ಸಾವಿಗೀಡಾದವರ ಕುಟುಂಬಗಳಿಗೆ ತಲಾ 30 ಲಕ್ಷ ರೂ. ಪಾವತಿಸಿ: ಡಾ. ಪಿ.ಪಿ. ವಾವ

ವಿಜಯ ದರ್ಪಣ ನ್ಯೂಸ್….

ದಾಬಸ್ ಪೇಟೆ ಮ್ಯಾನ್ ಹೋಲ್ ದುರಂತ

ಸಾವಿಗೀಡಾದವರ ಕುಟುಂಬಗಳಿಗೆ ತಲಾ 30 ಲಕ್ಷ ರೂ. ಪಾವತಿಸಿ: ಡಾ. ಪಿ.ಪಿ. ವಾವ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ, ನ.11:- ಇತ್ತೀಚೆಗೆ ನೆಲಮಂಗಲ ತಾಲ್ಲೂಕಿನ ದಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಮ್ಯಾನ್ ಹೋಲ್ ದುರಂತದಲ್ಲಿ ಮೃತಪಟ್ಟ ಇಬ್ಬರು ಪೌರಕಾರ್ಮಿಕರ ಕುಟುಂಬಗಳಿಗೆ ಜಿಲ್ಲಾಡಳಿತದಿಂದ ತಲಾ 10 ಲಕ್ಷ ರೂ. ಪಾವತಿಸಿದ್ದು, ನಿಯಮಾವಳಿಯಂತೆ ಸಾವಿಗಿಡಾದ ಪೌರಕಾರ್ಮಿಕರ ಕುಟುಂಬಗಳಿಗೆ ತಲಾ 30 ಲಕ್ಷ ರೂ. ಗಳನ್ನು ಪಾವತಿಸಲು ತಾಕೀತು ಮಾಡಲಾಗಿದೆ ಎಂದು ಕೇಂದ್ರ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾದ ಡಾ. ಪಿ.ಪಿ. ವಾವ ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪೌರ ಕಾರ್ಮಿಕರ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಪೌರ ಕಾರ್ಮಿಕರು ಎಷ್ಟೇ ಒತ್ತಾಯಿಸಿದರೂ ಮ್ಯಾನ್ ಹೋಲ್ ಗಳ ಒಳಗೆ ಇಳಿಯಬಾರದು ಅದಕ್ಕಾಗಿಯೇ ಇರುವ ಸಕ್ಕಿಂಗ್ ಹಾಗೂ ಜಟ್ಟಿಂಗ್ ಯಂತ್ರಗಳನ್ನು ಬಳಸಬೇಕು ಹಾಗೂ ಇತ್ತೀಚಿಗೆ ರೋಬೋಟ್ಗಳು ಬಂದಿದ್ದು, ಅವುಗಳ ಸಹಾಯದಿಂದ ಮ್ಯಾನ್ಹೋಲ್ ಗಳನ್ನು ಸ್ವಚ್ಚ ಮಾಡಬಹುದಾಗಿದೆ ಎಂದರು.

