ಭಾರತ ಸ್ವಾತಂತ್ರ್ಯವಾದದ್ದು ಎಂದು…….

ವಿಜಯ ದರ್ಪಣ ನ್ಯೂಸ್….

ಭಾರತ ಸ್ವಾತಂತ್ರ್ಯವಾದದ್ದು ಎಂದು……….

ಇತ್ತೀಚೆಗೆ ಕೆಲವರು ಬೇರೆ ಬೇರೆ ಸಂದರ್ಭ, ಸನ್ನಿವೇಶಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ” ಆ ದಿನ ” ಭಾರತದ ನಿಜವಾದ ಸ್ವಾತಂತ್ರ್ಯ ಗಳಿಸಿದ್ದು ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಭಾರತ ಈಗಲೂ ವಾಸ್ತವವಾಗಿ ಸ್ವತಂತ್ರವಾಗಿಯೇ ಇಲ್ಲ. ಬಹುತೇಕ ಅನುವಂಶಿಯ, ಗುಲಾಮಗಿರಿಯ, ಬಂಡವಾಳ ಶಾಹಿಯ ಮುಭಕ್ತ ಸಂಸ್ಕೃತಿಯ ಮನಸ್ಥಿತಿಯಲ್ಲಿಯೇ ಭಾರತದ ಬಹುತೇಕ ಜನರು ಇರುವುದರಿಂದ, ದೇವರು, ಧರ್ಮ, ನ್ಯಾಯಾಲಯಗಳು ಬಹುತೇಕ ಶ್ರೀಮಂತರ, ಬಲಾಢ್ಯರ ಪಾಲೇ ಆಗಿರುವುದರಿಂದ, ಜೊತೆಗೆ ಈಗಲೂ ಭಾರತ ಹಸಿವಿನ ಸೂಚ್ಯಂಕದಲ್ಲಿ, ಅಪರಾಧಗಳ ಸೂಚ್ಯಂಕದಲ್ಲಿ, ಅಪಘಾತಗಳ ಸೂಚ್ಯಂಕದಲ್ಲಿ, ಆತ್ಮಹತ್ಯೆಗಳ ಸೂಚ್ಯಂಕದಲ್ಲಿ, ಅನಾರೋಗ್ಯದ ಸೂಚ್ಯಂಕದಲ್ಲಿ, ವಿಶ್ವದಲ್ಲೇ ತುಂಬಾ ತಳಮಟ್ಟದಲ್ಲಿರುವುದರಿಂದ ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ಲಭಿಸಿದೆ ಎನ್ನುವ ಹಾಗಿಲ್ಲ ಎಂದು ವಾದಿಸುತ್ತಾರೆ…….

ಹಾಗಾದರೆ ಭಾರತ ಎಂಬ ಈ ಭೂ ಪ್ರದೇಶದ ಇತಿಹಾಸವನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ…

ಭಾರತದ ಅಧಿಕೃತ ಇತಿಹಾಸ ಪ್ರಾರಂಭವಾಗುವುದು ಹರಪ್ಪ – ಮಹೆಂಜೋದಾರೋ ನಾಗರಿಕತೆಯಿಂದ. ಅದು ಇಂದು 2025ರ ಇಲ್ಲಿಯವರೆಗೂ ಮುಂದುವರೆಯುತ್ತಲೇ ಇದೆ. ಈ ಭೂ ಪ್ರದೇಶ ಬಹುತೇಕ ಹಿಂದೂ ಜೀವನಶೈಲಿಯ ವಿಧಾನವನ್ನು ಹೊಂದಿದೆ. ಅದನ್ನೇ ಆಗಿನಿಂದಲೂ ಭಾರತ ಎಂದು ಕರೆಯಲಾಗುತ್ತಿದೆ. ಆದರೆ ಇಲ್ಲಿ ಹೆಚ್ಚು ಕಡಿಮೆ 18ನೆಯ ಶತಮಾನದವರೆಗೂ ರಾಜಪ್ರಭುತ್ವ ಹೆಸರಿನ ಸರ್ವಾಧಿಕಾರ ಆಡಳಿತವೇ ಇತ್ತು. ತದನಂತರ 20 ನೆಯ ಶತಮಾನದ ಮಧ್ಯಭಾಗದವರೆಗೂ ಒಂದಷ್ಟು ನೀತಿ ನಿಯಮಗಳ ಇಂಗ್ಲಿಷ್ ಆಡಳಿತ ಜಾರಿಯಾಯಿತು. ಅನಂತರವೇ ಇಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಗಿದ್ದು…….

