ನಗಬೇಡಿ, ಇದು ಸತ್ಯ, ನಾಚಿಕೆ ಪಟ್ಟುಕೊಳ್ಳಿ…..
ವಿಜಯ ದರ್ಪಣ ನ್ಯೂಸ್….
ನಗಬೇಡಿ, ಇದು ಸತ್ಯ,
ನಾಚಿಕೆ ಪಟ್ಟುಕೊಳ್ಳಿ…..
ಸಾಧ್ಯವಾದರೆ ಈ ಅಂಕಿಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಿ ತಪ್ಪಾಗಿದ್ದರೆ ನನಗೆ ತಿಳಿಸಿ, ಸರಿಯಿದ್ದರೆ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಿಗೆ ತಿಳಿಸಿ………
ದಂಗು ಬಡಿಸಿತು ಕೇಂದ್ರ ಶಿಕ್ಷಣ ಸಚಿವಾಲಯ ಪ್ರಕಟಿಸಿರುವ ರಾಜ್ಯಗಳ ಸಾಕ್ಷರತೆಯ ಶೇಕಡವಾರು ಪ್ರಮಾಣದ ವರದಿಯ ಸುದ್ದಿಯನ್ನು ನೋಡಿದಾಗ……
ಶೇಕಡಾ 94% ಸಾಕ್ಷರತೆಯೊಂದಿಗೆ ಕೇರಳ ಮೊದಲನೆಯ ಸ್ಥಾನದಲ್ಲಿದ್ದರೆ, ಶೇಕಡಾ 74% ಸಾಕ್ಷರತೆಯೊಂದಿಗೆ ಕರ್ನಾಟಕ 15ನೇ ಸ್ಥಾನದಲ್ಲಿದೆ. ಶೇಕಡಾ 61% ಸಾಕ್ಷರತೆಯೊಂದಿಗೆ ಬಿಹಾರ ಕೊನೆಯ ಸ್ಥಾನದಲ್ಲಿದೆ……
ಕರ್ನಾಟಕದ ಒಟ್ಟು ಜನಸಂಖ್ಯೆ ಸುಮಾರು 7 ಕೋಟಿಯಷ್ಟಿದೆ. ಇದರಲ್ಲಿ ಶೇಕಡಾ 26% ಪರ್ಸೆಂಟ್ ಅನಕ್ಷರಸ್ಥರು ಎಂದಾದರೆ ಅವರ ಸಂಖ್ಯೆ ಸುಮಾರು ಒಂದು ಕೋಟಿ ಎಪ್ಪತೈದು ಲಕ್ಷದವರೆಗೂ ಆಗುತ್ತದೆ. ಅಂದರೆ 2024 ರ ಈ ಅಂತಿಮ ಘಟ್ಟದಲ್ಲಿ ಈಗಲೂ ಒಂದೂವರೆ ಕೋಟಿಗೂ ಹೆಚ್ಚು ಜನ ಅನಕ್ಷರಸ್ಥರಿದ್ದಾರೆ ಎಂದರೆ ಸರ್ಕಾರ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಇತರೆ ಇದಕ್ಕೆ ಸಂಬಂಧಪಟ್ಟವರು ಮತ್ತು ನಾವು ಏನು ಮಾಡುತ್ತಿದ್ದೇವೆ…..
ದೇಶವನ್ನು, ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ನಾವು, ನಮ್ಮ ಸುತ್ತಲೇ ಪ್ರತಿ ನಾಲ್ಕು ಜನರಲ್ಲಿ ಒಬ್ಬ ಅನಕ್ಷರಸ್ಥ ಎಂದು ಯಾವ ಮುಖವಿಟ್ಟು ಹೇಳಿಕೊಳ್ಳುವುದು….
