ಸುಂದರ ಬದುಕಿನ ಭಂಡಾರ – ಆಸಕ್ತಿ 

ಜಯ್ ನುಡಿ (ವ್ಯಕ್ತಿತ್ವ ವಿಕಸನ ಲೇಖನ ಮಾಲಿಕೆ)

ಕಳೆದ ದಿನವನ್ನು ಹಾಗೆ ಸುಮ್ಮನೇ ಕುಳಿತು ಮೆಲಕು ಹಾಕಿದರೆ ಬೇಸರವೆನಿಸುತ್ತದೆ. ಜೀವನದಲ್ಲಿ ಮತ್ತೆ ಒಂದು ದಿನವನ್ನು ವ್ಯರ್ಥವಾಗಿ ಕಳೆದುಕೊಂಡು ಬಿಟ್ಟೆ. ಏನೂ ಮಾಡಲಾಗಲೇ ಇಲ್ಲ.ನಾಳೆಯಾದರೂ ಸಾರ್ಥಕ ದಿನವನ್ನು ಕಳೆಯೋಣ ಅಂದುಕೊಳ್ಳುತ್ತೇನೆ. ಮತ್ತೇ ಅದೇ ರಾಗ ಅದೇ ಹಾಡು. ಸಮಯವನ್ನು ವೃಥಾ ವ್ಯರ್ಥವಾಗಿ ಕಳೆದು ಬಿಡುತ್ತೇನೆ. ಅದಕ್ಕೆ ಮೂಲ ಕಾರಣ ಹುಡುಕುವುದು ದೊಡ್ಡದೇನಲ್ಲ. ಕೆಲವೇ ಕೆಲ ನಿಮಿಷಗಳಲ್ಲಿ ಮನಸ್ಸು ಉತ್ತರಿಸಿ ಬಿಡುತ್ತದೆ. ಎಲ್ಲ ಉತ್ತಮ ವಿಚಾರಗಳನ್ನು ತಲೆಯಲ್ಲಿಟ್ಟುಕೊಂಡು ಅಡ್ಡಾಡಿದರೆ ಏನು ಪ್ರಯೋಜನ? ಆಸಕ್ತಿಯಿಂದ ಅಂದುಕೊಂಡಿದ್ದನ್ನು ಮಾಡಲು ಮುಂದಾಗಬೇಕು. ಸ್ವಲ್ಪ ಸಮಯ ಆಸಕ್ತಿಯಿಂದ ಚಿಕ್ಕ ಪುಟ್ಟ ಕಾರ್ಯಗಳನ್ನು ನಿರ್ವಹಿಸುತ್ತೇನೆ. ಮುಂದುವರೆದು ಮತ್ತೊಂದಿಷ್ಟು ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎನ್ನುವುದರೊಳಗೆ ಆಸಕ್ತಿ ಬೇಸತ್ತು ಮನದ ಮೂಲೆಯಲ್ಲಿ ಮಲಗಿ ಬಿಡುತ್ತದೆ. ಇದ್ಯಾಕೆ ಹೀಗೆ ನಿರಾಸಕ್ತಿ ಮನದ ಮನೆಯಲ್ಲಿ ಮನೆ ಮಾಡಿದೆ ಎಂದೆನಿಸುತ್ತದೆ. ನಿರಾಸಕ್ತಿ ತುಂಬಿಕೊಂಡರೆ ಮುಗಿದೇ ಹೋಯಿತು. ಬದುಕಿಗೆ ಗೆದ್ದಲು ಹತ್ತಿದಂತೆಯೇ ಸರಿ. ಅಗಾಧ ಬುದ್ಧಿಶಕ್ತಿ, ಹೊಳೆಯುವ ಪರಿಣಿತಿ ಇದ್ದು ಆಸಕ್ತಿ ಇರದಿದ್ದರೆ ಜೀವನ ನಿಂತ ನೀರಾಗಿ ಬಿಡುತ್ತದೆ. ಇದೆಲ್ಲ ಗೊತ್ತಿದ್ದರೂ ಸಾವಿರಾರು ನೆಪಗಳನ್ನು ಮುಂದೊಡ್ಡಿ ಯಾಕೋ ಯಾವುದರಲ್ಲೂ ಆಸಕ್ತಿಯೇ ಇಲ್ಲ ಎಂದು ಕೈ ಚೆಲ್ಲಿ ಕುಳಿತು ಬಿಡುತ್ತೇವೆ. ಎನ್ನುವುದು ಬಹಳಷ್ಟು ಜನರ ಹಲಬುವಿಕೆ. ಬೇಕಾದುದೆಲ್ಲವನ್ನು ಪಡೆದುಕೊಳ್ಳುವುದಕ್ಕೂ ಆಸಕ್ತಿಯೇ ಮೂಲ ಅನ್ನೋದು ಮೂಲ ಸಂಗತಿ ಆಸಕ್ತಿ ಎನ್ನುವುದು ನಮ್ಮ ಜೀವನದಲ್ಲಿ ಅಷ್ಟೊಂದು ಪ್ರಮುಖ ಪಾತ್ರ ವಹಿಸುತ್ತದೆಯೇ? ಎಂಬ ಪ್ರಶ್ನೆ ಹಲವು ಸಲ ತಲೆ ತಿನ್ನುವುದುಂಟು. ಸುಂದರ ಬದುಕಿನ ಭಂಡಾರವಾದ ಆಸಕ್ತಿಯನ್ನು ಕಾಪಿಟ್ಟುಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ
ಆಸಕ್ತಿ ಎಂದರೇನು?