ಈ ಮಧ್ಯೆ ಇಸ್ಲಾಂ ಧರ್ಮದ ಅಕ್ರಮಣಕಾರರು ಭಾರತವನ್ನು ಆಕ್ರಮಿಸಿ ಇಲ್ಲಿ ಆಡಳಿತ ನಡೆಸುತ್ತಿದ್ದರು. ನಂತರದಲ್ಲಿ ಬ್ರಿಟಿಷರು ಈ ದೇಶವನ್ನು ಆಕ್ರಮಿಸಿಕೊಂಡರು. ಏನೇ ಅಂದರೂ ಅಲ್ಲಿಯವರೆಗೂ ಇಡೀ ಭಾರತ ಹಿಂದೂ ಜೀವನ ಶೈಲಿಯನ್ನು ಹೊರತುಪಡಿಸಿ ಇತರ ರೀತಿಯಲ್ಲಿ ಒಂದಾಗಿ ಇರಲೇ ಇಲ್ಲ. ಅನೇಕ ರಾಜಮನೆತನಗಳು ಪ್ರಾಂತ್ಯಗಳಾಗಿ ವಿಂಗಡಿಸಿಕೊಂಡು ಆಡಳಿತ ನಡೆಸುತ್ತಿದ್ದರು. ವಂಶಪಾರಂಪರ್ಯ ಆಡಳಿತದ ಜೊತೆಗೆ ಶಕ್ತಿವಂತರ ಆಡಳಿತ ನಡೆಯುತ್ತಿತ್ತು……

ಬ್ರಿಟಿಷರ ಕಾಲಘಟ್ಟದಲ್ಲಿ ಭಾರತ ಎಂಬುದು ಸಂಪೂರ್ಣ ಒಂದೇ ಆಡಳಿತದ ಹಿಡಿತಕ್ಕೆ ಸಿಲುಕಿತು. 1947ರ ಆಗಸ್ಟ್ 15ರಂದು ಇದೇ ದೇಶ ಧರ್ಮದ ಆಧಾರದ ಮೇಲೆ ಭಾರತ ಮತ್ತು ಪಾಕಿಸ್ತಾನ ಎಂದು ವಿಭಜನೆ ಆಯಿತು. ಭಾರತಕ್ಕೆ ಆ ದಿನ ಆಡಳಿತಾತ್ಮಕ ಸ್ವಾತಂತ್ರ್ಯ ದೊರೆಯಿತು. ಆಗಲೂ ಕೆಲವು ಸ್ವತಂತ್ರ ಪ್ರಾಂತ್ಯಗಳು ಅಸ್ತಿತ್ವದಲ್ಲಿದ್ದವು. ಸೈನಿಕ ಕಾರ್ಯಾಚರಣೆಯ ಮೂಲಕ ಅದನ್ನು ವಶಪಡಿಸಿಕೊಳ್ಳಲಾಯಿತು. 1950 ಜನವರಿ 26ರಂದು ನಿಜವಾದ ಸಂವಿಧಾನಾತ್ಮಕ ವ್ಯಕ್ತಿಗತ ಸ್ವಾತಂತ್ರ್ಯ ದೊರೆಯಿತು. ಇದು ಒಂದು ಇತಿಹಾಸ………

ಆಗಲೂ ಸಹ ಸಂಪತ್ತಿನ ಸಮಾನ ಹಂಚಿಕೆಯಾಗದೆ, ಕೇವಲ ರಾಜಕೀಯ ಮತ್ತು ಆಡಳಿತಾತ್ಮಕ ಸ್ವಾತಂತ್ರ್ಯ ಮಾತ್ರ ದೊರೆಯಿತು. ಹೆಚ್ಚು ಕಡಿಮೆ ಅಲ್ಲಿಯವರೆಗೂ ಇದ್ದ ಜಮೀನ್ದಾರಿ ವ್ಯವಸ್ಥೆಯೇ ಮುಂದುವರೆಯಿತು. ನಿಧಾನವಾಗಿ ಉದ್ಯಮ, ವ್ಯವಹಾರ, ಶಿಕ್ಷಣ ಸಾಮಾನ್ಯ ಜನರಿಗೂ ತಲುಪಿ ಇಂದು ಒಂದಷ್ಟು ಇತರೆ ಸಾಮಾನ್ಯ ಜನರೂ ಸಹ ಆರ್ಥಿಕ ಸ್ವಾತಂತ್ರ್ಯ ಗಳಿಸಿದ್ದಾರೆ. ಜಾಗತೀಕರಣದ ನಂತರ ಮಹಿಳೆಯರು ಸಹ ಆರ್ಥಿಕವಾಗಿ ಒಂದಷ್ಟು ಸ್ವಾವಲಂಬನೆ ಗಳಿಸಿದ್ದಾರೆ…..

