ಅಸಹ್ಯ ಮಟ್ಟ ತಲುಪಿದ ಕರ್ನಾಟಕ ರಾಜಕೀಯದ ಎಲ್ಲಾ ಪಕ್ಷಗಳ ಭಿನ್ನಮತ…..

ವಿಜಯ ದರ್ಪಣ ನ್ಯೂಸ್…

ಅಸಹ್ಯ ಮಟ್ಟ ತಲುಪಿದ ಕರ್ನಾಟಕ ರಾಜಕೀಯದ ಎಲ್ಲಾ ಪಕ್ಷಗಳ ಭಿನ್ನಮತ…..

ಭಾಷೆ ಎಂಬ ಭಾವ ಕಡಲಿಗೆ ಮತ್ತು ರಾಜಕೀಯ ಎಂಬ ಸೇವಾ ಮನೋಭಾವದ ಪಾವಿತ್ರ್ಯಕ್ಕೆ ವಿಷವಿಕ್ಕುತ್ತಿರುವ ಕೆಲವು ನಾಯಕರುಗಳು…..

ಭಾಷೆ ಎಂಬ ಸಾಂಸ್ಕೃತಿಕ ಒಡಲಿಗೆ ತಮ್ಮ ನಾಲಿಗೆಯ ಮೂಲಕ ಮತ್ತು ತಮ್ಮ ನಡವಳಿಕೆಯಿಂದ ರಾಜಕೀಯ ಕ್ಷೇತ್ರಕ್ಕೆ ಕೊಡಲಿ ಏಟು ಕೊಡುತ್ತಿರುವ ಕೆಲವು ಮುಖಂಡರುಗಳು……

ಮೋರಿ ( ಕೊಳಚೆ ನೀರು ಹರಿಯುವ ಜಾಗ ) ಭಾಷೆಯ ಪದ ಪ್ರಯೋಗಕ್ಕಿಳಿದ ಕೆಲವು ರಾಜಕೀಯ ನಾಯಕರು…….

ಅವರ ನಿಜ ಬಣ್ಣಗಳು – ಮನಸ್ಥಿತಿಗಳು – ವ್ಯಕ್ತಿತ್ವಗಳು – ಮುಖವಾಡಗಳು ಬೆತ್ತಲಾಗುತ್ತಿವೆ…….

ಅರ್ಥಮಾಡಿಕೊಳ್ಳಬೇಕಾಗಿರುವುದು ಸಾಮಾನ್ಯ ಜನರಾದ ನಾವು ಮಾತ್ರ…….

ಸ್ವಾತಂತ್ರ್ಯ ಬಂದು ಸುಮಾರು 78 ವರ್ಷಗಳ ನಂತರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ನಿಜವಾದ ದುರುಪಯೋಗದ ಪದ ಪ್ರಯೋಗ…….

ಭಾಷೆಯಲ್ಲಿ ಇದ್ದ ಕೆಟ್ಟ ಮತ್ತು ಒಳ್ಳೆಯ ಪದಗಳ ಅಂತರ ಇಲ್ಲವಾಗಿಸಿದ ಮಹತ್ಸಾಧನೆ ಇವರದು….

ಸಂಪರ್ಕ ಕ್ರಾಂತಿಯ ಈ ದಿನಗಳಲ್ಲಿ ನಮ್ಮ ಮಕ್ಕಳು ಇದರಿಂದ ಪ್ರಭಾವ ಹೊಂದಿ ಈ ರೀತಿಯ ಕೊಳಕು ಭಾಷೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಎಲ್ಲಾ ಸಾಧ್ಯತೆ ಇದೆ..

