ಜಗದೀಶ್ ಬೆಳ್ಯಪ್ಪಗೆ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ.

ವಿಜಯ ದರ್ಪಣ ನ್ಯೂಸ್….

ಜಗದೀಶ್ ಬೆಳ್ಯಪ್ಪಗೆ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ.

ಕೊಡಗು ಜಿಲ್ಲೆಯ ಜಗದೀಶ್ ಬೆಳ್ಯಪ್ಪ ಅವರು 2024ನೇ ಸಾಲಿನ ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಳೆದ 28 ವರ್ಷಗಳಿಂದ ನಿರಂತರವಾಗಿ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಜಗದೀಶ್ ಬೆಳ್ಯಪ್ಪ ಅವರು ಮೂಲತಃ ಕೊಡಗು ಜಿಲ್ಲೆಯವರು. 1997ರಲ್ಲಿ ತಮ್ಮ 22ನೇ ವಯಸ್ಸಿಗೆ ಕೊಡಗು ಜಿಲ್ಲೆಯ ಶಕ್ತಿ ಪತ್ರಿಕೆ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ಛಾಯಚಿತ್ರಕಾರರಾಗಿ ಪ್ರವೇಶಿಸಿದರು. ನಂತರ ಶಕ್ತಿ ಪತ್ರಿಕೆಯ ಉಪಸಂಪಾದಕರಾದರು. ಮುಂದಿನ ದಿನಗಳಲ್ಲಿ ಸಂಯುಕ್ತ ಕರ್ನಾಟಕ, ಕಾವೇರಿ ಚಾನಲ್,
ಎನ್​ಡಿ ಟಿವಿಯ ವರದಿಗಾರರಾಗಿ ಕೆಲಸ ಮಾಡಿದರು. ನಂತರ ಬೆಂಗಳೂರಿಗೆ ಬಂದು ಉಷಾಕಿರಣ ಪತ್ರಿಕೆಯಲ್ಲಿ ಸ್ಟೇಟ್ ಎಡಿಷನ್ ಟೀಂನಲ್ಲಿದ್ದರು.

ಟಿವಿ9 ಮೂಲಕ ಮತ್ತೆ ಕೊಡಗು ಜಿಲ್ಲೆಗೆ ವರದಿಗಾರರಾಗಿ ಜನಪ್ರಿಯಗೊಂಡರು. ಸ್ವಲ್ಪ ಸಮಯದ ನಂತರ ವಿಜಯ ಕರ್ನಾಟಕ ವರದಿಗಾರರಾಗಿ ರಾಜ್ಯ ಮಟ್ಟದ ಎರಡು ಸಾಹಿತ್ಯ ಸಮ್ಮೇಳನದ ವರದಿ ಮಾಡಿ ಮೆಚ್ಚುಗೆ ಪಡೆದರು. ನಂತರ ಮತ್ತೆ ಬೆಂಗಳೂರಿಗೆ ಶಿಪ್ಟ್ ಆದ ಅವರು ಸುವರ್ಣ ಟಿವಿಯ ಇನ್ ಪುಟ್ ಎಡಿಟರ್ ಆಗಿ ಕೆಲಸ ಮಾಡಿದರು.

2 ವರ್ಷದ ನಂತರ ಟಿವಿ9 ನ ಇನ್ ಪುಟ್ ಎಡಿಟರ್ ಆಗುವುದರ ಮೂಲಕ ಜಿಲ್ಲಾ ವರದಿಗಾರರಾಗಿದ್ದವರು ಅದೇ ಸಂಸ್ಥೆಯ ಉನ್ನತ ಸ್ಥಾನಕ್ಕೇರಿದ ಮೊದಲಿಗರಾದರು. ಸದ್ಯ ಟಿವಿ9 ಡಿಜಿಟಲ್​​ನಲ್ಲಿ ಡೆಪ್ಯೂಟಿ ಎಡಿಟರ್ ಆಗಿದ್ದಾರೆ. 28 ವರ್ಷದ ಪತ್ರಿಕೋದ್ಯಮ ಕ್ಷೇತ್ರದ ಹಾದಿಯಲ್ಲಿ ಜಗದೀಶ್ ಬೆಳ್ಯಪ್ಪ ಅವರಿಗೆ ಶಕ್ತಿ ಪತ್ರಿಕೆಯ ಜಿ. ರಾಜೇಂದ್ರ, ಶಶಿಧರ್ ಭಟ್, ಜಯಶೀಲರಾವ್, ವಿ.ಎನ್ ಸುಬ್ಬರಾವ್, ಈಶ್ವರ ದೈತೋಟ, ಸುಗುತಾ ಶ್ರೀನಿವಾಸರಾಜು, ತಿಮ್ಮಪ್ಪ ಭಟ್, ಅನಂತ ಚೀನಿವಾರ್, ರವಿ ಹೆಗಡೆ, ಮಹೇಂದ್ರ ಮಿಶ್ರಾ ಮುಂತಾದ ಮಹನೀಯರು ಸಂಪಾದಕರಾಗಿ ಮಾರ್ಗದರ್ಶನ ಮಾಡಿದ್ದಾರೆ.

ಜಗದೀಶ್ ಬೆಳ್ಯಪ್ಪ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಉತ್ತಮ ವರದಿ ನೀಡುವ 3 ಪ್ರಶಸ್ತಿ, ಕೊಡಗು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಉತ್ತಮ ಛಾಯಾಗ್ರಾಹಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪತ್ರಿಕೋದ್ಯಮದ ಸಂಘಟನೆಗಳಲ್ಲಿ ನಿರಂತವಾಗಿ ತೊಡಗಿಸಿಕೊಂಡಿರುವ ಇವರು ಕೊಡಗು ಮತ್ತು ಬೆಂಗಳೂರಿನ ಪ್ರೆಸ್ ಕ್ಲಬ್, ಪತ್ರಕರ್ತರ ಸಂಘ, ಪತ್ರಕರ್ತರ ಸೊಸೈಟಿ, ಪತ್ರಿಕಾ ಭವನದಲ್ಲಿ ಅಧ್ಯಕ್ಷರಾಗಿ, ಪದಾಧಿಕಾರಿಯಾಗಿ, ಸದಸ್ಯರಾಗಿಯೂ ಶ್ರಮಿಸಿದ್ದಾರೆ.

ಹೀಗೆ ಕಳೆದ 28ವರ್ಷಗಳಲ್ಲಿ ಪತ್ರಿಕೆ, ಟಿವಿ ಮಾಧ್ಯಮ, ಆಲ್ ಇಂಡಿಯಾ ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕಾ ಕ್ಷೇತ್ರದ ಎಲ್ಲಾ ವಿಭಾಗದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.