ಉತ್ತಮ ಆರೋಗ್ಯಕ್ಕೆ ಶುದ್ಧ ನೀರು ಕುಡಿಯಿರಿ
ವಿಜಯ ದರ್ಪಣ ನ್ಯೂಸ್…
ಉತ್ತಮ ಆರೋಗ್ಯಕ್ಕೆ ಶುದ್ಧ ನೀರು ಕುಡಿಯಿರಿ
ವಿಜಯಪುರ, ದೇವನಹಳ್ಳಿ ತಾಲ್ಲೂಕು ಜನವರಿ.5- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶುದ್ದ ಗಂಗಾ ಘಟಕದಲ್ಲಿ ಶುದ್ದ ಗಂಗಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರಿಗೆ ಶುದ್ದ ಕುಡಿಯುವ ನೀರಿನ ಬಗ್ಗೆ ಕರಪತ್ರವನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು.
ಪುರಸಭಾ ಸದಸ್ಯ ವಿ. ನಂದಕುಮಾರ್ ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ‘ಶುದ್ಧವಾದ ನೀರನ್ನು ಉಪಯೋಗಿಸಿದರೆ ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಆದ್ದರಿಂದ ಎಲ್ಲರೂ ಸಂಸ್ಕರಿಸಿದ ನೀರನ್ನು ಬಳಸಬೇಕು ಹಾಗೆಯೇ ನೀರು ಅತ್ಯಮೂಲ್ಯವಾದದ್ದು ಅದನ್ನ ಹಿತಮಿತವಾಗಿ ಬಳಸಬೇಕು. ತಮ್ಮ ಸುತ್ತಮುತ್ತಲಿನ ಪರಿಸರವನ್ನ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಈ ಕಾರ್ಯಕ್ರಮವು ಶ್ಲಾಘನೀಯವಾದದ್ದು ಎಂದರು.
ವಲಯದ ಮೇಲ್ವಿಚಾರಕ ಹರೀಶ್ ಎಂ.ಟಿ. ಮಾತನಾಡಿ, ಡಾ.ಡಿ ವೀರೇಂದ್ರ ಹೆಗ್ಗಡೆಯವರು ಜನರಲ್ಲಿ ಕಂಡುಬರುವಂತಹ ಅನಾರೋಗ್ಯ ಸಮಸ್ಯೆಗಳು ನೀರಿನಿಂದಲೇ ಬರುತ್ತಿರುವುದನ್ನು ಮನಗಂಡಂತಹ
ಪೂಜ್ಯರು ಜನರಿಗೆ ಅನುಕೂಲ ವಾಗಲೆಂದು ಶುದ್ದಗಂಗಾ ಕಾರ್ಯಕ್ರಮವನ್ನು ಅನುಷ್ಠಾನ ಮಾಡಿದ್ದಾರೆ ಎಂದು ತಿಳಿಸಿದರು.
‘ನಮ್ಮ ವಿಜಯಪುರ ವಲಯದಲ್ಲಿ ಒಟ್ಟು ಆರು ಶುದ್ದಗಂಗಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಪುರಸಭೆ ವತಿಯಿಂದ ನಮಗೆ ನೀರನ್ನು ಸರಬರಾಜು ಮಾಡುತ್ತಿದ್ದು, ಪ್ರತಿ ಲೀಟರಿಗೆ 25 ಪೈಸೆಗೆ ಸಂಸ್ಕರಿಸಿ ನೀರನ್ನು ನೀಡಲಾಗುತ್ತಿದೆ’ ಎಂದು ತಿಳಿಸಿದರು.
ಶುದ್ಧಗಂಗ ಮೇಲ್ವಿಚಾರಕ ಪ್ರಸನ್ನ ಮಾತನಾಡಿ,ಕುಡಿಯುವ ನೀರಿನಲ್ಲಿ ಯಥೇಚ್ಛವಾಗಿ ಫ್ಲೋರೈಡ್ ಅಂಶ ಇರುವುದರಿಂದ ಹೊಟ್ಟೆ ನೋವು, ಕಿಡ್ನಿ ಸ್ಟೋನ್ , ಕರುಳು ಬೇನೆ, ವಿಷಮ ಸೀತ ಜ್ವರ ಮುಂತಾದ ರೋಗಗಳಿಗೆ ಕಾರಣವಾಗಬಹುದು ಆದ್ದರಿಂದ ಎಲ್ಲಾ ಜನರು ಶುದ್ದ ಗಂಗಾ ಘಟಕದಲ್ಲಿ ಸಂಸ್ಕರಿಸಿದ ನೀರನ್ನೇ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಘಟಕದ ನಿರ್ವಾಹಕಿ ನಂದಿನಿ, ರೂಪಶ್ರೀ, ಲಕ್ಷ್ಮೀದೇವಮ್ಮ, ಕವಿತಾ, ನವೀನ್, ಪ್ರವೀಣ್ ಹಾಗೂ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.