ಸಮಾಜ ಪರಿವರ್ತನೆಗೆ ದಾಸಶ್ರೇಷ್ಠ ಕನಕರ ದಾರಿಯಲ್ಲಿ ನಡೆಯೋಣ: ಸಚಿವ ಕೆ.ಹೆಚ್ ಮುನಿಯಪ್ಪ
ವಿಜಯ ದರ್ಪಣ ನ್ಯೂಸ್….
ಸಂತಕವಿ ಕನಕದಾಸರ 537 ನೇ ಜಯಂತ್ಯೋತ್ಸವ
ಸಮಾಜ ಪರಿವರ್ತನೆಗೆ ದಾಸಶ್ರೇಷ್ಠ ಕನಕರ ದಾರಿಯಲ್ಲಿ ನಡೆಯೋಣ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ನ.18 :- 12 ನೇ ಶತಮಾನದಲ್ಲಿ ಸಮಾಜ ಸುಧಾರಣೆಗೆ ಶ್ರಮಿಸಿದ ಬಸವಣ್ಣನವರಂತೆ, 15 ನೇ ಶತಮಾನದಲ್ಲಿ ಸಮಾಜ ಸುಧಾರಣೆಗೆ ಶ್ರಮಿಸಿದವರಲ್ಲಿ ಮಹಾನ್ ಸಂತರಾದ ಕನಕದಾಸರು ಪ್ರಮುಖರು. ಸಮಾಜದ ಪರಿವರ್ತನೆ ಹಾಗೂ ಮೇಲು ಕೀಳು ಎಂಬ ಮನೋಭಾವನೆ ಹೋಗಲಾಡಿಸಲು ದಾಸಶ್ರೇಷ್ಠ ಕನಕದಾಸರ ದಾರಿಯಲ್ಲಿ ನಾವೇಲ್ಲರೂ ನಡೆಯಬೇಕಿದೆ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದೇವನಹಳ್ಳಿ ಟೌನ್ ನ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಸಂತಕವಿ ಕನಕದಾಸರ 537 ನೇ ಜಯಂತ್ಯುತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರು ಸಮಾಜದ ಸುಧಾರಣೆಗಾಗಿ ರಚಿಸಿದ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ. ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ದಾರ್ಶನಿಕ ಕನಕದಾಸರು. ಮಾನವಕುಲವೊಂದೇ ಎಂದು ಸಮಾಜದ ಸಮಾನತೆಗಾಗಿ ಶ್ರಮಿಸಿದರು. ಬಸವಣ್ಣ, ಸಂತ ತುಕರಾಂ, ಪುರಂದರದಾಸರು ಇವರೆಲ್ಲರೂ ಇತಿಹಾಸ ಕಂಡ ಮಹಾನ್ ವ್ಯಕ್ತಿಗಳು ಅವರ ಸಾಲಿನಲ್ಲಿ ಕನಕದಾಸರು ಸೇರುತ್ತಾರೆ ಎಂದು ಸಚಿವರು ಹೇಳಿದರು.
