ಮಲೆನಾಡುಗಿಡ್ಡ ಈ ಗೋತಳಿಯ ಮೌಲ್ಯವರ್ಧನೆ ಮಾಡಿದೆ ಕೊರೊನಾ!
ವಿಜಯ ದರ್ಪಣ ನ್ಯೂಸ್…
ಮತ್ತೆ ಮುನ್ನೆಲೆಗೆ ಮಲೆನಾಡುಗಿಡ್ಡ
ಈ ಗೋತಳಿಯ ಮೌಲ್ಯವರ್ಧನೆ ಮಾಡಿದೆ ಕೊರೊನಾ!
ಕೋವಿಡ್ ಲಾಕ್‌ಡೌನ್ ನಂತರದಲ್ಲಿ ಜಾನುವಾರುಗಳ ಸಾಗಾಣಿಕೆಯಲ್ಲಿ ದಿಡೀರ್ ಏರಿಕೆಯಾಗಿದೆ. ಹೈನುಗಾರಿಕೆಗಾಗಿ ಹಸು, ಎಮ್ಮೆಗಳ ಕೊಡುಕೊಳ್ಳುವಿಕೆ, ತತ್ಸಂಬಂಧದ ಸಾಗಾಟ ಸಾಮಾನ್ಯವಾದರೂ ಕೊರೊನಾ ಕಾರಣದಿಂದ ನಾಡಿನ ಒಂದು ಗೋತಳಿಗೆ ಏಕಾಏಕಿ ಬೇಡಿಕೆ ಸೃಷ್ಟಿಯಾಗಿರುವುದು ಅನಿರೀಕ್ಷಿತವಷ್ಟೇ ಅಲ್ಲ ವಿಶೇಷ ಕೂಡ.
ಕಳೆದ ವರ್ಷ ಎಲ್ಲರೂ ಹೆಚ್ಚು ಚರ್ಚೆ ಮಾಡಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಕಾಯಿಲೆಗೆ ಬ್ರೇಕ್ ಹಾಕುವುದಕ್ಕೆ ಸಂಬಂಧಿಸಿದ ವಿಷಯ. ಸಾಂಪ್ರದಾಯಿಕ ಆಹಾರ ಪದ್ಧತಿಯತ್ತ ಹೊರಳುವುದರ ನಡುವೆಯೇ ದೇಸಿ ಹಾಲು, ಮೊಸರು, ಬೆಣ್ಣೆ, ತುಪ್ಪಕ್ಕಾಗಿನ ಬೇಡಿಕೆ ಒಮ್ಮೆಲೇ ಹೆಚ್ಚಿದೆ. ಹಿತ್ತಲ ಗಿಡ ಮದ್ದಲ್ಲ ಎಂಬಂತೆ, ಹುಟ್ಟೂರಿನಲ್ಲಿ ಅವಸ್ಥೆಗೆ ತುತ್ತಾಗಿರುವ ‘ಮಲೆನಾಡುಗಿಡ್ಡ’ ತಳಿ ಹಸುಗಳ ಹಣೆಬರಹವನ್ನು ಕೋವಿಡ್ ಬದಲಾಯಿಸಿದಂತೆ ತೋರುತ್ತಿದೆ. ಅವುಗಳ ಸಾಮರ್ಥ್ಯದ ನಿಜ ಮೌಲ್ಯಮಾಪನವಾಗುತ್ತಿದೆ.
ಪಶ್ಚಿಮಘಟ್ಟದ ತಪ್ಪಲವಾಸಿ ಈ ಮಲೆನಾಡುಗಿಡ್ಡ ಜಾನುವಾರುಗಳದ್ದು ಹೆಸರೇ ಹೇಳುವಂತೆ ತುಂಬಾ ಕುಳ್ಳು ಶರೀರ, ತುಸು ನಾಚಿಕೆ, ಅಂಜಿಕೆಯ ಸ್ವಭಾವ. ಎತ್ತರ ಒಂದು ಮೀಟರ್ ದಾಟದು. ದೇಹದ ತೂಕ ಹೆಚ್ಚೆಂದರೆ ಒಂದೂವರೆ ಕ್ವಿಂಟಲ್ ಅಷ್ಟೆ, ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳು ಇವುಗಳ ಸಹಜ ಆವಾಸ ಪ್ರದೇಶಗಳು, ಎಂತಹದ್ದೇ ಗಾಳಿ, ಮಳೆ, ಚಳಿ, ಬಿಸಿಲಿಗೆ ಜಗ್ಗದ ತಳಿಯಿದು. ಹೈನು, ಗೊಬ್ಬರ, ಕೃಷಿ ಕಾರ್ಯಕ್ಕಾಗಿ ಬಳಕೆಯಾಗುವ ಗಿಡ್ಡಗಳು ಕಾಡುಮೇಡಲ್ಲಿ ಅಲೆದು ಹುಲ್ಲು, ಸೊಪ್ಪುಸದೆಗಳನ್ನು ಮೇಯುತ್ತಾ ಮಾಲೀಕನ ಮುತುವರ್ಜಿಯಿಲ್ಲದೆ ತಮ್ಮಷ್ಟಕ್ಕೆ ತಾವೇ ಬದುಕು ಕಟ್ಟಿಕೊಳ್ಳುವ ಪಶುಗಳು. ಹಾಗಾಗಿ ನಿರ್ವಹಣಾ ವೆಚ್ಚ ಬಹುತೇಕ ಶೂನ್ಯ.