1000923138

ಆಸಕ್ತಿ ಎಂಬುದೊಂದು ಸ್ವಾರಸ್ಯಕರ ಭಾವ. ಶ್ರದ್ಧೆ, ತಲ್ಲೀನತೆ, ಮೋಹ, ತತ್ಪರತೆಯೇ ಆಸಕ್ತಿ. ಮನದ ಸೂಕ್ಷ್ಮವಾದ ಹಾಗೂ ಆಳವಾದ ಕಾಳಜಿಯ ತುಡಿತವನ್ನೇ ಆಸಕ್ತಿ ಎಂದು ಹೆಸರಿಸಬಹುದು. ಆಸಕ್ತಿ ವೈವಿಧ್ಯಮಯ ರೂಪಗಳನ್ನು ಒಳಗೊಂಡಿರುತ್ತದೆ. ಸರಳ ರೀತಿಯಲ್ಲಿ ಹೇಳಬೇಕೆಂದರೆ ಆಸಕ್ತಿ ಒಂದು ಪ್ರಬಲ ಪ್ರೇರಕ ಶಕ್ತಿ.ಬಹುಮುಖ್ಯವಾಗಿ ನಾವು ವರ್ತಿಸುವ ರೀತಿಯಲ್ಲೇ ಅದನ್ನು ಬಹು ಸುಲಭವಾಗಿ ಗುರುತಿಸಬಹುದು. ವೈಯಕ್ತಿಕ ಭಿನ್ನತೆಗಳ ಕಾರಣದಿಂದಾಗಿ ಸಾರ್ವತ್ರಿಕವಾಗಿ ಸಾಮಾನ್ಯವಾಗಿ ಎಲ್ಲರಲ್ಲೂ ಒಂದೇ ರೀತಿಯ ಆಸಕ್ತಿ ಗೋಚರಿಸುವುದು ವಿರಳ. ಆಸಕ್ತಿಯ ಸ್ವರೂಪ ಮತ್ತು ಮೂಲ ತತ್ವದ ಕುರಿತಾಗಿ ಆಗಿಂದಾಗ್ಗೆ ಚರ್ಚೆಗೊಳಗಾಗುವ ವಿಷಯವಾದರೂ ಸಹ ವ್ಯಕ್ತಿಯೋರ್ವನಿಗೆ ಯಾವುದರಲ್ಲಿ ಆಸಕ್ತಿಯಿದೆ ಎಂಬುದು ಆತನ ವರ್ತನೆ ಪ್ರತಿಸ್ಪಂದನೆ ಪ್ರತಿಕ್ರಿಯೆಯಿಂದಲೇ ಗೊತ್ತಾಗಿ ಬಿಡುತ್ತದೆ.

