ಮಲಯಾಳಂ ಚಿತ್ರದಲ್ಲಿ ಗಮನ ಸೆಳೆದ ಕೊಡವ ಹಾಡು
ವಿಜಯ ದರ್ಪಣ ನ್ಯೂಸ್….
ಮಲಯಾಳಂ ಚಿತ್ರದಲ್ಲಿ ಗಮನ ಸೆಳೆದ ಕೊಡವ ಹಾಡು
24 ಗಂಟೆಯೊಳಗಡೆಯೇ ಟಾಪ್ ಟ್ರೆಂಡಿಂಗ್‌ನಲ್ಲಿದೆ ಈ ಹಾಡು
ಕೊಡಗು: ಮಲಯಾಳಂ ಚಿತ್ರದಲ್ಲಿ ಕೊಡವ ಭಾಷೆಯ ಹಾಡು ಈಗ ಸಕತ್ ಟ್ರೆಂಡ್ ಆಗುತ್ತಿದೆ. ಬರಿ ಒಂದೆರಡು ಲೈನ್‌ಗಳಲ್ಲ ಇಡೀ ಹಾಡು ಕೊಡುವ ಭಾಷೆಯಲ್ಲಿದೆ, ಅಲ್ಲದೆ ಡ್ಯಾನ್ಸ್ ಸ್ಟೆಪ್ಸ್‌ಗೆ ಹೇಳಿ ಮಾಡಿಸಿದ ಹಾಡಿನಂತಿದೆ. ಈ ಹಾಡಿನಲ್ಲಿ ಕೊಡವರ ಮದುವೆ ಆಚರಣೆ ಅವರು ಧರಿಸುವ ಸಾಂಪ್ರದಾಯ ಉಡುಗೆ ಹೀಗೆ ಎಲ್ಲದರ ಚಿತ್ರಣ ಈ ಹಾಡಿನಲ್ಲಿದ್ದು ಮಲಯಾಳಂ ಚಿತ್ರದ ಈ ಹಾಡು ಕೊಡವರ ಮನಗೆದ್ದಿದೆ.
ಮಂಗಲ….. ಬೋಜಿರ ಮಂಗಲ ಎಂದು ಹಾಡು ಶುರುವಾಗುತ್ತದೆ. ಮಂಗಲ ಎಂದರೆ ಕೊಡವ ಭಾಷೆಯಲ್ಲಿ ಮದುವೆ ಎಂದರ್ಥ, ಇನ್ನು ಅಲ್ಲಿ ಹೆಣ್ಮಕ್ಕಳನ್ನು ಬೋಜಿ ಅಂತ ಪ್ರೀತಿಯಿಂದ ಕರೆಯುವುದುಂಟು, ಮನೆ ಹೆಣ್ಮಕ್ಕಳ ಬಗ್ಗೆ ಹೇಳುವಾಗ ನಂಗಡ ಬೋಜಿ (ನಮ್ಮ ಮಗಳು) ಎಂದು ಹೇಳುತ್ತಾರೆ. ಕೊಡವ ಭಾಷೆಯಲ್ಲಿ ಮದುವೆ ಬಗ್ಗೆ ವರ್ಣಿಸುತ್ತಾ ಈ ಹಾಡು ಹೇಳಲಾಗಿದೆ.