ಪ್ರತಿಯೊಂದು ಸಮುದಾಯದವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸ, ಉನ್ನತ ಹುದ್ದೆಗಳನ್ನು ಪಡೆದುಕೊಂಡು ಸಮುದಾಯದ ಸರ್ವೋತೋಮುಖ ಏಳ್ಗೆಗೆ ಹೊಂದಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನ್ನಾಡಿದ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ ಅವರು, ಕನಕದಾಸರು 15 ನೇ ಶತಮಾನದ ದಾಸಶ್ರೇಷ್ಠರು. ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಲು, ಬಹಳಷ್ಟು ಅಧ್ಯಯನವನ್ನು ಮಾಡಿ ಸರಳವಾಗಿ ಅರ್ಥವಾಗುವಂತಹ ಸಾಕಷ್ಟು ಕೀರ್ತನೆಗಳನ್ನು ರಚಿಸಿದ್ದಾರೆ. ಸಮಾಜದ ಮುನ್ನಡೆಗಾಗಿ, ಜಾತಿ ಪದ್ಧತಿಯ ನಿರ್ಮೂಲನೆಗಾಗಿ ಮತ್ತು ಮೂಢನಂಬಿಕೆಯ ವಿರುದ್ಧ ಬಹಳಷ್ಟು ಹೋರಾಟ ನಡೆಸಿ ಮನುಕುಲ ಒಂದೇ ಎಂಬುದನ್ನು ಪ್ರತಿಪಾದಿಸಿದ ಕನಕರು. ನಾವೇಲ್ಲರೂ ಜೀವನದಲ್ಲಿ ಕನಕದಾಸರ ಜೀವನಾದರ್ಶದ ಮೌಲ್ಯಗಳನ್ನು ಅಳವಡಿಕೊಂಡು ಪ್ರತಿ ದಿನವೂ ಪಾಲನೆ ಮಾಡಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಡಾ.ಹುಲಿಕುಂಟೆ ಮೂರ್ತಿ ಅವರು ಮಾತನಾಡಿ, ಕನಕದಾಸರನ್ನ ದಾಸಶ್ರೇಷ್ಟ ಅಷ್ಟಕ್ಕೇ ಸೀಮಿತಗೊಳಿಸಲಾಗಿದೆ ಆದರೆ ಅವರೊಬ್ಬ ಕವಿ, ಹೋರಾಟಗಾರ ಮೋಹನ ತರಂಗಿಣಿ, ರಾಮಧಾನ್ಯ ಚರಿತ್ರೆ, ಹರಿಭಕ್ತಸಾರದಂತಹ ಮೇರು ಕೃತಿಗಳನ್ನು ರಚಿಸಿದ್ದಾರೆ. ಅವರೊಬ್ಬ ಕನ್ನಡ ನಾಡಿನ ಪ್ರಜ್ಞೆ, 316 ಕೀರ್ತನೆಗಳನ್ನ ಬರೆದಿರುವ ಅವರು, ಸಮಾಜದಲ್ಲಿ ಬಹಳ ನೋವುಂಡವರು ಸೇವೆಯನು ಕೊಡೊ ಹರಿಯೆ ಎನ್ನುವ ಮೂಲಕ ಹರಿಯನ್ನು ಪ್ರಶ್ನಿಸಿದವರು ಕನಕರನ್ನ ಒಂದು ಜಾತಿಗೆ ಸೀಮಿತಗೊಳಿಸದೆ ವಿಶ್ವಮಾನವನನ್ನಾಗಿ ನೋಡಬೇಕಾಗಿದೆ ಎನ್ನುವ ಮೂಲಕ ಸಂತಕವಿ ಕನಕದಾಸರ ಜೀವನ, ತತ್ವಾದರ್ಶಗಳ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ದೇವನಹಳ್ಳಿ ಟೌನ್ ನ ಬೈಪಾಸ್ ನಲ್ಲಿರುವ ಕನಕದಾಸರ ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ವಿವಿಧ ಕಲಾತಂಡಗಳೊಂದಿಗೆ ದಾಸ ಶ್ರೇಷ್ಠ ಕನಕದಾಸರ ಉತ್ಸವ, ಪಲ್ಲಕ್ಕಿಗಳ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ. ರಾಜಣ್ಣ, ಬಯಪ್ಪ ಅಧ್ಯಕ್ಷ ಶಾಂತಕುಮಾರ, ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷರು, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷರು ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕೆ.ಎನ್ ಅನುರಾಧ, ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ರವಿಕುಮಾರ್, ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ , ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥಗೌಡ ಸೇರಿದಂತೆ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಎಲ್ಲಾ ನಾಮ ನಿರ್ದೇಶಿತ ಸದಸ್ಯರು, ಸಮುದಾಯದ ಮುಖಂಡರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.