ಕೆಲವು ಹಾಲಿ ಮತ್ತು ಮಾಜಿ ಶಾಸಕರು – ಮಂತ್ರಿಗಳು – ಮಾಜಿ ಮಂತ್ರಿಗಳು ಮುಂತಾದವರಿಂದ ಸಾರ್ವಜನಿಕವಾಗಿ ಅತ್ಯಂತ ಕೆಟ್ಟ ಭಾಷಾ ಪ್ರಯೋಗ. ಅದಕ್ಕೆ ಮತ್ತಷ್ಟು ಹುಚ್ಚು ನಾಯಕರಿಂದ ಇನ್ನೊಂದಿಷ್ಟು ಹುಚ್ಚು ಮಾತುಗಳ ವಿರೋಧ. ಅದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಕೆಳಮಟ್ಟದ ಕೆಟ್ಟ ಭಾಷಾ ಪ್ರಯೋಗದ ಪ್ರತಿಕ್ರಿಯೆ, ಅದನ್ನು ಮಾಧ್ಯಮಗಳು ಜನರಿಗೆ ಮತ್ತಷ್ಟು ಸ್ಪಷ್ಟವಾಗಿ ಅರ್ಥಮಾಡಿಸಲು ಹತ್ತಾರು ಸಲ ಮತ್ತೆ ಮತ್ತೆ ಪ್ರಸಾರ……….

ನಾವು ಚಿಕ್ಕ ವಯಸ್ಸಿನಿಂದ ಕಲಿತುಕೊಂಡು ಬಂದಿದ್ದ ಭಾಷಾ ಸಂಸ್ಕಾರದ ಸಭ್ಯತೆ, ಸಂಯಮ ತಟ್ಟನೆ ಮಾಯಾ………

ಹುಚ್ಚು ಹಿಡಿದಂತೆ ಕೂಗಾಟ, ಹಾರಾಟ, ಚೀರಾಟಗಳೇ ಮಾಧ್ಯಮ ಲೋಕದ ಹೊಸ ಆಕರ್ಷಕ ಭಾಷೆ………

ಪಿಂಪ್ – ವೇಶ್ಯೆ – ತಲೆ ಹಿಡುಕ – ಕಚ್ಚೆ ಹರುಕ – ಕೊಲೆಗಡುಕ – ನಾಲಿಗೆ ಕತ್ತರಿಸುತ್ತೇನೆ – ತಲವಾರು ಹಿಡಿಯುತ್ತೇನೆ… ಹೀಗೆ ಸಾಗುತ್ತದೆ ಅವರ ಭಾಷೆ…..

ಹುಚ್ಚು ನಾಯಿ ಬೊಗಳಿದರೆ ಸಾವಿರಾರು ನಾಯಿಗಳು ಅದಕ್ಕಿಂತಲೂ ಜೋರಾಗಿ ಬೊಗಳುವ ಹೊಸ ವ್ಯವಸ್ಥೆಯಲ್ಲಿ ನಾವಿದ್ದೇವೆ…..‌

ಹುಚ್ಚು ನಾಯಿಗೆ ಮಹತ್ವ ಕೊಡಬೇಕೋ ಅಥವಾ ಕೋಗಿಲೆಯ ಕುಹೂ ಕುಹೂ ಗಾನಕ್ಕೋ ಎಂಬ ಸೂಕ್ಷ್ಮತೆ ಸಹ ಈಗ ಜನರಲ್ಲೂ ಉಳಿದಿಲ್ಲ………..

ಸಂಜೆಯ ಚರ್ಚಾ ಕಾರ್ಯಕ್ರಮಕ್ಕೆ ಹುಚ್ವು ನಾಯಿಯೇ ಆಹಾರ. ಕೋಗಿಲೆಯ ಧ್ವನಿ ಕರ್ಕಶ…….

ಅಗೋ ಅಲ್ಲಿ ನೋಡಿ………,

ನಿಮ್ಮ ಪಕ್ಕದಲ್ಲೇ ಆ ಎಳೆಯ ಕಂದ ತಾಯಿಯ ಎದೆ ಹಾಲು ಚೀಪುತ್ತಾ ಪಿಳಿಪಿಳಿ ಕಣ್ಣು ಬಿಡುತ್ತಾ ನಿಮ್ಮನ್ನೂ, ಟಿವಿಯನ್ನು ನೋಡುತ್ತಿದೆ. ಅದಕ್ಕಿನ್ನೂ ಮಾತು ಬರುತ್ತಿಲ್ಲ. ಅದಕ್ಕೆ ಯಾವ ಭಾಷೆ ಕಲಿಸುತ್ತೀರಿ……….

