ನಿದ್ರಾದೇವಿಯೇ ನಮಃ
ವಿಜಯ ದರ್ಪಣ ನ್ಯೂಸ್…
ಹಾಸ್ಯಲಾಸ್ಯ
ಜಯಪ್ರಕಾಶ ಅಬ್ಬಿಗೇರಿ ,ಇಂಚರ, # 124, ಚಂದ್ರಮೌಳಿ ಕಾಲನಿ, ಕಣಬರಗಿ ರಸ್ತೆ, ಬೆಳಗಾವಿ-17
ನಿದ್ರಾದೇವಿಯೇ ನಮಃ
ನಿದ್ರೆ ಯಾರಿಗೆ ತಾನೆ ಬೇಡ? ಪ್ರಾಣಿ ಪಕ್ಷಿಗಳಿಂದ ಹಿಡಿದುಮಾನವನವರೆಗೆ ಇದು ಬೇಕಾದುದೇ. ಪ್ರಾಣಿ ಪಕ್ಷಿಗಳು ಪರೋಕ್ಷವಾಗಿ ನಿದ್ರಿಸಿದರೆ, ಬುದ್ದಿಜೀವಿಯೂ ವಿಚಾರಜೀವಿಯೂ ಎನಿಸಿದ ಮನುಷ್ಯಪ್ರಾಣಿಯ ನಿದ್ರೆ ಮಾತ್ರ ಪ್ರತ್ಯಕ್ಷವಾಗಿ ಪ್ರದರ್ಶನವಾಗುತ್ತಲೇ ಇರುತ್ತದೆ. ತಲೆಗೆ ವಿದ್ಯೆ ಹತ್ತದಿದ್ದರೂ ನಿದ್ದೆ ಮಾತ್ರ ಹತ್ತೇ ಹತ್ತುತ್ತದೆ. ಪವಿತ್ರ ರಾಮಾಯಣದ ವಿಲನ್ ಕುಂಭಕರ್ಣ ಪ್ರಸಿದ್ಧನಾದುದು ಈ ನಿದ್ದೆಯಿಂದಲೇ ಅಲ್ಲವೇ? ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದೂ ಸಹಿತ ನಾವು ನಿದ್ರೆಯಲ್ಲಿ ಇದ್ದಾಗಲೇ. ಹೀಗಾಗಿಯೋ ಏನೊ? ಸುವರ್ಣ ಮಹೋತ್ಸವ ಮುಗಿದರೂ ಸಹಿತ ನಮ್ಮ ಜನ ನಿದ್ದೆಯಿಂದ ಎಚ್ಚೆತ್ತುಕೊಂಡೇ ಇಲ್ಲ!. ನಿದ್ದೆಯ ಪ್ರತಿಪಾದಕನಾದ ಕುಂಭಕರ್ಣ ಹಾಕಿಕೊಟ್ಟಂತಹ ಮಾರ್ಗೋಪಾದಿಯಲ್ಲಿ ನಡೆಯುವುದು ಅಸಾಧ್ಯವಾದರೂ ಅವನ ವಂಶಜರು ಮಾತ್ರ ಇನ್ನೂ ಕಾಣಸಿಗುತ್ತಾರೆ.
