ಸಾಹಿತ್ಯವಿರದ ಬದುಕನ್ನು ಊಹಿಸಬಹುದು ಆದರೆ ಬದುಕಿರದ ಸಾಹಿತ್ಯ ಇರಲಾರದು

ಸಾಹಿತ್ಯ ಮತ್ತು ಬದುಕು ಎರಡೂ ಒಂದರೊಳಗೊಂದು ಬೆರೆತು ಅನುಭವದ ಮೂಸೆಯಲ್ಲಿ ಪರಿಪಕ್ವಗೊಂಡು ಹೊರಹೊಮ್ಮುವ ಸಂಜೀವಿನಿ. ಸಾಹಿತ್ಯವಿರದ ಬದುಕನ್ನು ಊಹಿಸಬಹುದು ಆದರೆ ಬದುಕಿರದ ಸಾಹಿತ್ಯ ಇರಲಾರದು. ಬುದ್ಧಿಗೆ ಪ್ರೇರಣೆ; ಮನಸ್ಸಿಗೆ ರಂಜನೆ, ಗುರಿ ಸಾಧನೆಗೆ ದಾರಿ ತೋರುವುದೇ ಸಾಹಿತ್ಯ ಎಂದು ಹಾಸ್ಯ ಸಾಹಿತಿ, ಅಧ್ಯಾತ್ಮ ಚಿಂತಕ ವೈ.ವಿ. ಗುಂಡೂರಾವ್ ನುಡಿದರು.

ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ರಾಮನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಸಾಹಿತಿ ಡಾ. ಎಂ. ಬೈರೇಗೌಡರ ಕಥಾಸಂಕಲನ ಪಾದರಿ ಪರಿಮಳ, ನಾಟಕ ಅರ್ಕ-ಬುರ್ಕ ಹಾಗೂ ಕವನ ಸಂಕಲನ ಕದವಿರದ ಮನೆ ಮೂರು ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಕೃತಿ ಬರೆಯುವುದು ಮುಖ್ಯವಲ್ಲ; ಆನಂತರದ ವಿನಯ ಮುಖ್ಯ, ಬರೆವ ತನಕ ಕಾಪಿ ರೈಟ್, ಬರೆದ ಮೇಲೆ ಕಾಪಿ ಲೆಫ್ಟ್ ಎಂಬ ತತ್ವದ ಮೇಲೆ ಈ ಕೃತಿಗಳನ್ನು ಬರೆದಿರುವುದಾಗಿ ಬೈರೇಗೌಡರು ಅತ್ಯಂತ ವಿನಯದಿಂದ ಹೇಳಿಕೊಳ್ಳುತ್ತಾರೆ. ಮೂರೂ ಕೃತಿಗಳಲ್ಲಿ ಬೈರೇಗೌಡರ ಅಪಾರ ಅನುಭವ, ಬಡತನದ ನೋವು, ಅನ್ನದ ಅಲಭ್ಯತೆ, ತನ್ನೂರಿನ ಸರ್ವಜನಾಂಗ, ಬೆಳೆದ ಪರಿಸರ, ಬೆಟ್ಟ-ಗುಡ್ಡಗಳು, ನದಿ ಕಣಿವೆಗಳು ಎಲ್ಲವೂ ಅವರ ಬದುಕಿನ ಮೇಲೆ ಪ್ರಭಾವಿಸಿರುವುದನ್ನು ಈ ಬರೆಹಗಳಲ್ಲಿ ಗುರುತಿಸಬಹುದು. ಅರ್ಪಣೆಯಲ್ಲಿ ಒಂದು ವಿಶೇಷತೆಯಿದೆ; ಈ ಬರೆಹ ಹುಟ್ಟಲು ಕಾರಣವಾದ ಎಲ್ಲರಿಗೆ ಮತ್ತು ಎಲ್ಲದಕ್ಕೆ ಅರ್ಪಿಸಿರುವುದು ಇವರ ಸೃಜನಶೀಲತೆ ಮತ್ತು ಸಾಮಾಜಿಕ ಹೊಣೆಗಾರಿಕೆಗೆ ಸಾಕ್ಷಿ ಎಂದರು.

