ಶಿವರಾಮ ಕಾರಂತ ಲೇಔಟ್ ಅಭಿವೃದ್ಧಿ ಶುಲ್ಕಕ್ಕೆ ದಸಂಸ ವಿರೋದ

ವಿಜಯ ದರ್ಪಣ ನ್ಯೂಸ್…

ಶಿವರಾಮ ಕಾರಂತ ಲೇಔಟ್ ಅಭಿವೃದ್ಧಿ ಶುಲ್ಕಕ್ಕೆ ದಸಂಸ ವಿರೋದ

ಯಲಹಂಕ, ಬೆಂಗಳೂರು: ಮೂಲಸೌಕರ್ಯ ನೀಡದೆ ಶಿವಕಾರಂತ ಬಡಾವಣೆ ವ್ಯಾಪ್ತಿಯ 17 ಗ್ರಾಮಗಳ 5171 ಕಟ್ಟಡಗಳಿಗೆ ಬಿಡಿಎ ನಿಗದಿಪಡಿಸಿರುವ ಅವೈಜ್ಞಾನಿಕ ಅಭಿವೃದ್ಧಿ ಶುಲ್ಕವನ್ನು ರದ್ದುಗೊಳಿಸ ಬೇಕೆಂದು ದಲಿತ ಸಂಘರ್ಷ ಸಮಿತಿಯ ಬೆಂಗಳೂರು ಜಿಲ್ಲಾ ಸಂಯೋಜಕ ರಾಮಗೊಂಡನಹಳ್ಳಿ ರಮೇಶ್ ಒತ್ತಾಯಿಸಿದರು.

ಈ ಕುರಿತು ದಲಿತ ಸಂಘರ್ಷ ಸಮಿತಿ ಸಂಯೋಜಕಯ ಬೆಂಗಳೂರು ಜಿಲ್ಲಾ ಸಮಿತಿ, ಶಿವರಾಮ ಕಾರಂತ ಬಡಾವಣೆ ಸಂತ್ರಸ್ತ ರೈತರ ಸಹಯೋಗದಲ್ಲಿ ಯಲಹಂಕದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಶಿವರಾಮ ಕಾರಂತ ಬಡಾವಣೆ ಕಾಮಗಾರಿ ಪ್ರಾರಂಭವಾಗಿ 3 ವರ್ಷಗಳೇ ಕಳೆದಿದ್ದರೂ ಕಾಮಗಾರಿಯೂ ಪೂರ್ಣಗೊಂಡಿಲ್ಲ, ಯಾವುದೇ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಪರಿಸ್ಥಿತಿ ಹೀಗಿದ್ದೂ, ಬಿಡಿಎ ಏಕಾ ಏಕಿಯಾಗಿ ನಿವೇಶನ ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಬಿಡಿಎ ಅಧಿಕಾರಿಗಳು ಪತ್ರಿಕಾ ಹೇಳಿಕೆ ನೀಡಿರುವುದು ನಿಜಕ್ಕೂ ಆತಂಕದ ಸಂಗತಿ.

