ಮಣ್ಣೆ ಮೋಹನ್ ವಿರಚಿತ “ಕುಂಭಮೇಳ: ಜಗತ್ತಿನ ಸಾಂಸ್ಕೃತಿಕ ಹಬ್ಬ” ಲೋಕಾರ್ಪಣೆ: ನಾಗ ಸಾಧುಗಳ ಸಾಥ್

ವಿಜಯ ದರ್ಪಣ ನ್ಯೂಸ್….

ಕನ್ನಡ ಸಾಹಿತ್ಯ ಲೋಕದಲ್ಲೊಂದು ಹೊಸ ವಿಕ್ರಮ:
ಮಹಾ ಕುಂಭಮೇಳದಲ್ಲಿ ಮೊಳಗಿದ ಕನ್ನಡ ಕಹಳೆ
——————————————————–
ಮಣ್ಣೆ ಮೋಹನ್ ವಿರಚಿತ “ಕುಂಭಮೇಳ: ಜಗತ್ತಿನ ಸಾಂಸ್ಕೃತಿಕ ಹಬ್ಬ” ಲೋಕಾರ್ಪಣೆ:
ನಾಗ ಸಾಧುಗಳ ಸಾಥ್
———————————————————–
ಮಹಾ ಕುಂಭಮೇಳದಲ್ಲಿ ಕನ್ನಡ ಪುಸ್ತಕ ಬಿಡುಗಡೆಯಾವುದರ ಮೂಲಕ ಕನ್ನಡದ ಕೀರ್ತಿ ಪತಾಕೆ ಮುಗಿಲೆತ್ತರಕ್ಕೆ ವಿಸ್ತರಣೆ

-ಲೇಖಕ, ಅಂಕಣಕಾರ ಮಣ್ಣೆ ಮೋಹನ್

ಮಹಾ ಕುಂಭಮೇಳದಿಂದ ನೇರ ವರದಿ:

ಅದೊಂದು ಆವಿಸ್ಮರಣೀಯ ಕ್ಷಣ. ದಕ್ಷಿಣ ಭಾರತದ ಕರ್ನಾಟಕದಿಂದ ಹೊರಟ ಕನ್ನಡ ಮನಸುಗಳ ತಂಡ, ಉತ್ತರ ಭಾರತದ, ಉತ್ತರ ಪ್ರದೇಶದ, ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ, ನಾಗಸಾಧುಗಳ ಸಾನಿಧ್ಯದಲ್ಲಿ, ಕನ್ನಡ ಪುಸ್ತಕವೊಂದನ್ನು ಲೋಕಾರ್ಪಣೆಗೊಳಿಸಿದ ಸುಮಧುರ ಕ್ಷಣ.

ಈಗಾಗಲೇ ಕುಪ್ಪಳ್ಳಿ, ಹಂಪಿ, ಕಾಶಿ, ಅಯೋಧ್ಯೆ, ಗಯಾ, ಚಿತ್ರಕೂಟ, ಪ್ರಯಾಗ್ರಾಜ್, ಕನ್ಯಾಕುಮಾರಿ, ರಾಮೇಶ್ವರ, ಶಬರಿಮಲೆ ಗಳಲ್ಲದೆ ನೇಪಾಳದಲ್ಲಿಯೂ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದ್ದ ಜ್ಞಾನ ಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ, ಇದೀಗ ಮಹಾ ಕುಂಭಮೇಳದಲ್ಲಿಯೂ ಪುಸ್ತಕ ಬಿಡುಗಡೆ ಮಾಡುವ ಮೂಲಕ ಕನ್ನಡದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ವಿಸ್ತರಿಸಿದ ಭಾಜನಕ್ಕೆ ಪಾತ್ರವಾಯಿತು.