ಪಾದರಿ ಪರಿಮಳ ಕಥಾಸಂಕಲನ ಕೃತಿ ಪರಿಚಯಿಸಿದ ಸಾಹಿತ್ಯ ಸಂಶೋಧಕಿ ಡಾ. ಸುನೀತ ಬಿ.ವಿ. ಕತೆಗಾರ ಬೈರೇಗೌಡರು ಇಲ್ಲಿನ ಕತೆಗಳ ಮೂಲಕ ತಮ್ಮ ವ್ಯಕ್ತಿತ್ವದ ಅನಾವರಣ ಮಾಡಿಕೊಂಡಿದ್ದಾರೆ. ನಿಮಿಸಿಸ್ ಪರಿಕಲ್ಪನೆಯಲ್ಲಿ ತಾವು ನಿರ್ಮಿಸಿಕೊಂಡ ಜಗತ್ತಿನ ಎಲ್ಲ ಆಗುಹೋಗುಗಳಿಗೆ ಸ್ಪಂದಿಸುವ ಗುಣ ಈ ಕತೆಗಳಲ್ಲಿ ಕಂಡುಬರುತ್ತದೆ. ಇವರ ಸಾಹಿತ್ಯ ಸೃಷ್ಟಿ ಅಂತರ್ಮುಖಿ ಮತ್ತು ಬಹಿರ್ಮುಖಿ ಎರಡೂ ನೆಲೆಗಳಲ್ಲಿ ನಿರ್ಮಾಣಗೊಂಡಿದೆ. ಉದ್ವೇಗರಹಿತ, ಕಲ್ಪಿತವಾದರೂ ನೈಜತೆಯ ನೆಲೆಯಲ್ಲಿ ಈ ಕತೆಗಳು ಓದಿಸಿಕೊಂಡು ಹೋಗಬಲ್ಲವು. ಬೈರೇಗೌಡರ ಬರೆಹದ ವಿಶಿಷ್ಟತೆಯೆಂದರೆ ನಾನು-ಅವನು ಕತೆಯ ಮೂಲಕ ಕಥಾನಾಯಕನ ವರ್ಣನೆ, ಅವನ ತಾಕಲಾಟ, ತಳಮಳ ಮತ್ತು ಸಮಾಜದ ಎಲ್ಲ ಕ್ರಿಯೆಗಳಿಗೆ ಸ್ಪಂದಿಸುವ ಗುಣ, ಮಾನವ ಸಂಬAಧಗಳಿಗೆ ವ್ಯಕ್ತಿ ಕೊಡಬೇಕಾದ ಗೌರವ ಇತ್ಯಾದಿಗಳನ್ನು ಅರ್ಕಾವತಿ ನದಿಯ ಮೂಲಕ ಹೇಳಿಸುವ ಮೂಲಕ ಹೊಸತನ ಮೂಡಿಬಂದಿದೆ. ಈ ಮೂಲಕ ಹೊಸದೊಂದು ಪರಂಪರೆಗೆ ನಾಂದಿ ಹಾಡಿದ್ದಾರೆನ್ನಬಹುದು.

ಕವನ ಸಂಕಲನ ಮತ್ತು ನಾಟಕ ಕೃತಿಗಳನ್ನು ಪರಿಚಯಿಸಿದ ರಂಗಕರ್ಮಿ ಎಂ.ಸಿ. ನಾಗರಾಜ್, ಅರ್ಕ-ಬುರ್ಕ ನಾಟಕ ಕೃತಿ ಎಲ್ಲಿಯೂ ನೆಗೆಟಿವ್ ಆಲೋಚನೆಗಳಿಗೆ ಎಡೆಕೊಡುವುದಿಲ್ಲ. ಆ ಕಾರಣದಿಂದಲೇ ತಾವು ಸೃಷ್ಟಿಸಿರುವ ಇಬ್ಬರು ಅಂಧ ವ್ಯಕ್ತಿಗಳಿಗೆ ಅರ್ಕ-ಬುರ್ಕ ಎಂಬ ಹೆಸರು ನೀಡಿದ್ದಾರೆ. ಇಲ್ಲಿ ಶಾಲಾಮಕ್ಕಳ ಸಾಮಾನ್ಯ ಹೆಸರುಗಳಿವೆ. ಅಮ್ಮ ಎಂಬ ಸಾರ್ವತ್ರಿಕ ಅಮ್ಮನನ್ನು ತಮ್ಮ ನಾಟಕದ ಪಾತ್ರದಲ್ಲಿ ತಂದಿದ್ದಾರೆ. ಹಿಗಾಗಿ ಪೂರ್ವಾಗ್ರಹ ಪೀಡಿತರಾಗಿ ಹೀಗೇ ಇರಬೇಕೆಂಬ ಯಾವ ಕಟ್ಟುಪಾಡುಗಳನ್ನೂ ಹಾಕಿಕೊಳ್ಳದೆ ಈ ನಾಟಕದ ರಚನೆಯಾಗಿದೆ.
