ಅಖಿಲ ಕೊಡವ ಸಮಾಜದ ಮನವಿ ಪತ್ರದ ವಿರುದ್ಧ ಕೊಡಗು ಗೌಡ ಸಮಾಜಗಳ ಒಕ್ಕೂಟ ತೀವ್ರ ಅಸಮಾಧಾನ
ಮಡಿಕೇರಿ: ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಫೆ.೭ ರಂದು ಮಡಿಕೇರಿಯಲ್ಲಿ ಬೃಹತ್ ಜಾಥಾವನ್ನು ಶಾಂತಿಯುತವಾಗಿ ನಡೆಸಿರುವುದಕ್ಕೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಆದರೆ ಜಾಥಾ ನಡೆದ ನಂತರ ಜಿಲ್ಲಾಡಳಿತಕ್ಕೆ ನೀಡಿದ ಮನವಿ ಪತ್ರದಲ್ಲಿ ಉಲ್ಲೇಖಿಸಿರುವ ೯ ಅಂಶಗಳನ್ನು ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜ.೨೦ ರಂದು ಅರೆಭಾಷೆ ಗೌಡ ಸಮುದಾಯದವರು ಶಾಂತಿಯುತ ಜಾಥಾ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ಜಾತಿ ನಿಂದನೆ ಮಾಡಿರುವ ಸಿಎನ್‌ಸಿ ಅಧ್ಯಕ್ಷರು ಹಾಗೂ ಕೆಲವು ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಆ ಸಂದರ್ಭ ನಾವು ನೀಡಿದ ಮನವಿ ಪತ್ರದಲ್ಲಿದ್ದ ವಿಚಾರಗಳು ಎಲ್ಲೆ ಮೀರಿರಲಿಲ್ಲ. ಆದರೆ ಅಖಿಲ ಕೊಡವ ಸಮಾಜ ನೀಡಿದ ಮನವಿಯಲ್ಲಿ ನೇರವಾಗಿ ಅರೆಭಾಷೆ ಗೌಡರನ್ನು ಉಲ್ಲೇಖಿಸಲಾಗಿದೆ ಮತ್ತು ಇಲ್ಲಸಲ್ಲದ ಆರೋಪ ಮಾಡಲಾಗಿದೆ. ಕೊಡವರ ಸಂಸ್ಕೃತಿ, ಆಚಾರ ವಿಚಾರದ ಉಳಿವಿಗಾಗಿ ಪ್ರಸ್ತಾಪಿಸುವ ಬೇಡಿಕೆಗಳಿಗೆ ನಮ್ಮ ಆಕ್ಷೇಪವಿಲ್ಲ. ಆದರೆ ಅರೆಭಾಷೆ ಗೌಡರನ್ನು ಗುರಿ ಮಾಡಿರುವುದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಅರೆಭಾಷೆ ಗೌಡರನ್ನು ದೂಷಿಸಿರುವ ಮನವಿ ಪತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಅನಾಮದೇಯ ವ್ಯಕ್ತಿ ಎಂದು ಹೇಳಲಾಗಿದೆ. ಈ ಮನವಿ ಪತ್ರದ ಹಿಂದೆ ಮತ್ತೊಬ್ಬ ವ್ಯಕ್ತಿಯ ಕೈವಾಡವಿರುವ ಶಂಕೆ ಇದೆ. ಅರೆಭಾಷೆ ಗೌಡರನ್ನು ನೇರವಾಗಿ ಉಲ್ಲೇಖಿಸಿರುವ ೯ ಅಂಶಗಳನ್ನು ತೀವ್ರವಾಗಿ ಖಂಡಿಸುತ್ತೇವೆ. ಗೌಡರು ನಡೆಸಿದ ಜಾಥಾಕ್ಕೆ ಹೊರ ಜಿಲ್ಲೆಯ ಅರೆಭಾಷಿಕರಲ್ಲದವರನ್ನು ಕರೆ ತರಲಾಗಿದೆ ಎಂದು ಕೆಲವರು ಆರೋಪ ಮಾಡಿದ್ದಾರೆ.
ಆದರೆ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ನೆಲೆಸಿರುವ ಶೇ.೧೦೦ ರಷ್ಟು ಅರೆಭಾಷೆ ಗೌಡರು ಜಾಥಾದಲ್ಲಿ ಪಾಲ್ಗೊಂಡಿರುವುದನ್ನು ಆರೋಪ ಮಾಡುತ್ತಿರುವವರು ಮನಗಾಣಬೇಕು. ಅರೆಭಾಷಿಕರಲ್ಲದವರನ್ನು ಕರೆತಂದು ಜಾಥಾ ಮಾಡುವಷ್ಟು ಕೀಳುಮಟ್ಟಕ್ಕೆ ನಾವು ಇಳಿಯುವುದಿಲ್ಲವೆಂದು ಸೂರ್ತಲೆ ಸೋಮಣ್ಣ ಸ್ಪಷ್ಟಪಡಿಸಿದರು.
ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದ ವಿಚಾರ ಆ ಊರಿಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ಗೌಡ ಸಮಾಜಗಳ ಒಕ್ಕೂಟ ಯಾವುದೇ ಪಾತ್ರವನ್ನು ವಹಿಸುವುದಿಲ್ಲ. ಆದರೆ ಗೌಡ ಸಮುದಾಯಕ್ಕೆ ನೋವಾದರೆ ಅವರ ಬೆಂಬಲಕ್ಕೆ ಒಕ್ಕೂಟ ನಿಲ್ಲಲಿದೆ. ನಾವು ಶಾಂತಿಯನ್ನು ಬಯಸುವವರು, ಶಾಂತಿಸಭೆ ನಡೆಯಬೇಕು ಎನ್ನುವ ಅಪೇಕ್ಷೆ ನಮ್ಮದಾಗಿತ್ತು. ಆದರೆ ಶಾಂತಿಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಕೊಡವ ಸಮಾಜದವರು ಹೇಳಿರುವುದರಿಂದ ನಾವು ಕೂಡ ಪಾಲ್ಗೊಳ್ಳುವುದಿಲ್ಲ ಎಂದರು.
ಒಕ್ಕೂಟದ ಖಜಾಂಚಿ ಆನಂದ ಕರಂದ್ಲಾಜೆ ಮಾತನಾಡಿ ಕೊಡಗಿನ ಅರೆಭಾಷಿಕ ಒಕ್ಕಲಿಗ ಗೌಡರ ನಿಲುವುಗಳು ಮತ್ತು ಸ್ಪಷ್ಟನೆಗಳು ಎಂದು ವಿವಿಧ ವಿಚಾರಗಳನ್ನು ಮಂಡಿಸಿದರು.
ಕೊಡಗಿನ ಅರೆಭಾಷೆ ಒಕ್ಕಲಿಗರಿಗೆ ಅನಾದಿಕಾಲದಿಂದಲೂ ತನ್ನದೇ ಆದ ಆಚಾರ ವಿಚಾರ, ಸಂಸ್ಕೃತಿ ಮತ್ತು ಉಡುಗೆ ತೊಡುಗೆಗಳಿವೆ. ಅದನ್ನು ಆಚರಿಸಲು, ತೊಡಲು ಯಾರ ಅಪ್ಪಣೆಯ ಅಥವಾ ಅನುಮತಿಯ ಅವಶ್ಯಕತೆ ಇರುವುದಿಲ್ಲ. ಇದೇ ತಿಂಗಳ ೭ನೇ ತಾರೀಕು ಮಡಿಕೇರಿಯಲ್ಲಿ ನಡೆದ ಕೊಡವ ಜನಾಂಗದ ಸಭೆಯ ಮನವಿ ಪತ್ರದಲ್ಲಿ ನಮ್ಮ ಮೇಲೆ ಮಾಡಿದ ಕ್ಷುಲ್ಲಕ ಆರೋಪಗಳು ಆಧಾರರಹಿತವಾಗಿದ್ದು, ಇದನ್ನು ನಾವು ಖಂಡಿಸುತ್ತೇವೆ.
ಕಟ್ಟೆಮಾಡು ಶ್ರೀಮಹಾ ಮೃತ್ಯುಂಜಯ ದೇವಸ್ಥಾನದ ಆಚಾರ-ವಿಚಾರದ ಕುರಿತಾಗಿ ಯಾವುದೇ ಚರ್ಚೆ ಅಥವಾ ಮಾತುಕತೆಗೆ ಅರೆಭಾಷೆ ಒಕ್ಕಲಿಗರ ಸಮಾಜ ಮತ್ತು ಗೌಡ ಸಮಾಜಗಳ ಒಕ್ಕೂಟ ಭಾಗವಹಿಸುವುದಿಲ್ಲ. ಅದು ಅವರ ಗ್ರಾಮಕ್ಕೆ ಮತ್ತು ಆಡಳಿತ ಮಂಡಳಿಗೆ ಸಂಬಂಧಿಸಿದ್ದಾಗಿರುತ್ತದೆ. ಅದರ ಬಗ್ಗೆ ಆಕ್ಷೇಪವಿರುವವರು ನ್ಯಾಯಾಲಯದ ಮೊರೆ ಹೋಗಲು ಯಾರ ಅಭ್ಯಂತರವೂ ಇರುವುದಿಲ್ಲ. ಆದರೆ ಕಟ್ಟೆಮಾಡುವಿನಲ್ಲಿರುವ ಅರೆಭಾಷೆ ಒಕ್ಕಲಿಗರ ಹಾಗೂ ಸಂಖ್ಯಾಬಲವಿಲ್ಲದ ಇತರ ಸಣ್ಣಪುಟ್ಟ ಸಮುದಾಯದ, ಹಿಂದುಳಿದ ವರ್ಗಗಳ ನ್ಯಾಯಯುತ ಬೇಡಿಕೆಗಳ ಬೆನ್ನಿಗೆ ನಾವು ನಿಲ್ಲಲಿದ್ದೇವೆ.