ಯಂತ್ರಗಳ ಖರೀದಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಹಣಕಾಸಿನ ಕೊರತೆಯಿದ್ದರೆ ಸ್ಥಳೀಯ ಕಾರ್ಖಾನೆಗಳ ಸಿಎಸ್ಆರ್ ನಿಧಿಯ ನೆರವು ಪಡೆಯಿರಿ ಎಂದರು. ಸಫಾಯಿ ಕರ್ಮಚಾರಿಗಳ ಗುರುತಿನ ಪತ್ರಗಳನ್ನು ವೀಕ್ಷಿಸಿದ ಅವರು ಗುರುತಿನ ಪತ್ರದಲ್ಲಿ ಕಾರ್ಮಿಕರ ಪಿ.ಎಫ್. ಸಂಖ್ಯೆ, ಇ.ಎಸ್.ಐ ಸಂಖ್ಯೆ ಹಾಗೂ ಬ್ಲಡ್ ಗ್ರೂಪ್ ಸೇರಿ ಅಗತ್ಯ ಮಾಹಿತಿ ಇರುವುದು ಕಡ್ಡಾಯ ಎಂದರು.
ಎಲ್ಲಾ ಕಾರ್ಮಿಕರಿಗೂ ಸಮವಸ್ತ್ರ, ಮಾಸ್ಕ್, ಹೆಲ್ತ್ ಚೆಕಪ್, ಗಂಬೂಟ್, ಬೆಳಗಿನ ಉಪಾಹಾರ ನೀಡುವ ಬಗೆಗೆ ಖಚಿತಪಡಿಸಿಕೊಂಡರು ಹಾಗೂ ಕಾರ್ಮಿಕ ಕಾನೂನಿನ ಪ್ರಕಾರವಾಗಿ ಸಂಬಳ ಪಾವತಿಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿದರು ಮತ್ತು ಅನುಕಂಪದ ಆಧಾರದಡಿ ಕುಟುಂಬಸ್ಥರಿಗೆ ಉದ್ಯೋಗ ನೀಡಿರುವ ಬಗೆಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು.
ಅಧಿಕಾರಿಗಳು ಪ್ರತಿಕ್ರಿಯಿಸಿ ಎಲ್ಲಾ ಪೌರಕಾರ್ಮಿಕರಿಗೂ‌ 2 ಜೊತೆ ಸಮವಸ್ತ್ರ ವಿತರಿಸಿದ್ದು, ವಿಜಯಪುರ ಸಿಎಂಸಿಯಲ್ಲಿ 5 ಜೊತೆ ಸಮವಸ್ತ್ರ ವಿತರಿಸಲಾಗಿದೆ ಎಂದರು.

ಹೊಸಕೋಟೆ ಸ್ಥಳೀಯ ಸಂಸ್ಥೆ ಅಧಿಕಾರಿ ಮಾಹಿತಿ ನೀಡಿ ಜಿ+2 ಮಾದರಿಯಲ್ಲಿ 32 ಮನೆ ನಿರ್ಮಾಣ ಮಾಡಲಾಗಿದ್ದು, ಶೀಘ್ರದಲ್ಲೇ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದರು.

ಎಲ್ಲಾ ಪೌರ ಕಾರ್ಮಿಕರಿಗೂ ಮನೆ ನೀಡಿ, ಪೌರಕಾರ್ಮಿಕರಿಗೆ ಮನೆ ನೀಡಿದರೆ ಅವರ ಕುಟುಂಬಕ್ಕೆ ಒಳ್ಳೆಯದಾಗುತ್ತದೆ, ಸರ್ಕಾರವು ಸಾಕಷ್ಟು ಹಣ ನೀಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಆಶ್ರಯ ವಸತಿ ಯೋಜನೆಗಳನ್ನು ಬಳಸಿಕೊಂಡು‌ ಉತ್ತಮ ಗುಣಮಟ್ಟದ ಮನೆಗಳನ್ನು ನೀಡಿ ಎಂದರು.

ಈ ಸಭೆಯಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾದ ಗಿರಿಧರನಾಥ, ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ಹಣಾಧಿಕಾರಿ ಡಾ. ಕೆ.ಎನ್ ಅನುರಾಧ, ಅಪರ ಜಿಲ್ಲಾಧಿಕಾರಿ ಅಮರೇಶ ಹೆಚ್., ಡಿಎಸ್ಪಿ ನಾಗೇಶ್, ಜಿ.ಪಂ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರೇಮಾ ಟಿ.ಎಲ್.ಎಸ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಸೇರಿ ಜಿಲ್ಲಾ ಪುರಸಭೆಗಳ ಮುಖ್ಯಾಧಿಕಾರಿಗಳು ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.