ಈಗಿನ ನಿದ್ರಾವೀರರ ವಿಶಿಷ್ಟತೆಯೇ ಬೇರೆ. ಸಭೆ-ಸಮಾರಂಭಗಳು ನಿದ್ರೆಯ ಆಶ್ರಯ ಸ್ಥಾನಗಳೆಂದರೆ ತಪ್ಪೇನೂ ಇಲ್ಲ. ಭಾಷಣಕಾರನ ಭಾಷಣ ಹಿಡಿಸದೇ ಹೋದರೆ ಸಿಗ್ನಲ್ ಕೊಟ್ಟೇಬಿಡುತ್ತಾರೆ. ಅದಕ್ಕೇನಾದರೂ ಭಾಷಣಕಾರ ಪ್ರತಿಕ್ರಿಯೆಯನ್ನು ತೋರಿಸದೇ ಹೋದರೆ ಭಾಷಣದ ಕಾವು ಏರಿದಂತೆಲ್ಲ ನಿದ್ರೆಯ ಜೊಂಪು ಹೆಚ್ಚಾಗತೊಡಗುತ್ತದೆ. ಇನ್ನೂ ಒಂದು ಸೋಜಿಗವೆಂದರೆ ತಮಗೆ ನಿದ್ರೆ ಮಾಡಲೂ ಸಹಿತ ವೇಳೆ ಇಲ್ಲವೇನೋ ಎನ್ನುವಂತೆ ತಮ್ಮ ಭಾಷಣದ ಸರದಿ ಬರುವವರೆಗೆ ತೂಕಡಿಸುವಂತಹ ಅತಿಥಿ ಮಹಾಶಯರಿಗೇನೂ ಕಡಿಮೆ ಇಲ್ಲ. ಇದಕ್ಕಿಂತಲೂ ಮುಂದುವರೆದ ವಿಷಯವೆಂದರೆ ಭಾಷಣ ಮಾಡುವಾಗಲೇ ನಿದ್ರೆ ಮಾಡುವ ಮಂತ್ರಿಗಳು, ಸಾರ್ವಜನಿಕರಿಗೆ ಹಾಸ್ಯಾಸ್ಪದ ವ್ಯಕ್ತಿಗಳಾಗುವದಲ್ಲದೇ ಪತ್ರಕರ್ತರಿಗೆ ‘ಹಾಟ್ ಕೇಕ್’ ಆಗಿಬಿಡುತ್ತಾರೆ.
ನಿದ್ರೆಗೆ ತೂಕಡಿಕೆಯೇ ಮುನ್ನುಡಿ, ಹಗಲೇ ಇರಲಿ, ಅಥವಾ ರಾತ್ರಿಯೇ ಆಗಿರಲಿ, ಪ್ರಯಾಣಿಸುವಾಗ ಗದ್ದಲವಿರಲಿ, ಇಲ್ಲದಿರಲಿ. ಕೆಲವು ಪ್ರಯಾಣಿಕರಿಗೆ ಬಸ್ ಏರಿದೊಡನೆ ತೂಕಡಿಕೆ ಆರಂಭವಾಗಿ ಬಿಡುತ್ತದೆ. ಸೀಟು ಸಿಕ್ಕವರದು ಒಂದು ರೀತಿಯ ನಿದ್ರೆಯಾದರೆ, ನಿಂತವರು ಅಲ್ಲಿಯೇ ತೂಕಡಿಸುತ್ತಿರುತ್ತಾರೆ. ಇಂಥವರು ಎಷ್ಟೋ ಸಾರಿ ಬಸ್ಸಿನ ಚಾಲಕ ಬ್ರೇಕ್ ಹಾಕಿದಾಗ ಮುಗ್ಗರಿಸಿ ಮುಂದಕ್ಕೆ ಬಿದ್ದು ಬಿಡುತ್ತಾರೆ.
ಪಕ್ಕದ ಸೀಟಿನಲ್ಲಿ ಹುಡುಗಿ ಕುಳಿತಿದ್ದರಂತೂ ಯುವಕರ ನಿದ್ರೆ ಇನ್ನೂ ಜೋರಾಗಿರುತ್ತದೆ. ತೂಕಡಿಕೆ ಮಾಡುವಾಗ ತಕ್ಕಡಿಯ ಮುಳ್ಳೂ ಹೊರಳಾಡಿದಂತೆ ಆಚೆಗೊಮ್ಮೆ ಈಚೆಗೊಮ್ಮೆ ಹೊರಳಾಡಿ ಪಕ್ಕದವರ ಮೇಲೆ ಬಿದ್ದು, ಮಂಗಳಾರತಿ ಮಾಡಿಸಿಕೊಂಡವರೂ ಇದ್ದಾರೆ. ತೂಕಡಿಸುವಂತೆ ನಟಿಸಿ. ಕೆಲಸ ಸಾಧಿಸಿಕೊಂಡ ಕಿಲಾಡಿಗಳು ಮೋಹಪಾಶದಲ್ಲಿ ಬಿದ್ದು
ಮುಂದುವರೆದಂತಹ ಉದಾಹರಣೆಗಳು ಇವೆ.