ಚಿನ್ನದ ಬೆಲೆ ತೀವ್ರ ಗತಿಯಲ್ಲಿ ಏರುತ್ತಿದೆ, ರಿಯಲ್ ಎಸ್ಟೇಟ್ ಬೆಲೆ ವೇಗವಾಗಿ ಬೆಳೆಯುತ್ತಿದೆ, ಜನಸಂಖ್ಯೆಯು ಮಿತಿ ಇಲ್ಲದೆ ಹೆಚ್ಚಾಗುತ್ತಿದೆ, ತೆರಿಗೆ ಸಂಗ್ರಹ ಏರುಗತಿಯಲ್ಲಿದೆ, ಸರ್ಕಾರದ ಬಜೆಟ್ ಗಾತ್ರ 4 ಲಕ್ಷದವರೆಗೆ ಏರಿಕೆಯಾಗಿದೆ. ಚುನಾವಣೆಯ ಖರ್ಚು ವೆಚ್ಚ ಕೊಟ್ಯಂತರ ರೂಪಾಯಿಗಳಲ್ಲಿ ಲೆಕ್ಕ ಹಾಕಲಾಗುತ್ತದೆ. ಮತದಾರರಿಗೆ ಸುಮಾರು ಒಂದು ಮತಕ್ಕೆ 5 ಸಾವಿರದವರೆಗೂ ಹಂಚಲಾಗುತ್ತದೆ ಎಂಬ ಗಾಳಿ ಸುದ್ದಿ ಇದೆ. ಆದರೆ ಸಾಕ್ಷರತೆ ಮಾತ್ರ ಈ 77 ವರ್ಷಗಳ ನಂತರವೂ ನಿಧಾನ ಗತಿಯಲ್ಲಿ, ತುಂಬಾ ತುಂಬಾ ನಿಧಾನವಾಗಿ, ಒಂದು ಎರಡು ಪರ್ಸೆಂಟ್ ರೀತಿಯಲ್ಲಿ ಏರಿಕೆಯಾಗಿ ಇನ್ನೂ 26% ಅನಕ್ಷರಸ್ಥರಾಗಿಯೇ ಉಳಿದಿದ್ದಾರೆ….
ಅಂದರೆ ಅಭಿವೃದ್ಧಿ ಯಾವ ದಿಕ್ಕಿನತ್ತ ಸಾಗಿದೆ, ಯಾರಿಗೆ ಮತ ಹಾಕುತ್ತಿದ್ದೇವೆ, ಯಾಕೆ ಮಾತು ಹಾಕುತ್ತಿದ್ದೇವೆ, ಸರ್ಕಾರ ಎಂದರೆ ಯಾರು, ಜನಪ್ರತಿನಿಧಿಗಳು ಎಂದರೆ ಯಾರು, ಅಧಿಕಾರಿಗಳು ಎಂದರೆ ಯಾರು, ನ್ಯಾಯಾಧೀಶರು ಅಂದರೆ ಯಾರು ? ಪತ್ರಕರ್ತರು ಅಂದರೆ ಯಾರು, ಈ ಎಲ್ಲವನ್ನು ಮತ್ತೆ ಮತ್ತೆ ಪುನರ್ ವಿಮರ್ಶೆಗೆ ಒಳಪಡಿಸಬೇಕಿದೆ….
ಏಕೆಂದರೆ ನಮ್ಮನ್ನು ಆಳುವವರ ಆದ್ಯತೆ ನಮ್ಮ ಹಿತಾಸಕ್ತಿಗಿಂತ ಬೇರೇನೂ ಇರಬೇಕು. ಇಲ್ಲದಿದ್ದರೆ ಕನಿಷ್ಠ ಶಿಕ್ಷಣದ ಪ್ರಗತಿ ಇನ್ನೆಲ್ಲೋ ಇರಬೇಕಿತ್ತು…..
