ಅಭಿವೃದ್ಧಿ ಹೊಂದುತ್ತಿರುವ ಭಾರತೀಯ ಸಹಕಾರಿ ಹಾಲು ಉತ್ಪಾದಕ ಸಂಘಗಳು
ವಿಜಯ ದರ್ಪಣ ನ್ಯೂಸ್….
ಅಭಿವೃದ್ಧಿ ಹೊಂದುತ್ತಿರುವ ಭಾರತೀಯ ಸಹಕಾರಿ ಹಾಲು ಉತ್ಪಾದಕ ಸಂಘಗಳು
ರಾಷ್ಟ್ರೀಯ ಡೈರಿ ವಿಕಾಸ ಬೋರ್ಡು (ಎನ್.ಡಿ.ಡಿ.ಬಿ.) ಇತ್ತೀಚಿಗಷ್ಟೇ ತನ್ನ ಗೋಲ್ಡನ್ ಜೂಬಲೀ ಸಮಾರಂಭವನ್ನು ಆಚರಿಸಿಕೊಂಡಿತು, ಇದರಲ್ಲಿ ಕಳೆದ ಐದು ದಶಕಗಳಲ್ಲಿ ಭಾರತದಲ್ಲಿ ಡೈರಿ ಸಹಕಾರಿ ಸಂಘದ ಸಾಧನೆಗಳನ್ನು ಪ್ರಮುಖವಾಗಿ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ ಶಾ, 300 ಕೋಟಿ ರೂ. ಮೌಲ್ಯದ ಹಲವಾರು ಕಲ್ಯಾಣ ಯೋಜನೆಗಳಿಗೆ ಚಾಲನೆ ನೀಡಿದರು.
ಕೇಂದ್ರ ಸಚಿವರು ಪ್ರಾರಂಭಿಸಿದ ಯೋಜನೆಗಳನ್ನು ಹೈನುಗಾರರು, ಸಂಪನ್ಮೂಲಗಳ ಸುಧಾರಣೆ ಮತ್ತು ಡೈರಿ ಉದ್ಯಮದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ಸ್ವರ್ಣ ಜಯಂತಿ ಕಾರ್ಯಕ್ರಮದ ಉದ್ದೇಶವು ಡೈರಿ ಕ್ಷೇತ್ರದಲ್ಲಿ ಎನ್.ಡಿ.ಡಿ.ಬಿ. ಯ ಸಾಧನೆಗಳನ್ನು ಎತ್ತಿ ತೋರಿಸುವುದು ಮತ್ರವಲ್ಲದೇ ಇದರ ಪ್ರಮುಖ ಉಪಕ್ರಮಗಳು ಸಹಕಾರಿ ಸಂಸ್ಥೆಗಳ ಮೂಲಕ ಗ್ರಾಮೀಣ ಜನರ ಜೀವನಗಳಲ್ಲಿ ಹೇಗೆ ಮಾದರಿ ಬದಲಾವಣೆಗಳನ್ನು ತರುತ್ತಿವೆ ಎಂಬುದನ್ನು ಎತ್ತಿ ತೋರಿಸುವುದೂ ಶಾಮೀಲಾಗಿತ್ತು.
ಈ ಸಂದರ್ಭದಲ್ಲಿ ಶ್ವೇತಕ್ರಾಂತಿ 2.0 ಗೆ ಅಗತ್ಯ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಲಾಯಿತು. ರೈತರ ಅನುಕೂಲಕ್ಕೆ ಅನುಗುಣವಾಗಿ ಈ ಮಾರ್ಗಸೂಚಿಗಳನ್ನು ಸಿದ್ದ ಪಡಿಸಲಾಗಿದೆ. ಇದನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಕೂಡ ಉಲ್ಲೇಖಿಸಿದ್ದಾರೆ. ಶ್ವೇತಕ್ರಾಂತಿ 2.0 ಎಂದು ಶುರುವಾದ ಡೈರಿ ಸಹಕಾರಿ ಸಂಘಗಳ ಅಭಿವೃದ್ಧಿಗಾಗಿ ಈ ಹೆಜ್ಜೆಯನ್ನು ಬಹಳ ದಿನಗಳಿಂದ ನಿರೀಕ್ಷಿಸಲಾಗಿತ್ತು. ಇದರಿಂದ ಹೈನುಗಾರಿಕೆ ಸಹಕಾರ ಸಂಘಗಳಿಗೆ ಸಂಬಂಧಿಸಿದ ಮಹಿಳೆಯರು ಸ್ವಾವಲಂಬಿಗಳಾಗುವುದಲ್ಲದೇ, ಹಾಲು ಉತ್ಪಾದನೆ ಮತ್ತು ವಿತರಣೆಯೂ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಶ್ವೇತಕ್ರಾಂತಿ 2.0 ದ ಗುರಿಯನ್ನು ಸಹಕಾರಿ ವಲಯದಿಂದ ಪ್ರಸ್ತುತ ದಿನಕ್ಕೆ 660 ಲಕ್ಷ ಲೀ. ಗಳಿಂದ ದಿನಕ್ಕೆ 1000 ಲಕ್ಷ ಲೀ. ಗಳಿಗೆ ಹೆಚ್ಚಿಸುವ ಗುರಿಯನ್ನು ನಿಗದಿ ಪಡಿಸಲಾಗಿದೆ.
