ಈ ಕ್ಷಣವೇ ಬದುಕು..!
ವಿಜಯ ದರ್ಪಣ ನ್ಯೂಸ್….
ಈ ಕ್ಷಣವೇ ಬದುಕು..!
ಜಯಶ್ರೀ ಜೆ. ಅಬ್ಬಿಗೇರಿ, ಬೆಳಗಾವಿ
ಸದಾ ನಾನು ನನ್ನ ಕೆಲಸದಲ್ಲಿ ಯಶ ಗಳಿಸಬೇಕು. ಎಲ್ಲರ ನಡುವೆ ನಾನು ಮಿಂಚುತ್ತಿರಬೇಕು. ಎಲ್ಲಿ ಹೋದರೂ ನಾನೇ ಆಕರ್ಷಣೆಯ ಕೇಂದ್ರ ಬಿಂದು (ಫೋಕಸ್) ಆಗಿರಬೇಕು ಎನ್ನುವುದು ಪ್ರತಿಯೊಬ್ಬರ ಹಂಬಲ. ಮನದಲ್ಲಿ ಅಡಗಿದ ಈ ಹಂಬಲ ಸದಾ ಎಚ್ಚರವಾಗಿಯೇ ಇರುತ್ತದೆ. ತನ್ನನ್ನು ತಾನು ವೈಭವೀಕರಿಸಿ ಇತರರ ಮುಂದೆ ತೋರಿಸಬೇಕೆಂಬ ಹೆಬ್ಬಯಕೆ ತಪ್ಪೇನಲ್ಲ. ಆದರೆ ಅದು ಸಕಾರಾತ್ಮಕವಾಗಿರುವುದು ಬಹು ಮುಖ್ಯ. ಅಂಥ ಕಾರ್ಯಗಳ ಕಡೆ ಗಮನವನ್ನು ಕೇಂದ್ರೀಕರಿಸಬೇಕು. ರಾಮತೀರ್ಥರು ಹೇಳಿದಂತೆ, ಅಸ್ಥಿರ ಮನಸ್ಸಿನಿಂದ ಏಕಾಗ್ರತೆ ಅಸಾಧ್ಯ. ಹೀಗಾಗಿ ಮನಸ್ಸನ್ನು ಒಂದೆಡೆ ಸ್ಥಿರಗೊಳಿಸಬೇಕು. ಸೂರ್ಯನ ಕಿರಣಗಳಿಗೆ ಕಾಗದ ಸುಡುವ ಶಕ್ತಿ ಇದೆ. ಆದರೆ ಕಿರಣಗಳನ್ನು ಎಲ್ಲೆಂದರಲ್ಲಿ ಚದುರಿಸಿದರೆ ಅದು ಸಾಧ್ಯವಿಲ್ಲ. ಭೂತಗನ್ನಡಿಯಲ್ಲಿ ಒಂದೆಡೆ ಕಿರಣಗಳನ್ನು ಕೇಂದ್ರೀಕರಿಸಿ ಹಿಡಿದಾಗ ಮಾತ್ರ ಸಾಧ್ಯ. ಕತ್ತಲ ದಾರಿಯಲ್ಲಿ ಮಿಂಚುವಂತಾಗ ಬೇಕೆಂದರೆ ಗುರಿಯು ಅತ್ಯಂತ ಪ್ರಬಲ ಪ್ರೇರಕವಾಗಿರಬೇಕು. ಆದರೆ ಗುರಿಯತ್ತ ಕೇಂದ್ರೀಕರಿಸಲು ವಿಫಲರಾಗುತ್ತೇವೆ ಎನ್ನುವುದು ಬಹುತೇಕ ಜನರ ಗೋಳು. ಈ ಗೋಳಿನಿಂದ ಹೊರ ಬರಲು ಕೆಲ ಉಪಯುಕ್ತ ಸುಳಿಹುಗಳು ಇಲ್ಲಿವೆ.
