಡುಗೆ ಅಪಾರವಾದದ್ದು ನಾವೇಲ್ಲರು ಶ್ರೀ ಸವಿತಾ ಮಹರ್ಷಿ ತತ್ವಾದರ್ಶಗಳನ್ನು ಪಾಲಿಸೋಣ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದೇವನಹಳ್ಳಿ ಟೌನ್ ನಲ್ಲಿರುವ ಡಿ.ದೇವರಾಜ ಅರಸು ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರವು ಪ್ರತಿಯೊಂದು ಸಮುದಾಯವನ್ನು ಗೌರವಿಸಿ ಹಲವು ಮಹಾನ್ ಚೇತನರ ಜಯಂತಿಗಳನ್ನು ಮಾಡುತ್ತಾ ಬಂದಿದೆ. ಗಣ್ಯ ವ್ಯಕ್ತಿಗಳ ತತ್ವಗಳನ್ನು ಮುಂದಿನ ಪೀಳಿಗೆಗೆ ಗೊತ್ತುಪಡಿಸುವ ನಿಟ್ಟಿನಲ್ಲಿ, ಸಮಾಜದ ಪ್ರತಿಯೊಬ್ಬರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಆಗಬೇಕು, ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಸರ್ಕಾರ ಜಯಂತಿಗಳನ್ನು ನಡೆಸುತ್ತಾ ಬಂದಿದೆ.
ಸವಿತಾ ಸಮಾಜವು ಎಲ್ಲ ವರ್ಗದ ಜನರಿಗೂ ತಾರತಮ್ಯವಿಲ್ಲದೆ ಸೇವೆ ನೀಡುತ್ತಿದೆ. ಪ್ರತಿಯೊಬ್ಬರೂ ತಾನು ಮಾಡುವ ಕಾಯಕದ ಮೇಲೆ ಗೌರವ, ನಿಷ್ಠೆ ಇಟ್ಟುಕೊಂಡಾಗ ಬದುಕಿನಲ್ಲಿ ಉತ್ತುಂಗಕ್ಕೇರಲು ಸಾಧ್ಯವಿದೆ. ಅಂತಹ ಕಾಯಕ ನಿಷ್ಠೆಯನ್ನು ಸವಿತಾ ಮಹರ್ಷಿಗಳು ಹೊಂದಿದ್ದರು.
ಶ್ರೀ ಸವಿತಾ ಮಹರ್ಷಿಘಳ ತತ್ವ-ಸಂದೇಶಗಳು ಸರ್ವಕಾಲಿಕವಾಗಿದ್ದು, ಅವರ ತತ್ವಾದರ್ಶಗಳನ್ನು ಜನರು ಜೀವನದಲ್ಲಿ ಅಳವಡಿಸಿಕೊಂಡಾಗ, ಉತ್ತಮ ಸಮಾಜ ನಿರ್ಮಾಣಗೊಳ್ಳಲು ಸಾಧ್ಯವಿದೆ. ಪ್ರತಿಯೊಂದು ಸಮಾಜವು ಶಿಕ್ಷ ಣಕ್ಕೆ ಒತ್ತು ನೀಡಬೇಕು. ಶಿಕ್ಷ ಣದಿಂದ ಸ್ವಾವಲಂಬಿಸಿ ಬದುಕಿನೊಂದಿಗೆ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಿದೆ. ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಸವಿತಾ ಸಮಾಜದವರಿಗೆ ತಲುಪಿಸಲು ಜಿಲ್ಲಾಡಳಿತ ಸದಾ ಸಿದ್ಧ ಎಂದರು.
ಸವಿತಾ ಸಮುದಾಯದ ಮನವಿಗಳಿಗೆ ಸ್ಪಂದಿಸಿ ದೇವನಹಳ್ಳಿ ಟೌನ್ ನಲ್ಲಿ ಸವಿತಾ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ನಿವೇಶನ ಒದಗಿಸಲು ಕ್ರಮ, ಸಂಗೀತ ಶಾಲೆ ಮೇಲ್ದರ್ಜೆಗೇರಿಸಲು ಹಾಗೂ ದೇವನಹಳ್ಳಿಯ ಯಾವುದಾದರೂ ಒಂದು ವೃತ್ತಕ್ಕೆ ಸವಿತಾ ಮಹರ್ಷಿ ಹೆಸರಿಡುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೃಷ್ಣಪ್ಪ ಅವರು ಕಾರ್ಯಕ್ರಮದ ಉಪನ್ಯಾಸ ನೀಡಿ ಸವಿತಾ ಸಮಾಜವು ಪೌರಾಣಿಕವಾಗಿ, ಐತಿಹಾಸಿಕವಾಗಿ, ತನ್ನದೇ ಇತಿಹಾಸವನ್ನು ಹೊಂದಿದೆ. ಪುರಾಣ ಗ್ರಂಥಗಳ ಪ್ರಕಾರ ಸವಿತಾ ಮಹರ್ಷಿ ದೇವ ದೇವತೆಗಳ ಆಯುಷ್ಕರ್ಮ ಸೇವೆಯನ್ನು ಮಾಡುತ್ತಿದ್ದಾರೆಂದು, ಶಿವನ ದಿವ್ಯ ದೃಷ್ಟಿಯಲ್ಲಿ ಜನ್ಮ ತಾಳಿದವರು ಸವಿತಾ ಮಹರ್ಷಿಗಳು ಎಂದು ಪ್ರತೀತಿ ಇದೆ. ಶಿವನಿಂದ ಚೌಲಕರ್ಮ, ಆಯುರ್ವೇದ ವೈದ್ಯ ಪದ್ಧತಿ, ಸಂಗೀತ ವರಗಳನ್ನು ಪಡೆದರು. ಅಂದಿನಿಂದ ಇಂದಿನವರೆಗೂ ಸವಿತಾ ಸಮಾಜದವರು ಆಯುರ್ವೇದ ವೈದ್ಯ ವೃತ್ತಿ, ಕ್ಷೌರಿಕ, ಡೋಲು, ನಾದಸ್ವರ, ವಾದನ, ಸಂಗೀತದ ವಿವಿಧ ಕಾಯಕದಲ್ಲಿ ತೊಡಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ, ಪುರಸಭೆ ಮುಖ್ಯಾಧಿಕಾರಿ ದೊಡ್ಡಮಳವಯ್ಯ, ಸವಿತಾ ಸಮಾಜದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.