ನಮ್ಮ ಸಭೆ ಮತ್ತು ಮೆರವಣಿಗೆಗಳಲ್ಲಿ ಜನಾಂಗದ ಧೀರ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರಿಗೆ ಪುಷ್ಪಗುಚ್ಛ ಇಟ್ಟು ಗೌರವ ಸಲ್ಲಿಸುವ ಸಂದರ್ಭದಲ್ಲಿ ಕೊಡವ ಜನಾಂಗದ ಹಿರಿಯರಿಗೂ ನಾವು ಗೌರವ ಸಲ್ಲಿಸುತ್ತಿದ್ದೆವು. ಆದರೆ ಅವರು ಉದ್ದೇಶಪೂರ್ವಕವಾಗಿ ನಮ್ಮ ನಾಯಕರಿಗೆ ಗೌರವ ಸಲ್ಲಿಸದೇ ಇರುವುದನ್ನು ಗಮನಿಸಿದರೆ ಅವರ ಜಾತಿ ವೈಷಮ್ಯವನ್ನು ಎದ್ದು ಕಾಣುವಂತೆ ಮಾಡಿದೆ ಎಂದು ಆರೋಪಿಸಿದರು.
ಬಿಜೆಪಿಯ ಹಾಲಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಕೊಡಗಿನ ಎಲ್ಲಾ ಜನಾಂಗದವರಿಂದ ಆಯ್ಕೆಯಾಗಿದ್ದು, ಕೇವಲ ಒಂದು ಜನಾಂಗದ ಪರವಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಅಲ್ಲದೆ ಮಡಿಕೇರಿಯ ಸಭೆಯಲ್ಲಿ ಭಾಗವಹಿಸಿ ಮತ್ತೊಂದು ಜನಾಂಗದ ವಿರುದ್ಧದ ಮನವಿ ಪತ್ರಕ್ಕೆ ಸಾಕ್ಷಿಯಾಗಿರುವುದು ಖಂಡನೀಯ.
ಬಿಜೆಪಿ ಪಕ್ಷ ಅವರ ಮೇಲೆ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಂತಹ ಪಕ್ಷದಿಂದ ನಮ್ಮ ಜನಾಂಗವು ಅಂತರ ಕಾಪಾಡಿಕೊಳ್ಳಲಾಗುವುದು. ಕೊಡಗಿನಲ್ಲಿ ಗೌಡರಿಗೆ ಅವರ ಜನಸಂಖ್ಯೆಗೆ ತಕ್ಕಂತೆ ರಾಜಕೀಯ ಪ್ರಾತಿನಿಧ್ಯ ನೀಡದ ಪಕ್ಷಗಳನ್ನು ದೂರ ಇಡಲಾಗುವುದು.
ಅಗೋಚರ ಶಕ್ತಿಗಳ ಒತ್ತಡಕ್ಕೆ ಮಣಿದ ಶಾಲೆಗಳು ಜಾತಿಯ ಬಣ್ಣ ಬಳಿದುಕೊಂಡು ರಜೆ ಘೋಷಣೆ ಮಾಡಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದರೂ ಕ್ರಮ ತೆಗೆದುಕೊಳ್ಳದಿರುವುದನ್ನು ಪ್ರಜ್ಞಾವಂತರೆಲ್ಲರೂ ಖಂಡಿಸಬೇಕಿದೆ. ಏನೂ ಅರಿಯದ ಮುಗ್ಧ ಮನಸ್ಸುಗಳಿಗೆ ಜಾತಿಯ ವಿಷ ಬೀಜ ಬಿತ್ತುವ ಕಾರ್ಯ ಮಾಡಬಾರದಿತ್ತು.
