ಒಂದಷ್ಟು ಪ್ರವಾಸದ ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ…….
ವಿಜಯ ದರ್ಪಣ ನ್ಯೂಸ್ ……
ಒಂದಷ್ಟು ಪ್ರವಾಸದ ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ…….
ನವೆಂಬರ್ ತಿಂಗಳಿನಲ್ಲಿ ಇಲ್ಲಿಯವರೆಗೆ ಸಾಕಷ್ಟು ವೈವಿಧ್ಯಮಯ ಪ್ರವಾಸವನ್ನು ಕೈಗೊಂಡಿದ್ದೇನೆ. ಅದರ ಸಣ್ಣ ಮಾಹಿತಿ……….
ದಿನಾಂಕ 01/11/2024 ಶುಕ್ರವಾರ, ದಾವಣಗೆರೆ ನಗರದಿಂದ ಸುಮಾರು 20 ಕಿಲೋ ಮೀಟರ್ ದೂರದ ಸಹಜ ಕೃಷಿ ಮತ್ತು ಸಹಜ ಜೀವನದ ಐಕಾಂತಿಕ ಫಾರ್ಮ್ ಹೌಸ್ /ಸಂಸ್ಥೆಗೆ ಗೆಳೆಯರೊಂದಿಗೆ ಭೇಟಿ ನೀಡಿದ್ದೆವು. ಅಲ್ಲಿನ ಸಂಸ್ಥಾಪಕರಾದ ಶ್ರೀ ರಾಘವ ಅವರೊಂದಿಗೆ ಒಂದಷ್ಟು ಮಾತುಕತೆ ನಡೆಸಿ ಅವರ ಸಹಜ ಕೃಷಿಯ ಬಗ್ಗೆ ಮಾಹಿತಿ ಪಡೆದು ಆ ಕೃಷಿ ಚಟುವಟಿಕೆಯ ಜಾಗವನ್ನು ವೀಕ್ಷಿಸಿದೆವು. ಭವಿಷ್ಯದಲ್ಲಿ ರೋಗ ಮುಕ್ತ ಮತ್ತು ಆರೋಗ್ಯಕರ ಜೀವನಕ್ಕಾಗಿ ಸಹಜ ಕೃಷಿ ಮತ್ತು ಪ್ರಕೃತಿಗೆ ನಿಷ್ಠವಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ನಾವೆಲ್ಲರೂ ಈಗಿನಿಂದಲೇ ಪ್ರಯತ್ನಿಸುವುದು ಒಳ್ಳೆಯದು……
ತದನಂತರ ನನ್ನ ಅತ್ಯಂತ ಆತ್ಮೀಯ ಗೆಳೆಯರಾದ ದಾವಣಗೆರೆಯ ರಂಗಕರ್ಮಿ ಶ್ರೀ ಸಿದ್ದರಾಜು ಸೋಕಿಶೆಟ್ಟರ್ ಅವರ ಮನೆಯಲ್ಲಿ ತುಂಬಾ ಪ್ರೀತಿಯಿಂದ ನೀಡಿದ ರಾತ್ರಿ ಊಟದ ಆತಿಥ್ಯ ಸ್ವೀಕರಿಸಿ…..