ಹೊಸ ಮಾರ್ಗಸೂಚಿಗಳು ಡೈರಿ ಕ್ಷೇತ್ರದಲ್ಲಿ ಸಹಕಾರಿಗಳ ಒಳಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಇದು ಹಾಲಿನ ಉತ್ಪಾದನೆಯನ್ನು ಹೆಚ್ಚಿಸಿ ಗ್ರಾಮೀಣ ಪ್ರದೇಶಗಳ ಆರ್ಥಿಕತೆಯನ್ನು ಸುಧಾರಿಸುತ್ತದೆ. ಅಪೌಷ್ಟಿಕತೆಯನ್ನು ನಿಯಂತ್ರಿಸುವುದು ನಮ್ಮ ದೇಶದಲ್ಲಿ ಹಿಂದಿನಿಂದಲೂ ಒಂದು ದೊಡ್ಡ ಸಮಸ್ಯೆಯಾಗಿದ್ದು, ಅದು ಮಕ್ಕಳು ಹೆಚ್ಚು ಪ್ರಭಾವಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರವು ಪ್ರಮುಖ ಪಾತ್ರ ವಹಿಸಿದೆ. ಶ್ವೇತಕ್ರಾಂತಿ 2.0 ದಿಂದ ಎಲ್ಲರಿಗೂ ಹಾಲು ಲಭ್ಯವಾಗಲಿದ್ದು, ಇದರಿಂದ ಕೆಳ ವರ್ಗದ ಮಕ್ಕಳಿಗೂ ಸಾಕಷ್ಟು ಹಾಲು ದೊರಕಿ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಯಾಗುತ್ತದೆ.
ಭಾರತೀಯ ಡೈರೀ ಕ್ಷೇತ್ರವು ಗ್ರಾಮೀಣಾಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು, ಸಹಕಾರಿ ಮಾದರಿಯನ್ನು ಅದರ ಆಧಾರವಾಗಿ ತೆಗೆದುಕೊಳ್ಳುತ್ತದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವಾಗಿ ಹೊರ ಹೊಮ್ಮಿದೆ. ಇದು ಜಾಗತಿಕ ಹಾಲು ಪೂರೈಕೆಯ 25% ವನ್ನು ಪೂರೈಸುತ್ತದೆ. 2022-23 ರಲ್ಲಿ ಭಾರತವು 230.50 ಲಕ್ಷ ಟನ್ನುಗಳಷ್ಟು ಹಾಲನ್ನು ಉತ್ಪಾದಿಸಿತ್ತು. ಇದು ಅಮೇರಿಕೆಯ ಒಟ್ಟು ಉತ್ಪಾದನೆಗಿಂತ ಎರಡು ಪಟ್ಟು ಮತ್ತು ಚೀನಾದ ಒಟ್ಟು ಹಾಲು ಉತ್ಪಾದನೆಗಿಂತ ಮೂರು ಪಟ್ಟು ಹೆಚ್ಚಾಗಿದೆ. ಹಾಲಿನ ಉತ್ಪಾದನೆಯಲ್ಲಿನ ಹೆಚ್ಚಳವೂ 2014-15 ನೇ ವರ್ಷಕ್ಕಿಂತ 58% ದಷ್ಟು ಹೆಚ್ಚಾಗಿದೆ. ಇದರ ಶ್ರೇಯಸ್ಸನ್ನು ಸಹಕಾರದ ವ್ಯಾಪಕ ವ್ಯಾಪ್ತಿಗೆ ನೀಡಬಹುದು.
ಪ್ರಸ್ತುತ ದೇಶದಾದ್ಯಂತ ಒಟ್ಟು 190,000 ಸಹಕಾರಿ ಹಾಲು ಸಂಘಗಳಿದ್ದು, ಅವು 228 ಹಾಲು ಒಕ್ಕೂಟಗಳಿಗೆ ಸರಿ ಸುಮಾರು 2,28,374 ಗ್ರಾಮ ಮಟ್ಟದ ಸಹಕಾರ ಸಂಘಗಳ ಮೂಲಕ ಸಂಪರ್ಕವನ್ನು ಹೊಂದಿವೆ. ಈ ಸಂಘಗಳು 1.8 ಕೋಟಿ ರೈತ ಉತ್ಪಾದಕ ಸಂಸ್ಥೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿವೆ. ಇದು ಒಟ್ಟಾರೆಯಾಗಿ ದಿನಕ್ಕೆ 5.8 ಕೋಟಿ ಕಿ. ಗ್ರಾಂ. ಗಳಷ್ಟು ಹಾಲು ಉತ್ಪಾದನೆಯನ್ನು ಸಶಕ್ತಗೊಳಿಸುತ್ತದೆ.