ಇದೇ ಇತಿಹಾಸದ ವಾಸ್ತವವಾಗಿರಬೇಕಾದರೆ ಭಾರತದ ಬಹುದೊಡ್ಡ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥರು ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಲಭಿಸಿದ್ದು ಅಯೋಧ್ಯೆಯ ಬಾಲ ಮಂದಿರ ಉದ್ಘಾಟನೆಯ ನಂತರ ಎನ್ನುವ ಮಾತನ್ನು ಹೇಳಿದ್ದಾರೆ…..

ಆರ್ ಎಸ್ ಎಸ್ ಸಂಘಟನೆಯವರೂ ಭಾರತೀಯರೇ, ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಎಲ್ಲರೂ ಭಾರತೀಯರೇ, ಕಮ್ಯುನಿಸಂ ಸಿದ್ದಾಂತದ ಪ್ರತಿಪಾದಕರು ಭಾರತೀಯರೇ, ಮುಸ್ಲಿಂ ಸಮುದಾಯದವರು, ಕ್ರಿಶ್ಚಿಯನ್ ಸಮುದಾಯದವರು, ಸಿಖ್ ಸಮುದಾಯದವರು, ಬೌದ್ಧ ಸಮುದಾಯದವರು, ಜೈನ ಸಮುದಾಯದವರು, ಲಿಂಗಾಯತ ಸಮುದಾಯದವರು ಎಲ್ಲರೂ ಸಹ ಭಾರತೀಯರೇ. ಅಂದರೆ ಒಟ್ಟಾಗಿ ನಾವೆಲ್ಲರೂ ಮತ್ತು ನಮಗೆಲ್ಲಾ ಆಶ್ರಯ ನೀಡಿರುವುದು ಈ ಭಾರತ…..

ನಾವ್ಯಾರು ದೇಶದ್ರೋಹಿಗಳೂ ಅಲ್ಲ, ದೇಶಕ್ಕೆ ಹಾನಿಕಾರಕವಾದ ಯಾವ ಕೆಲಸವನ್ನು ಮಾಡುವುದಿಲ್ಲ. ಆದರೆ ಅತಿಯಾದ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಸ್ವಾರ್ಥದ ಕಾರಣದಿಂದ, ಅಜ್ಞಾನದ ಕಾರಣದಿಂದ ಅನಾವಶ್ಯಕವಾದ ಮಾತುಗಳು ಎಲ್ಲಾ ಕಡೆಯಿಂದಲೂ ಬರುತ್ತಿವೆ. ಆರ್‌ಎಸ್ಎಸ್ ಮುಖ್ಯಸ್ಥರು ಅಯೋಧ್ಯೆ ಬಾಲ ಮಂದಿರ ಸ್ಥಾಪನೆಯನ್ನು ಸ್ವಾತಂತ್ರ್ಯ ಗಳಿಸಿದ ಕ್ಷಣ ಎಂದು ಹೇಳುವುದು ಅತ್ಯಂತ ಬಾಲಿಶ ಮತ್ತು ವಿಭಜನಾತ್ಮಕ ಮನೋಭಾವವನ್ನು ಹೊಂದಿದೆ. ಖಂಡಿತ ಅದು ಸ್ವೀಕಾರವಲ್ಲ……

ಭಾರತದ ವ್ಯಕ್ತಿಗಳ ಘನತೆಯ ದೃಷ್ಟಿಯಿಂದ, ಹಕ್ಕು, ಸ್ವಾತಂತ್ರ್ಯ ಸಮಾನತೆಯ ದೃಷ್ಟಿಯಿಂದ ನಿಜಕ್ಕೂ ಭಾರತ ಸ್ವಾತಂತ್ರ್ಯ ಸಿಕ್ಕಿದ್ದು 1950ರ ಜನವರಿ 26 ರಿಂದ. ಅಂದೇ ಸಂವಿಧಾನ ನಮಗೆ ” ನಾವೆಲ್ಲರೂ ಭಾರತೀಯರು…..” ಎಂಬ ವಾಸ್ತವಿಕ ನೆಲೆಯ ಭಾರತೀಯ ಪ್ರಜ್ಞೆ ಮೂಡಿಸಿದ್ದರು……