ಅದೇ ದಿನ ಅಲ್ಲಿಂದ ಹೊರಟು ಗೆಳೆಯರಾದ ಹರಿನಾಥ್ ಬಾಬು ಅವರು ಕಾಯ್ದಿರಿಸಿದ್ದ ಗದಗಿನ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿ ಮರುದಿನ ಅಂದರೆ ದಿನಾಂಕ 2/11/ 2024 ರ ಶನಿವಾರ ಗದಗ ಜಿಲ್ಲೆಯ ಪ್ರಖ್ಯಾತ ಪ್ರವಾಸಿ ತಾಣ ಕಪ್ಪತ್ತಗುಡ್ಡಕ್ಕೆ ಚಾರಣ ಹೋಗಿದ್ದೆವು. ಸುಮಾರು 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿರುವ ಕಪ್ಪತ್ತಗುಡ್ಡದ ರುದ್ರ ರಮಣೀಯ ನಿಸರ್ಗ ಸೌಂದರ್ಯವನ್ನು ಆಸ್ವಾದಿಸಿದೆವು. ಅದು ಗಣಿಗಾರಿಕೆಗೆ ಬಲಿಯಾಗುವುದನ್ನು ಸ್ಥಳೀಯರು ತಡೆದ ಹೋರಾಟವನ್ನು ತಿಳಿದು ಸಂತೋಷವಾಯಿತು. ಅದು ಈ ರೀತಿಯ ಪ್ರಾಕೃತಿಕ ಸಂಪತ್ತು ಉಳಿಸುವ ಎಲ್ಲಾ ಹೋರಾಟಗಾರರಿಗೆ ಸ್ಫೂರ್ತಿಯಾಗಲಿ ಎಂದು ಆಶಿಸುತ್ತಾ……
ಮತ್ತೆ ಪ್ರವಾಸಿ ಮಂದಿರಕ್ಕೆ ಹಿಂದಿರುಗಿ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿಗಳು ಮತ್ತು ಮಿತ್ರರಾದ ಸುರೇಶ್ ಕುಂಬಾರ್ ಅವರೊಂದಿಗೆ ಕೃಷಿ ಚಟುವಟಿಕೆ ಮತ್ತು ಅವರ ಅನುಭವಗಳನ್ನು ಚರ್ಚಿಸಿ ಮುಂದೆ ಗದಗಿನ ಆತ್ಮೀಯ ಮಿತ್ರರಾದ ಶ್ರೀ ಈರಣ್ಣ ಘೋಟಡಿಕಿ ಅವರು ಉಣಬಡಿಸಿದ ಮಧ್ಯಾಹ್ನದ ಊಟವನ್ನು ಹರಿನಾಥ್ ಬಾಬು, ಸುರೇಶ್ ಕುಂಬಾರ್ ಮತ್ತು ಇತರ ಗೆಳೆಯರೊಂದಿಗೆ ಸವಿದು, ಬಹಳ ದಿನಗಳ ನಂತರ ಭೇಟಿಯಾದ ಪಾದಯಾತ್ರೆ ಸಮಯದಲ್ಲಿ ಆ ಭಾಗದ ಅನ್ನದಾತರಾದ ಈರಣ್ಣ ಅವರಿಗೆ ವಂದಿಸಿ…..
ಅಲ್ಲಿಂದ ಮತ್ತೊಬ್ಬ ಪ್ರೀತಿಯ ಗೆಳೆಯರಾದ ಮತ್ತು ಕಲಾ ಶಿಕ್ಷಕರಾದ ಶ್ರೀ ಸುರೇಶ್ ಬಾಬು ಬಾದರಬಂಡಿ ಅವರ ಆಹ್ವಾನದ ಮೇರೆಗೆ ಬಿಜಾಪುರ ಜಿಲ್ಲೆ, ಮುದ್ದೇಬಿಹಾಳದ ಬಿದರಕುಂದಿಯ ಜಾತ್ರಾ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಅಲ್ಲಿ ಮಾನವೀಯ ಮೌಲ್ಯಗಳನ್ನು ಕುರಿತು ಮಾತನಾಡಿದೆನು. ಅಲ್ಲಿ ಸಾಹಿತಿಗಳು, ಸಂಘಟಕರು ಮತ್ತು ಹಿತೈಷಿಗಳಾದ ಶ್ರೀ ಅಬ್ದುಲ್ ರೆಹಮಾನ್ ಬಿದರಕುಂದಿ ಅವರನ್ನು ಭೇಟಿಯಾಗಿ ಅವರ ಮನೆಯಲ್ಲಿ ರಾತ್ರಿಯ ಪ್ರಸಾದ ಸ್ವೀಕರಿಸಿ ಅಲ್ಲಿಂದ ನೇರ ಬೆಂಗಳೂರಿಗೆ ವಾಪಸ್ಸಾದೆವು….
