ಮಹಿಳಾ ಸಬಲೀಕರಣಕ್ಕೆ ಸ್ವ ಉದ್ಯೋಗ ಆಧಾರಿತ ತರಬೇತಿಗಳು ಅಗತ್ಯ: ವಿಠ್ಠಲ್‌ ಕಾವಳೆ


ವಿಜಯ ದರ್ಪಣ ನ್ಯೂಸ್

ಮಹಿಳಾ ಸಬಲೀಕರಣಕ್ಕೆ ಸ್ವ ಉದ್ಯೋಗ ಆಧಾರಿತ ತರಬೇತಿಗಳು ಅಗತ್ಯ: ಜಿ.ಪಂ. ಯೋಜನಾ ನಿರ್ದೇಶಕ ವಿಠ್ಠಲ್‌ ಕಾವಳೆ

ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಾಗೂ ಸಶಕ್ತಿಕರಣವಾಗಲು ಸ್ವ ಉದ್ಯೋಗಾಧಾರಿತ ತರಬೇತಿಗಳು ಅಗತ್ಯವಿದ್ದು, ಮಹಿಳಾ ಸಬಲೀಕರಣಕ್ಕೆ ಸ್ವ ಉದ್ಯೋಗ ಆಧಾರಿತ ತರಬೇತಿಗಳು ಸಹಕಾರ ನೀಡುತ್ತವೆ ಇಂತಹ ತರಬೇತಿಗಳನ್ನು ರುಡ್‌ಸೆಟ್‌ ಸಂಸ್ಥೆಯಲ್ಲಿ ಉಚಿತವಾಗಿ ಪಡೆಯಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕರಾದ ವಿಠ್ಠಲ್‌ ಕಾವಳೆ ಅವರು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಎನ್‌ಆರ್‌ಎಲ್‌ಎಂ ಹಾಗೂ ರುಡ್‌ಸೆಟ್‌ ಸಂಸ್ಥೆಯ ಸಹಯೋಗದೊಂದಿಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ 13 ದಿನಗಳ ಜೂಟ್‌ ಉತ್ಪನ್ನಗಳ ತಯಾರಿಕಾ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಅವರು ಮಾತನಾಡಿದರು.

ಜೂಟ್‌ ಉತ್ಪನ್ನಗಳು ಬಹುಬೇಡಿಕೆಯನ್ನು ಹೊಂದಿದ್ದು, ಪ್ಲಾಸ್ಟಿಕ್‌ ಮುಕ್ತ ಪರಿಸರಕ್ಕೆ ಇದು ಕೈಜೋಡಿಸಲಿದೆ. ಅಂತೆಯೇ ಇದು ಪರಿಸರಸ್ನೇಹಿಯಾಗಿದ್ದು, ದಿನನಿತ್ಯದ ಬಳಕೆಗೆ ವಿವಿಧ ಮಾದರಿಗಳ ಜೂಟ್‌ ಆಧಾರಿತ ಉತ್ಪನ್ನಗಳನ್ನು ಬಳಸಬಹುದಾಗಿದೆ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಎನ್‌ಆರ್‌ಎಲ್‌ಎಂ ವಿಭಾಗದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಮಂಜುಳಾ ಅವರು ಮಾತನಾಡಿ, ತರಬೇತಿ ಪೂರ್ಣಗೊಳಿಸಿರುವ ಎಲ್ಲಾ ಮಹಿಳೆಯರು ತಮ್ಮ ಮನೆಗಳಲ್ಲಿ ವೈಯಕ್ತಿಕವಾಗಿ ಅಥವಾ ಗುಂಪು ಚಟುವಟಿಕೆಗಳ ಮೂಲಕ ಜೂಟ್‌ ಆಧಾರಿತ ಉತ್ಪನ್ನ ತಯಾರಿಸಿ, ಆದಾಯ ಹೊಂದಬಹುದು ಎಂದರಲ್ಲದೆ, ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ನಡೆಯುವ ಮಾಸಿಕ ಸಂತೆಗಳು, ವ್ಯಾಪಾರ ಮೇಳಗಳಲ್ಲಿ ಜೂಟ್‌ ಉತ್ಪನ್ನಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು.

ರುಡ್‌ಸೆಟ್‌ ಸಂಸ್ಥೆಯ ನಿರ್ದೇಶಕ ರವಿಕುಮಾರ ಅವರು ಮಾತನಾಡಿ, ಸಂಸ್ಥೆಯಲ್ಲಿ ತರಬೇತಿ ಪಡೆಯುವುದು ಮಾತ್ರವಲ್ಲದೇ, ಬ್ಯಾಂಕಿನಲ್ಲಿ ಸಾಲ ಪಡೆದು, ಸ್ವ ಉದ್ಯೋಗ ಆರಂಭಿಸುವ ಮೂಲಕ ಸ್ವಾವಲಂಬಿಗಳಾಗಬೇಕು ಹಾಗೂ ತರಬೇತಿ ಮೂಲಕ ಪಡೆದ ಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರಲ್ಲದೆ, ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಲವಾರು ಕೆಲಸಗಳನ್ನು ಒಟ್ಟಿಗೆ ನಿಭಾಯಿಸುವ ಅನನ್ಯ ಶಕ್ತಿ ಕೇವಲ ಮಹಿಳೆಯರಿಗೆ ಮಾತ್ರ ಇರುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ವಿಠ್ಠಲ್‌ ಕಾವಳೆ ಅವರು ಸಾಂಕೇತಿಕವಾಗಿ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ, ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯಿತಿ ಹಾಗೂ ಹೊಸಹಳ್ಳಿ ಗ್ರಾಮ ಪಂಚಾಯಿತಿಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿನಿಧಿಗಳು, ರುಡ್‌ಸೆಟ್ ಸಂಸ್ಥೆಯ ಉಪನ್ಯಾಸಕಿ ವಿದ್ಯಾ ಹೊಸಮನಿ ಸೇರಿದಂತೆ ಜೂಟ್‌ ಉತ್ಪನ್ನ ತಯಾರಿಕಾ ತರಬೇತಿಯ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.