ಒಂದು ಮಾತನ್ನು ಸ್ಪಷ್ಟವಾಗಿ ನೆನೆಪಿಡಿ………

ಯಾರದೇ ಆಗಲಿ
” ಬೈಗುಳದ ಭಾಷೆ ಆಡುವವನ ಯೋಗ್ಯತೆಯನ್ನು ಪ್ರತಿನಿಧಿಸುತ್ತದೆಯೇ ಹೊರತು ಅನಿಸಿಕೊಂಡವನ ಯೋಗ್ಯತೆಯನ್ನಲ್ಲ.”……..

ಸೂಳೆ ಎಂಬ ತಾಯ್ತನದ ಹೆಣ್ಣು ತನ್ನ ಅನಿವಾರ್ಯತೆಗೆ ತನ್ನ ದೇಹವನ್ನು ದುಡಿಸಿಕೊಂಡು ಜೀವಿಸಬಹುದು. ಅದು ಸೃಷ್ಠಿಯ ಮೂಲದಿಂದ ಆಕೆಯ ಸ್ವಾತಂತ್ರ್ಯವೂ ಹೌದು………,

ಆದರೆ ಇದೇ ಸಮಾಜದಲ್ಲಿ ಬೇರೆಯವರ ದೇಹವನ್ನು ತನ್ನ ಸುಖಕ್ಕಾಗಿ ಅಡವಿಟ್ಟು ಜೀವಿಸುತ್ತಿರುವ ಕಿರಾತಕರು ನಮ್ಮ ನಡುವೆಯೇ ಇದ್ದಾರೆ ಮತ್ತು ನಮ್ಮಿಂದಲೇ ಗೌರವವನ್ನೂ ಪಡೆಯುತ್ತಿದ್ದಾರೆ……..

ಆದ್ದರಿಂದ ಹುಚ್ಚು ನಾಯಿಗಳು ಬೊಗಳುವುದನ್ನು ತಡೆಯುವ ಸಾಮರ್ಥ್ಯ ಸದ್ಯ ನಮಗಿಲ್ಲ. ಅದನ್ನು ನಾಶ ಮಾಡಲೂ ಈ ಕ್ಷಣಕ್ಕೆ ಸಾಮಾನ್ಯರಾದ ನಮಗೆ ಆಗುವುದಿಲ್ಲ.‌ ಏಕೆಂದರೆ ಇಡೀ ವ್ಯವಸ್ಥೆಯೇ ಹುಚ್ಚು ಹಿಡಿದಂತೆ ಆಡುತ್ತಿದೆ……….

ಆದರೆ ನಾಗರಿಕ ಪ್ರಜ್ಞೆಯ ಸಭ್ಯತೆ, ಸಂಯಮ ನಮ್ಮಲ್ಲಿ ಅಳವಡಿಸಿಕೊಂಡರೆ ಸಾಕು, ಅದೇ ಹುಚ್ಚು ನಾಯಿ ಕಚ್ಚುವುದಕ್ಕೆ ನಾವು ತೆಗೆದುಕೊಳ್ಳಬಹುದಾದ ಎಚ್ಚರಿಕೆಯ ರೇಬೀಸ್ ಚುಚ್ಚುಮದ್ದಿನ ಚಿಕಿತ್ಸೆ……

ಅದರಿಂದ ನಾವು ಸುರಕ್ಷಿತವಾಗುತ್ತೇವೆ.
ಹುಚ್ಚು ನಾಯಿ ದೀರ್ಘಕಾಲ ಬದುಕದೇ ತನ್ನಿಂದ ತಾನೇ ಸಾಯುತ್ತದೆ…….