ಇಷ್ಟು ಅನಕ್ಷರಸ್ಥರನ್ನು ಇಟ್ಟುಕೊಂಡು ಈ ಆಧುನಿಕ ಕಾಲದಲ್ಲಿ ಅಭಿವೃದ್ಧಿ ಸಾಧಿಸುವುದು ಹೇಗೆ ? ಸಮಾಜದಲ್ಲಿ ಶೋಷಣೆಯನ್ನು ಅನ್ಯಾಯವನ್ನು ಸರಿಪಡಿಸುವುದು ಹೇಗೆ ? ಆರ್ಥಿಕವಾಗಿ ನ್ಯಾಯ ಒದಗಿಸುವುದು ಹೇಗೆ ? ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ಸರಿಯಾಗಿ ತಲುಪಿಸುವುದು ಹೇಗೆ ?….
ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಿಕ್ಷಕರನ್ನು, ಪಿಡಿಒಗಳನ್ನು ಅಥವಾ ಬೇರೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ನೇಮಿಸಿಕೊಂಡು ಅವರಿಗೆ ಆ ಇಡೀ ಗ್ರಾಮದ, ಪ್ರತಿ ಹಳ್ಳಿಯ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ಯೋಜನೆ ರೂಪಿಸಿ, ಅತ್ಯಂತ ಪ್ರಾಮಾಣಿಕವಾಗಿ ಅದನ್ನು ಅನುಷ್ಠಾನಗೊಳಿಸಿದರೆ ಸಾಕ್ಷರತೆಯ ಪ್ರಮಾಣ ಶೇಕಡಾ 90ಕ್ಕೂ ಹೆಚ್ಚು ಹೆಚ್ಚಿಸಬಹುದು…..
ಈಗಲೂ ಮಕ್ಕಳ ಶಿಕ್ಷಣದ ಜೊತೆ ವಯಸ್ಕರ ಶಿಕ್ಷಣ ಯೋಜನೆ ಕಾನೂನಿನಲ್ಲಿ ಜಾರಿಯಲ್ಲಿದೆ. ಆದರೆ ವಾಸ್ತವದಲ್ಲಿ ಅದು ತನ್ನ ಗುರಿಯನ್ನು ತಲುಪಲು ವಿಫಲವಾಗಿದೆ. ಮೂಲಭೂತವಾಗಿ ರಾಜ್ಯದ ಅಭಿವೃದ್ಧಿ ಶಿಕ್ಷಣದ ಗುಣಮಟ್ಟವನ್ನು ಅವಲಂಬಿಸಿದೆ. ಈಗ ಅದರಲ್ಲೇ ವಿಫಲವಾದರೆ ಇನ್ನು ಯಾವ ರೀತಿ ಅಭಿವೃದ್ಧಿ ಮಾಡಲು ಸಾಧ್ಯ…..
ಮಾನ್ಯ ಕ್ಷಣ ಸಚಿವರೇ ಇದನ್ನು ತುಂಬಾ ಬೇಗ ಅರ್ಥ ಮಾಡಿಕೊಂಡು ಶೀಘ್ರದಲ್ಲೇ ಈ ಬಗ್ಗೆ ಸಮರೋಪಾದಿಯ ಕೆಲಸ ಪ್ರಾರಂಭಿಸಿ. ನಿಮ್ಮ ಅವಧಿ ಎಷ್ಟು ದಿನವಿದೆಯೋ ಏನೋ. ಆದರೆ ಇರುವಷ್ಟರಲ್ಲಿ ಒಂದು ಸಾರ್ಥಕ ಕೆಲಸ ಮುಗಿಸಿಕೊಂಡು ಹೋಗಿ….
ದಯವಿಟ್ಟು ಈಗಲೂ 26 ಪರ್ಸೆಂಟ್ ಅನಕ್ಷರಸ್ಥರನ್ನು ಹೊಂದಿದ ರಾಜ್ಯ ಎನ್ನುವ ನಾಚಿಕೆ ಪಡುವ ಪರಿಸ್ಥಿತಿಯಲ್ಲಿ ನಿಮ್ಮನ್ನು ನಮ್ಮನ್ನು ಇಡಬೇಡಿ ದಯವಿಟ್ಟು…
ಧನ್ಯವಾದಗಳು……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……..