ಹರಿಯಾಣದ ಗುರು ಗ್ರಾಮದಲ್ಲಿ ಹಾಸ್ಯದ ಹೊನಲು ಹರಿಸಿ ಜಾನಪದ ಜೇಂಕಾರ ಮಾಡಿದ ರಂಗ ವಿಜಯಾ ..
ವಿಜಯ ದರ್ಪಣ ನ್ಯೂಸ್….
ಹರಿಯಾಣದ ಗುರು ಗ್ರಾಮದಲ್ಲಿ ಹಾಸ್ಯದ ಹೊನಲು ಹರಿಸಿ ಜಾನಪದ ಜೇಂಕಾರ ಮಾಡಿದ ರಂಗ ವಿಜಯಾ ..
ದೂರದ ಹರಿಯಾಣದ ಗುರು ಗ್ರಾಮ ಕನ್ನಡ ಸಂಘ ನಡೆಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಾಸ್ಯದ ಹೊನಲನ್ನು ಹರಿಸಿ ಜಾನಪದ ಜೇಂಕಾರದ ಮೂಲಕ ಹೊರನಾಡ ಕನ್ನಡಿಗರ ಮನ ಗೆಲ್ಲುವಲ್ಲಿ ರಂಗ ವಿಜಯಾ ತಂಡ ಯಶಸ್ವಿಯಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯೋಜನೆಯಲ್ಲಿ ಗುರು ಗ್ರಾಮದ ಕನ್ನಡ ಸಂಘ, ದೆಹಲಿ ಕರ್ನಾಟಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ರಂಗ ವಿಜಯಾ ತಂಡ ಜಿ ಕನ್ನಡದಲ್ಲಿ ನಡೆಯುತ್ತಿದ್ದ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ಸೀಸನ್ 5ರ ವಿಜೇತರಾದ ಕುಣಿಗಲ್ ವಿ ವಿಷ್ಣು, ರಕ್ಷಿತ್ ಶ್ರೀ ಸಾಯಿ ಹಾಗೂ ಚಲನಚಿತ್ರ, ದೂರದರ್ಶನ ಕಲಾವಿದೆ ಗೀತಾ ರಾಘವೇಂದ್ರ ಸಂಗಡಿಗರ ತಂಡ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹಾಸ್ಯದ ಹೊನಲನ್ನು ಹರಿಸಿ, ದಣಿದ ಮನಸ್ಸುಗಳನ್ನು ಹಗುರಗೊಳಿಸುವಲ್ಲಿ ಯಶಸ್ವಿಯಾದರು.
ಇದರ ಜೊತೆಗೆ ಅಂತರಾಷ್ಟ್ರೀಯ ಜಾನಪದ ಗಾಯಕ ಜಾನಪದ ಜೋಗಿ ಎಂದೇ ಪ್ರಖ್ಯಾತರಾದ ಜೋಗಿಲ ಸಿದ್ದರಾಜು ಮತ್ತು ತಂಡದವರು ಕನ್ನಡ ಜಾನಪದ ಗಾಯನದ ಮೂಲಕ ಕುಳಿತಿದ್ದ ಹೊರನಾಡು ಕನ್ನಡಿಗರು ಎದ್ದು ನೃತ್ಯ ಮಾಡುವಂತೆ ಮಾಡಿದ್ದು ನಿಜಕ್ಕೂ ವಿಶೇಷವಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ. ನಾಗರಾಜ್ ಮಾತನಾಡುತ್ತಾ ಐ.ಎ.ಎಸ್. ಮತ್ತು ಐ.ಪಿ.ಎಸ್. ಹುದ್ದೆಗಳಿಗಾಗಿ ತರಬೇತಿ ಪಡೆಯಲು ಕರ್ನಾಟಕದಿಂದ ದೆಹಲಿಗೆ ಬರುವ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ದೆಹಲಿ ಕರ್ನಾಟಕ ಸಂಘದ ವತಿಯಿಂದ ಗುರು ಗ್ರಾಮದ ಕರ್ನಾಟಕ ಸಂಘದ ಸಹಯೋಗದಲ್ಲಿ ವಸತಿ ಸಂಕೀರ್ಣವನ್ನು ಗುರು ಗ್ರಾಮದಲ್ಲಿ ಮಾಡುವ ಆಲೋಚನೆ ಇದೆ. ಜೊತೆಗೆ ತರಬೇತಿ ಸಹ ಗುರುಗ್ರಾಮದಲ್ಲಿ ಹಮ್ಮಿಕೊಳ್ಳಲು ಕರ್ನಾಟಕ ಸಂಘ ಪ್ರಯತ್ನಿಸುತ್ತಿದೆ ಎಂದರು .