ಕೊಡಗಿನಲ್ಲಿರುವ ಸರ್ವ ಜನಾಂಗದವರೊಂದಿಗೆ ಸಾಮರಸ್ಯದಿಂದ ಜೀವಿಸುತ್ತಿರುವ ಅರೆಭಾಷೆ ಒಕ್ಕಲಿಗರ ವಿರುದ್ಧ ವಿನಾಕಾರಣ ಹೆಜ್ಜೆ ಹಾಕಿದವರ ಜೊತೆ ಮುಂದಿನ ದಿನಗಳಲ್ಲಿ ಅಂತರ ಕಾಪಾಡಿಕೊಳ್ಳಲಾಗುವುದು. ನಮ್ಮ ವಿರುದ್ಧ ಅವಹೇಳನ ಮಾಡಿದ ಸಿಎನ್‌ಸಿ ಸಂಘಟನೆ ಹಾಗೂ ಕೆಲವು ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿ ನಾವು ನಡೆಸಿದ ಸಾಂಕೇತಿಕ ಪ್ರತಿಭಟನೆಯಲ್ಲಿ ಸ್ವಯಂಪ್ರೇರಿತರಾಗಿ ಹತ್ತು ಸಾವಿರ ಮಂದಿ ಭಾಗವಹಿಸಿದ್ದರು.
ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ ಮತ್ತು ಕೊಡಗಿನಲ್ಲಿ ಅರೆಭಾಷೆ ಒಕ್ಕಲಿಗ ಜನಾಂಗಕ್ಕೆ ಸೇರಿದ ಸುಮಾರು ಐದು ಲಕ್ಷ ಜನರಿದ್ದಾರೆ. ಶಾಲಾ ಕಾಲೇಜುಗಳಿಂದ ಮಕ್ಕಳನ್ನು ಕರೆತರದೆ ಮಡಿಕೇರಿಯಲ್ಲಿ ಎರಡು ಲಕ್ಷ ಅರೆಭಾಷೆ ಮಾತನಾಡುವ ಒಕ್ಕಲಿಗರನ್ನು ಸೇರಿಸುವುದು ನಮಗೆ ದೊಡ್ಡ ಸಂಗತಿಯಲ್ಲ. ಆದರೆ ನಾವು ದೇಶದ ಮತ್ತು ರಾಜ್ಯದ ಕಾನೂನು ಸುವ್ಯವಸ್ಥೆಗೆ ತಲೆಬಾಗುವವರು. ನಮ್ಮ ಜನಾಂಗವು ಪ್ರತ್ಯೇಕತೆಯನ್ನು ಪ್ರತಿಪಾದಿಸಿಲ್ಲ. ನಮ್ಮ ಜನಾಂಗವನ್ನು ನಿಂದನೆ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಜಿಲ್ಲಾಡಳಿತ ಮತ್ತು ಸರಕಾರದ ಜವಾಬ್ದಾರಿಯಾಗಿದೆ.
ಈ ಹಿಂದಿನ ನಮ್ಮ ದೂರುಗಳಿಗೆ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಂದಿಸಿ ಸಿಎನ್‌ಸಿ ಮತ್ತು ಇತರ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಇಷ್ಟರಲ್ಲೇ ಕೊಡಗಿನಲ್ಲಿ ಶಾಂತಿ ನೆಲೆಸಿರುತ್ತಿತ್ತು. ದೂರು ದಾಖಲು ಮಾಡದ ನಡೆಯ ಹಿಂದೆ ಕಾಣದ ಕೈಗಳ ಒತ್ತಡಕ್ಕೆ ಒಳಗಾದಂತೆ ಕಂಡುಬರುತ್ತಿದೆ ಎಂದು ಆನಂದ ಕರಂದ್ಲಾಜೆ ಆರೋಪಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಂದು ಜನಾಂಗವನ್ನು ನಿಂದಿಸುವ ವ್ಯಕ್ತಿಗಳು, ಯಾವುದೇ ಜನಾಂಗದಲ್ಲಿದ್ದರೂ ಅವರ ಮೇಲೆ ಜಿಲ್ಲಾಡಳಿತ ಮತ್ತು ಪೊಲೀಸ್ ವರಿಷ್ಠಧಿಕಾರಿಗಳು ತಾರತಮ್ಯ ಮಾಡದೆ ಮತ್ತು ಒತ್ತಡಕ್ಕೆ ಮಣಿಯದೆ ಕಠಿಣ ಕ್ರಮ ಜರುಗಿಸಬೇಕು. ಕೊಡಗಿನಲ್ಲಿ ಎಲ್ಲಾ ಜನಾಂಗದವರು ಶಾಂತಿ ಮತ್ತು ಸಹಬಾಳ್ವೆಯಿಂದ ಬಾಳುವ ವಾತಾವರಣ ಸೃಷ್ಟಿ ಮಾಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಕೆ.ಉದಯಕುಮಾರ್, ನಿರ್ದೇಶಕರಾದ ಚಿಲ್ಲನ ಗಣಿ ಪ್ರಸಾದ್, ತಳೂರು ದಿನೇಶ್ ಕರುಂಬಯ್ಯ ಹಾಗೂ ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಉಪಸ್ಥಿತರಿದ್ದರು.