ತುರ್ತು ರಾಸಾಯನಿಕ ಸೋರಿಕೆ ಅಣುಕು ಪ್ರದರ್ಶನ

ವಿಜಯ ದರ್ಪಣ ನ್ಯೂಸ್

ಫೆ.20 ರಂದು ತುರ್ತು ರಾಸಾಯನಿಕ ಸೋರಿಕೆ ಅಣುಕು ಪ್ರದರ್ಶನ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ. ಗ್ರಾ ಜಿಲ್ಲೆ, ಫೆ 18:- ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಎನ್.ಡಿ.ಆರ್.ಎಫ್ ವತಿಯಿಂದ ಹೊಸಕೋಟೆ ತಾಲೂಕಿನ ದೇವನಗುಂದಿ ಕೈಗಾರಿಕಾ ಪ್ರದೇಶದ ಐಒಸಿಎಲ್ ಎಲ್.ಪಿ.ಜಿ ಬಾಟ್ಲಿಂಗ್ ಪ್ಲಾಂಟ್ ನಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಫೆಬ್ರವರಿ 20 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ಅಫ್ ಸೈಟ್ ತುರ್ತು ರಾಸಾಯಿನಿಕ ಸೋರಿಕೆ ಅಣುಕು ಪ್ರದರ್ಶನ ನಡೆಸಲಾಗುವುದು.

ಈ ಸಂಬಂಧ ಇಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತರಬೇತಿ ಮತ್ತು ಟೇಬಲ್ ಟಾಪ್ ಎಕ್ಸರ್ಸೈಜ್ ಸಭೆಯನ್ನು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಾಡಲಾಯಿತು.

ಜಿಲ್ಲೆಯಲ್ಲಿ ಒಟ್ಟು 15 ಅಪಾಯಕಾರಿ ಕಾರ್ಖಾನೆಗಳು ಅಸ್ತಿತ್ವದಲ್ಲಿ ಇದ್ದು, ಅ ಕಾರ್ಖಾನೆಗಳಲ್ಲಿ ಎಲ್ಪಿಜಿ ಮತ್ತು ಪೆಟ್ರೋಲಿಯಂ ಗಳನ್ನು ಸ್ವೀಕರಣೆ,ಸಾಗಾಣಿಕೆ ಮಾಡಿ ಸಿಲಿಂಡರ್ ಅಥವಾ ಟ್ಯಾಂಕರ್ ಗಳಲ್ಲಿ ತುಂಬಿಸಿ ಗ್ರಾಹಕರಿಗೆ ನೀಡಲಾಗುತ್ತದೆ. ಈ ಕಾರ್ಖಾನೆಗಳಲ್ಲಿ ಒಂದಾದ ಎಮ್/ಎಸ್ ಎಲ್.ಪಿ.ಜಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್. ಬಿ.ಪಿ.ಸಿ.ಎಲ್ ಎಲ್.ಟಿ.ಡಿ, ಎಂ.ಪಿ.ಸಿ.ಎಲ್ ಎಲ್.ಟಿ.ಡಿ ಬಾಟ್ಲಿಂಗ್ ಪ್ಲಾಂಟ್ ಎಲ್.ಟಿ.ಡಿ ಕಾರ್ಖಾನೆಯಲ್ಲಿ ಒಟ್ಟು 6650 ಮೆಟ್ರಿಕ್ ಟನ್ ಶೇಖರಣೆ ಮಾಡಿ ಸರಬರಾಜು ಮಾಡಲಾಗುತ್ತದೆ. ಹಾಗಾಗಿ ಈ ಕಾರ್ಖಾನೆಯು ಜಿಲ್ಲೆಯಲ್ಲಿ ಅತೀ ಅಪಾಯಕಾರಿಯಾಗಿದ್ದು, ಈ ಅಣುಕು ಪ್ರದರ್ಶನದಲ್ಲಿ ಎಮ್/ಎಸ್ ಎಲ್.ಪಿ.ಜಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್. ಬಿ.ಪಿ.ಸಿ.ಎಲ್ ಎಲ್.ಟಿ.ಡಿ, ಎಂ.ಪಿ.ಸಿ.ಎಲ್ ಎಲ್.ಟಿ.ಡಿ ಕಾರ್ಖಾನೆಯ 20 ಕಾರ್ಮಿಕರಿಗೆ ತೊಂದರೆ ಆಗುವಂತೆ ಘಟನಾವಳಿಯನ್ನು ರೂಪಿಸಲಾಗುತ್ತದೆ. ಈ ರಾಸಾಯನಿಕ ದುರಂತ ಅಣುಕು ಪ್ರದರ್ಶನದಿಂದ 3 ಕಾರ್ಖಾನೆಗಳಿಂದ ಸುಮಾರು 200 ಕಾರ್ಮಿಕರನ್ನು ಸ್ಥಳಾಂತರಿಸಿ ಹತ್ತಿರದ ಪುನರ್ನಿರ್ಮಾಣ ಕೇಂದ್ರ (ರಿಹಾಬಿಲೇಶನ್ ಸೆಂಟರ್)ಅಲ್ಲಿ ಇರಿಸಲು ನಿರ್ಧರಿಸಲಾಗಿದೆ.