ಕವನ ಸಂಕಲನ ಬೈರೇಗೌಡರ ನಾಲ್ಕು ದಶಕಗಳ ವಯಕ್ತಿಕ ಬದುಕು, ಸಮಾಜಿಕ ಬದುಕಿನ ಧ್ಯಾನಸ್ಥ ಸ್ಥಿತಿಯಲ್ಲಿ ಹುಟ್ಟಿದ ಭಾವನೆಗಳ ಅಕ್ಷರ ರೂಪವೇ “ಕದವಿರದ ಮನೆ ” ಕವನಸಂಕಲನ. ಅರೆ ಇದೇನಿದು? ಎಂಬ ಕೌತುಕ ಹುಟ್ಟಿಸುವುದರ ಜೊತೆಗೆ ಮತ್ತೆ ಮತ್ತೆ ಓದಬೇಕೆಂಬ ಇರಾದೆಯನ್ನು ಹುಟ್ಟಿಸುವ ಕವನಗಳ ಗುಚ್ಛ ಕದವಿರದ ಮನೆ ಕವನಸಂಕಲ. ಕೃತಿಕಾರರ ಸೂಕ್ಷ್ಮ ಒಳನೋಟ, ಭಾವಲಹರಿ, ಅನುಭವದ ಮೂಸೆಯಿಂದ ರೂಪುತಳೆದ ಅಂತಃಸತ್ವವುಳ್ಳ ಕವಿತೆಗಳ ಸಂಕಲನ. ಗಂಭೀರ ಸಾಹಿತ್ಯದ ಘಮಲು ಅಸ್ವಾದಿಸಲು ಈ ಸಾಲುಗಳನ್ನು ಉದಾಹರಿಸಬಹುದು. “ಸಂತನಲ್ಲ ಅನಂತನಲ್ಲ ಅವನದೆಂದು ಏನೂ ಯಿಲ್ಲ ಸತ್ತವನು ಬದುಕುಳಿದಿದ್ದಾನೆ ಕಾಯಕಯೋಗಿ ನಾಟಿದಶೂಲಕೆ ಹೊಳೆತೋಡಿ ಹುದುಗಿದವನು. ಹಗೆಗಳ ಬಗೆಯಲಿ ನಗೆಯ ಹೊನಲು ತುಂಬಿ ಅಸನಂತಕೋಟಲೆಗಳ ಕುದಿಸಿ ಕುಡಿದವ. ಮುಂದುವರೆದು ಇನ್ನೊಂದು ಕವನದ ಸಾಲುಗಳು ಹೀಗಿವೆ ನಾವು ನಿಶ್ಚಲರಾಗಬೇಕು ಊರ್ಧ್ವಲೋಕಕೆ ಕಾಲು ಬರಬೇಕು ಮಂಡಿಯೂರಿ ಮನದ ಸಂದುಗಳ ಒರೆಸುವ ಬಟ್ಟೆಯಾಗುವುದೇ ಬದುಕಿನ ಕ್ಲೇಶ! ಹೀಗೆ ಸಾಗುವ ಹಿತನುಡಿಗಳು ಅದಾವುದೋ ರೂಪು ಧರಿಸಿ ಆ ರೂಪ ಸಖಿ, ಗೆಳತಿ, ಪ್ರಣಯಿನಿ, ಮಡದಿ, ಮಗು, ಹೊಲಗದ್ದೆ, ಬದು, ಪೈರು ಪಚ್ಚೆ ಮಳೆ ಬೆಳೆ ಆಕಾಶ, ನದಿ ನದ ಸಮುದ್ರ ಬೆಟ್ಟ ಗುಡ್ಡ ಕೊರಕಲು ಈ ಎಲ್ಲ ವಿಷಯಗಳು ಕವನಗಳ ವಸ್ತುವಾಗಿ ಕದವಿರದ ಮನೆ ಕವನಸಂಕಲನದಲ್ಲಿ ವಿಜೃಂಭಿಸುತ್ತವೆ. ಓದುಗರನ್ನು ಸಾಂತ್ವನಗೊಳಿಸುತ್ತವೆ, ಇರಿಯುತ್ತವೆ, ಬೆದಕುತ್ತವೆ, ಕೆದಕುತ್ತವೆ. ಕವಿತೆಗಳು ಈ ಮೂಲಕ ಸಾರ್ಥಕ್ಯ ಪಡೆಯುತ್ತವೆ. ಸಿದ್ಧಮಾದರಿಗಳನ್ನು ಬಿಟ್ಟು ಹೊಸದೊಂದು ರೂಪದಲ್ಲಿ ಕಟ್ಟಿಕೊಟ್ಟಿರುವ ಬೈರೇಗೌಡರ ಸೃಜನಶೀಲತೆ ಈ ಕೃತಿಗಳ ಮೂಲಕ ಅನಾವರಣಗೊಂಡಿದೆ ಎಂದರು.