ರಾಜ್ಯಸಭಾದ ಹೆಚ್ಚುವರಿ ಕಾರ್ಯದರ್ಶಿ ಡಾ. ಕೆ. ಎಸ್. ಸೋಮಶೇಖರ್ ಮಾತನಾಡುತ್ತಾ ವಿಶಾಲ ಕರ್ನಾಟಕವು ಹಲವು ರಾಜ್ಯಗಳ ದಾಳಿಯಿಂದ ಹರಿದು ಹಂಚಿ ಹೋಗಿದೆ. ಕನ್ನಡಿಗರ ವಿಶಾಲ ಮನೋಭಾವ ದ ಮೇಲೆ ದುಷ್ಪರಿಣಾಮ ಬೀರುತ್ತಿದೆ, ಆದರೂ ಕನ್ನಡತನ, ಕನ್ನಡ ಮನ ಸದಾ ಆಲದ ಮರದ ಹಾಗೆ ಅದು ಬಂದವರಿಗೆಲ್ಲ ನೆರಳು ನೀಡುವ ಜೊತೆಗೆ ತನ್ನ ಬಿಳಲನ್ನು ಹಾಗೆ ಉಳಿಸಿಕೊಳ್ಳುವ ಮಹತ್ತರ ತಾಯಿ ಭಾಷೆ ಇದು ಇದಕ್ಕೆ ಗೌರವ ಸಲ್ಲಲೇ ಬೇಕು ಎಂದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಡಾ. ಕೆ. ಜಿ. ಶ್ರೀನಿವಾಸ್ ರವರು ಮಾತನಾಡುತ್ತಾ ಸ್ಥಳೀಯ ಕನ್ನಡ ಸಂಘವು ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಎಷ್ಟು ಕೆಲಸ ಮಾಡುತ್ತದೆಯೋ, ಅದೇ ರೀತಿ ಹೊರನಾಡ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಕಾಯಕದಲ್ಲಿ ಎಂದಿಗೂ ಹಿಂಜರಿಯಬಾರದು ನಮ್ಮ ಮಕ್ಕಳಿಗೆ ನಾವು ಕನ್ನಡದ ಭಾಷೆಯ ಮಹತ್ವ, ಸಾಹಿತ್ಯದ ಮೇರುತ್ವ, ಸಾಹಿತ್ಯ ದಿಗ್ಗಜರ ಸಾಧನೆ ಇವುಗಳನ್ನು ಅರ್ಥ ಮಾಡಿಸುತ್ತಾ ಸಾಗಬೇಕು. ಕನ್ನಡತನ, ಕನ್ನಡ ಮನ ಪ್ರತಿ ಮಗುವಿನ ಮನಸಾಗಬೇಕು ಎಂದರು. ಬೆಂಗಳೂರಿನಿಂದ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ನಗರಕ್ಕೆ ನೇರ ವಿಮಾನ ಸಂಪರ್ಕ ಕಲ್ಪಿಸುವಲ್ಲಿ ಕನ್ನಡಿಗರ ಪಾತ್ರ ಮಹತ್ವದ್ದಾಗಿದೆ. ಮೊದಲು ಕೇವಲ ಒಂದು ಬಾರಿ ಮಾತ್ರ ನೇರ ವಿಮಾನ ಸಂಪರ್ಕವಿತ್ತು ಈಗ 16 ಬಾರಿ ಆಗಿರುವುದು ಕನ್ನಡಿಗರ ಹೆಮ್ಮೆಯ ಎಂದರು. ಜೊತೆಗೆ ದೆಹಲಿ ಕನ್ನಡಿಗರಿಗೆ ಯಾವುದೇ ರೀತಿಯ ಸಮಸ್ಯೆಯಾಗಲಿ ನೇರವಾಗಿ ನನ್ನನ್ನು ಸಂಪರ್ಕಿಸಬಹುದು ಎಂದರು.
