ರೈತರು ಮತ ಹಾಕುವುದಕ್ಕಷ್ಟೇ ಸೀಮಿತ: ಪ್ರಕಾಶ್ ರಾಜ್
ವಿಜಯ ದರ್ಪಣ ನ್ಯೂಸ್….
ಭೂ ಸ್ವಾಧಿನ ವಿರೋಧಿ ಹೋರಾಟಕ್ಕೆ ಸಾವಿರ ದಿನ
ರೈತರು ಮತ ಹಾಕುವುದಕ್ಕಷ್ಟೇ ಸೀಮಿತ: ಪ್ರಕಾಶ್ ರಾಜ್
ಚನ್ನರಾಯಪಟ್ಟಣ ಡಿಸೆಂಬರ್ 30: ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ನಡೆಸುತ್ತಿರುವ ಭೂ ಸ್ವಾಧಿನ ವಿರೋಧಿ ಹೋರಾಟ ಒಂದು ಸಾವಿರ ದಿನ ತಲುಪಿದ್ದು, ಚನ್ನರಾಯಪಟ್ಟಣ ಧರಣಿ ಸ್ಥಳದಲ್ಲಿ ರೈತರ ಬೃಹತ್ ಸಮಾವೇಶ ನಡೆಯಿತು.
ಈ ಸಂದರ್ಭದಲ್ಲಿ ಚಲನಚಿತ್ರ ನಟ ಪ್ರಕಾಶ್ ರಾಜ್ ಮಾತನಾಡಿ, ನಾನು ರೈತ ಅಲ್ಲ.. ಆದರೆ, ಸ್ವಲ್ಪ ಗಿಡಮರ ಬೆಳೆಸಿದ್ದೇನೆ; ರೈತರು ನನಗಿಂತ ದೊಡ್ಡವರು. ಅವರ ಋಣ ನನ್ನ ಮೇಲೆ ಇರುವುದರಿಂದ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಸಾವಿರ ದಿನಗಳ ಹೋರಾಟ ಸಣ್ಣದಲ್ಲ. ಈ ದೇಶದ ದೊಡ್ಡ ಕರ್ಮ ಮತ್ತು ಶಾಪವೆಂದರೆ, ಹಲವಾರು ವರ್ಷಗಳಿಂದ ರೈತರು ಹೋರಾಡುತ್ತಿದ್ದಾರೆ. ರೈತರು ಈ ದೇಶದ ಬೆನ್ನಲುಬು ಎಂದು ಮಾತಿಗಷ್ಟೇ ಹೇಳುತ್ತಾರೆ.
ಈಗಿರುವ ಕೇಂದ್ರ ಒಕ್ಕೂಟ ಸರ್ಕಾರ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತ ವಿರೋಧಿಯಾಗಿದೆ. ಹೋರಾಟ ಶುರುವಾದಾಗ ಅಸ್ತಿತ್ವದಲ್ಲಿದ್ದ ಸರ್ಕಾರ, ಇವರು ರೈತರೇ ಅಲ್ಲ ಎಂದು ಹೇಳಿದ್ದರು. ಆಗ ವಿಪಕ್ಷದಲ್ಲಿದ್ದವರು ನಾವು ಅಧಿಕಾರಕ್ಕೆ ಬಂದರೆ ರೈತರ ಪರವಾಗಿರುತ್ತೇವೆ ಎಂದು ಹೇಳಿದ್ದರು. ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಗಿದೆ. ರೈತರು ಓಟು ಹಾಕುವುದಕ್ಕಷ್ಟೇ ಸೀಮಿತವಾಗಿದ್ದಾರೆಯೇ?