ಬಿಡಿ ಅತಿಯಾದ ಆಲೋಚನೆ
ಪ್ರತಿ ದಿನದಲ್ಲೂ ಹೊಸ ಅವಕಾಶಗಳು ಇದ್ದೇ ಇರುತ್ತೇವೆ. ಮೊದಲಿಗೆ ಯಾವುದರ ಕುರಿತೂ ಪೂರ್ವಾಗ್ರಹ ಪೀಡಿತರಾಗಿ ವಿಚಾರ ಮಾಡುವುದನ್ನು ನಿಲ್ಲಿಸಬೇಕು. ಅವಶ್ಯತೆಯಿದ್ದಷ್ಟು ವಿಚಾರ ಮಾಡಿದರೆ ಹೆಚ್ಚು ಆಸಕ್ತಿಯಿಂದ ಕ್ರಿಯಾಶೀಲರಾಗಲು ಸಾಧ್ಯವಾಗುವುದು. ನಾವು ಯಾವುದನ್ನು ಬಹಳಷ್ಟು ಇಷ್ಟ ಪಡುತ್ತೇವೆಯೋ ಅದೇ ನಮ್ಮ ಆಸಕ್ತಿಕರ ವಿಷಯವಾಗಿರುತ್ತದೆ. ನಾವು ಬದುಕಿನಲ್ಲಿ ಏನೆಲ್ಲ ಗಳಿಸಿದ್ದೇವೆ ಅದಕ್ಕೆ ಕಾರಣ ನಮ್ಮ ಬುದ್ಧಿವಂತಿಕೆಗಿಂತ ಹೆಚ್ಚಿನ ಪಾಲು ಆಸಕ್ತಿಯದ್ದೇ ಇದೆ. ಹೀಗಾಗಿ ಆಲೋಚನೆಯನ್ನು ತೊರೆದು ಕೆಲಸದಲ್ಲಿ ಕ್ರಿಯಾಶೀಲರಾಗಬೇಕು.

ಈ ಕ್ಷಣವೇ ಸಕಾಲ
ಬಹುತೇಕ ಸಲ ನಾನು ಎಲ್ಲದರಲ್ಲೂ ವಿಫಲನಾಗಿದ್ದೇನೆ. ಇನ್ನು ನನ್ನಿಂದ ಏನೂ ಆಗದು ಎನ್ನುವುದೇ ಆಸಕ್ತಿ ಇಲ್ಲದಿರುವುದಕ್ಕೆ ಮುಖ್ಯ ಕಾರಣ. ಮತ್ತೊಮ್ಮೆ ಏನಾದರೂ ಹೊಸತನ್ನು ಆಸಕ್ತಿಯಿಂದ ಮಾಡಬೇಕೆಂದರೂ ಅದಕ್ಕೆ ಇದು ಸಕಾಲವಲ್ಲ. ಆಗಲೇ ತುಂಬಾ ವಿಳಂಬವಾಗಿದೆ. ಅಂದುಕೊಳ್ಳುವುದು ಶುದ್ಧ ತಪ್ಪು.ಅವಕಾಶಕ್ಕಾಗಿ ಎದುರು ನೋಡಬೇಕೇ ವಿನಃ ಗ್ಯಾರಂಟಿಗಳಿಗಲ್ಲ. ಕಣ್ಣುಗಳನ್ನು ಎತ್ತಿ ನೋಡಿದರೆ ನಕ್ಷತ್ರಗಳು ಕಾಣುತ್ತವೆ. ಹೀಗಾಗಿ ಆಸಕ್ತಿಯ ಕಂಗಳನ್ನು ಸದಾ ತೆರೆದಿಟ್ಟುಕೊಳ್ಳಬೇಕು.

