ಜನಪ್ರತಿನಿಧಿ, ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿಯಲಿ : ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ
ವಿಜಯ ದರ್ಪಣ ನ್ಯೂಸ್ …
ಜನಪ್ರತಿನಿಧಿ, ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿಯಲಿ: ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ
ಮಂಗಳೂರು: ‘ರಾಜ್ಯದ ಎಲ್ಲ ಸಚಿವರು, ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿ ಕಲಿಯುವಂತಾಗಬೇಕು. ಇಲ್ಲದಿದ್ದರೆ ಸರ್ಕಾರಿ ಶಾಲೆಗಳು ಉದ್ದಾರ ಆಗುವುದಿಲ್ಲ. ಇದಕ್ಕಾಗಿ ರಾಜ್ಯದಾದ್ಯಂತ ಚಳವಳಿ ಆರಂಭಿಸಬೇಕಿದೆ’ ಎಂದು ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ರಜತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ‘ಬಿಜಿಎಸ್ ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಂಗಳವಾರ ಮಾತನಾಡಿದರು. ‘ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿದಾಗ ಸಚಿವರಿಗೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಆ ಶಾಲೆಯ ಅಭಿವೃದ್ಧಿ ಕುರಿತ ಉತ್ತರದಾಯಿತ್ವ ಹೆಚ್ಚುತ್ತದೆ. ಶಾಲೆಯ ಅವಶ್ಯಕತೆಗಳನ್ನು ಈಡೇರಿಸುವ ಬದ್ಧತೆ ಇರುತ್ತದೆ’ ಎಂದರು.
ರಾಜ್ಯದ ವಿವಿಧೆಡೆ ಸಂವಿತ್ ಶಾಲೆ ಆರಂಭ :
‘ಕಡುಬಡತನದಲ್ಲಿದ್ದು ಮುಂದುವರಿಸಲು ಪ್ರತಿಭಾನ್ವಿತ ಮಕ್ಕಳಿಗೆ ಶಿಕ್ಷಣ ಸಾಧ್ಯವಿಲ್ಲದ ಅಂತರ ರಾಷ್ಟ್ರೀಯ ಗುಣಮಟ್ಟದ ಉತ್ಕೃಷ್ಟ ಶಿಕ್ಷಣ ವನ್ನು ಉಚಿತವಾಗಿ ಒದಗಿಸಲು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ವಿಜ್ಞಾತಂ ಇನ್‌ಸ್ಟಿಟ್ಯೂಟ್ ಫಾರ್ ಟ್ಯಾಲೆಂಟೆಡ್ (ಸಂವಿತ್) ಶಾಲೆಗಳನ್ನು ಆರಂಭಿಸಿದ್ದು. ಇದನ್ನು ರಾಜ್ಯದಾದ್ಯಂತ ವಿಸ್ತರಿಸಲಿದ್ದೇವೆ. ಆರನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ಆ ವಿದ್ಯಾರ್ಥಿಗಳ ಕಲಿಕಾ ವೆಚ್ಚವನ್ನು ಸಂಸ್ಥಾನವೇ ಭರಿಸಲಿದೆ. ಆಧುನಿಕ ಶಿಕ್ಷಣವನ್ನು ಒದಗಿಸುವುದರ ಜೊತೆಗೆ ಆಧ್ಯಾತ್ಮಿಕ ತಿಳಿವಳಿಕೆ ಮೂಡಿಸಿ ಪರಿಪೂರ್ಣ ಜ್ಞಾನವನ್ನು ನೀಡುವುದು ಇದರ ಉದ್ದೇಶ. ಮಂಗಳೂರಿನಲ್ಲೂ ಒಂದೆರಡು ವರ್ಷಗಳಲ್ಲಿ ಸಂವಿತ್ ಶಾಲೆ ಆರಂಭಿಸಲಿದ್ದೇವೆ’ ಎಂದು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಇದಕ್ಕೂ ಮುನ್ನ ಬಿಜಿಎಸ್ ಕರಾವಳಿ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಾನಪದ ವಿದ್ವಾಂಸ .ಪ್ರೊ.ಕೆ.ಚಿನ್ನಪ್ಪ ಗೌಡ, ‘ರಾಜ್ಯದಲ್ಲಿ ಕನ್ನಡ ಉಳಿಯ ಬೇಕಾದರೆ ಸರ್ಕಾರಿ ಶಾಲೆಗಳನ್ನು ಉಳಿಸುವ ಅಗತ್ಯವಿದೆ’ ಎಂದರು. ವಿವಿಧ ಕ್ಷೇತ್ರಗಳ 24 ಮಂದಿಗೆ ‘ಬಿಜಿಎಸ್ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.