ಗದಗ ಮತ್ತು ಬಿದರಕುಂದಿಯ ಮಾರ್ಗದಲ್ಲಿ ಆಲಮಟ್ಟಿ ಜಲಾಶಯ, ಬಾದಾಮಿ, ಪಟ್ಟದಕಲ್ಲು, ಬನಶಂಕರಿ ವೀಕ್ಷಿಸಿದೆವು ಹಾಗೂ ಕೆಲವು ಶರಣರು ಲಿಂಗೈಕ್ಯರಾದ ಜಾಗಗಳನ್ನು ನೋಡಿದೆವು……
ಹಾಗೆಯೇ ಇದೇ ತಿಂಗಳು 8/11/2024 ರ ಶುಕ್ರವಾರ ಮಿತ್ರರಾದ ಮತ್ತು ಪರಿಸರ ಹೋರಾಟಗಾರರು, ನದಿ ಮತ್ತು ಕೆರೆಗಳ ಪಾವಿತ್ರ್ಯ ಕಾಪಾಡಲು ಹಗಲಿರುಳು ಶ್ರಮಿಸುತ್ತಿರುವ ಶ್ರೀ ಮಾಧವನ್ ಮತ್ತು ಬಾಲು ನಾಯ್ಡು ಅವರ ಆಹ್ವಾನದ ಮೇರೆಗೆ ತುಂಗಭದ್ರಾ ನಿರ್ಮಲ ಅಭಿಯಾನದಲ್ಲಿ ಭಾಗವಹಿಸಲು ಹಿಂದಿನ ರಾತ್ರಿಯೇ ಬೆಂಗಳೂರು ಬಿಟ್ಟು ಮರುದಿನ ಬೆಳಗ್ಗೆ ತೀರ್ಥಹಳ್ಳಿ ತಲುಪಿ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಭೀಮನ ಕಟ್ಟೆಯಿಂದ ತೀರ್ಥಹಳ್ಳಿಯವರೆಗೂ ಪಾದಯಾತ್ರೆಯಲ್ಲಿ ಭಾಗವಹಿಸಿ ಅಲ್ಲಿನ ಮಕ್ಕಳೊಂದಿಗೆ ನೀರಿನ ಮಹತ್ವ ಕುರಿತು, ನದಿಯ ಶುಚಿತ್ವ ಕಾಪಾಡುವ ಬಗ್ಗೆ ಒಂದಷ್ಟು ಮಾತನಾಡಿದೆನು. ಆ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಶಾಸಕರು ಮತ್ತು ಮಾಜಿ ಮಂತ್ರಿಗಳು ಆದ ಶ್ರೀ ಅರಗ ಜ್ಞಾನೇಂದ್ರ, ಶ್ರೀ ಅನಂತ ಹೆಗಡೆ ಅಶೀಸರ ಸೇರಿ ಸಾಕಷ್ಟು ಪ್ರಖ್ಯಾತ ಪರಿಸರ ಹೋರಾಟಗಾರರು ಭಾಗವಹಿಸಿದ್ದರು….
6ನೇ ತಾರೀಕಿನಿಂದ 15ನೇ ತಾರೀಖಿನವರೆಗೆ ಶೃಂಗೇರಿಯಿಂದ ಹರಿಹರದವರೆಗೆ ನಿರ್ಮಲ ತುಂಗಾ ಅಭಿಯಾನ ಪಾದಯಾತ್ರೆ ಯಶಸ್ವಿಯಾಗಿ ಮುನ್ನಡೆಯಿತು. ಮುಂದಿನ ದಿನಗಳಲ್ಲಿ ಅದು ಹರಿಹರದಿಂದ ವಿಜಯನಗರ ಜಿಲ್ಲೆಯ ಕಿಷ್ಕಿಂದೆವರೆಗೂ ಮತ್ತೆ ಪಾದಯಾತ್ರೆ ಮುಂದುವರೆಯಲಿದೆ. ಪರಿಸರ ಜಾಗೃತಿಗಾಗಿ, ನದಿಗಳ ಸುರಕ್ಷತೆಗಾಗಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಮುಂದೆ ಸಾಧ್ಯವಾದರೆ ನಾವು ಮತ್ತೆ ಭಾಗವಹಿಸೋಣ ಮತ್ತು ಇದು ಯಶಸ್ವಿಯಾಗಲಿ ಎಂದು ಹಾರೈಸುತ್ತಾ……..