ಭಾರತದಲ್ಲಿ ಡೈರಿ ಸಹಕಾರಿ ಸಂಸ್ಥೆಗಳು ಶ್ರೀಮಂತ ಇತಿಹಾಸವನ್ನು ಹೊಂದಿವೆ. 1946 ರಲ್ಲಿ ಅಮೂಲಿನ ಸ್ಥಾಪನೆಯೊಂದಿಗೆ ಶ್ವೇತಕ್ರಾಂತಿಯನ್ನು ಪ್ರಾರಂಭಿಸಲಾಯಿತು. ಇದು ಹಾಲು ಕ್ಷೇತ್ರದಲ್ಲಿ ಭಾರತಕ್ಕೆ ಜಾಗತಿಕ ಮನ್ನಣೆಯನ್ನು ನೀಡಿತ್ತು. ಸ್ವರ್ಣ ಜಯಂತಿ ಆಚರಣೆಯಂದು ಪ್ರಾರಂಭಿಸಲಾದ ಶ್ವೇತಕ್ರಾಂತಿ 2.0 ದೊಂದಿಗೆ, ಭಾರತೀಯ ಸಹಕಾರಿ ಹಾಲು ಉತ್ಪಾದನೆಯು ಖಂಡಿತವಾಗಿಯೂ ಪ್ರಪಂಚದ ಮೂಲೆ ಮೂಲೆಯನ್ನು ತಲುಪುತ್ತದೆ. ಸಹಕಾರ ಸಚಿವಾಲಯವು ಹಲವಾರು ಹಂತಗಳಲ್ಲಿ ಡೈರೀ ಸಹಕಾರಿ ಸಂಘಗಳನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ. ಬಹು ಉಪಯೋಗಿ ‘ಪ್ಯಾಕ್ಷ’ಗಳ ರಚನೆಯೊಂದಿಗೆ ಡೈರೀ ಸಹಕಾರಿ ಸಂಘಗಳ ವ್ಯಾಪಕ ವಿಸ್ತರಣೆ ಸಾಧ್ಯವಾಗುತ್ತದೆ. ಜಾನುವಾರುಗಳ ಆರೋಗ್ಯದಿಂದ ಹಿಡಿದು ಅವುಗಳ ಕಾಯಿಲೆಗಳಿಗೆ ತೀವ್ರ ಚಿಕಿತ್ಸೆ ನೀಡುವ ವರೆಗೆ ಡೈರೀ ಸಹಕಾರ ಸಂಘಗಳಿಗೆ ಸಂಬಂಧಿಸಿದ ಎಲ್ಲಾ ಅಂಶಗಳ ಬಗ್ಗೆ ಸಚಿವಾಲಯವು ಗಂಭೀರ ಗಮನವನ್ನು ಹರಿಸುತ್ತಿದೆ. ಲೈವ್ ಸ್ಟಾಕ್ ಅಥವಾ ಉತ್ತಮ ಜಾನುವಾರುಗಳ ಕಾರಣದಿಂದಾಗಿ ಹಾಲು ಉತ್ಪಾದನೆಯು ಸುಧಾರಿಸುವುದು, ಜಾನುವಾರುಗಳ ಆರೋಗ್ಯವನ್ನು ಸುಧಾರಿಸಲು, ಕ್ಲೀನಿಕ್ ಮತ್ತು ಕೃತಕ ಗರ್ಭಧಾರಣೆ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತದೆ.
ಸಹಕಾರ ಸಚಿವಾಲಯದ ಪ್ರಯತ್ನಗಳ ಮೂಲಕ ದೇಶದಾದ್ಯಂತ ಡೈರೀ ಸಹಕಾರ ಸಂಘಗಳನ್ನು ಬಲಪಡಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯ ಜೊತೆಗೆ ಹಳ್ಳಿಗರ ಜೀವನವೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಸುಧಾರಿಸುತ್ತಿದೆ. ರೈತರಿಗೆ ಸುಸ್ಥಿರ ಜೀವನೋಪಾಯ ಸಾಧ್ಯವಾಗುತ್ತಿದೆ. ದೇಶದಾದ್ಯಂತ ಎಲ್ಲಾ ಗ್ರಾಮಗಳ ಸಹಭಾಗಿತ್ವದಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಕ್ಷೀರ ನದಿಗಳನ್ನು ಹರಿಸುವುದು ಖಂಡಿತವೂ ಸಾಧ್ಯವಾಗುತ್ತದೆ.