ಶಿಕ್ಷಣದ ಮಹತ್ವಸಾರಿದ ಶ್ರೀ ಸಂತ ಸೇವಾಲಾಲ್

ವಿಜಯ ದರ್ಪಣ ನ್ಯೂಸ್…

ಶಿಕ್ಷಣದ ಮಹತ್ವಸಾರಿದ ಶ್ರೀ ಸಂತ ಸೇವಾಲಾಲ್

ದೇವನಹಳ್ಳಿ, ಫೆ.17-ಶಿಕ್ಷಣದ ಮಹತ್ವವನ್ನು ಸಾರುವ ಮೂಲಕ ಎಲ್ಲರೂ ಶಿಕ್ಷಿತರಾಗಿ ಅಕ್ಷರ ಜ್ಞಾನವನ್ನು ಪಡೆದು ಜಗತ್ತಿಗೆ ದಾರಿ ದೀಪವಾಗಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ತಹಸಿಲ್ದಾರ್   ಎಚ್ .ಬಾಲಕೃಷ್ಣ ತಿಳಿಸಿದರು.

ಪಟ್ಟಣದ ಆಡಳಿತ ಸೌಧದ ಸಭಾಂಗಣದಲ್ಲಿ ಶ್ರೀ ಸದ್ಗುರು ಸೇವಾಲಾಲ್ ಜಿಲ್ಲಾ ಬಂಜಾರ ನೌಕರರ ಸಾಂಸ್ಕೃತಿಕ ಕ್ಷೇಮಾಭಿವದ್ದಿ ಸಂಘದ ಸಹಯೋಗದಲ್ಲಿ ನಡೆದ ಶ್ರೀ ಸಂತ ಸೇವಾಲಾಲ್ ಮಹಾರಾಜರ 286 ನೇ ಜಯಂತೋತ್ಸವವದಲ್ಲಿ ಅವರು ಮಾತನಾಡಿದರು.

‘ಸೇವಾ ಲಾಲರು ತಮ್ಮ ತತ್ವಗಳ ಮೂಲಕ ಲೋಕಕ್ಕೆ ಜ್ಞಾನದ ಮೂಲಕ ಮುಕ್ತಿ ಮಾರ್ಗ ತೋರಿಸಿದರು. ಸರ್ವರನ್ನು ಒಳಗೊಂಡ ಸಮ ಸಮಾಜದ ನಿರ್ಮಾಣ ಹಾಗೂ ಸರ್ವರಲ್ಲೂ ಸೋದರತೆಯ ಭಾವನೆ ಮೂಡಲು ಪ್ರೇರೇಪಿಸಿದರು’ ಎಂದು ಹೇಳಿದರು.

‘ಸೇವಾಲಾಲ್ ಅವರು ದನಗಾಯಿ ಗೋಪಾಲಕನಾಗಿ ತಮ್ಮ ಜೀವನದ ಅನುಭವವನ್ನು ತಮ್ಮ ತತ್ವದ ಮೂಲಕ ಜನರಲ್ಲಿನ ಅಜ್ಞಾನವನ್ನು ದೂರ ಮಾಡಿದರು. ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದರು. ಇದಲ್ಲದೆ ಮಾನವ ಜನ್ಮ ಪವಿತ್ರವಾದದ್ದು ಇದನ್ನು ಹಾಳು ಮಾಡಿಕೊಳ್ಳಬೇಡಿ, ವ್ಯಸನಗಳಿಂದ ದೂರವಿರಿ (ದಾರು, ಗಾಂಜಾ ಮತ್ ಪೀವೋ) ಅರಿಷಡ್ ವರ್ಗಗಳನ್ನು ಸುಟ್ಟು ಹಾಕಿ (ಕಾಮ ಕ್ರೋಧೇರಿ ಧೂಣಿ ಬಾಳೋ), ಪ್ರಾಮಾಣಿಕರಾಗಿ ಜೀವಿಸಿ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿರಿ’ ಎಂದು ತಿಳಿಸಿದರು.

ನಿವೃತ್ತರಾದ ಪಶುವೈದ್ಯ ಇಲಾಖೆಯ ಅಧಿಕಾರಿ ಮತ್ತು ಶ್ರೀ ಸದ್ಗುರು ಸೇವಾಲಾಲ್ ಜಿಲ್ಲಾ ಬಂಜಾರ ನೌಕರರ ಸಾಂಸ್ಕೃತಿಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಡಾ.ಶಿವಾಜಿ ನಾಯಕ್ ಮಾತನಾಡಿ, ‘ಈ ನಮ್ಮ ದೇಶದ ನೆಲ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ್ದು ಈ ವೈವಿಧ್ಯತಾ ಸಂಸ್ಕೃತಿಗೆ ಹಲವಾರು ಸಾಂಸ್ಕೃತಿಕ ರಾಯಭಾರಿಗಳುಕಾರಣೀಭೂತರು, ಭಾರತ ನೆಲದಲ್ಲಿ ಹಲವು ಸಂತರು, ಧರ್ಮ ಸುಧಾರಕರು, ತತ್ವಜ್ಞಾನಿಗಳು ಜನ್ಮ ತಾಳಿ ಜನರಲ್ಲಿನ ಮೂಢನಂಬಿಕೆಯನ್ನು ಹೋಗಲಾಡಿಸಿದ್ದಾರೆ. ಇಂತಹ ಮಹಾನ್ ಸಂತರುಗಳಲ್ಲಿ ಲಂಬಾಣಿ ಸಮುದಾಯದ ಆರಾಧ್ಯ ದೈವ ಸದ್ಗುರು ಸಂತ ಸೇವಾಲಾಲ್ ಮಹಾರಾಜರು ಒಬ್ಬರು’ ಎಂದು ತಿಳಿಸಿದರು.

ಇದೇ ವೇಳೆ ಪಶುವೈದ್ಯ ಇಲಾಖೆಯ ನಿವೃತ್ತ ಅಧಿಕಾರಿ ಡಾ.ಶಿವಾಜಿನಾಯಕ್, ಹಾಗೂ ಶಿಕ್ಷಕಿ ನಾಗಿಬಾಯಿಯವರನ್ನ ಬಂಜಾರ ಸಂಘದಿಂದ ಸನ್ಮಾನಿಸಲಾಯಿತು. ಬಂಜಾರ ಸಂಘದ ಕಾರ್ಯದರ್ಶಿ ರವಿನಾಯಕ್, ಸರ್ವೆಯರ್ ಜೆ.ಗಿರೀಶ್, ಖಜಾಂಚಿ ಪ್ರೇಮಸಿಂಗ್ ರಾಥೋಡ್, ನಿರ್ದೇಶಕರಾದ ಜಯನಾಯಕ್, ಜಿ.ಪಂ. ಪಶುವೈದ್ಯ ನಿವೃತ್ತ ಅಧಿಕಾರಿ ಶಿವಕುಮಾರ್, ಮಂಜುನಾಯಕ್, ರಮೇಶನಾಯಕ್, ಸಂಚಾರ ವಿಭಾಗ ಎಸ್‌ಐ ಗಿರೀಶ್ ನಾಯಕ್, ನಾಗಪ್ಪ, ಭಾರತಿ, ಶೋಭಾಬಾಯಿ ಗೀತಾಬಾಯಿ, ನಾಗೀಬಾಯಿ ಮುಂತಾದವರು ಉಪಸ್ಥಿತರಿದ್ದರು.