ಮುಂದೆ 9/11/2024 ರ ಶನಿವಾರ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಲತಾಳು ಗ್ರಾಮದಲ್ಲಿ “ನಮ್ಮ ನಡೆ ಜಾತಿ ಮುಕ್ತ ಭಾರತದೆಡೆಗೆ ” ಎಂಬ ಕೋಲಾರದ ಅರಿವು ಭಾರತ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ನಡೆಸುತ್ತಿರುವ ಸಮತೆಯ ಟೀ ಅಥವಾ ಸಹಭೋಜನ ಅಥವಾ ಗೃಹಪ್ರವೇಶ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿ ಸವರ್ಣೀಯರ ಮನೆಗೆ ದಲಿತರನ್ನು ಸ್ವಾಗತಿಸಿ ಅವರ ಜೊತೆಗೆ ಸಹ ಭೋಜನ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಸ್ಪೃಶ್ಯತೆ ಆಚರಣೆಯ ದುರಂತಕ್ಕೆ ಕಾರಣವಾದ ಅಂಶಗಳನ್ನು ವಿವರಿಸಿ ಸಮಸಮಾಜದ ನಿರ್ಮಾಣಕ್ಕಾಗಿ ಒಂದಷ್ಟು ಮಾತುಕತೆ ನಡೆಸಲಾಯಿತು. ಆತ್ಮೀಯ ಮಿತ್ರರಾದ ಶ್ರೀ
ಅರಿವು ಶಿವಪ್ಪ ಅವರ ನೇತೃತ್ವದಲ್ಲಿ, ಗೆಳೆಯರಾದ ಕೃಷಿ ತಜ್ಞ ಡಾಕ್ಟರ್ ಆರ್ ಕೆ ರಾಮಚಂದ್ರ ಅವರು ಸೇರಿ
ಖ್ಯಾತ ಸಾಹಿತಿಗಳಾದ ಶ್ರೀ ಚಂದ್ರಶೇಖರ ನಂಗಲಿ,
ಶ್ರೀ ಹೊಲತಾಳು ಸಿದ್ದಗಂಗಯ್ಯ, ಶ್ರೀ ರುದ್ರೇಶ್ ಅದರಂಗಿ, ಶ್ರೀ ವೆಂಕಟೇಶ್, ಶ್ರೀ ನವೀನ್ ಹಳೆಮನೆ ಜೊತೆಗೆ
ಸಾಕಷ್ಟು ಸಮಾಜ ಸುಧಾರಕರು ಮತ್ತು ಸಾಹಿತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು……
ಮರುದಿನ 10/11/2024 ರ ಭಾನುವಾರ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ನಡೆಯುತ್ತಿರುವ ಉಪಚುನಾವಣೆಯ ಪ್ರಯುಕ್ತ ಅಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕರ್ನಾಟಕ ರಾಷ್ಟ್ರ ಸಮಿತಿಯ ಅಧ್ಯಕ್ಷರು, ಪ್ರಾಮಾಣಿಕ ಮತ್ತು ಲಂಚಮುಕ್ತ ಕರ್ನಾಟಕಕ್ಕೆ ಶ್ರಮಿಸುತ್ತಿರುವ ಭ್ರಷ್ಟಾಚಾರ ವಿರೋಧಿ ಆಂದೋಲನದ ರವಿಕೃಷ್ಣಾರೆಡ್ಡಿ ಅವರ ಪರವಾಗಿ ಅವರದೇ ಯೂಟ್ಯೂಬ್ ಚಾನೆಲ್ ನಲ್ಲಿ ಒಂದಷ್ಟು ಪ್ರಚಾರ ಮಾಡಿ, ಅವರ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿ ವಾಪಸ್ಸಾದೆನು. ನನ್ನ ಹಿತೈಷಿಗಳು ಮತ್ತು ಆತ್ಮೀಯ ಮಿತ್ರರಾದ ಶ್ರೀ ರಾಜೇಶ್ ಅವರು ಇದರಲ್ಲಿ ನನ್ನ ಜೊತೆಯಾಗಿದ್ದರು. ಅವರ ಆತಿಥ್ಯ ಅತ್ಯಮೋಘ…..