ಇಲ್ಲದಿದ್ದರೆ ಹುಚ್ಚು ನಾಯಿಗಳು ಕಚ್ಚಿ ಒಂದು ಇಡೀ ಸಮಾಜ ಹುಚ್ಚುಚ್ಚಾಗಿ ಆಡುತ್ತದೆ. ಮುಂದಿನ ಜನಾಂಗ ಸಂಪೂರ್ಣ ಹುಚ್ಚರಾಗುತ್ತಾರೆ……

ಆಯ್ಕೆ ನಮ್ಮ ವಿವೇಚನೆಗೆ ಬಿಟ್ಟದ್ದು…..

ಏಕೆಂದರೆ,

ವೇಶ್ಯಾವಾಟಿಕೆ ವೃತ್ತಿಯನ್ನು ಅತ್ಯಂತ ಹೇಯ – ತುಚ್ಚ – ಕೆಟ್ಟದ್ದು – ಹೀನಾಯ
ಎಂದು ಭಾರತೀಯ ಸಮಾಜ ಪರಿಗಣಿಸುತ್ತದೆ…………

ಮುಖ್ಯವಾಗಿ,
ಹಣಕ್ಕಾಗಿ ತನ್ನ ದೇಹವನ್ನು ಇನ್ನೊಬ್ಬರ ಬೇಡಿಕೆ ಪೂರೈಸಲು ಉಪಯೋಗಿಸುವ ಕೆಲಸಕ್ಕೆ ವೇಶ್ಯಾ ವೃತ್ತಿ ಎನ್ನಲಾಗುತ್ತದೆ. ಬಹುತೇಕ, ಹೆಣ್ಣು ಈ ವೃತ್ತಿಯ ಬಲಿಪಶುವಾದರೆ ಅಲ್ಪ ಪ್ರಮಾಣದಲ್ಲಿ ಪುರುಷ ವೇಶ್ಯಾ ವೃತ್ತಿ ಸಹ ಈ ಸಮಾಜದಲ್ಲಿ ಅಸ್ತಿತ್ವದಲ್ಲಿದೆ.

ಇಲ್ಲಿ ಹೆಣ್ಣು ತನ್ನ ಸ್ವಂತ ದೇಹವನ್ನು ಅನಿವಾರ್ಯವೋ, ಅವಶ್ಯಕವೋ, ಪರಿಸ್ಥಿತಿಯ ಒತ್ತಡವೋ, ಕಾರಣವೇನೆ ಇರಲಿ ದುಡಿಸಿಕೊಂಡು ಹಣ ಮಾಡುತ್ತಾಳೆ. ಇತರರಿಗೆ ಅದರಿಂದ ತೊಂದರೆ ಏನೂ ಇರುವುದಿಲ್ಲ.

ನನ್ನ ಈ ಲೇಖನ ಖಂಡಿತ ವೇಶ್ಯಾ ವೃತ್ತಿಯ ಬಗ್ಗೆ ಅಲ್ಲ. ಇದು ಕೇವಲ ಪೀಠಿಕೆ ಮಾತ್ರ. ವೇಶ್ಯಾ ವೃತ್ತಿ ಸರಿ ಅಥವಾ ತಪ್ಪು ಅಥವಾ ಅದಕ್ಕೆ ಯಾರು ಹೊಣೆ ಎಂಬ ವಿಮರ್ಶೆ ಇಲ್ಲಿ ಮಾಡುವುದಿಲ್ಲ. ಅದು ಪ್ರತ್ಯೇಕ ವಿಷಯ.

ಈ ಲೇಖನದ ಉದ್ದೇಶ ಆಧ್ಯಾತ್ಮದ ತವರೂರು ಭಾರತದಲ್ಲಿ ಜನ ಸಾಮಾನ್ಯರ ಭಾವನೆಯ ವೇಶ್ಯಾ ವೃತ್ತಿಗಿಂತ ಹತ್ತು ಪಟ್ಟು ಅತ್ಯಂತ ನೀಚ ವೃತ್ತಿ ದ್ರೋಹ ಮಾಡುವ ಜನರ ಬಗ್ಗೆ ಹೇಳಬೇಕಾಗಿದೆ.

ಮುಖ್ಯ ವಿಷಯಕ್ಕಿಂತ ಮೊದಲು ಕೆಲವು ಸಣ್ಣ ಉದಾಹರಣೆ ಕೊಡುತ್ತೇನೆ.

