ನಲ್ ಜಲ್ ಮಿತ್ರ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯತ್ ಸಿಇಒ ಡಾ. ಅನುರಾಧ
ವಿಜಯ ದರ್ಪಣ ನ್ಯೂಸ್….
ನಲ್ ಜಲ್ ಮಿತ್ರ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯತ್ ಸಿಇಒ ಡಾ. ಅನುರಾಧ
ಬೆಂಗಳೂರು ಗ್ರಾ.ಜಿಲ್ಲೆ, ನ. 19 :-ಕರ್ನಾಟಕ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪ ಇಲಾಖೆ, ಎನ್.ಆರ್.ಎಲ್.ಎಂ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಇವರ ಸಹಯೋಗದೊಂದಿಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕಂಟನಕುಂಟೆ ಸರ್ಕಾರಿ ಐ.ಟಿ.ಐ ಕಾಲೇಜಿನಲ್ಲಿ ‘ನಲ್ ಜಲ್ ಮಿತ್ರ ತರಬೇತಿ ಕಾರ್ಯಕ್ರಮ’ಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್.ಅನುರಾಧ ಅವರು ಚಾಲನೆ ನೀಡಿದರು.
ನಂತರ ಮಾತನಾಡಿ ಜಿಲ್ಲೆಯಾದ್ಯಂತ ಜಲ್ ಜೀವನ್ ಮಿಷನ್ ಅನುಷ್ಠಾನ ಪ್ರಾರಂಭಿಸಿ, ಗ್ರಾಮಗಳಲ್ಲಿ ಪ್ರತಿ ಮನೆಗೆ ನಲ್ಲಿ ನೀರು ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ಪೈಪ್‌ಗಳ ಮೂಲಕ ನೀರಿನ ವ್ಯವಸ್ಥೆಯ ನಿರಂತರ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಡೆ ಹೆಚ್ಚು ಗಮನಹರಿಸಲಾಗಿದ್ದು, ಈ ಇಲಾಖೆ ಸಂಪೂರ್ಣ ಕಾರ್ಯಕ್ರಮದ ಉಸ್ತುವಾರಿಯನ್ನು ಗ್ರಾಮ ಪಂಚಾಯತಿಗಳು ವಹಿಸಿಕೊಂಡು ಸಂಪೂರ್ಣ ನಿರ್ವಹಣೆ ಮಾಡಲು ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ ಕಾರ್ಯಕ್ರಮದಡಿ ಆಯ್ಕೆಯಾಗಿರುವ ಸ್ವಸಹಾಯ ಸಂಘದ ಸ್ಥಳೀಯ ವ್ಯಕ್ತಿಗಳಿಗೆ ಬಹು ಕೌಶಲ್ಯ ತರಬೇತಿಯಡಿ, ಕೊಳಾಯಿ (Plumbing), ವಿದ್ಯುತ್ ಕೆಲಸ(Electrical work), ಕಲ್ಲು ಮಣ್ಣು ಕೆಲಸ(Masonry). ಉಪಕರಣ & ಯಂತ್ರೋಪಕರಣ ರಿಪೇರಿ (Pump operations) ಕೆಲಸಗಳ ಬಹುಕೌಶಲ್ಯ ತರಬೇತಿ ನೀಡಿ ವೃತ್ತಿಪರ ಶಿಕ್ಷಣ ಮತ್ತು ರಾಷ್ಟ್ರೀಯ ತರಬೇತಿ ಮಂಡಳಿ (NCVET)ಯ ಪ್ರಮಾಣ ಪತ್ರ ನೀಡುವುದಾಗಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಎನ್. ಮುನಿರಾಜು, ಕಂಟನಕುಂಟೆ ಸರ್ಕಾರಿ ಐಟಿಐ ಕಾಲೇಜು ಪ್ರಾಂಶುಪಾಲ ಪ್ರೋ. ಚಂದ್ರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ವೀಣಾ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಮಂಜುಳಾ, ದೊಡ್ಡಬಳ್ಳಾಪುರ ತಾಲ್ಲೂಕು ಸಂಜೀವಿನಿ ಸಿಬ್ಬಂದಿಗಳು ಹಾಗೂ 25 ಗ್ರಾಮ ಪಂಚಾಯಿತಿಗಳ ನಲ್ ಜಲ್ ಮಿತ್ರಗೆ ಆಯ್ಕೆಯಾದ ಮಹಿಳಾ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ವಿವಿಧ ತರಬೇತಿಗಾಗಿ ಅರ್ಜಿ ಆಹ್ವಾನ.
ಬೆಂಗಳೂರು ಗ್ರಾ.ಜಿಲ್ಲೆ, ನ. 19:- ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದಲ್ಲಿ ಗ್ರಾಫಿಕ್ಸ್ ಡಿಸೈನಿಂಗ್, ವಿಡಿಯೋ ಎಡಿಟಿಂಗ್, ಸಾಪ್ಟ್ ವೇರ್ ತರಬೇತಿ ಮತ್ತು ಇತರೆ ಕೌಶಲ್ಯ ಆಧಾರಿತ ತರಬೇತಿಗಳನ್ನು ಮ್ಯಾನುಯಲ್ ಸ್ಕಾವೆಂಜರ್ಸ್ ಗೆ ಹಾಗೂ ಅವರ ಅವಲಂಬಿತ ಕುಟುಂಬದ ಯುವಕ/ಯುವತಿಯರಿಗೆ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, 18 ರಿಂದ 35 ವಯಸ್ಸಾಗಿರಬೇಕು ಮತ್ತು ಮ್ಯಾನ್ಯುಯಲ್ ಸ್ಕಾವೆಂಜರ್ಸ್ ಗುರುತಿನ ಚೀಟಿ ಹೊಂದಿರಬೇಕು.
ಆಸಕ್ತರು ಅರ್ಜಿ ಸಲ್ಲಿಸಲು ನವೆಂಬರ್ 25 ಕಡೆಯ ದಿನವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಕೊಠಡಿ ಸಂಖ್ಯೆ 214, ಎರಡನೇ ಮಹಡಿ, ಜಿಲ್ಲಾಡಳಿತ ಭವನ ಅಥವಾ ಕಛೇರಿ ದೂರವಾಣಿ ಸಂಖ್ಯೆ. 8050854019, 08029781036 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.