ಈ ಸ್ವಾತಂತ್ರ್ಯದ ಅನುಷ್ಠಾನದಲ್ಲಿ ಸಾಕಷ್ಟು ಕುಂದು ಕೊರತೆಗಳು, ದೌರ್ಬಲ್ಯಗಳು ಇದೆ ಎಂಬುದು ನಿಜ. ಅದನ್ನು ಆಂತರಿಕವಾಗಿ ಬಗೆಹರಿಸಿಕೊಳ್ಳಬೇಕಿದೆ. ಅದನ್ನು ಹೊರತುಪಡಿಸಿ ಈ ರೀತಿಯ ಹೇಳಿಕೆಗಳು ಯಾರಿಂದ ಬಂದರೂ ಅದು ಅಷ್ಟು ಉತ್ತಮ ಬೆಳವಣಿಗೆಯಲ್ಲ. ಮಾತನಾಡುವಾಗ ಉನ್ನತ ಸ್ಥಾನದಲ್ಲಿರುವವರು ಸಾಧ್ಯವಾದಷ್ಟು ವಿಭಜನಾತ್ಮಕವಲ್ಲದ, ಸೂಕ್ಷ್ಮ ಸಂವೇದನೆಯಿಂದ, ಜವಾಬ್ದಾರಿಯಿಂದ ಇಡೀ ಭಾರತದ ಈ ಕ್ಷಣದ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಮಾತನಾಡಬೇಕಾಗುತ್ತದೆ. ತಮ್ಮ ಸಂಘಟನೆಗಾಗಿ, ಪಕ್ಷಕ್ಕಾಗಿ ದೇಶದ ಹಿತಾಸಕ್ತಿಯನ್ನೇ ಬಲಿಕೊಡುವುದು ಉತ್ತಮ ಬೆಳವಣಿಗೆಯಲ್ಲ. ಇದು ಎಲ್ಲಾ ಭಾರತೀಯ ಪ್ರಜೆಗಳಿಗೂ ಏಕ ಪ್ರಕಾರವಾಗಿ ಅನ್ವಯಿಸುತ್ತದೆ…..

ಭಾರತದ ಸ್ವಾತಂತ್ರ್ಯ, ಆ ಸ್ವಾತಂತ್ರ್ಯಕ್ಕಾಗಿ ಮಾಡಲಾದ ತ್ಯಾಗ ಬಲಿದಾನಗಳು, ತದನಂತರದಲ್ಲಿ ಸಂವಿಧಾನ ರಚನೆಯ ಶ್ರಮ ಮತ್ತು ಅಲ್ಲಿಂದ ಇಲ್ಲಿಯವರೆಗೂ ಹೆಚ್ಚು ಕಡಿಮೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿಕೊಂಡು ಬಂದಿರುವವರ ತ್ಯಾಗ, ಶ್ರಮದ ಮನೋಭಾವವನ್ನು ಯಾವ ಕಾರಣಕ್ಕೂ ಅವಮಾನ ಮಾಡಬಾರದು…..

ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ್ದು ಯಾವುದೇ ಅತಿಮಾನುಷ ಶಕ್ತಿಯಿಂದ ಅಲ್ಲ. ಅದು ಭಾರತದ ಜನರ ತ್ಯಾಗ ಬಲಿದಾನಗಳಿಂದ ಎಂಬುದನ್ನು ಮರೆಯಬಾರದು…..

ಪೂಜೆ ಮಾಡಿಸಿಕೊಳ್ಳುವ ಅತಿಮಾನುಷ ಶಕ್ತಿಗಳಿಗಿಂತ ಪೂಜೆ ಮಾಡುವ ಸಾಮಾನ್ಯ ಜನರೇ ನಮಗೆ ಮುಖ್ಯವಾಗಬೇಕು. ಅವರೇ ನಮ್ಮ ದೇಶದ ನಿಜವಾದ ಆತ್ಮ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ. 9844013068……..