ಫಲವತ್ತಾದ ಭೂಮಿ ಮೇಲೆ ಕೈಗಾರಿಕೆಗಳನ್ನು ಕಟ್ಟುತ್ತಾ ಹೋದರೆ, ನೀವು ಮುಂದೆ ಹೊಟ್ಟೆಗೆ ತಿನ್ನುವುದಾದರೂ ಏನು. ರೈತ ನಶಿಸಿದರೆ ನಾವ್ಯಾರೂ ಇರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ನಾನು ರೈತನ ಮಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನಾನೂ ಕೃಷಿ ಮಾಡುತ್ತಿದ್ದೇನೆ. ರೈತರ ಭಂಗ-ಭವಣೆ ಏನು ಎಂಬುದರ ಅರಿವು ನನಗಿದೆ. ವಿಧಾನಸೌಧದಲ್ಲಿ ಇರುವ ಬಹುತೇಕರು ರೈತರ ಮಕ್ಕಳೆ. ಅವರು ತಮ್ಮ ಆತ್ಮಸಾಕ್ಷಿಯನ್ನು ಎಚ್ಚರಿಸಿಕೊಳ್ಳುವ ರೀತಿಯಲ್ಲಿ, ಹಳೆಯ ನೆನಪನ್ನು ಜಾಗೃತಿಯಲ್ಲಿ ಇಟ್ಟುಕೊಂಡು ರೈತರ ಬವಣೆ ನೋಡಬೇಕು. ತಮ್ಮ ಆತ್ಮಸಾಕ್ಷಿ ಎಚ್ಚರದಲ್ಲಿಟ್ಟುಕೊಂಡು ಮಾತನಾಡಬೇಕು ಎಂದರು.
13 ಹಳ್ಳಿಗಳನ್ನು ಒಕ್ಕಲೆಬ್ಬಿಸುವುದೆಂದರೆ, ಶತಮಾನಗಳಿಂದ `ಕಟ್ಟಿಬೆಳೆಸಿದ ಸಂಸ್ಕೃತಿ ಏನಾಗುತ್ತದೆ ಎಂಬ ಅರಿವಿರಬೇಕು. ಪ್ರತಿಯೊಂದು ಹೆಜ್ಜೆಯನ್ನೂ ಕೂಡ ನಾಶ ಮಾಡಿ, ಪ್ರಗತಿಯ ಹೆಸರಿನಲ್ಲಿ ವ್ಯವಹಾರ ಮಾಡುವುದು ಅಮಾನವೀಯ “ಹಾಗೂ ಸಂವಿಧಾನ ವಿರೋಧಿಯಾಗಿದೆ. ನಾವು ಎಲ್ಲರ ನೋವಿಗೂ ಸ್ಪಂದಿಸುವ ಮನುಷ್ಯರಾಗೋಣ; ರೈತರ ಮಕ್ಕಳಾಗಿ ನಾವೆಲ್ಲರೂ ಇದಕ್ಕೆ ಸ್ಪಂದಿಸಬೇಕು ಎಂದರು.
ವೀರಸಂಗಯ್ಯ ಮಾತನಾಡಿ, ಸಾವಿರ ದಿನ 830 ಬೃಹತ್ ಸಮಾವೇಶ ಈ ಹೋರಾಟ ಇಡೀ ರಾಜ್ಯಕ್ಕೆ ಮಾದರಿ. ನಮ್ಮ ಬದುಕಿನ ವಿಚಾರವನ್ನು ಇಷ್ಟು ಗಂಭೀರವಾಗಿ ತೆಗೆದುಕೊಂಡಿರುವುದನ್ನು ನಾವು ಪರಿಗಣಿಸಿದ್ದೇವೆ.
ಕರ್ನಾಟಕದ ಮೂಲೆಮೂಲೆಗಳಿಂದ ರೈತರನ್ನು ಸಂಘಟಿಸುವ ಕೆಲಸ ನಾವು ಮಾಡುತ್ತೇವೆ. ಈ ಹೋರಾಟ ಗೆಲ್ಲಲೇಬೇಕು. ಈ ಹೋರಾಟ ಇಡೀ ದೇಶದ ರೈತರ ಪ್ರಶ್ನೆ. ಸೋತರೆ ಇಡೀ ದೇಶದ ರೈತರು ಸೋತಂಗೆ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ತಕ್ಷಣವೇ ಭೂ ಸ್ವಾಧೀನ ಕೈಬಿಡಬೇಕು. ಸರಣಿ ಸಭೆಗಳನ್ನು ನಡೆಸುತ್ತಿರುವುದು ಯಾಕೆ? ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದರು.
ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಇದು ಕೇವಲ ಚನ್ನರಾಯಪಟ್ಟಣದ 13 ಗ್ರಾಮಗಳ ಹೋರಾಟವಲ್ಲ. ಈ ನಾಡಿನ ರೈತರ ಸಂಸ್ಕೃತಿಯನ್ನು ಉಳಿಸುವುದಕ್ಕೆ ನಡೆಸುತ್ತಿರುವ ಸಂಘರ್ಷ. ನಮಗೆ ಯಾವ ಅಭಿವೃದ್ಧಿ ಮಾದರಿ ಬೇಕು ಎಂಬುದನ್ನು ನಮ್ಮನ್ನು ಆಳುತ್ತಿರುವ ಸರ್ಕಾರಕ್ಕೆ ಬೇಕಿಲ್ಲ. ನಾವು ಮಾಡುತ್ತಿರುದು ನಿಜವಾದ ಅಭಿವೃದ್ಧಿ ಎಂದು ತೋರಿಸುವುದಕ್ಕೆ ಈ ಹೋರಾಟ.
ಸಾವಿರ ದಿನಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದರೂ ಸರ್ಕಾರ ಭೂ ಸ್ವಾಧೀನ ಕೈಬಿಡುವುದಕ್ಕೆ ತಯಾರಿಲ್ಲ. ಯಾಕೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇದು ಕೇವಲ 13 ಹಳ್ಳಿಗಳ ಹೋರಾಟ ಅಲ್ಲ. ಇಡೀ ಅಭಿವೃದ್ಧಿ ಮಾದರಿಯನ್ನು ಪ್ರಶ್ನೆ ಮಾಡುವ ಹೋರಾಟ. ಈ ಹೋರಾಟದಲ್ಲಿ ಜಯ ಕಾಣಲೇಬೇಕು ಎಂದರು.
ನಿವೃತ್ತ ಜಸ್ಟೀಸ್ ಗೋಪಾಲಗೌಡ, 140 ಕೋಟಿ ಜನಸಂಖ್ಯೆಯಲ್ಲಿ ಶೇ.50ರಷ್ಟ ಮಹಿಳೆಯರಿದ್ದಾರೆ. ಈ ಹೋರಾಟ ಗೆಲ್ಲಲೇಬೇಕಾದರೆ, ಸರ್ಕಾರದ ಗಮನ ಸೆಳೆಯಬೇಕಾದರೆ ಮಹಿಳೆಯರು ಮುಂದಾಳತ್ವ ವಹಿಸಬೇಕು ಎಂದು ಐವತ್ತನೇ ದಿನ ಹೇಳಿದ್ದೆ.
ಅದು ಇಂದು ಋಜುವಾತಾಗಿದೆ. ಸರ್ಕಾರ ಪತನವಾಗಬೇಕಾದರೆ ಮಹಿಳೆಯರ ನಾಯಕತ್ವ ಬಹಳ ಮುಖ್ಯ. ಈ ಹಿಂದೆ ವಶಪಡಿಸಿಕೊಂಡಿರುವ ಎರಡು ಸಾವಿರ ಎಕರೆಯನ್ನು ಯಾರಿಗೆ ಕೊಟ್ಟಿದ್ದೇವೆ ಎಂದು ಪಾರದರ್ಶಕವಾಗಿ ಜನರಿಗೆ ತಿಳಿಸಬೇಕಾಗಿತ್ತು. ಈ ಹಿಂದೆ ಯಾರೂ ಕೇಳಿರಲಿಲ್ಲ.
ಆದರೆ, ಈಗ ನಾವು ಕೇಳುತ್ತಿದ್ದೇವೆ. ನೀವು ಕೊಡಬೇಕು. ನೋಟಿಫಿಕೇಷನ್ ಒಂದು ಕಾಗದವಷ್ಟೇ.. ನಮ್ಮನ್ನು ಕೇಳಿ ನೀವು ಅದನ್ನು ಜಾರಿ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.