ಗುರು ಗ್ರಾಮ ಕನ್ನಡ ಸಂಘದ ಅಧ್ಯಕ್ಷ ಕೃಷ್ಣಪ್ಪ ಮಾತನಾಡುತ್ತಾ ಗುರು ಗ್ರಾಮದ ಕನ್ನಡ ಸಂಘದ ವತಿಯಿಂದ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಕಲಿಕ ಕೇಂದ್ರವನ್ನು ಪ್ರಾರಂಭ ಮಾಡಿದ್ದು, ಆನ್ಲೈನ್ ಮೂಲಕವೂ ಸಹ ಕನ್ನಡ ಕಲಿಸುವ ಪ್ರಯತ್ನ ಮಾಡಲಾಗುತ್ತದೆ. ನಮ್ಮ ಮಕ್ಕಳು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಮರೆಯಬಾರದು ಅದಕ್ಕೆ ಮಕ್ಕಳಿಗೆ ಈ ಕೇಂದ್ರದ ಮೂಲಕ ಕನ್ನಡ ಕಲಿಸುವ ಪ್ರಯತ್ನ ಮಾಡಲಾಗುತ್ತಿದೆ, ಪ್ರತಿ ಕನ್ನಡಿಗರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ದೆಹಲಿ ಕರ್ನಾಟಕ ಸಂಘದ ಕಾರ್ಯದರ್ಶಿ ರಾಧಾಕೃಷ್ಣ ಮತ್ತು ಸಂಘದ ಪದಾಧಿಕಾರಿಗಳು ಹಾಗೂ ಗುರು ಗ್ರಾಮ ಕನ್ನಡ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಜೋಳದ ರಾಶಿ ಮತ್ತು ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಡ್ರಾಮಾ ಜೂನಿಯರ್ಸ್ ವಿಜೇತರಾದ ಕುಣಿಗಲ್ ವಿಷ್ಣು ಅವರ ತಂದೆ ವೆಂಕಟೇಶ್ ಮತ್ತು ತಾಯಿ ರಾಜೇಶ್ವರಿ ಹಾಗೂ ಲಿಖಿತ್ ಶ್ರೀ ಸಾಯಿ ಅವರ ತಾಯಿ ಗಂಗಾ, ಜಾನಪದ ದಿಗ್ಗಜ ಜೋಗಿಲ ಸಿದ್ದರಾಜು ಮತ್ತು ರಂಗಭೂಮಿಯ ಖ್ಯಾತ ನಿರ್ದೇಶಕ ಹಾಗೂ ನಟ ಮಾಲೂರು ವಿಜಿಯವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಒಟ್ಟಾರೆ ತುಂಬಿದ ಸಭಾಂಗಣ ಜಾನಪದ ಝೇಂಕಾರದ ಮೂಲಕ ಮೂಲಕ, ಹಾಸ್ಯದ ಹೊನಲನ್ನು ಹರಿಸಿ ಹೊರನಾಡ ಕನ್ನಡಿಗರ ಮನ ಗೆಲ್ಲುವಲ್ಲಿ ರಂಗ ವಿಜಯ ತಂಡ ಯಶಸ್ವಿಯಾಯಿತು.