ಅಪ್ರತಿಮ ರೋಗನಿರೋಧಕ ಶಕ್ತಿ ನಿಸರ್ಗದ ಬಳುವಳಿ. ತುಂಬಾ ವಿಳಂಬವಾಗಿ 2012ರಲ್ಲಿ ತಳಿ ಮಾನ್ಯತೆ ಪಡೆದ ಇವುಗಳ ಸಂಖ್ಯೆ ಅಂದಾಜು 10 ಲಕ್ಷ. ಮಲೆನಾಡುಗಿಡ್ಡದ ಹಾಲಿಗೆ ವಿಶೇಷ ಮೌಲ್ಯವಿದೆ. ವಿಶಿಷ್ಟ ರುಚಿ, ವಾಸನೆ, ಕ್ಯಾಲ್ಸಿಯಂ, ಪ್ರೋಟೀನ್, ಹಿತಕರ ಕೊಬ್ಬು, ಅಗತ್ಯ ವಿಟಮಿನ್‌ಗಳ ಆಗರವಾಗಿರುವ ಹಾಲು ತುಂಬಾ ಪೌಷ್ಟಿಕರವಷ್ಟೇ ಅಲ್ಲ ಸುಲಭವಾಗಿ ಜೀರ್ಣವಾಗುವ ಗುಣವುಳ್ಳದ್ದು. ಹಾಗಾಗಿ ಕಂದಮ್ಮಗಳಿಂದ ಹಿಡಿದು ವೃದ್ಧರು, ರೋಗಿಗಳಿಗೂ ಇದು ಅಮೃತ ಎಂದು ಪರಿಗಣಿಸಲ್ಪಟ್ಟಿದೆ. ಸರಾಸರಿ ಎರಡು ಲೀಟರ್‌ನಿಂದ ಮೂರು ಲೀಟರ್ ಹಾಲು ಕರೆಯುವ ಈ ಹಸುಗಳು ಉತ್ತಮವಾಗಿ ನಿರ್ವಹಣೆ ಮಾಡಿದಾಗ ಐದು ಲೀಟರ್ ತನಕ ಉತ್ಪಾದನಾ ಸಾಮರ್ಥ್ಯ ಹೊಂದಿವೆ.
ಆಯುರ್ವೇದದಲ್ಲೂ ಈ ತಳಿಯ ಹಾಲಿಗೆ ವಿಶೇಷ ಮಹತ್ವ ಇರುವುದರಿಂದ ಬೇಡಿಕೆ ಹೆಚ್ಚು. ಮಿಶ್ರತಳಿ ಹಸುಗಳ ಹಾಲಿನ ದರ ಲೀಟರ್ಗೆಗೆ ಐವತ್ತರ ಒಳಗಿದ್ದರೆ ಮಲೆನಾಡುಗಿಡ್ಡದ ಸಾವಯವ ಹಾಲು ನೂರು ರೂಪಾಯಿಗೂ ಸಿಗದು!