‘ಸರಕಾರಿ ಕೆಲಸ ದೇವರ ಕೆಲಸ’ ಎಂಬ ಗಾದೆ ಇದೆ. ನಿದ್ರೆಯನ್ನು ಕರುಣಿಸಿದ ದೇವರಿಗೆ ಎಂದಾದರೂ ಮೋಸ ಮಾಡಲು ಸಾಧ್ಯವೇ? ಅದಕ್ಕೆಂತಲೇ ಸರಕಾರಿ ಕಚೇರಿಗಳಲ್ಲಿ ಕಚೇರಿಯ ಬಾಗಿಲಲ್ಲಿ ಕುಳಿತ ಜವಾನನಿಂದ ಹಿಡಿದು ಮೇಲಧಿಕಾರಿಗಳವರೆಗಿನವರ ನಿದ್ರೆಗಳೇ ವಿಚಿತ್ರವಾಗಿವೆ. ತಮ್ಮ ಕೆಲಸಕ್ಕಿಂತ ನಿದ್ರೆಗೆ ಅಗ್ರಸ್ಥಾನ ನೀಡಿದ ಇವರ ಗಡದ್ದಾದ ನಿದ್ರೆ, ಇದರೊಂದಿಗೆ ಗೊರಕೆ ಬೇರೆ. ಮೇಲೆ ತಿರುಗುತ್ತಿರುವ ಫ್ಯಾನ್‌ಗಿಂತ ಇವರ ಗೊರಕೆಯ ಶಬ್ದವೇ ಹೆಚ್ಚು ಕೇಳಿಸುತ್ತಿರುತ್ತದೆ. ಅವಶ್ಯಕ ಕೆಲಸಕ್ಕಾಗಿ ಬಂದಂತಹ ಸಾರ್ವಜನಿಕರು ಇವರನ್ನು ಎಬ್ಬಿಸುವುದೇ ಒಂದು ಮಹಾ ಅಪರಾಧ, ಆರಕ್ಷಕ ಠಾಣೆಗಳಲ್ಲಿ, ಬಂದೂಕು ಹಿಡಿದು ಕುಳಿತಂತಹ ಕಾನ್‌ಸ್ಟೇಬಲ್‌ಗಳ ತೂಕಡಿಕೆಯ ಪರಿಣಾಮವಾಗಿಯೇ ಏನೋ ಎಷ್ಟೋ ಕಳ್ಳರು ತಪ್ಪಿಸಿಕೊಂಡದ್ದುಂಟು. ಹೀಗೆ ನಿದ್ರಾದೇವಿಯ ಕೃಪೆಗೆ ಪಾತ್ರರಾದವರ ಕಥೆ ಒಂದೆಡೆಯಾದರೆ ಅವಳ ಅವಕೃಪೆಗೆ ಪಾತ್ರರಾದವರಿಗೇನೂ ಕಡಿಮೆ ಇಲ್ಲ. ನಿದ್ರೆ ಬರದವರ ಸಂತತಿಯೂ ಒಂದಿದೆ. ಅಪರಾತ್ರಿಯಾದರೂ ಸಹಿತ ಇವರಿಗೆ ನಿದ್ರೆ ಬಾರದು. ನಿದ್ರೆಗಾಗಿ ಕೆಲವರು ಗುಳಿಗೆಗಳನ್ನು ನುಂಗಿದರೆ ಸೆಕೆಂಡ್ ಶೋ ಸಿನೆಮಾಕ್ಕೆ ಹೋಗಿ ನಿದ್ರೆಮಾಡಿ ಬರುವವರಿದ್ದಾರೆ.