ಹೆಜ್ಜೆ ಹಾಕುತ್ತಿರಿ
ಒಳ್ಳೆಯನಾಗಿದ್ದರೂ ಉಪಯೋಗವಿಲ್ಲ. ಅನ್ನೋ ಒಂದೇ ಒಂದು ಸಂಗತಿ ಮುಂದೆ ಮಾಡಿಕೊಂಡು ಸುತ್ತಮುತ್ತಲಿನ ಯಾರೂ ನಿಮ್ಮನ್ನು ಇಷ್ಟಪಡುವುದಿಲ್ಲ. ಬದುಕು ನಾವು ಅಂದಕೊಂಡಂತೆ ಸರಳ ರೇಖೆಯಲ್ಲ. ಬಹಳಷ್ಟು ತಿರುವುಗಳಿವೆ. ಆ ತಿರುವುಗಳ ಅರಿವು ಇರುವುದೇ ಇಲ್ಲ. ಅಂಥ ತಿರುವುಗಳಲ್ಲೂ ನಾವು ನಮ್ಮ ಆಸಕ್ತಿಯನ್ನು ಕಾದುಕೊಂಡು ಮುನ್ನುಗ್ಗಬೇಕು. ವಿಭಿನ್ನ ಸ್ವಭಾವದ ಜನರು ಸಿಗುತ್ತಾರೆ. ಕೆಲವರು ನಿಮ್ಮನ್ನು ಸಂತಸಗೊಳಿಸಿದರೆ, ಹೆಚ್ಚಿನವರು ಕಹಿ ಅನುಭವ ನೀಡುತ್ತಾರೆ. ಕಡಿಮೆ ಜನ ಪ್ರೀತಿಸುತ್ತಾರೆ. ಉಳಿದವರೆಲ್ಲ ಕಡು ವೈರಿಗಳಂತೆ ವರ್ತಿಸುತ್ತಾರೆ. ಪರಿಸ್ಥಿತಿ ಹೀಗಿರುವಾಗ ಬದುಕಿನ ತೇರನ್ನು ಪ್ರೀತಿಯಿಂದ ಮುಂದೆಳೆದುಕೊಂಡು ಹೋಗಲು ಹೇಗೆ ಆಗುತ್ತೆಂಬ ದೊಡ್ಡ ಗೊಂದಲದಲ್ಲಿ ಬಿದ್ದು ಬಿಡುತ್ತೇವೆ. ಜನರು ಹೇಗೆ ವರ್ತಿಸಲಿ ಪರಿಸ್ಥಿತಿ ಎಷ್ಟೇ ಹದಗೆಟ್ಟಿರಲಿ ನಮ್ಮ ಆಸಕ್ತಿಯುತ ಕೆಲಸ ಕಾರ್ಯಗಳಲ್ಲಿ ಹೆಜ್ಜೆ ಹಾಕುತ್ತಲಿರುವುದೇ ಸರಳ ಸೂತ್ರ. ನಮಗಿಂತ ಕೆಟ್ಟ ಸ್ಥಿತಿಯಲ್ಲಿರುವವರು ಸ್ವಯಂ ಪ್ರೇರಣೆಯ ಬಾಲಂಗೋಚಿ ಹಿಡಿದು ಬಾಳಿನ ಗಾಳಿ ಪಟ ಹಾರಿಸುವುದನ್ನು ನೋಡಿ ನಾವೂ ಆ ಹಾದಿಯಲ್ಲಿ ಚುರಕಾಗಿ ಸಾಗಬೇಕು.