ಸರ್ಕಾರದ ಸಂಬಳ ಪಡೆಯುವ ಅಧಿಕಾರಿ ತನ್ನ ಅಧಿಕೃತ ಕರ್ತವ್ಯ ನಿರ್ವಹಿಸಲು ಲಂಚ ಪಡೆದಾಗ,
ಒಬ್ಬ ವೈದ್ಯ ಹಣದ ಕಾರಣಕ್ಕಾಗಿ ರೋಗಿಯನ್ನು ಶೋಷಿಸಿದಾಗ,
ಒಬ್ಬ ನ್ಯಾಯಾಧೀಶ ಹಣದ ಕಾರಣಕ್ಕಾಗಿ ಅನ್ಯಾಯದ ಪರ ತೀರ್ಪು ನೀಡಿದಾಗ,
ಒಬ್ಬ ಶಿಕ್ಷಕ ಹಣದ ಕಾರಣಕ್ಕಾಗಿ ವಿದ್ಯಾರ್ಥಿಗಳ ದಾರಿ ತಪ್ಪಿಸಿದಾಗ,
ಒಬ್ಬ ಪತ್ರಕರ್ತ ರೋಲ್ ಕಾಲ್ ಗಿರಾಕಿಯಾದಾಗ,
ಒಬ್ಬ ವ್ಯಕ್ತಿ ಹಣಕ್ಕಾಗಿ ಕೊಲೆ ದರೋಡೆ ವಂಚನೆ ಮಾಡಿದಾಗ,
ಕಾಮಕ್ಕಾಗಿ ಅತ್ಯಾಚಾರ ಮಾಡಿದಾಗ,…..

ಹೀಗೆ ಇನ್ನೂ ಹಲವಾರು ಕೆಲಸಗಳಲ್ಲಿ ಆತ ತನ್ನ ಇಡೀ ವ್ಯಕ್ತಿತ್ವವನ್ನೇ ಮಾರಿಕೊಂಡಿರುತ್ತಾನೆ. ತನ್ನ ಕರ್ತವ್ಯ, ವೃತ್ತಿ ಧರ್ಮ, ಮಾನವೀಯ ಮೌಲ್ಯ, ಸಾಮಾಜಿಕ ನ್ಯಾಯ, ನೈತಿಕ ಮೌಲ್ಯ ಮತ್ತು ಕಾನೂನಿಗೆ ವಿರುದ್ಧವಾಗಿ ವರ್ತಿಸುತ್ತಿರುತ್ತಾನೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವೇಶ್ಯೆ ತನ್ನ ದೇಹವನ್ನು ಸ್ವ ಇಚ್ಛೆಯಿಂದ ದಂಡಿಸಿದರೆ, ಈ ಕಿರಾತಕರು ತಮ್ಮ ಸುಖಕ್ಕಾಗಿ ಇತರರ ದೇಹ ಮತ್ತು ಬದುಕನ್ನೇ ದಂಡಿಸುತ್ತಾರೆ.

ಈಗ ಮುಖ್ಯ ವಿಷಯಕ್ಕೆ ಬರುತ್ತೇನೆ.

ಭಾರತದ ಆತ್ಮ ಅಡಗಿರುವುದು ಸಂಸದೀಯ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ. ನಾವೆಲ್ಲರೂ ಅದರ ಪಾಲುದಾರರು.