ಆನೇಕ ಪ್ರೇಮಿಗಳೂ, ವಿರಹವೇದನೆಯಲ್ಲಿ ನಿದ್ರೆಯನ್ನೇ ಮರೆತಿರುತ್ತಾರೆ. ಹೆಂಡತಿ ತವರಿಗೆ ಹೋದರೆ ಗಂಡನಿಗೆ ನಿದ್ರೆ ಬಾರದು. ಒಬ್ಬರೇ ಮಲಗಿದರೆ ನಿದ್ರೆ ಬಾರದು ಎನ್ನುವವರಿದ್ದಾರೆ. ಪಕ್ಕದಲ್ಲಿ ಮಲಗಿದ್ದವರು ಗೊರಕೆ ವೀರರಾಗಿದ್ದರಂತೂ ಮುಗಿದೇ ಹೋಯಿತು. ಟ್ರ್ಯಾಕ್ಟರಿನ ಸೌಂಡಿನಂತಿರುವ ಅವರ ಗೊರಕೆಗಳನ್ನು ಬೆಳಗಾಗುವವರೆಗೆ ಎಣಿಸಿಕೊಳ್ಳುತ್ತ ಕೊಡುವ ಪರಿಸ್ಥಿತಿ ಬಂದರೂ ಬಂದೀತು.
ಕೆಲವರಿಗೆ ಹಾಸಿಗೆಯ ಮೇಲೆ ನಿದ್ರೆ ಬಾರದು. ಕುರ್ಚಿ ಟೇಬಲ್ ಮೇಲೆ ಮಲಗಿದರಷ್ಟೇ ನಿದ್ರೆ, ಮಗು ಅಳುತ್ತಿದ್ದರೆ ತಾಯಿಗೆ ಆಗ ಒಳ್ಳೆಯ ನಿದ್ರೆ, ತಂದೆಗೆ ಮಾತ್ರ ಜಾಗರಣೆಯೇ. ಇವೆಲ್ಲಕ್ಕೂ ಮಿಗಿಲಾಗಿ ಕೆಲವರಿಗೆ ನಿದ್ರೆಯ ಸಲುವಾಗಿ ಹಾಳು ಅಭ್ಯಾಸಗಳು ನಿದ್ರೆಯ ಸಮಯಕ್ಕೆ ಯಾವುದಾದರೊಂದು ವಿಚಾರ ತಲೆಕೊರೆಯಲು ಶುರುವಾದರೆ ಮುಗಿದೇ ಹೋಯಿತು. ಬೆಳ್ಳಂಬೆಳಗೂ ಅದೇ ಹಾವಳಿ. ಹೀಗಾದ ಮೇಲೆ ಎಲ್ಲಿಂದ ಬಂದೀತು ನಿದ್ರೆ? ಹೀಗೆ ನಿದ್ರಾವೀರರು. ನಿದ್ರಾವಿಹೀನರು ತಮ್ಮ ತಮ್ಮದೇ ಆದ ವಿಶೇಷತೆಯನ್ನು ಹೊಂದಿದ್ದರೆ ಸಹಜ ಕೊಡುಗೆಯಾದ ನಿದ್ರೆ ನಮಗೆಲ್ಲರಿಗೂ ಅನಿವಾರ ಅವಶ್ಯಕವೇ ಸರಿ. ಆದರೂ ಸಹ ಇದು ಸಮತೋಲವನ್ನು ಕಳೆದುಕೊಂಡು ಅನೇಕ ಮೋಜಿನ ಪ್ರಸಂಗಗಳಿಗೆ ಎಡೆಮಾಡುತ್ತದೆ. ಇಷ್ಟೆಲ್ಲಾ ಓದಿದ ಮೇಲೂ ನಿಮಗೆ ತೂಕಡಿಕೆ ಬಂದಿಲ್ಲ ಅಂದರೆ ಅದು ನಿಜಕ್ಕೂ ಆಶ್ಚರ್ಯವೇ!
ಜಯಪ್ರಕಾಶ ಅಬ್ಬಿಗೇರಿ , ಬೆಳಗಾವಿ