ಬದುಕು ಬದಲಿಸುವ ಉಡುಗೊರೆ!

ವಿಜಯ ದರ್ಪಣ ನ್ಯೂಸ್….

ಬದುಕು ಬದಲಿಸುವ ಉಡುಗೊರೆ!

ಯಾವುದೇ ವಸ್ತು ಉಡುಗೊರೆ ಆಗುವುದು ಅದನ್ನು ನೋಡುವ ಭಾವದಿಂದ. ಉಡುಗೊರೆಯ ಹಿಂದಿರುವ ಭಾವನೆಯನ್ನು ಕಾಣದೇ ಹೋದರೆ ಅದು ಒಂದು ಜಡ ವಸ್ತು. ಬಾಳಿಗೆ ಬೆಳಕು ನೀಡುವ ಅಕ್ಷರ ರಾಶಿಯನ್ನು ಹೊತ್ತ ಹೊತ್ತಿಗೆಗಿಂತ ಮಿಗಿಲಾದ ಉಡುಗೊರೆ ಬೇರೇನಿದೆ?

ಏನು ಉಡುಗೊರೆ ಕೊಡಬೇಕು? ಎನ್ನುವ ಗೊಂದಲದಲ್ಲಿ ಬೀಳುತ್ತೇವೆ. ಸ್ನೇಹಿತರನ್ನು ಉಡುಗೊರೆಯ ಪಟ್ಟಿ ಕೇಳುತ್ತೇವೆ. ಅವರು ಹೆಸರಿಸಿದ ಉಡುಗೊರೆಗಳು ನಮ್ಮ ಮನಸ್ಸಿಗೆ ಬರುವುದಿಲ್ಲ. ಬಂದರೂ ನಾವು ಕೊಡುವ ವ್ಯಕ್ತಿಗಳಿಗೆ ಇಷ್ಟವಾಗುತ್ತದೆಯೋ, ಇಲ್ಲವೋ? ಎನ್ನುವ ಆತಂಕ ನಮ್ಮನ್ನು ಕಾಡುತ್ತದೆ. ಏನು ಕೊಡಬೇಕೆಂದು ತಿಳಿಯದೇ ಕೊನೆಗೆ, ಎರಡೂರು ದಿನಗಳವರೆಗೆ ಬಾಳುವ ಹೂಗುಚ್ಛ ಅಥವಾ ಮನೆಯ ಮೂಲೆಯಲ್ಲಿಡುವ ಉಡುಗೊರೆಯನ್ನು ನಮ್ಮ ಪ್ರೀತಿ ಪಾತ್ರರಿಗೆ, ಬಂಧು ಮಿತ್ರರಿಗೆ ಉಡುಗೊರೆಯಾಗಿ ನೀಡಿ ಶುಭಹಾರೈಸುವುದನ್ನು ಗೀಳಾಗಿಸಿಕೊಂಡಿದ್ದೇವೆ. ಅದರಿಂದಾಗುವ ಪ್ರಯೋಜನ ಅತಿ ಕಡಿಮೆ. ನಾವು ಕೊಡುವ ಬೆಲೆ ಬಾಳುವ ವಸ್ತುಗಳು ಧೂಳಿಗೆ ಆಹಾರವಾಗುತ್ತವೆ. ಬತ್ತುವ ಕೆರೆಗಿಂತ ಒಸರುವ ಒರತೆಯೇ ಲೇಸು ಎಂಬ ಗಾದೆಯಂತೆ ಪ್ರೀತಿ ಪಾತ್ರರಿಗೆ ನಾವು ನೀಡುವ ಉಡುಗೊರೆ ವಿಶಿಷ್ಟ ಹಾಗೂ ವಿಭಿನ್ನವಾಗಿರಬೇಕು ಎಂದು ನಾವು ಹೀಗೆ ಏನೇನೋ ಸಾಹಸ ಮಾಡುತ್ತೇವೆ. ನಿಜ ಅರ್ಥದಲ್ಲಿ ಯಾವುದೇ ವಸ್ತು ಉಡುಗೊರೆ ಆಗುವುದು ಅದನ್ನು ನೋಡುವ ಭಾವದಿಂದ, ಉಡುಗೊರೆಯ ಹಿಂದಿರುವ ಭಾವನೆಯನ್ನು ಕಾಣದೇ ಹೋದರೆ ಅದು ಒಂದು ಜಡ ವಸ್ತುವೇ ಸರಿ. ಬಾಳಿಗೆ ಹೊಸ ಬೆಳಕು ನೀಡುವ ಅಕ್ಷರ ರಾಶಿಯನ್ನು ಹೊತ್ತ ಹೊತ್ತಿಗೆಗಿಂತ ಮಿಗಿಲಾದ ಉಡುಗೊರೆ ಬೇರೇನಿದೆ? ಈ ಉಡುಗೊರೆ ಆಟಿಕೆ ಸಾಮಾನು ಶೋಕಿ ಸಾಮಾನುಗಳಿಗಿಂತ ಹೆಚ್ಚು ಬಾಳುವಂತದ್ದು. ಬೆಲೆ ಕಟ್ಟಲಾಗದಂತದ್ದು.