ಬೇಡ ಇಚ್ಛಾಶಕ್ತಿ ಅಭಾವ
ಒಂದೇ ಒಂದು ಬಲವಾದ ಆಸಕ್ತಿಯನ್ನು ಬೆನ್ನು ಹತ್ತಿ ಸೆಣಸಾಡಿ ಅಸಾಮಾನ್ಯ ಸಾಧನೆಗೈದವರನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಕೆಚ್ಚೆದೆಯ ಹೋರಾಟ ಮಾಡಿದ ಮಹನೀಯರ ಬದುಕನ್ನು ಮಾದರಿಯಾಗಿಟ್ಟುಕೊಂಡು ಮುಂದಾಗಬೇಕು.ಇದರಿಂದ ಧೈರ್ಯಶಾಲಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುವುದು. ಆಸಕ್ತಿಯನ್ನು ಬೆಂಬತ್ತಿದ ಜನ ಸುತ್ತಲಿನ ಜನರ ನಡುವಿನ ವ್ಯತಾಸದ ಕುರಿತಂತೆ ಸಮಸ್ಯೆ ಎದುರಿಸಲೇಬೇಕಾಗುತ್ತದೆ. ‘ಜನರಲ್ಲಿ ಬಲದ ಅಭಾವವಿರುವುದಿಲ್ಲ. ಇಚ್ಛಾಶಕ್ತಿಯ ಅಭಾವವಿರುತ್ತದೆ.’ಎನ್ನುವುದು ವಿಕ್ಟರ್ ಹ್ಯೂಗೋನ ನುಡಿ.
ಸವೆದು ಹೋಗುವುದು ಲೇಸು
ಆಸಕ್ತಿಯ ಇನ್ನೊಂದು ಮುಖ ಅಭಿರುಚಿ. ‘ಅಭಿರುಚಿಯನ್ನು ಹುಟ್ಟಿಸುವುದು ಶಿಕ್ಷಣದ ಉದ್ದೇಶವೇ ಹೊರತು ಒಬ್ಬರು ಕಲಿತುದನ್ನು ಇನ್ನೊಬ್ಬರಿಗೆ ಹೇಳುವುದಲ್ಲ’ ಎಂಬ ಗಯಟೆ ನುಡಿಯಂತೆ ವಿನೂತನವಾಗಿ ಏನನ್ನು ಮಾಡುವ ಅಸಕ್ತಿಯ ಹಂಬಲವಿಲ್ಲದಿದ್ದರೆ ಶಿಕ್ಷಣ ನಿಷ್ಪçಯೋಜಕ. ನಿರಾಸಕ್ತಿಯಿಂದ ಕತ್ತಲೆಯಲ್ಲಿ ಕೊಳೆಯುವುದಕ್ಕಿಂತ ಬೆಳಕಿನ ಬೀಜ ಬಿತ್ತುವ ಜನರಾಗಬೇಕು. ಬೆಳಕಿನ ಬೀಜ ಬಿತ್ತಲು ಸಾಧ್ಯವಾಗುವುದು ನಿರಂತರ ಆಸಕ್ತಿಯಿಂದ ಮಾತ್ರ. ಕಷ್ಟಕರ ಕೆಲಸ ಮಾಡದವರಿಗೆ ಬದುಕು ಏನನ್ನೂ ನೀಡದು. ‘ವೇಗವಾಗಿ ಕಾರ್ಯವನ್ನು ಮಾಡುತ್ತ ಸಾಗಿ ತುಕ್ಕು ಹಿಡಿಯುವುದಕ್ಕಿಂತ ಸವೆದು ಹೋಗುವುದು ಒಳ್ಳೆಯದು’ ನಿರಾಸಕ್ತಿಯಿಂದ ಜೀವನ ವ್ಯರ್ಥವಾಗಿ ಹೋಗುವುದಕ್ಕಿಂತ ಆಸಕ್ತಿಯಿಂದ ನಾವಿಚ್ಛಿಸಿದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿ ಸವೆದು ಹೋಗುವುದು ಲೇಸು ಎಂದು ಒತ್ತಿ ಹೇಳುತ್ತದೆ.

ವಿವೇಕಾನಂದರ ನುಡಿ.