ಮೊನ್ನೆ ದಿನಾಂಕ 14/11/2024 ರ ಗುರುವಾರ ಮಕ್ಕಳ ದಿನಾಚರಣೆ ಪ್ರಯುಕ್ತ ಮೈಸೂರು ಜಿಲ್ಲೆಯ ಸುತ್ತೂರು ಮಠದ ಶಾಲಾ ಮಕ್ಕಳ ವಸತಿ ನಿಲಯಕ್ಕೆ ಭೇಟಿ ನೀಡಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಮಕ್ಕಳೊಂದಿಗೆ ಆಹಾರ ವ್ಯರ್ಥವಾಗುವುದನ್ನು ತಡೆದು, ಭವಿಷ್ಯದಲ್ಲಿ ಆಹಾರದ ಸದುಪಯೋಗದ ಬಗ್ಗೆ ಆಹಾರ ಸಂರಕ್ಷಣಾ ಅಭಿಯಾನದ ಜೊತೆಗಾರರೊಂದಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು. ಆಹಾರ ಸಂರಕ್ಷಣಾ ಅಭಿಯಾನದಲ್ಲಿ ಕಳೆದ ಹತ್ತು ವರ್ಷಗಳಿಂದ ಶ್ರಮಿಸುತ್ತಿರುವ ಶ್ರೀ ಮೋಹನ್ ಕುಮಾರ್, ಶ್ರೀ ಯುವರಾಜ್, ವಚನ ಉಮೇಶ್ ಅವರು ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು…..
ಈ ನಡುವೆ ಗೆಳೆಯರಾದ ಹಾಗೂ ವೈಚಾರಿಕ ಪ್ರಜ್ಞಾವಂತಿಕೆಯ ಹೋರಾಟಗಾರರಾದ
ಶ್ರೀ ಹುಲಿಕಲ್ ನಟರಾಜ್ ಅವರ ಯೂಟ್ಯೂಬ್ ವಾಹಿನಿಯ ಸಂದರ್ಶನಗಳ ರೂಪದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ…..
ಈ ಎಲ್ಲಾ ಚಟುವಟಿಕೆಗಳಿಗೆ ನಿರಂತರವಾಗಿ ಬೆನ್ನೆಲುಬಾಗಿರುವ ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆ ಬೆಂಗಳೂರಿನ ಎಲ್ಲಾ ಆತ್ಮೀಯ ಗೆಳೆಯರಿಗೂ, ಸಮಾಜ ಸೇವಕರಿಗೂ ತುಂಬು ಹೃದಯದ ಕೃತಜ್ಞತೆಗಳನ್ನು ಅರ್ಪಿಸುತ್ತಾ……
ಹೀಗೆ ನವೆಂಬರ್ ತಿಂಗಳ ಈ 15 ದಿನ ಬಹಳಷ್ಟು ವೈವಿಧ್ಯಮಯ, ಉಪಯುಕ್ತ ಕಾರ್ಯಕ್ರಮದಲ್ಲಿ ನಿರಂತರವಾಗಿ ಭಾಗವಹಿಸುತ್ತಾ ಮಾನವೀಯ ಮೌಲ್ಯಗಳ ಪುನರುತ್ಥಾನದ ಕಾರ್ಯಕ್ರಮದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದೇನೆ……
ದೇಹ ಮತ್ತು ಮನಸ್ಸು ಸ್ವಲ್ಪಮಟ್ಟಿಗೆ ದಣಿದರು ಕರ್ತವ್ಯ ಪ್ರಜ್ಞೆ ಮತ್ತು ಜನರ ಪ್ರೀತಿಯ ಆಹ್ವಾನ ಮತ್ತು ಆತಿಥ್ಯ ಎಲ್ಲವನ್ನೂ ಮರೆಸಿ ಜೀವನೋತ್ಸಾಹ ತುಂಬುತ್ತದೆ. ವೈಯಕ್ತಿಕ ನೋವುಗಳನ್ನು ನಿವಾರಿಸುತ್ತದೆ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068…..