ಒಮ್ಮೆ ಪಕ್ಕದ ಮನೆ ಪುಟ್ಟಿಯ ಹುಟ್ಟು ಹಬ್ಬದ ದಿನ ಉಡುಗೊರೆಯಾಗಿ ಪ್ರಾಸ ಬದ್ಧ ಶಿಶುಗೀತೆಗಳ ಚಿಕ್ಕ ಪುಸ್ತಕವನ್ನು ಕೈಗಿತ್ತೆ. ರಾಶಿ ರಾಶಿ ಆಟಿಕೆ ಸಾಮಾನು ಶೋಕಿ ಸಾಮಾನುಗಳ ನಡುವೆ ನನ್ನದೊಂದೇ ಪುಟ್ಟ ಪುಸ್ತಕ. ಪುಟ್ಟಿಯ ಅಮ್ಮ ನನ್ನೆಡೆ ಅಚ್ಚರಿಯ ನೋಟ ಬೀರಿದಳು. ಕೆಲ ದಿನಗಳ ನಂತರ ಪುಟ್ಟಿ ಸೊಗಸಾಗಿ ಶಿಶು ಗೀತೆಗಳನ್ನು ಹೇಳಿ ನಲಿಯುವುದನ್ನು ಕಂಡು, ‘ನೀವು ನೀಡಿದ ಹಾಡಿನ ಪುಸ್ತಕ ನಮ್ಮ ಪುಟ್ಟಿಗೆ ಬಾಳ ಇಷ್ಟ ಆಗಿದ. ಅದರಾಗಿನವು ಹಾಡು ಹಾಡಿ ಕುಣಿತಾಳ’ ಎಂದು ಮುಖ ಅರಳಿಸಿ ಹೇಳಿದರು.

ಇನ್ನೊಂದು ಸಾರಿ ತಾಯಿಗೆಂದು ಕೊಟ್ಟ ಪುಸ್ತಕ ಮಗ ಓದಿ, ಪುಸ್ತಕ ನನಗೆ ತುಂಬಾ ಇಷ್ಟವಾಯ್ತು ಎಂದು ಮುಗಳಗೆಯನ್ನು ಚೆಲ್ಲಿದಾಗ ನನಗಾದ ಖುಷಿ ಪದಗಳಲ್ಲಿ ಹೇಳಲಾಗದು. ಜ್ಞಾನದ ದೀವಿಗೆಯಂತಿರುವ ಪುಟ್ಟ ಪುಸ್ತಕ ಅರಿವು ಮೂಡಿಸಿ, ಮನುಷ್ಯನ ಬದುಕಿನ ದಿಕ್ಕನ್ನೇ ಬದಲಿಸಬಿಡಬಲ್ಲದು. ಅಂಥ ಅದಮ್ಯ ಶಕ್ತಿ ಇರುವುದು ಕೇವಲ ಪುಸ್ತಕಗಳಿಗೆ ಮಾತ್ರ.

ಪುಸ್ತಕದಿಂದ ದೊರೆಯುವ ಸಂತೋಷ ಸಂತೃಪ್ತಿ ಇನ್ನಾವುದರಲ್ಲೂಸಿಗಲು ಸಾಧ್ಯವಿಲ್ಲ. ಇತರರಲ್ಲಿ ಓದುವ ಅಭಿರುಚಿ ಮೂಡಿಸುವಂಥ ಸುವರ್ಣ ಅವಕಾಶ ಸಿಕ್ಕಾಗ ಈ ದಿಶೆಯಲ್ಲಿ ಪ್ರಯತ್ನಿಸಬಾರದೇಕೆ? ಒಳ್ಳೆಯದು ಯಾವುದೇ ಆಗಲಿ ನಾವು ಉದ್ದೇಶಪೂರ್ವಕವಾಗಿ ಅಭ್ಯಾಸ ಮಾಡಿಕೊಳ್ಳದೇ ರೂಢಿಯಾಗುವುದಿಲ್ಲ, ಒಳ್ಳೆಯ ಪುಸ್ತಕಗಳು ನಕಾಶೆಯಿದ್ದಂತೆ. ಅದು ಒಳ್ಳೆಯದನ್ನು ತೋರಿಸುತ್ತದೆ. ಆದರೆ ಆ ಸ್ಥಾನವನ್ನು ತಲುಪುವುದು ನಿನ್ನ ಸಾಮರ್ಥ್ಯವನ್ನು ಅವಲಂಬಿಸುತ್ತದೆ.’ ಎಂಬ ವಿವೇಕಾನಂದರ ವಿದ್ವತ್ ವಾಣಿಯಂತೆ ಶುಭ ಸಂದರ್ಭದಲ್ಲಿ ಬದುಕನ್ನು ಬದಲಿಸುವ ಶಕ್ತಿ ಸಾಂಕೇತಿಕವಾದ ಒಳ್ಳೆಯ ಪುಸ್ತಕವನ್ನು ಅವರ ಕೈಗಿಡೋಣ. ಜ್ಞಾನದ ಕಿಡಿಯಿಂದ ಅರಿವಿನ ಬೆಳಕು ಹಚ್ಚಿ, ಬದುಕು ಬದಲಿಸುವುದಕ್ಕೆ ಮುನ್ನುಡಿ ಬರೆಯೋಣವಲ್ಲವೇ?.

ಜಯಶ್ರಿ ಜೆ. ಅಬ್ಬಿಗೇರಿ ಬೆಳಗಾವಿ