ಮುಂಬರುವ ಬೇಸಿಗೆಯಲ್ಲಿ ಅಗತ್ಯ ವಿದ್ಯುತ್ ಪೂರೈಸಲು ಕ್ರಮ : ಸಚಿವ ಕೆ.ಜೆ.ಜಾರ್ಜ್
ವಿಜಯ ದರ್ಪಣ ನ್ಯೂಸ್…
ಮುಂಬರುವ ಬೇಸಿಗೆಯಲ್ಲಿ ಅಗತ್ಯ ವಿದ್ಯುತ್ ಪೂರೈಸಲು ಕ್ರಮ : ಸಚಿವ ಕೆ.ಜೆ.ಜಾರ್ಜ್
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಜನವರಿ 09 :- ಮುಂಬರುವ ಬೇಸಿಗೆಯ ಗರಿಷ್ಟ ಬೇಡಿಕೆ ಅವಧಿಯಲ್ಲಿ 19,000 ಮೆಗಾವ್ಯಾಟ್ ವಿದ್ಯುತ್ ಅಗತ್ಯವಿದೆ ಎಂದು ನಿರೀಕ್ಷಿಸಲಾಗಿದ್ದು, ಅದನ್ನು ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿ ಸದ್ಯಕ್ಕೆ ಲೋಡ್ ಶೆಡಿಂಗ್ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಇಂಧನ ಇಲಾಖೆಗೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿ, ಬೇಸಿಗೆಯಲ್ಲಿ ಅಗತ್ಯವಿರುವ ವಿದ್ಯುತ್ ಪೂರೈಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕೆ ತಕ್ಕಂತೆ ವಿತರಣೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಕಳೆದ ಬೇಸಿಗೆಯಲ್ಲಿ 17,000 ಮೆಗಾವ್ಯಾಟ್ ಗರಿಷ್ಠ ಬೇಡಿಕೆ ಬಂದಿತ್ತು. ಅದರಂತೆ ಮುಬರುವ ಬೇಸಿಗೆಯಲ್ಲಿ ಎಷ್ಟು ವಿದ್ಯುತ್ ಬೇಕಾಗಬಹುದು ಎಂಬ ಬಗ್ಗೆ ಕೃತಕ ಬುದ್ಧಿಮತ್ತೆ (ಐಎ) ತಂತ್ರಜ್ಞಾನ ಬಳಸಿಕೊಂಡು ಕೆಪಿಟಿಸಿಎಲ್, ಪಿಸಿಕೆಎಲ್ ಮತ್ತು ಎಸ್ ಎಲ್ ಡಿಸಿ ವತಿಯಿಂದ ನಡೆಸಿದ ಸಮೀಕ್ಷೆ ಪ್ರಕಾರ ಗರಿಷ್ಠ ಬೇಡಿಕೆ ಅವಧಿಯಲ್ಲಿ 19,000 ಮೆಗಾವ್ಯಾಟ್ ವಿದ್ಯುತ್ ಅವಶ್ಯಕತೆ ಬರಬಹುದು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಅದರಂತೆ ಅಗತ್ಯ ವಿದ್ಯುತ್ ಪೂರೈಸಲು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದದ ಮೂಲಕ ಹೆಚ್ಚುವರಿ ಅಗತ್ಯವಿರುವ ವಿದ್ಯುತ್ಅನ್ನು ಕಡಿಮೆ ದರಕ್ಕೆ ಖರೀದಿಸಲು ಅನ್ಯ ರಾಜ್ಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಲೋಡ್ ಶೆಡಿಂಗ್ ಮಾಡುವ ಪ್ರಶ್ನೆ ಉದ್ಭವವಾಗುವುದಿಲ್ಲ ಎಂದರು.
ಜಿಲ್ಲೆಯಲ್ಲಿ ಅಗತ್ಯ ವಿದ್ಯುತ್ ಪೂರೈಕೆಗೆ ಕ್ರಮ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಕೃಷಿ ಚಟುವಟಿಕೆ ಜತೆಗೆ ಕೈಗಾರಿಕೆಗಳಿಗೂ ಸಮರ್ಪಕ ವಿದ್ಯುತ್ ಪೂರೈಸಬೇಕಾಗಿದೆ. ಹೀಗಾಗಿ ಸುಗಮ ವಿದ್ಯುತ್ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಫೀಡರ್ ಗಳು, ಟ್ರಾನ್ಸ್ ಫಾರ್ಮರ್ ಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಫೀಡರ್ ಮಟ್ಟದ ಸೌರೀಕರಣದ ಮೂಲಕ ರೈತ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಸಲು ಕುಸುಮ್- ಸಿ ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಅನುಷ್ಠಾನಗೊಳಿಸಲಾಗುತ್ತಿದೆ. ಬೇಸಿಗೆಯಲ್ಲಿ ರೈತರಿಗೆ ಸಮಸ್ಯೆಯಾಗದಂತೆ ಈ ಫೀಡರ್ ಮಟ್ಟದ ಸೌರೀಕರಣ ಕಾಮಗಾರಿಯನ್ನು ಎಲ್ಲಾ ಕಡೆ ಏಕಕಾಲದಲ್ಲಿ ಕೈಗೊಂಡು ನಿಗದಿತ ಗಡುವಿನಲ್ಲಿ ಪೂರ್ಣಗೊಳಿಸಬೇಕು ಎಂದು ಅನುಷ್ಟಾನ ಏಜನ್ಸಿಗಳಿಗೆ ಸಚಿವರು ಸೂಚನೆ ನೀಡಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಕೃಷಿ ಪಂಪ್ ಸೆಟ್ ಗಳ ಅಕ್ರಮ- ಸಕ್ರಮ ಯೋಜನೆಯಡಿ 4.5 ಲಕ್ಷ ಅರ್ಜಿಗಳು ಬಾಕಿ ಇದ್ದವು. ಕಳೆದ ಒಂದೂವರೆ ವರ್ಷದಲ್ಲಿ 2.5 ಲಕ್ಷ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗಿದೆ. ಇನ್ನುಳಿದ ಪಂಪ್ ಸೆಟ್ ಗಳನ್ನು ಮುಂದಿನ ಒಂದು ವರ್ಷದೊಳಗೆ ಸಕ್ರಮ ಗೊಳಿಸಲಾಗುವುದು. ವಿದ್ಯುತ್ ಫೀಡರ್ ಗಳಿಂದ 500 ಮೀಟರ್ ಗಿಂತ ಹೆಚ್ಚು ದೂರದಲ್ಲಿರುವ ಪಂಪ್ ಸೆಟ್ ಗಳನ್ನು ಸೌರೀಕರಣಗೊಳಿಸಲು ಆದ್ಯತೆ ನೀಡಲಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರದ ಸಬ್ಸಿಡಿಯನ್ನು ಶೇ. 50ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರಶೇ. 30ರಷ್ಟು ಸಬ್ಸಿಡಿ ನೀಡುತ್ತಿದ್ದು, ರೈತರು ಶೇ. 20ರಷ್ಟು ಮೊತ್ತ ಭರಿಸಿದರೆ ಸಾಕು ಎಂದರು.