144 ವರ್ಷಗಳ ನಂತರ ನಡೆಯುತ್ತಿರುವ, ಇಲ್ಲಿಯವರೆಗೂ ಸುಮಾರು 55 ಕೋಟಿ ಜನರು ಅಮೃತಸ್ನಾನ ಮಾಡಿರುವ, ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯ, ಪವಿತ್ರ ಮಹಾ ಕುಂಭಮೇಳದಲ್ಲಿ ಏರ್ಪಡಿಸಿದ್ದ ಸಮಾರಂಭವೊಂದರಲ್ಲಿ ತಮ್ಮ “ಕುಂಭಮೇಳ: ಜಗತ್ತಿನ ಸಾಂಸ್ಕೃತಿಕ ಹಬ್ಬ” ಕೃತಿ ಅನಾವರಣಗೊಂಡ ನಂತರ ಮಾತನಾಡಿದ ಕೃತಿಯ ಕರ್ತೃ ಮಣ್ಣೆ ಮೋಹನ್ ಅವರು ‘ಮಹಾ ಕುಂಭಮೇಳದಂತಹ ಜಗತ್ತಿನ ಸಾಂಸ್ಕೃತಿಕ ಮಹಾಮೇಳದಲ್ಲಿ ನನ್ನ ಪುಸ್ತಕವೊಂದನ್ನು ಬಿಡುಗಡೆಗೊಳಿಸುವ ಸುಕೃತಕ್ಕೆ ಭಾಜನನಾಗಿದ್ದೇನೆ ಎಂಬುದು ನನ್ನ ಜೀವನದ ಹೆಮ್ಮೆಯ ವಿಷಯಗಳಲ್ಲೊಂದಾಗಿದೆ. ಬಹುಶಃ ಏಳು ಕೋಟಿ ಕನ್ನಡಿಗರಲ್ಲಿ ಯಾರಿಗೂ ದೊರಕದ ಭಾಗ್ಯ ನನಗೆ ದೊರೆತಿದೆ ಎಂದು ನಾನು ವಿನಮ್ರವಾಗಿ ಹೇಳಬಯಸುತ್ತೇನೆ. ಇದರ ಸಂಪೂರ್ಣ ಶ್ರೇಯಸ್ಸು ಸಮಸ್ತ ಕನ್ನಡಿಗರಿಗೆ ಸೇರುವಂತದ್ದು’ ಎಂದರು.

ಮುಂದುವರೆದ ಮಾತನಾಡಿದ ಅವರು ‘ಅಂದು ಕನ್ನಡ ರಾಜವಂಶಗಳು ದಂಡಯಾತ್ರೆಯನ್ನು ಕೈಗೊಂಡು, ಉತ್ತರ ಭಾರತದ ಅನೇಕ ಪ್ರದೇಶಗಳನ್ನು ಗೆದ್ದು, ದಿಗ್ವಿಜಯ ಸಾಧಿಸಿ, ತಮ್ಮ ಗಡಿಗಳನ್ನು ವಿಸ್ತರಿಸಿದಂತೆಯೇ, ಕನ್ನಡಿಗರಾದ ನಾವುಗಳು ಇಂದು ಸಾಹಿತ್ಯ, ಕಲೆ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ನೃತ್ಯ, ನಾಟಕ ಮುಂತಾದ ಕ್ಷೇತ್ರಗಳಲ್ಲಿ ದಂಡಯಾತ್ರೆಯನ್ನು ಕೈಗೊಳ್ಳಬೇಕಾಗಿದೆ, ಆ ನಿಟ್ಟಿನಲ್ಲಿ ನಮ್ಮದೊಂದು ಸಣ್ಣ ಪ್ರಯತ್ನ ಇದಾಗಿದೆ. ಈ ಶ್ರೇಯ ಏಳು ಕೋಟಿ ಕನ್ನಡಿಗರಿಗೆ ಅರ್ಪಿತವಾದದ್ದು. ಮುಂದಿನ ದಿನಗಳಲ್ಲಿ ಅನೇಕ ಸಂಶೋಧನಾ ಕೃತಿಗಳನ್ನು ಹೊರತಂದು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಲಾಗುವುದು” ಎಂದು ತಿಳಿಸಿದರು.

ಯೋಗೇಂದ್ರ ಟ್ರಾವೆಲ್ಸ್ ವತಿಯಿಂದ ಆಯೋಜಿಸಲಾಗಿದ್ದ ಕುಂಭಮೇಳ ಯಾತ್ರೆಯಲ್ಲಿ, ಭಾಗವಹಿಸಿದ್ದ 80ಕ್ಕೂ ಹೆಚ್ಚು ಯಾತ್ರಿಕರನ್ನೊಳಗೊಂಡ ಕರ್ನಾಟಕದ ತಂಡ ಕಾರ್ಯಕ್ರಮದಲ್ಲಿ ಉಪಸ್ಥಿತವಿತ್ತು.