ಸುಮಾರು 100 ಕೋಟಿ ಮತದಾರರು ಇರುವ ಈ ದೇಶದಲ್ಲಿ, ವಿಶ್ವದ ಏಳನೇ ಬಹುದೊಡ್ಡ ವಿಸ್ತೀರ್ಣ ಇರುವ ಈ ರಾಷ್ಟ್ರದಲ್ಲಿ, ಇಡೀ ದೇಶದ ಎಲ್ಲಾ ರೀತಿಯ ಸಂಪನ್ಮೂಲಗಳನ್ನು ನಿರ್ವಹಿಸಲು ಚುನಾವಣೆ ಎಂಬ ಮಾರ್ಗದ ಮೂಲಕ ಕೆಲವು ಜನಪ್ರತಿನಿಧಿಗಳನ್ನು ನಾವು ಆಯ್ಕೆ ಮಾಡುತ್ತೇವೆ. ಅವರಿಗೆ ಅಧಿಕಾರ ಹಣ ಸೇರಿದಂತೆ ವಿಐಪಿ ಎಂದು ಪರಿಗಣಿಸಿ ಎಲ್ಲಾ ರೀತಿಯ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಮುಖ್ಯವಾಗಿ ಎಂಎಲ್ಎ ಮತ್ತು ಎಂಪಿಗಳು.

ಇವರನ್ನು ಸಂವಿಧಾನದ ಅಡಿಯಲ್ಲಿ ಒಬ್ಬ ಪ್ರತಿನಿಧಿಯಾಗಿ ಜನರ ಸೇವೆಗಾಗಿ ಆಯ್ಕೆ ಮಾಡಲಾಗಿರುತ್ತದೆ‌. ಕೆಲವರನ್ನು ಆಡಳಿತ ಪಕ್ಷದವರೆಂದು ಮತ್ತೆ ಕೆಲವರನ್ನು ವಿರೋಧ ಪಕ್ಷದವರೆಂದು ಕರೆಯಲಾಗುತ್ತದೆ. ಆದರೆ ಅವರ ಕೆಲಸ ಮಾತ್ರ ಸಾಮಾನ್ಯವಾಗಿ ಒಂದೇ ರೀತಿಯಲ್ಲಿ ಇರಬೇಕಾಗುತ್ತದೆ. ಈ ನಡುವೆ ಕೆಲವು ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಮತ್ತು ಮುಖ್ಯ ಅಧಿಕಾರಕ್ಕಾಗಿ ಒಂದಷ್ಟು ಪೈಪೋಟಿ ಇರುತ್ತದೆ.

ಆದರೆ ಈಗಿನ ಕರ್ನಾಟಕದ ರಾಜಕೀಯ ಪಕ್ಷಗಳು ಮತ್ತು ಜನ ಪ್ರತಿನಿಧಿಗಳ ವರ್ತನೆ ಮೇಲೆ ಹೇಳಿದ ಎಲ್ಲಾ ವೃತ್ತಿಗಳಿಗಿಂತಲೂ ಅತ್ಯಂತ ಕೆಳ ಮಟ್ಟಕ್ಕೆ ಕುಸಿದಿದೆ.

ಇದನ್ನು ನಾನು ನೈತಿಕವಾಗಿ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಹಿನ್ನೆಲೆಯಲ್ಲಿ ಹಾಗೂ ಜನರ ಜೀವನ ಮಟ್ಟದ ಆಧಾರದಲ್ಲಿ ಖಂಡಿತ ದೃಢಪಡಿಸಬಲ್ಲೆ.

ಎಷ್ಟೊಂದು ಜಲ್ವಂತ ಸಮಸ್ಯೆಗಳ ಮಧ್ಯೆ, 224 ಶಾಸಕರಲ್ಲಿ ಕನಿಷ್ಠ ಮಟ್ಟದ ಹೊಂದಾಣಿಕೆಯೂ ಇಲ್ಲದೆ, ತಿಂಗಳಾನುಗಟ್ಟಲೆ ಆಡಳಿತವನ್ನು ನಿರ್ಲಕ್ಷಿಸಿ, ಸುಮಾರು 7 ಕೋಟಿ ಜನ ಮತ್ತು ಇಲ್ಲಿನ ಒಟ್ಟು ಸಂಪನ್ಮೂಲಗಳನ್ನು ಬೇಜವಾಬ್ದಾರಿಯಿಂದ ನಿರ್ವಹಿಸುತ್ತಿರುವ, ಇವರನ್ನು ಏನೆಂದು ಕರೆಯುವುದು.