ಜನಸಂಖ್ಯಾ ಸ್ಫೋಟ, ಮಾನವನ ಅತಿಯಾಸೆ, ದುರಾಸೆಯ ಕಾರಣ ಯಥೇಚ್ಛ ಹಸಿರು ಮೇವು ಒದಗಿ-
ಗೋಮಾಳಗಳಂತೂ ಕಾಣಸಿಗುವುದು ಕಂದಾಯ ಇಲಾಖೆಯ ದಾಖಲೆಗಳಲ್ಲಿ ಮಾತ್ರ! ಭತ್ತದ ಕೃಷಿ ಕಡಿಮೆಯಾಗಿ ಅಡಿಕೆ, ಶುಂಠಿಯಂತಹ ವಾಣಿಜ್ಯ ಬೆಳೆಗಳ ವಿಸ್ತರಣೆಯೂ ಮೇವಿನ ಅಭಾವ ಸೃಷ್ಟಿಸಿದೆ. ಅತ್ತ ಹಸಿರು ಮೇವೂ ಇಲ್ಲ, ಇತ್ತ ಕೃಷಿತ್ಯಾಜ್ಯವೂ ಇಲ್ಲ. ಕುಪೋಷಣೆಯ ಪರಿಣಾಮ ಈ ಜಾನುವಾರುಗಳು ಸೊರಗುತ್ತಾ ತಮ್ಮ ಶಕ್ತಿ, ಸಾಮರ್ಥ್ಯ ಕಳೆದುಕೊಳ್ಳುತ್ತಿವೆ. ಕಾಯಿಲೆ ಪ್ರತಿರೋಧಕತೆಗೆ ಹೆಸರಾಗಿದ್ದ ತಳಿಯು ಉಣ್ಣೆ ಬಾಧೆ. ಕಾಲುಬಾಯಿ ಜ್ವರ, ಚರ್ಮಗಂಟು ರೋಗ ಸೇರಿದಂತೆ ವಿವಿಧ ವ್ಯಾಧಿಗಳಿಗೆ ತುತ್ತಾಗುತ್ತಿರುವುದು ದೌರ್ಭಾಗ್ಯದ ಸಂಗತಿ. ಹುಲ್ಲುಗಾವಲಿನ ಅತಿಕ್ರಮಣದ ಕಾರಣ ಮೇಯಲು ಹೊರಗೆ ಬಿಟ್ಟಾಗ ಗದ್ದೆ, ತೋಟಗಳ ಬೇಲಿ ಹಾರಿ ಬೆಳೆಹಾನಿ ಮಾಡುವುದರಿಂದ ಮಾನವನ ದೌರ್ಜನ್ಯವೂ ಹೆಚ್ಚಿದೆ. ಹೊಡೆತ, ಬಡಿತ, ಗಾಯ, ಕೈಕಾಲು ಮುರಿತದ ಘಟನೆಗಳಂತೂ ಇತ್ತೀಚೆಗೆ ತೀರಾ ಸಾಮಾನ್ಯ. ಇಂತಹ ತಲೆನೋವುಗಳ ಕಾರಣ ಮಲೆನಾಡ ರೈತರು ಗಿಡ್ಡಗಳ ಸಾಕಾಣಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.
ತನ್ನ ಸ್ವಾಭಾವಿಕ ಆವಾಸಸ್ಥಾನದಲ್ಲಿ ಅಸಡ್ಡೆಗೆ ಗುರಿಯಾಗಿರುವ ಈ ತಳಿಯ ಬಗ್ಗೆ ಮಲೆನಾಡು ಹೊರತಾದ ಪ್ರದೇಶದಲ್ಲಿ ಒಲವು ಮೂಡುತ್ತಿರುವುದು ನಿಜಕ್ಕೂ ವಿಶೇಷ. ಆರೋಗ್ಯದ ಕುರಿತಾಗಿ ಕಾಳಜಿ ಹೆಚ್ಚಿಸಿರುವ ಈ ಕೋವಿಡ್ ಕಾಲಘಟ್ಟ ಜಂಕ್ ಫುಡ್‌ನಿಂದ ದೂರವಿರುವ, ವಿಷಮುಕ್ತ ಸಾವಯವ ಆಹಾರದ ಸಂಕಲ್ಪ ತೊಡಿಸಿದೆ. ಕಾಯಿಲೆಯಿಂದ ದೂರವುಳಿಯಲು, ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ದೇಸಿ ಹಾಲಿಗೆ ಬೇಡಿಕೆ ಏರಿದೆ. ಉತ್ತಮ ರೋಗನಿರೋಧಕ ಸಾಮರ್ಥ್ಯ ಹೊಂದಿರುವ, ಗುಣಮಟ್ಟದ ಹಾಲು ನೀಡುವ, ನಿರ್ವಹಣಾ ವೆಚ್ಚ ತುಂಬಾ ಕಡಿಮೆಯಿರುವ ಕಾರಣ ಸಾಕಲು ಸುಲಭವಾಗಿರುವ ಮಲೆನಾಡುಗಿಡ್ಡ ಸಹಜ ಆಯ್ಕೆಯಾಗಿ ದೊಡ್ಡ ಸಂಖ್ಯೆಯಲ್ಲಿ ಬೆಂಗಳೂರು, ಮೈಸೂರು, ಕೋಲಾರ, ತುಮಕೂರಿನ ಜೊತೆಗೆ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಅಂತಲ್ಲಾ ವಿವಿಧೆಡೆಗೆ ಸಾಗಾಣಿಕೆಯಾಗುತ್ತಿದೆ. ಕೊರೊನಾವು ಮಲೆನಾಡುಗಿಡ್ಡ ಗೋವುಗಳ ಮೌಲ್ಯವರ್ಧನೆ ಮಾಡಿದ್ದಂತೂ ದಿಟ.