ನೈಸರ್ಗಿಕ ವಿಕೋಪಗಳು, ಕೈಗಾರಿಕಾ ಪ್ರದೇಶ ವ್ಯಾಪ್ತಿಗಳಲ್ಲಿ ಸಂಭವಿಸಬಹುದಾದ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು, ವಿಕೋಪಗಳಿಂದ ಆಗುವಂತಹ ಅನಾಹುತಗಳನ್ನು ತಪ್ಪಿಸಲು, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಅಣುಕು ಪ್ರದರ್ಶನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.

ಡಿಸೆಂಬರ್ 04 ರಾಸಾಯನಿಕ ಸೋರಿಕೆ ನಿರ್ವಹಣಾ ದಿನಾಚರಣೆ ಅಂಗವಾಗಿ ಪ್ರತಿ ವರ್ಷ ಅಣುಕು ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ. ಅಣುಕು ಪ್ರದರ್ಶನ ಆಗುವಂತಹ ಸಂದರ್ಭದಲ್ಲಿ ಅವಶ್ಯಕತೆ ಇರುವ ತುರ್ತು ಆಂಬುಲೆನ್ಸ್ ಹಾಗೂ ಆರೋಗ್ಯ ಸೇವೆ, ಅಗ್ನಿ ಶಾಮಕದಳ, ಟ್ರಾಫಿಕ್ (ವಾಹನ ದಟ್ಟಣೆ)ನಿಯಂತ್ರಣ ಹಾಗೂ ಬಂದೋಬಸ್ತ್ ವ್ಯವಸ್ಥೆಗೆ, ಇತರೆ ಇಲಾಖೆಗಳ ಜವಾಬ್ದಾರಿಗಳನ್ನು ತಿಳಿಸಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಸಹಾಯಕರಾದ ರಾಜೀವ್ ಸುಲೋಚನ, ಕಾರ್ಖಾನೆಗಳು ಹಾಗೂ ಬಾಯ್ಲರ್ ಗಳ ಜಂಟಿ ನಿರ್ದೇಶಕರಾದ ನವನೀತ್ ಮೋಹನ್, ಹೊಸಕೋಟೆ ವ್ಯಾಪ್ತಿಯ ಕಾರ್ಖಾನೆಗಳ ಉಪನಿರ್ದೇಶಕರಾದ ನರಸಿಂಹ ಮೂರ್ತಿ, ಕಾರ್ಖಾನೆಗಳ ದೇವನಹಳ್ಳಿ ವ್ಯಾಪ್ತಿಯ ಉಪನಿರ್ದೇಶಕರಾದ ಸೋಮಶೇಖರ್, ನೆಲಮಂಗಲ ವ್ಯಾಪ್ತಿಯ ಕಾರ್ಖಾನೆಗಳ ಉಪನಿರ್ದೇಶಕರಾದ ತಿಮ್ಮರಾಜು, ವಿಪತ್ತು ನಿರ್ವಹಣಾ ಪರಿಣಿತರಾದ ಸ್ಮಿತಾ, ಎನ್.ಡಿ.ಆರ್.ಎಫ್ ಅಧಿಕಾರಿಗಳು, ಅಗ್ನಿಶಾಮಕ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.