ನಿವೇಶನ ಹಂಚಿಕೆ ಪ್ರಕ್ರಿಯೆಗೆ ಹೈಕೋರ್ಟ್ ನ ತಡೆಯಾಜ್ಞೆ ಇದ್ದರೂ, ಕಾಮಗಾರಿ ಪೂರ್ಣಗೊಳಿಸದೆ, ಮೂಲಸೌಕರ್ಯ ಕಲ್ಪಿಸದೆ, ತರಾತುರಿಯಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆಗೆ ಬಿಡಿಎ ಮುಂದಾಗಿರುವುದು ರೈತರಲ್ಲಿ ಕಳವಳ ಉಂಟು ಮಾಡಿದೆ. ಬಿಡಿಎ ನ ಈ ನಡೆಯ ಹಿಂದೆ ಭೂಮಿ ಕಳೆದುಕೊಂಡಿರುವ ಸಂತ್ರಸ್ತ ರೈತರ ಶ್ರೇಯೋಭಿವೃದ್ಧಿಯ ಯಾವ ಸದುದ್ದೇಶವೂ ಇಲ್ಲ. ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ 17 ಗ್ರಾಮಗಳ 5171 ಕಟ್ಟಡಗಳಿಗೆ ಬಿಡಿಎ ಸ್ವಾಧೀನ
ಪತ್ರ ನೀಡಿದೆ, ಈ ಪೈಕಿ 16 ಗ್ರಾಮಗಳಿಗೆ ಗ್ರಾಮ ಪಂಚಾಯಿತಿಗಳು, 1 ಗ್ರಾಮಕ್ಕೆ ಬಿಬಿಎಂಪಿ ಮೂಲ ಸೌಕರ್ಯ ಒದಗಿಸಿವೆ. 17 ಗ್ರಾಮಗಳ ಮೂಲ ಸೌಕರ್ಯಕ್ಕೆ ಯಾವುದೇ ಕೊಡುಗೆ ನೀಡದ ಬಿಡಿಎ ಇದೀಗ ಈ ಗ್ರಾಮಗಳಲ್ಲಿ ಅವೈಜ್ಞಾನಿಕವಾಗಿ ಅಭಿವೃದ್ಧಿ ಶುಲ್ಕ ನಿಗಧಿ ಪಡಿಸಿರುವುದು ಕಟ್ಟಡ ಮಾಲೀಕರಿಗೆ ಬಿಡಿಎ ಎಸಗಿರುವ ಬಹುದೊಡ್ಡ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಬಿಡಿಎ ಕೂಡಲೇ ಸದರಿ ಅಭಿವೃದ್ಧಿ ಶುಲ್ಕ ನಿಗದಿ ಪ್ರಕ್ರಿಯೆಯನ್ನು ರದ್ದು ಮಾಡಬೇಕೆಂದು
ಒತ್ತಾಯಿಸಿದರು.

ಬಿಡಿಎ ರೈತರಿಗೆ ನಿಗದಿಪಡಿಸಿರುವ ಶೇ.40 ನಿವೇಶನಗಳಲ್ಲಿ ಎಲ್ಲಾ ರೀತಿಯ ಮೂಲೆ ನಿವೇಶನ ಮತ್ತು ವಾಣಿಜ್ಯ ನಿವೇಶನಗಳನ್ನು ಒಳಗೊಂಡಂತೆ ಆಯಾ ಗ್ರಾಮಗಳ ರೈತರಿಗೆ ಆದೇ ಗ್ರಾಮಗಳಲ್ಲಿ ನಿವೇಶನ ಹಂಚಿಕೆ ಮಾಡಬೇಕು. ಪೂರಕವಾಗಿ ರೈತರ ಸಹಭಾಗಿತ್ವದಲ್ಲಿ ಬಡಾವಣೆ ನಿರ್ಮಿಸುತ್ತಿರುವುದರಿಂದ ಸರ್ಕಾರ, ಬಿಡಿಎ ಆಯುಕ್ತರು ಯಾವುದೇ ನಿರ್ಣಯ ಕೈಗೊಳ್ಳುವ ಮುನ್ನ ರೈತರೊಂದಿಗೆ ಸಭೆ ನಡೆಸಿ, ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು. ಸದರಿ ಬಡಾವಣೆ ವ್ಯಾಪ್ತಿಯ ರೈತರ ಭೂಮಿ ಅಥವಾ ನಿವೇಶನ ಕುರಿತ ಯಾವುದೇ ಕೆಲಸಗಳಿಗೆ ಅನಾವಶ್ಯಕವಾಗಿ ಅಲೆಸದೆ ಸ್ಥಳೀಯವಾಗಿ, ಮನೆ ಬಾಗಿಲಲ್ಲೇ ಮಾಡಿಕೊಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗಂಟಿಗಾನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಸತ್ಯನಾರಾಯಣ, ಮುನಿರಾಜು, ಶಿವರಾಮ ಕಾರಂತ ಬಡಾವಣೆ ಸಂತ್ರಸ್ತ ರೈತ ಮುಖಂಡರಾದ ಬಸವರಾಜ ಪಾದಯಾತ್ರಿ, ನಂಜಪ್ಪ, ಶ್ರೀನಿವಾಸಯ್ಯ ಸೇರಿದಂತೆ ಇನ್ನಿತರರಿದ್ದರು.