ಯಶಸ್ವಿಯಾಗಿ ನಡೆದ ರಾಸಾಯನಿಕ ಸೋರಿಕೆ ಅಣುಕು ಪ್ರದರ್ಶನ

ವಿಜಯ ದರ್ಪಣ ನ್ಯೂಸ್….

ಯಶಸ್ವಿಯಾಗಿ ನಡೆದ ರಾಸಾಯನಿಕ ಸೋರಿಕೆ ಅಣುಕು ಪ್ರದರ್ಶನ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಫೆ.20 : ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಎನ್.ಡಿ.ಆರ್.ಎಫ್ ವತಿಯಿಂದ ಹೊಸಕೋಟೆ ತಾಲೂಕಿನ ದೇವನಗುಂದಿ ಕೈಗಾರಿಕಾ ಪ್ರದೇಶದ ಐಒಸಿಎಲ್ ಎಲ್.ಪಿ.ಜಿ ಬಾಟ್ಲಿಂಗ್ ಪ್ಲಾಂಟ್ ನಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ಅಫ್ ಸೈಟ್ ತುರ್ತು ರಾಸಾಯಿನಿಕ ಸೋರಿಕೆ ಅಣುಕು ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಲಾಯಿತು.

ಆಫ್-ಸೈಟ್ ತುರ್ತು ಅಣಕು ಪ್ರದರ್ಶನದಲ್ಲಿ ಸುಮಾರು 50 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಎನ್.ಡಿ.ಆರ್.ಎಫ್ ಸಿಬ್ಬಂದಿ, ಅಗ್ನಿಶಾಮಕ ದಳ, 12 ಆಂಬ್ಯುಲೆನ್ಸ್ ವಾಹನಗಳು, ವೈದ್ಯರು ಸೇರಿದಂತೆ ವಿವಿಧ ಇಲಾಖೆಗಳಿಂದ ಸುಮಾರು 100 ಪ್ರತಿನಿಧಿಗಳು ಭಾಗವಹಿಸಿದ್ದರು.

ಈ ಅಣುಕು ಪ್ರದರ್ಶನವನ್ನು ನೈಜ ಘಟನೆಯಂತೆ ಬಿಂಬಿಸಲಾಗಿತ್ತು. ಎಮ್/ಎಸ್ ಎಲ್.ಪಿ.ಜಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್. ಬಿ.ಪಿ.ಸಿ.ಎಲ್ ಎಲ್.ಟಿ.ಡಿ, ಎಂ.ಪಿ.ಸಿ.ಎಲ್ ಎಲ್.ಟಿ.ಡಿ ಕಾರ್ಖಾನೆಯ 20 ಕಾರ್ಮಿಕರು ರಾಸಾಯನಿಕ ಸೋರಿಕೆಯಿಂದ ಗಾಯಗೊಂಡರು, ಎನ್.ಡಿ.ಆರ್.ಎಫ್ ತಂಡ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಲಾಯಿತು. ಈ ರಾಸಾಯನಿಕ ದುರಂತ ಅಣುಕು ಪ್ರದರ್ಶನದಿಂದ 3 ಕಾರ್ಖಾನೆಗಳಿಂದ ಸುಮಾರು 400 ಕಾರ್ಮಿಕರನ್ನು ರಕ್ಷಿಸಿ ವಾಗಟ ಗ್ರಾಮದ ಪುನರ್ವಸತಿ ಕೇಂದ್ರ ಕ್ಕೆ ಸ್ಥಳಾಂತರಿಸಲಾಯಿತು.

ಇದು ಕೇವಲ ಅಣುಕು ಪ್ರದರ್ಶನವಾಗಿದ್ದು ಎಲ್ಲಾ ಇಲಾಖೆಗಳು ವಿಪತ್ತುಗಳು ಸಂಭವಿಸಿದಾಗ ಸರ್ವಸನ್ನದ್ಧರಾಗಿರಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಅಣುಕು ಪ್ರದರ್ಶನ ನೈಜ ಘಟನೆಯಂತೆ ನಡೆಸಲಾಗಿದ್ದು ವಿಪತ್ತು ಸಂಭವಿಸಿದಾಗ ಇಲಾಖೆಗಳ ಜವಾಬ್ದಾರಿ ಯನ್ನು ಪ್ರತ್ಯಕ್ಷವಾಗಿ ತಿಳಿಸಲು ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಅಣುಕು ಪ್ರದರ್ಶನದಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿರುವುದಿಲ್ಲ.

ಆಫ್-ಸೈಟ್ ಅಣಕು ಪ್ರದರ್ಶನದಲ್ಲಿ ಕಾರ್ಖಾನೆಗಳ ಜಂಟಿ ನಿರ್ದೇಶಕರಾದ ನವನೀತ್ ಮೋಹನ್, ಹೊಸಕೋಟೆ ತಹಶೀಲ್ದಾರ್ ಸೋಮಶೇಖರ್, ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣಸ್ವಾಮಿ, ಕಾರ್ಖಾನೆಗಳು ಉಪನಿರ್ದೇಶಕರಾದ ತಿಮ್ಮರಾಜು ವಿ, ಜನರಲ್ ಮ್ಯಾನೇಜರ್ ಸುಂದರ್, ಸ್ಟೇಷನ್ ಇಂಚಾರ್ಜ್ ಅರ್ನಾಬ್, ವಿವಿಧ ಇಲಾಖೆಗಳ ಪ್ರತಿನಿಧಿಗಳು, ವಿಪತ್ತು ತಜ್ಞೆ ಸ್ಮಿತಾ ಸೇರಿದಂತೆ ಇತರರು ಭಾಗವಹಿಸಿದ್ದರು.