ಟ್ರಾನ್ಸ್ ಫಾರ್ಮರ್ ಗಳಲ್ಲಿ ಸಮಸ್ಯೆ ಉದ್ಭವವಾದರೆ ತಕ್ಷಣ ಅದನ್ನು ಬದಲಾಯಿಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಟ್ರಾನ್ಸ್ ಫಾರ್ಮರ್ ಬ್ಯಾಂಕ್ ಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ 213 ಟ್ರಾನ್ಸ್ ಫಾರ್ಮರ್ ಗಳು ಲಭ್ಯವಿದೆ. ಜತೆಗೆ ವಿದ್ಯುತ್ ಕಂಬಗಳು, ಕಂಡಕ್ಟರ್ ಗಳನ್ನು ಕೂಡ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಡಲಾಗಿದೆ ಎಂದರು.
ನೆಲಮಂಗಲ ನಗರದಲ್ಲಿ ವಿದ್ಯುತ್ ತಂತಿಗಳನ್ನು ಭೂಗತವಾಗಿ ಅಳವಡಿಸಬೇಕು ಎಂಬ ಶಾಸಕ ಎನ್.ಶ್ರೀನಿವಾಸ್ ಅವರ ಮನವಿಗೆ ಸ್ಪಂದಿಸಿದ ಸಚಿವರು, ಈ ಬಗ್ಗೆ ಯೋಜನೆ ರೂಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಹೊಸಕೋಟೆ ತಾಲೂಕಿನಲ್ಲಿ ಕುಸುಮ್-ಸಿ ಯೋಜನೆಯಡಿ ಕೆರೆಗಳ ಅಂಗಳಗಳಲ್ಲಿ ನಡೆಯುತ್ತಿರುವ ಫೀಡರ್ ಸೌರೀಕರಣ ಕಾಮಗಾರಿಗಳನ್ನು ತ್ವರಿತವಗಿ ಪೂರ್ಣಗೊಳಿಸೇಕು ಎಂಬ ಶಾಸಕ ಶರತ್ ಬಚ್ಚೇಗೌಡ ಅವರ ಮನವಿಗೆ ಪ್ರತಿಕ್ರಿಯಿಸಿ, ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಬೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಗ್ಯಾರಂಟಿ ಯೋಜನೆಗಳಿಂದ ಕುಟುಂಬಗಳ ಆರ್ಥಿಕ ಸ್ಥಿತಿಗತಿ ಸುಧಾರಿಸಿದೆ. ಪ್ರತಿ ತಿಂಗಳು ಅಂದಾಜು 5000 ರೂ.ಗಳಷ್ಟು ಒಂದು ಕುಟುಂಬಕ್ಕೆ ಸಿಗುತ್ತಿದೆ. 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿಗೆ 18,000 ಕೋಟಿ ರೂ.ಗಳು ಪ್ರತಿ ವರ್ಷ ಖರ್ಚಾಗುತ್ತದೆ ಎಂದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ ಎಚ್ ಮುನಿಯಪ್ಪ ,ಹೊಸಕೋಟೆ ಶಾಸಕ ಶರತ್ ಕುಮಾರ್ ಬಚ್ಚೇಗೌಡ ,ನೆಲಮಂಗಲ ಶಾಸಕ ಶ್ರೀನಿವಾಸ, ವಿಧಾನಪರಿಷತ್ ಸದಸ್ಯ ಎಸ್. ರವಿ, ಇಂಧನ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮಾಂತೇಶ್ ಬೀಳಗಿ, ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ ಎನ್ ಅನುರಾಧ, ಇಂಧನ ಸಚಿವರ ಆಪ್ತ ಕಾರ್ಯದರ್ಶಿ ಸತೀಶ್ ಕುಮಾರ್, ಬಯಪ ಅಧ್ಯಕ್ಷ ಶಾಂತಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ .ರಾಜಣ್ಣ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.