ಮೂರೂ ಕೃತಿಗಳ ಲೇಖಕ ಡಾ. ಎಂ. ಬೈರೇಗೌಡ ಮಾತನಾಡಿ ನನ್ನ ಬರೆಹಗಳು ಎಲ್ಲವರ್ಗದ ಜನರ ಬದುಕಿನಲ್ಲಿ ನಡೆದಿರಬಹುದಾದ ಘಟನೆಗಳೇ. ನೆನಪಿನ ಬುತ್ತಿಯಲ್ಲಿ ಕೆಲವನ್ನಷ್ಟೇ ಇಲ್ಲಿ ದಾಖಲಿಸಿರುವೆ. ಈ ಬರೆಹ, ನಾಟಕ, ಕವಿತೆಗಳು ಮುಂದಿನ ತಲೆಮಾರಿನ ಮೇಲೆ ಉತ್ತಮ ಪರಿಣಾಮ ಬೀರಿದರೆ ನನ್ನ ಬರೆಹಕ್ಕೆ ಸಾರ್ಥಕತೆ ಬರುತ್ತದೆ. ಯುವ ಮನಸ್ಸುಗಳ ಗಮನ ಸೆಳೆಯುವುದು ನನ್ನ ಬರೆಹದ ಗುರಿ. ಅದು ಈ ಮೂಲಕ ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಕಣಕಾರ ಅಣುಕು ರಾಮನಾಥ್ ಸಾಹಿತ್ಯದ ಅಂತಿಮ ಗುರಿ ಸಹೃದಯನಲ್ಲಿ ಹೊಸ ಭಾವಗಳನ್ನು ಮೂಡಿಸಿ, ಆ ಮೂಲಕ ಚೈತನ್ಯ ತುಂಬುವುದೇ ಅಗಿರುತ್ತದೆ. ಬೈರೇಗೌಡರ ಬರೆಹದಲ್ಲಿ ಆ ಬಗೆಯ ಹೊಸತನ ಮತ್ತು ಚೈತನ್ಯದಾಯಿ ಗುಣಗಳು ಅನಾವರಣಗೊಂಡಿವೆ. ಅವರ ಕವಿತೆಗಳಾಗಲೀ, ನಾಟಕ ಮತ್ತು ಕಥನರೂಪದ ಬರೆಹಗಳೆಲ್ಲವೂ ಹೊಸ ಮಾದರಿಯೊಂದನ್ನು ಕಟ್ಟಿಕೊಟ್ಟಿವೆ. ಕಾವ್ಯಮೀಮಾಂಸೆಯ ತತ್ವಗಳನ್ನು ಮೀರಿ ನಿರ್ಮಾಣವಾದ ಈ ಕೃತಿಗಳು ಸಾರ್ವಕಾಲಿಕವಾಗಿ ನಿಲ್ಲಬಲ್ಲವು. ಆ ಮೂಲಕ ಬೈರೇಗೌಡರು ಅಭಿನಂದನಾರ್ಹರು ಎಂದು ಶ್ಲಾಘಿಸಿದರು.
ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಟಿ. ನಾಗೇಶ್, ನ್ಯೂ ಎಕ್ಸ್ಫರ್ಟ್ ಕಾಲೇಜು ಪ್ರಾಂಶುಪಾಲ ಡಾ. ಡಿ.ಆರ್. ರವಿಕುಮಾರ್ ಮಾತನಾಡಿದರು. ರಾಮನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಮ್ಮ ಕಂಠದ ಮೂಲಕ ಪ್ರೇಕ್ಷಕರನ್ನು ರಂಜಿಸಿದರಲ್ಲದೆ, ಇದೇ ಸಂದರ್ಭದಲ್ಲಿ ಮೈಸೂರಿನ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದಿಂದ ಜಾನಪದ ಸಂಗೀತ ಸಂಬಂಧಿ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದ ಅಂತಾರಾಷ್ಟ್ರೀಯ  ಜನಪದ ಗಾಯಕ ಜೋಗಿಲ ಸಿದ್ಧರಾಜು ಅವರನ್ನು ಅಭಿನಂದಿಸಲಾಯಿತು. ಉಪನ್ಯಾಸಕ ದಯಾನಂದ್ ಕಾರ್ಯಕ್ರಮ ನಿರೂಪಿಸಿದರು, ಉಪಪ್ರಾಂಶುಪಾಲ ಚಂದ್ರಶೇಖರ್ ವಂದಿಸಿದರು.