ಸಮಸ್ಯೆ ಗುರುತಿಸಿ
ಗಮನ ಕಳೆದುಕೊಳ್ಳುವುದಕ್ಕೆ ಕಾರಣವಾಗುವ ಸಮಸ್ಯೆಗಳನ್ನು ಗುರುತಿಸಿ. ಅದು ನಿರುತ್ಸಾಹ ಇರಬಹುದು. ಆಯಾಸ ಇರ ಬಹುದು ಇಲ್ಲವೇ ಸಾಧನೆಗೆ ವೈರಿಗಳೆಂದು ಕರೆಯಲ್ಪಡುವ ಹಸಿವು, ನಿದ್ರೆ, ನೀರಡಿಕೆ ಅಥವಾ ಇತರೆ ಮನೋವಿಕಾರಗಳಿರಬಹುದು. ದಿನವೊಂದಕ್ಕೆ ನಮ್ಮ ಮನಸ್ಸಿನಲ್ಲಿ ಸುಳಿದಾಡುವ 65 ಸಾವಿರ ಆಲೋಚನೆಗಳ ಗುಣಮಟ್ಟ ಇರಬಹುದು. ಒಟ್ಟಿನಲ್ಲಿ ಸರಿಯಾಗಿ ಕೇಂದ್ರೀಕರಿಸಲು ತಡೆಯೊಡ್ಡುತ್ತಿರುವ ಸಮಸ್ಯೆಗಳನ್ನು ಗುರುತಿಸಿ. ಅವುಗಳನ್ನು ಸರಿಪಡಿಸುವ ಪ್ರಯತ್ನದೆಡೆ ಗಮನ ಹರಿಸಿ.
ಕಾರ್ಯಸೂಚಿ ಇರಲಿ
ಯಶಸ್ಸು ಗಳಿಸಲು ಇಂದಿನ ದಿನ ಮಾಡ ಬೇಕಾದ ಕೆಲಸ ಕಾರ್ಯಗಳ ಸೂಚಿಯಿರುವ ಪಟ್ಟಿ ಹಿಂದಿನ ದಿನ ಅಥವಾ ಮುಂಜಾನೆ ಸಿದ್ದಪಡಿಸಿಕೊಳ್ಳಿ. ಇದೊಂದು ನೀಲ ನಕ್ಷೆಯಿದ್ದಂತೆ. ಆಂಗ್ಲ ನುಡಿಯಂತೆ, ಅತಿ ದೊಡ್ಡ ಕೆಲಸಗಳು ತೀರ ಸಾಧಾರಣ ವೆನಿಸುವ, ನಿರಂತರ ಪ್ರಯತ್ನದಿಂದ ಸಾಧ್ಯವಾಗುವವು. ಹೀಗಾಗಿ ಕಾರ್ಯ ಸೂಚಿಯ ಪಾಲನೆಗೆ ಒತ್ತು ಕೊಡಿ. ಕಾಲಾನುಕ್ರಮದಲ್ಲಿ ಕಾರ್ಯಗಳ ಕುರಿತು ಶಿಸ್ತು ಮೂಡುತ್ತದೆ.
ಉತ್ತಮ ಆಹಾರ
ಆಹಾರದಿಂದ ನಮ್ಮ ಶರೀರವನ್ನು ಚೆನ್ನಾಗಿ ನೋಡಿಕೊಂಡಾಗ ದೇಹ ಬಲಶಾಲಿಯಾಗುತದೆ. ಪಾದರಸದಂತೆ ಚಲಿಸುವ ಮನಸ್ಸನ್ನು ಕೇಂದ್ರೀಕರಿಸುವುದಕ್ಕೆ ಆಹಾರ ಸೇವನೆ ಮಹತ್ವದ ಪಾತ್ರ ವಹಿಸುತ್ತದೆ. ಸಾಹಸ ಮಯ ಕೆಲಸಕ್ಕೆ ಆರೋಗ್ಯ ಭರಿತ ದೇಹವು, ಪ್ರಚೋದಕ ಶಕ್ತಿಯಾಗಿ ಕೆಲಸ ನಿರ್ವಹಿಸುತ್ತದೆ. ವಿಟಮಿನ್, ಪ್ರೊಟೀನ್ ಯುಕ್ತ ಆಹಾರ ಸಕಾರಾತ್ಮಕ ವಿಚಾರಕ್ಕೆ ನಾಂದಿ ಹಾಡುವುದು. ಶೂನ್ಯ ಭಾವನೆ ಯನ್ನು ಹೊರದೂಡುವುದು. ಆಹಾರ ಮತ್ತು ಗಮನ ಪರಸ್ಪರ ಒಂದನ್ನೊಂದು ಅವಲಂಬಿಸಿದೆ ಎಂಬುದನ್ನು ಚೆನ್ನಾಗಿ ಮನಗಾಣಬೇಕು.