ಕರ್ನಾಟಕದ ಸಂಪತ್ತು ಮತ್ತು ಜನ ಇವರ ಸ್ವಂತ ಆಸ್ತಿಯೇ. ಏನೋ ಬೃಹತ್ ರಾಜ್ಯದ ಕೋಟ್ಯಾಂತರ ಮತದಾರನ ಆಯ್ಕೆಯಲ್ಲಿ ಒಂದಷ್ಟು ಏಕಾಭಿಪ್ರಾಯ ಮೂಡದೆ 3 ಪಕ್ಷಗಳಲ್ಲಿ ಒಂದಷ್ಟು ಜನ ಪ್ರತಿನಿಧಿಗಳು ಹಂಚಿ ಹೋಗಿರಬಹುದು. ಆದರೆ ‌ಈ 224 ಜನರಲ್ಲಿ ಹೊಂದಾಣಿಕೆ ಮೂಡದಿದ್ದರೆ ಹೇಗೆ ? ಯಾರೊಬ್ಬರೂ 7 ಕೋಟಿ ಜನರ ಹಿತಾಸಕ್ತಿಯ ದೃಷ್ಟಿಯಿಂದ ಸ್ವಲ್ಪವೂ ತ್ಯಾಗಕ್ಕೆ ಸಿದ್ದರಿಲ್ಲವೇ ? ಅಷ್ಟೊಂದು ಸ್ವಾರ್ಥಿಗಳೇ ಅವರು ?

ಎಂಎಲ್ಎ ಎಂಬುದೇ ಒಂದು ಬಹುದೊಡ್ಡ ಹುದ್ದೆ – ಗೌರವ – ಜವಾಬ್ದಾರಿ – ಅದೃಷ್ಟ ಮತ್ತು ಹೆಮ್ಮೆ. ಅರೆ ಎಷ್ಟೋ ಜನರಿಗೆ ಪ್ರತಿಭೆ ಸಾಮರ್ಥ್ಯ ಶ್ರಮ ಎಲ್ಲವೂ ಇದ್ದರೂ ಊಟ ವಸತಿ ಮುಂತಾದ ದಿನನಿತ್ಯದ ಅವಶ್ಯಕತೆಗೆ ಒದ್ದಾಡುತ್ತಿರುವಾಗ ನಿಮ್ಮಂತ ಅದೃಷ್ಟವಂತರೇ ಮಂತ್ರಿ ಸ್ಥಾನ ಸಿಗದ ಕಾರಣಕ್ಕಾಗಿ, ಪಕ್ಷದ ಅಧ್ಯಕ್ಷ ಸ್ಥಾನ ಸಿಗದ ಹಿನ್ನಲೆಯಲ್ಲಿ ಅನ್ಯಾಯವಾಗಿದೆ ಎಂದು ಭಾವಿಸಿದರೆ ಇನ್ನು ನಮ್ಮಂತ ಸಾಮಾನ್ಯ ಜನಕ್ಕೆ ಎಷ್ಟೊಂದು ಅನ್ಯಾಯವಾಗಿರಬೇಡ.

ಈಗಿನ ಸಂದರ್ಭದಲ್ಲಿ 224 ಜನರಲ್ಲಿ ಒಬ್ಬರು ಮುಖ್ಯಮಂತ್ರಿಯಾಗಿ, 38 ಜನ ಮಂತ್ರಿಗಳಾಗಿ ಉಳಿದವರು ತಮ್ಮ ಕ್ಷೇತ್ರಗಳನ್ನೇ ಮುಖ್ಯ ‌ಗುರಿಯಾಗಿಸಿಕೊಂಡು ಅಭಿವೃದ್ಧಿ ಪಡಿಸುತ್ತಾ ಉಳಿದ 3 ವರ್ಷದ ಅವಧಿ ಮುಗಿಸಿದರೇ ಭೂಮಿ ಪ್ರಳಯವಾಗುವುದೇ ? ಅವರ ವಂಶ ಹಾಳಾಗುವುದೇ ?