ಗಡಿಯಾರದ ಮುಳ್ಳುಗಳಾಗಿಸಿ
ಗಾಳಿ ಬೀಸಿದೆಡೆ ಚಲಿಸುವ ಎಲೆಯಂತೆ ಬದುಕನ್ನು ದೂಡುವುದು ಸುಲಭ. ಮೌಲ್ಯಯುತ ಬದುಕನ್ನು ಬದುಕಲು ನಿರಾಸಕ್ತಿ ತೊರೆಯಬೇಕು. ಆಸಕ್ತಿ ನಮ್ಮನ್ನು ಬದ್ಧವಾಗಿಸುತ್ತದೆ. ಗುರಿಯತ್ತ ಸಾಗಲು ಸಿದ್ಧವಾಗಿಸುತ್ತದೆ. ಉತ್ಸಾಹದಿಂದ ಇರಿಸುತ್ತದೆ. ಪ್ರಮುಖ ಆದ್ಯತೆಗಳತ್ತ ಗಮನ ಸೆಳೆಯುತ್ತದೆ. ಆ ನಿಟ್ಟಿನಲ್ಲಿ ನಾವು ಕಾರ್ಯ ತತ್ಪರರಾಗಬೇಕಷ್ಟೆ. ಆಸಕ್ತಿಗೆ ಹೆಚ್ಚು ಸಮರ್ಪಿತ ವ್ಯಕ್ತಿಯಾಗಬೇಕು. ಕಡಲಿನ ಅಲೆಯಂತೆ ಒಂದು ಆಸಕ್ತಿ ಕೆಲ ಹೊತ್ತು ಜೋರಾಗಿದ್ದು, ಕ್ರಮೇಣ ಒತ್ತಡ ಕಡಿಮೆಯಾಗಿ ನಂತರ ಕಣ್ಮರೆಯಾದರೆ ಉಪಯೋಗವಾಗದು. ಕೆಲವೇ ಕೆಲವು ಆಸಕ್ತಿಗಳನ್ನು ಅತ್ಯುನ್ನತ ಆದ್ಯತೆ ಪ್ರಕಾರ ಬದುಕಿನಾದ್ಯಂತ ಹಿಡಿದು ನಡೆಯಬೇಕು. ಆಸಕ್ತಿಯ ಕ್ಷೇತ್ರದಲ್ಲಿ ಹೊಸತನ್ನು ಸಾಧಿಸುವುದರಲ್ಲೇ ಶ್ರೇಷ್ಠರು ನಿರಂತರ ಸಂತೋಷವನ್ನು ಅನುಭವಿಸುತ್ತಾರೆ. ನಾವೂ ಆ ದಿಶೆಯಲ್ಲಿ ಹೆಜ್ಜೆ ಹಾಕಬೇಕು. ಗೋಲ್ಡ್ ಸಾಮ್ರಾಟ ಬೆನ್ ಹೋಗನ್ ಹೇಳಿದಂತೆ ‘ ಜೀವನದ ಮಾರ್ಗದಲ್ಲಿ ನೀವು ನಡೆದಂತೆ ಗುಲಾಬಿಗಳ (ಆಸಕ್ತಿಗಳ) ಸುವಾಸನೆಯನ್ನು ಸವಿಯಬೇಕು. ಏಕೆಂದರೆ ಜೀವನದಲ್ಲಿ ನಿಮಗೆ ಆಟ ಆಡಲು ಒಂದೇ ಒಂದು ಸುತ್ತು ಸಿಗುತ್ತದೆ.’ ಆಸಕ್ತಿಗಳನ್ನು ಗಡಿಯಾರದ ಮುಳ್ಳುಗಳಾಗಿಸಿ ಬತ್ತದ ಸಮುದ್ರದಂತೆ ಹುರುಪಿನಿಂದಲೇ ಸುಂದರ ಬದುಕಿಗೆ ಅಣಿಯೋಗೋಣ..

1000923144

— ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