ಧ್ಯಾನ ಮಾಡಿ
ಮೆದುಳಿನ ಕ್ರಿಯೆಗಳಿಗೆ ಧ್ಯಾನ ಉಪಯುಕ್ತವಾದ ಮಾರ್ಗವೆಂಬುದನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ದೀರ್ಘಾವಧಿಯಲ್ಲಿ ಹೆಚ್ಚು ಸಾಧಿಸಲು ಧ್ಯಾನ ಸಹಕಾರಿ. ಮನಸ್ಸು ಬುದ್ದಿಗಳನ್ನು ನಿಗ್ರಹಿಸುವುದು. ಕೆಲಸ ಕಾರ್ಯಗಳಲ್ಲಿ ಕೇಂದ್ರೀಕರಿಸುವ ಹದ ಹೆಚ್ಚಿಸುವುದು.
ಮಿತಿಯಲ್ಲಿರಲಿ ಮೊಬೈಲ್ ಬಳಕೆ
ಮೊಬೈಲ್ ಬಳಕೆ ಸುಮಾರು ಶೇ.60ರಷ್ಟು ಗಮನ ಕೇಂದ್ರೀಕರಣಕ್ಕೆ ತಡೆಯೊಡ್ಡುವುದು ಎಂಬುದು ಸಮೀಕ್ಷೆಯ ವರದಿ. ಸಾಮಾಜಿಕ ಜಾಲತಾಣಗಳಿಗೆ ಸಮಯವನ್ನು ಮಿತ ಗೊಳಿಸಿ, ಸದುಪಯೋಗದತ್ತ ಗಮನ ಹರಿಸಿ. ಇಂಟರ್‌ನೆಟ್ ಬಳಕೆ ಮಿತಿಯಲ್ಲಿರಲಿ. ಜಾಣತನದ ಯೋಜನೆಯಿಂದಲೇ ಈ ವಿಶ್ವವು ಹುಟ್ಟಿದೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಅಪ್ಲಿಕೇಷನ್‌ಗಳಿಗೆ ವೆಬ್ ಸೈಟ್‌ಗಳಿಗೆ ಸಮಯ ನಿರ್ಬಂಧಿಸಿ.
ವಿಭಜಿಸಿ
ಮಾಡುವ ಮಹತ್ಕಾರ್ಯವನ್ನು ಒಮ್ಮೆಲೇ ಮಾಡಲು ಸಾಧ್ಯವಿಲ್ಲ, ಮಹತ್ಕಾರ್ಯವೆನ್ನುವುದು ಸಣ್ಣ ಸಣ್ಣ ಕೆಲಸಗಳ ಮೊತ್ತ. ಆದರೆ ಮಹತ್ಕಾರ್ಯ ಸಣ್ಣದಲ್ಲ ಎಂಬುದು ನೆನಪಿರಲಿ. ಮಾಡಬೇಕಾದ ಇಡೀ ಕೆಲಸ ವನ್ನು ಬಿಡಿ ಬಿಡಿಯಾಗಿ ವಿಭಜಿಸಿ, ಭರವಸೆ ಯಿಂದ ಕಾರ್ಯ ನಿರತರಾದರೆ ಫೋಕಸ್ ಸಾಧ್ಯ. ಭಯದಿಂದ ದೊಡ್ಡ ಕಾರ್ಯವನ್ನು ನಿರ್ವಹಿಸಲು ಹೋದರೆ ಅಭಿವೃದ್ಧಿಯ ಬದಲು ಅಹಿತವನ್ನು ಪಡೆಯುವುದು ಖಚಿತ.