ಯಾವ ಪಕ್ಷವಾದರೆ ನಮಗೇನು. ಪಕ್ಷ ಒಂದು ನಿರ್ಜೀವ ಹೆಸರು ಮತ್ತು ಸಿದ್ದಾಂತ ಗುರುತಿಸುವಿಕೆ ಮಾತ್ರ. ವ್ಯಕ್ತಿ ಮತ್ತು ಜನ ಪ್ರತಿನಿಧಿ
ಪರಿಸ್ಥಿತಿಗೆ ತಕ್ಕಂತೆ ಸ್ಪಂದಿಸಬಹುದು. ನಾಡಿಗೆ ಮತ್ತು ಇಲ್ಲಿನ ಜನರಿಗೆ ಒಳ್ಳೆಯದಾದರೆ ಸಾಕು.

ವ್ಯಕ್ತಿಗಳು ಮುಖ್ಯವಲ್ಲ. ಈಗಾಗಲೇ ಅಸ್ತಿತ್ವದಲ್ಲಿರುವ ಕಾನೂನಿನಂತೆ ಆಯ್ಕೆಯಾಗಿರುವ ಯಾವೊನಾದರೂ ನಮಗೇನು. ಅಧಿಕಾರಿಗಳಿದ್ದಾರೆ, ನ್ಯಾಯಾಂಗವಿದೆ, ಮಾಧ್ಯಮವಿದೆ, ಇನ್ನೇನು ಬೇಕು. ಯಾವ ಜಾತಿಯವನಾದರೂ ನಮಗೇನು ?

ಇದೇನು ಮಕ್ಕಳ ಜೂಟಾಟವೇ, ನಾವೇನು ನೆಮ್ಮದಿಯಿಂದ ಬದುಕುವುದು ಮತ್ತು ಏನನ್ನಾದರೂ ಸಾಧಿಸುವುದು, ಅನುಭವಿಸುವುದು ಬೇಡವೇ…….

ಮಾಧ್ಯಮಗಳು ಈ ಕ್ಷಣದ ನಂಬರ್ ಗೇಮ್ ಬಗ್ಗೆ ಆಸಕ್ತಿ ಮತ್ತು ಕುತೂಹಲ ಹೊಂದಿವೆಯೇ ಹೊರತು ಇಡೀ ಜನ ಸಮುದಾಯದ ಹಿತಾಸಕ್ತಿಯ ಬಗ್ಗೆ ಮಾತನಾಡುತ್ತಿಲ್ಲ. ಯಾವನೋ ಎಲ್ಲಿ ಬೇಲಿ ಹಾರುತ್ತಾನೆ ಎಂದು ಕ್ಯಾಮರಾ ರೆಡಿ ಮಾಡಿ ಕಾಯುತ್ತಿದ್ದಾರೆ.ಇದು ಅಸಹ್ಯದ ಪರಮಾವಧಿ.

ಇಡೀ ಪ್ರಹಸನವನ್ನು ನಿರ್ಲಕ್ಷಿಸಿ ಜನರನ್ನು ಜಾಗೃತಿಗೊಳಿಸಲು ಮತ್ತು ಸಮಸ್ಯೆಗಳ ಬಗ್ಗೆ ಗಮನ ಕೇಂದ್ರೀಕರಿಸಲು ಮಾಧ್ಯಮಗಳಿಗೆ ಇದು ಅತ್ಯುತ್ತಮ ಅವಕಾಶ. ಆದರೆ ಅವು ಈ ಕಿತ್ತಾಟವನ್ನು ಹಬ್ಬದಂತೆ ಸಂಭ್ರಮಿಸುತ್ತಿರುವುದನ್ನು ನೋಡಿದರೆ ವಿಷಾದವಾಗುತ್ತದೆ.

ಏನನ್ನಾದರೂ ಮಾಡಲೇ ಬೇಕು. ಆದರೆ ಸಾಮಾನ್ಯರಾದ ನಾವು ಮಾಡಬಹುದಾದದ್ದು ಏನು ? ಎಲ್ಲಿ ? ಹೇಗೆ ? ಯಾವಾಗ ? ಎಂದು ಯೋಚಿಸುತ್ತಾ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ.
9844013068…