ಡಾ. ಎಂ. ಬೈರೇಗೌಡರ ಮೂರು ಪುಸ್ತಕಗಳ ಬಿಡುಗಡೆ
ವಿಜಯ ದರ್ಪಣ ನ್ಯೂಸ್……
ಡಾ. ಎಂ. ಬೈರೇಗೌಡರ ಮೂರು ಪುಸ್ತಕಗಳ ಬಿಡುಗಡೆ
ರಾಮನಗರ: ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ರಾಮನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತುಗಳು ಸಂಯುಕ್ತವಾಗಿ ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡರ ನಾಟಕ ಕೃತಿ ಅರ್ಕ ಬುರ್ಕ, ಕವನ ಸಂಕಲನ ಕದವಿರದ ಮನೆ ಹಾಗೂ ಪಾದರಿಯ ಪರಿಮಳ ಕಥಾ ಸಂಕಲನ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇಬ್ಬರು ಅಂಧರಾದ ಆತ್ಮೀಯ ಸ್ನೇಹಿತರ ಅವಿನಾ ಸಂಬಂಧವನ್ನು ವಿವರಿಸುವ ವಸ್ತುವುಳ್ಳ ನಾಟಕ ಅರ್ಕ-ಬುರ್ಕ. ಸಂತೆ, ಶಾಲೆ, ಶಿಕ್ಷಣ, ಪವಾಡಗಳೆಲ್ಲ ಮಿಶ್ರಣಗೊಂಡ ವಿವರಗಳುಳ್ಳ ಕೃತಿ. ಕಳೆದ ಹತ್ತು ವರ್ಷಗಳಲ್ಲಿ ಬರೆದ ಕವಿತೆಗಳಲ್ಲಿ ಕೆಲವನ್ನು ಆರಿಸಿಕೊಂಡು ರಚಿತವಾದ ಕವನ ಸಂಕಲನ ಕದವಿರದ ಮನೆ. ಪಾದರಿಯ ಪರಿಮಳ ಬೈರೇಗೌಡರ ಹಲವು ವರ್ಷಗಳ ಅನುಭವಪೂರಿತ ಕತೆಗಳ ಸಂಕಲನ. ಪಾದರಿ ನೆಲಮಲೆ ಬೆಟ್ಟ-ಕಾಡಿನಲ್ಲಿ ಕಂಡುಬರುವ ಅಪರೂಪದ ಮರ. ಶಿವರಾತ್ರಿ ಸಂದರ್ಭದಲ್ಲಿ ಹುಣ್ಣಿಮೆಯ ರಾತ್ರಿ ಹೂಬಿಟ್ಟು ಇಡೀ ಬೆಟ್ಟಕ್ಕೆ ತನ್ನ ಪರಿಮಳವನ್ನು ಸೂಸುತ್ತ, ಬೆಳಗಾಗುವಷ್ಟರಲ್ಲಿ ಮಾಯವಾಗುವ ಮಾಯಾಂಗನೆ. ಈ ಸಂಬಂಧದ ಯಾವುದೇ ಕತೆಗಳಿಲ್ಲದಿದ್ದರೂ ಇಂಥದೊAದು ಸಸ್ಯಸಂಕುಲದ ಮರದ ಮತ್ತು ಅದರ ಹೂಬಿಟ್ಟು ಕಮರಿಹೋಗುವ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ಬೈರೇಗೌಡ ತಮ್ಮ ಕಥಾಸಂಕಲನಕ್ಕೆ ಪಾದರಿಯ ಪರಿಮಳ ಎಂದು ಹೆಸರಿಸಿಕೊಂಡಿದ್ದಾರೆ.
13ನೇ ಜನವರಿ 2025ರಂದು ಬೆಳಗ್ಗೆ 10.30ಕ್ಕೆ ರಾಮನಗರದ ನ್ಯೂ ಎಕ್ಸ್ಫರ್ಟ್ ಕಾಲೇಜು ಸಭಾಂಗಣದಲ್ಲಿ ಕಾರ್ಯಕ್ರಮ ಜರುಗುವುದು. ನಾಡಿನ ಹೆಸರಾಂತ ಹಾಸ್ಯ ಸಾಹಿತಿ ಮತ್ತು ಅಧ್ಯಾತ್ಮ ಚಿಂತಕರಾದ ವೈ.ವಿ. ಗುಂಡೂರಾವ್ ಕೃತಿಗಳನ್ನು ಬಿಡುಗಡೆ ಮಾಡುವರು. ಹೆಸರಾಂತ ಅಣುಕು ಸಾಹಿತಿ ಅಣುಕು ರಾಮನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಅರ್ಕ-ಬುರ್ಕ ನಾಟಕ ಕೃತಿ ಹಾಗೂ ಕದವಿರದ ಮನೆ ಕವನ ಸಂಕಲನಗಳನ್ನು ಕುರಿತು ಹಿರಿಯ ರಂಗಕರ್ಮಿ ಕನಕಪುರದ ಎಂ.ಸಿ. ನಾಗರಾಜ್ ಪರಿಚಯಿಸುವರು. ಪಾದರಿಯ ಪರಿಮಳ ಕಥಾಸಂಕಲನ ಕುರಿತು ಸಾಹಿತ್ಯ ಸಂಶೋಧಕಿ ಡಾ. ಸುನೀತ ಬಿ.ವಿ. ಮಾತನಾಡುವರು.
ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಟಿ. ನಾಗೇಶ್, ನ್ಯೂ ಎಕ್ಸ್ಫರ್ಟ್ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್ ಅತಿಥಿಗಳಾಗಿ ಪಾಲ್ಗೊಳ್ಳುವರು. ರಾಮನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ ಪ್ರಾಸ್ತಾವಿಕವಾಗಿ ಮಾತನಾಡುವರು. ಲೇಖಕ, ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.