ವಿರಾಮ
ಸಮಯ ಉಳಿಸಲು ಟಿವಿ ಮೊಬೈಲ್ ನೋಡುತ್ತಾ ಊಟ ಮಾಡುವುದು, ಪೇಪರ್ ಪುಟ ತಿರುವುತ್ತ ಮತ್ತೇನನ್ನೋ ಯೋಚಿಸುವುದು ಸರಿಯಲ್ಲ, ಒಂದು ಸಮಯಕ್ಕೆ ಒಂದೇ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ. ಇದರಿಂದ ಮೆದುಳಿಗೆ ಕಾರ್ಯ ನಿರ್ವಹಿಸಲು ಕಷ್ಟವಾಗುವುದಿಲ್ಲ. ಮತ್ತು ಕಾರ್ಯಗಳೂ ಉತ್ತಮ ಉತ್ಪನ್ನ ದಾಯಕವಾಗುತ್ತವೆ. ವಿರಾಮ ಪಡೆಯದಿದ್ದರೆ ಮನಸ್ಸಿನ ಸ್ಥಿತಿ ಹದಗೆಡುತ್ತದೆ. ದೇಹದ ಮೂಲಭೂತ ಅಗತ್ಯಗಳು ನೆರವೇರದಿದ್ದಾಗ ಮಾನಸಿಕ ಅನಾರೋಗ್ಯ ಉಂಟಾಗುತ್ತದೆ. ಕೆಲಸದ ನಡುವೆ ಕೊಂಚ ವಿರಾಮವಿರಲಿ.
ಪ್ರೇರೇಪಿಸಿಕೊಳ್ಳಿ
ನಮಗೆ ನಾವು ಪದೇ ಪದೇ ಸವಾಲುಗಳನ್ನೊಡ್ಡಿಕೊಳ್ಳದ ಹೊರತು ಏನನ್ನೂ ಸಾಧಿಸಲಾಗದು. ಮನಸ್ಸನ್ನು ಕೇಂದ್ರೀಕರಿಸಲು ಸ್ವಯಂ ಪ್ರೇರಣೆ ಮುಖ್ಯ. ಪ್ರೇರಣೆ ನಮ್ಮನ್ನು ಆಂತರಿಕವಾಗಿ ಕ್ರಿಯಾಶೀಲರಾಗುವಂತೆ ಮಾಡುತ್ತದೆ. ಸ್ವಯಂಪ್ರೇರಣೆಯ ಕಲೆ ಕರಗತವಾದರೆ ಗಮನ ಕೇಂದ್ರೀಕರಿಸುವುದು ನೀರು ಕುಡಿದಷ್ಟೇ ಸರಳ ಎನಿಸುವುದು. ಯಶಸ್ಸು ಗಳಿಸಲು ಇದಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ.
ಸಂತಸದಿಂದಿರಿ
ಮನವೆಂಬುದು ಮರ್ಕಟದಂತೆ ಸದಾ ಅಲೆ ದಾಡುತ್ತಲೇ ಇರುತ್ತದೆ. ವ್ಯರ್ಥ ತಿರುಗುವ ಮನಸ್ಸನ್ನು ಮೆದುಳು ದೂಷಿಸುತ್ತದೆ. ಮೆದುಳಿನ ಪ್ರಿಫಂಟಲ್ ಕಾರ್ಟೆಕ್ಸ್ ಗಮನ ಸೆಳೆಯುವಿಕೆಯನ್ನು ನಿಯಂತ್ರಿಸುತ್ತದೆ. ಅಲ್ಲದೇ ಭಾವನೆಗಳನ್ನೂ ನಿಭಾಯಿಸುತ್ತದೆ. ಹತಾಶರಾದಾಗ ಕೋಪಗೊಂಡಾಗ ಗಮನ ಹರಿಸಲು ಕಷ್ಟವಾಗುವುದು. ಆದ್ದರಿಂದ ಉಮರ್ ಖಯ್ಯಾಮ್ ನುಡಿದಂತೆ, ‘ಈ ಕ್ಷಣದಲ್ಲಿ ಸಂತೋಷವಾಗಿರಿ. ಏಕೆಂದರೆ ಈ ಕ್ಷಣವೇ ನಿಮ್ಮ ಬದುಕು’ ಎಂಬ ತತ್ವವನ್ನು ಪಾಲಿಸಿದರೆ ಅಸ್ತವ್ಯಸ್ತವಾಗುವ ಮನಸ್ಸನ್ನು ಸುಸ್ಥಿರಗೊಳಿಸಬಹುದು. ಇದರಿಂದ ಗಮನ ವನ್ನು ಕಳೆದುಕೊಳ್ಳದಂತೆ ತಡೆಗಟ್ಟಬಹುದು. ಯಶಸ್ಸಿನತ್ತ ಸಾಗುವುದು ಸುಲಭ.
ಜಯಶ್ರೀ ಜೆ. ಅಬ್ಬಿಗೇರಿ, ಬೆಳಗಾವಿ