ಉಡುಪುಗಳು ಕೂಡ ಕೊಡವರಂತೆ ಧರಿಸಿದ್ದರೆ ಈ ಹಾಡಿಗೆ ಮಾಡಿರುವ ಡ್ಯಾನ್ಸ್ ಇನ್ನೂ ಸೂಪರ್ ಆಗಿರುತ್ತಿತ್ತು. ಒಂದು ದೃಶ್ಯದಲ್ಲಿ ಕೊಡವ ಉಡುಪು ತೋರಿಸಲಾಗಿದೆ, ನಂತರ ಎಲ್ಲರೂ ಕೋಟು, ಸೆಲ್ವಾರ್ , ಗೌನ್ ಅಂತ ಕಾಣಬಹುದು. ಆದರೆ ಕೊಡವರ ಮದುವೆಗೆ ಹೋದರೆ ಅಲ್ಲಿ ಸಾಂಪ್ರದಾಯಕ ಉಡುಪು ಧರಿಸಿದಂಥ ಹೆಣ್ಮಕ್ಕಳೇ ಕಣ್ಣಿಗೆ ಬೀಳುತ್ತಾರೆ. ಅವರು ಉಡುಪು, ಅವರು ಧರಿಸುವ ಆಭರಣಗಳು ಕೂಡ ಭಿನ್ನವಾಗಿರುತ್ತದೆ. ಕೈಗೆ ಹಾಕುವ ಬಳೆ, ತಾಳಿಸರ, ಕೊಕ್ಕೆ ತಾತಿ, ಜೋಮಾಲೆ ಹೀಗೆ ಪ್ರತಿಯೊಂದರಲ್ಲಿಯೂ ತಮ್ಮ ಸಂಪ್ರದಾಯ ಪಾಲಿಸುತ್ತಾರೆ, ಅದು ಈ ಹಾಡಿನಲ್ಲಿ ಸ್ವಲ್ಪ ಮಿಸ್ ಆಗಿದೆ, ಅದು ಬಿಟ್ಟರೆ ಹಾಡು ಸೂಪರ್ ಆಗಿದೆ, ಕೇರಳದವರಿಗೆ ಈ ಹಾಡಿನ ಅರ್ಥ ಗೊತ್ತಿಲ್ಲದಿದ್ದರೂ ಇಷ್ಟಪಟ್ಟಿದ್ದಾರೆ, ಹೀಗೆ ಕೇರಳದಲ್ಲಿ ಕರ್ನಾಟಕದ ಕೊಡಗು ಜಿಲ್ಲೆಯ ಹಾಡು ಸದ್ದು ಮಾಡುತ್ತಿದೆ.
&&&&&&&&&&&&&&&&&&&&&&&&&
ಕನಸಿಗೆ ಕಾವಲು
ನಿನ್ನ ಕನಸಿಗೆ ಕಾವಲಾಗಿ
ಇರಲೆ ನಾನು ಜೊತೆಯಲಿ
ಎದೆಯ ಗುಡಿಗೆ ದಾಖಲಾಗಿ
ಬರಲೆ ನಿನ್ನ ಕಥೆಯಲಿ
ಬಿರಿದ ತಾವರೆ ಹೂವಿನಂತೆ
ನಗುವ ತರಲೆ ಬಾಳಲಿ
ಲತೆಯು ಗಿಡವ ಬಳಸಿದಂತೆ
ಇರಲೆ ನಿನ್ನ ತೋಳಲಿ
ಮಿಂದು ಮನದಿ ಶುದ್ಧನಾಗಿ
ಬರಲೆ ನಾನು ಎದುರಲಿ
ಒಲವ ಪೂಜೆಗೆ ಬದ್ಧನಾಗಿ
ಇರಲೆ ನಿನ್ನ ಮುಡಿಯಲಿ
ಮಿನುಗು ತಾರೆ ಬೆಳಗುವಂತೆ
ನಿನ್ನ ಕಣ್ಣ ಹೊಳಪಲಿ
ಕರಗಿ ಹೋಗಲೆ ಮಂಜಿನಂತೆ
ನಿನ್ನ ಪ್ರೇಮದಮಲಲಿ
ನೋವು ಸನಿಹ ಸುಳಿಯದಂತೆ
ಹರುಷ ತುಂಬಲೆ ಮೊಗದಲಿ
ಚಂದ್ರ ಚಾಮರ ಬೀಸಿದಂತೆ
ಬೆರೆತುಕೊಳಲೆ ಉಸಿರಲಿ
ರಾಧಿಕಾ ವಿಶ್ವನಾಥ್, ಮಡಿಕೇರಿ